ADVERTISEMENT

ವಾರೆ ವಾಹ್‌ ರಾಣಿ ಕಿ ವಾವ್

ನಟರಾಜ ಎಸ್.ಭಟ್ಟ
Published 28 ನವೆಂಬರ್ 2018, 19:30 IST
Last Updated 28 ನವೆಂಬರ್ 2018, 19:30 IST
ರಾಣಿ ಕೊಳ
ರಾಣಿ ಕೊಳ   

ನಾವು ಇತ್ತೀಚೆಗೆ ಭಾರತದ ಪಶ್ಚಿಮದ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದೆವು. ಆ ವೇಳೆ ಗುಜರಾತ್‌ನ ಭುಜ್ ಪ್ರದೇಶ ನೋಡುವಾಗ ಅಲ್ಲಿ ಸಿಕ್ಕ ಒಬ್ಬ ಪ್ರವಾಸಿಗ ‘ನಿಮಗೆ ವಾಸ್ತುಶಿಲ್ಪದಲ್ಲಿ ಆಸಕ್ತಿ ಇದ್ದರೆ ಪಠಾಣ್‌ ಪಟ್ಟಣಕ್ಕೆ ಹೋಗಿ. ಅಲ್ಲಿರುವ ರಾಣಿ ಕಿ ವಾವ್‌ ಅಥವಾ ರಾಣಿ ಕೊಳವನ್ನು ನೋಡಿ ಬನ್ನಿ’ ಎಂದರು. ಅವರ ಮಾಹಿತಿ ನಮ್ಮೊಳಗೆ ಕುತೂಹಲ ಹುಟ್ಟಿಸಿತು. ನಮ್ಮ ಪ್ರಯಾಣ ಭುಜ್‌ನಿಂದ ಪಠಾಣ್‌ನತ್ತ ಸಾಗಿತು.

ಬೆಳ್ಳಂಬೆಳಿಗ್ಗೆ ಪಠಾಣ್ ತಲುಪಿದೆವು. ಅಲ್ಲಿ ನಮಗೆ ಉಪಾಹಾರಕ್ಕೆ ಸಿಕ್ಕಿದ್ದು ಪಾಪಡಿ, ಜಿಲೇಬಿ ಮತ್ತು ಟೀ. ತಿಂಡಿ ಊಟದ ವಿಚಾರದಲ್ಲಿ ದಕ್ಷಿಣಕ್ಕೆ ಹೋಲಿಸಿಕೊಂಡರೆ ಗುಜರಾತ್, ರಾಜಸ್ಥಾನ್ ಇಲ್ಲೆಲ್ಲಾ ತೀರ ಭಿನ್ನ. ತಿಂಡಿ ಮುಗಿಸಿ ಬೆಳಿಗ್ಗೆ 9 ರ ಹೊತ್ತಿಗೆ ‘ರಾಣಿ ಕಿ ವಾವ್’ ಎಂಬ ಜಾಗ ತಲುಪಿದೆವು. ಸುಂದರವಾದ ಉದ್ಯಾನದಂತಿದ್ದ ಆ ಜಾಗ ನೋಡಿದಾಕ್ಷಣ ಬೆಂಗಳೂರಿನ ಲಾಲ್‌ಬಾಗ್‌ ನೆನಪಾಯಿತು. ಅಲ್ಲೇ ವಿರಮಿಸಬೇಕೆನಿಸಿತು. ಅದಕ್ಕೆ ಸರಿಯಾಗಿ ಅಲ್ಲಿ ಗೈಡ್ ಬರುವುದು ಸ್ವಲ್ಪ ತಡವಾದುದ್ದರಿಂದ ಟಿಕೆಟ್ ತೆಗೆದುಕೊಂಡು ಒಳ ಹೋಗಿ ಹಸಿರ ಹಾಸಿನ ಮೇಲೆ ಮೈ ಚಾಚಿದೆವು. ಅಷ್ಟರಲ್ಲೇ ‘ಹಲೋ ಸರ್.. ಆಪ್ ಕೋ ಗೈಡ್ ಚಾಹಿಯೇ..?’ ಎಂಬ ದ್ವನಿ ದೂರದಲ್ಲೆಲೋ ಕೇಳಿಸಿತು. ತಕ್ಷಣ ಎದ್ದು ಕುಳಿತೆವು. ಆತನೊಂದಿಗೆ ಮಾತನಾಡಿದಾಗ ‘30 ನಿಮಿಷಗಳಾಗುತ್ತದೆ ಸರ್. ಈ ಜಾಗವನ್ನು ಸಂಪೂರ್ಣವಾಗಿ ತೋರಿಸುತ್ತೇನೆ’ ಎಂದು ಹೇಳಿ ಕರೆದುಕೊಂಡು ಹೋದರು.

ನಾವು ಮಲಗಿದ್ದ ಜಾಗದಿಂದ ಸುಮಾರು 100 ಮೀಟರ್ ನಡೆಯುತ್ತಿದ್ದಂತೆ ನೆಲಕ್ಕೆ ಹೊಂದಿಕೊಂಡಂತಿರುವ ಬೃಹತ್ ಬಾವಿ ಕಂಡಿತು. ಅದೇ ರಾಣಿ ಕಿ ವಾವ್ ಅಥವಾ ರಾಣಿ ಕೊಳ. ನಾವು ಬಾವಿ ಎನ್ನುತ್ತೇವೆ. ಇಲ್ಲಿ ಅದನ್ನೇ ಕೊಳ ಎನ್ನುತ್ತಾರೆ. ಏನೇ ಆಗಲಿ ಆ ಕೊಳದ ಮೇಲ್ನೋಟವೇ ಚಂದ. ದೇವಾಲಯದ ರೀತಿಯಲ್ಲಿ ನೆಲದೊಳಗೆ ಹುದುಗಿರುವ ವಿನ್ಯಾಸ ಕಂಡು ಬೆರಗಾದೆವು. ಮೊದಲ ನೋಟಕ್ಕೆ ಅದು ಕೊಳ / ಬಾವಿ ಅನ್ನಿಸುವುದೇ ಇಲ್ಲ. ಅದರ ಒಂದು ಸುತ್ತು ಹಾಕಿ ಬರುವ ಹೊತ್ತಿಗೆ, ಒಂದು ವಿಸ್ಮಯವನ್ನೆ ಕಂಡಂತಾಯಿತು. ನಮ್ಮ ಗೈಡ್ ಜಾಗದ ಬಗ್ಗೆ ವಿವರಣೆ ಹೇಳುತ್ತಾ ಹೋದ. ನಾವು ಕೇಳುತ್ತಾ ಹೆಜ್ಜೆ ಹಾಕಿದೆವು (ಇತಿಹಾಸದ ವಿವರಕ್ಕೆ ಬಾಕ್ಸ್ ನೋಡಿ).

ADVERTISEMENT

ಶತಮಾನಗಳ ಹಿಂದೆ ಕಟ್ಟಿರುವ ಈ ಕೊಳವನ್ನು ಸಾರ್ವಜನಿಕರಿಗೆ ಕುಡಿಯುವ ಹಾಗೂ ದಿನ ಬಳಕೆಗೆ ನೀರು ಪೂರೈಸಲು ಬಳಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಮೇಲೆ ನಿಂತು ಗಮನಿಸಿದರೆ, ಅದರ ಆಳ, ಅಗಲ ಎಷ್ಟಿದೆ ಎಂದು ತಿಳಿಯುವುದಿಲ್ಲ. ಆದರೆ, ಮೆಟ್ಟಿಲನ್ನು ಇಳಿಯುತ್ತಾ ಹೋದರೆ ಕೊಳದ ಆಳ– ಅಗಲ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಇಷ್ಟು ಆಳದಲ್ಲಿ ಇಳಿದು ನೀರು ತರುವುದಕ್ಕೆ ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ ಇದೆ. ಬಲವಾಗಿರುವವರು ಮೇಲಿನಿಂದಲೇ ನೀರು ಸೇದಿಕೊಳ್ಳುವುದಕ್ಕೂ ಅನುಕೂಲ ಕಲ್ಪಿಸಲಾಗಿದೆ.

ಕೊಳದ ಉದ್ದ 64 ಮೀಟರ್. 20 ಮೀಟರ್ ಅಗಲ. 27 ಮೀಟರ್ ಆಳವಿದೆ. ಇದು 7 ಸ್ತರಗಳನ್ನು ಹೊಂದಿದೆ. ಪ್ರತಿ ಸ್ತರದಲ್ಲೂ ವಿಧ ವಿಧವಾದ ವಾಸ್ತುಶಿಲ್ಪಗಳಿವೆ. ಇದನ್ನು ‘ಮಾರು ಗುರ್ಜರ್’ ಶೈಲಿಯಲ್ಲಿ ಕಟ್ಟಲಾಗಿದೆ. ನಾಲ್ಕು ಬದಿಗಳಲ್ಲೂ ದಶಾವತಾರದ ಕೂರ್ಮ, ಪರಶು, ಕಲ್ಕಿ, ರಾಮಾ, ಕೃಷ್ಣ, ವಾಮನ, ವಾರಾಹಿ, ನರಸಿಂಹ, ಬುದ್ದ, ಬ್ರಹ್ಮ ವಿಗ್ರಹಗಳ ಕೆತ್ತನೆಯಿದೆ. ಇವುಗಳಲ್ಲದೆ ದುರ್ಗಿಯರ ವಿಗ್ರಹಗಳೂ ಇವೆ. ಇವುಗಳ ಪ್ರಭಾವಳಿಯಲ್ಲಿ ಪುಟ್ಟ ಪುಟ್ಟ ವಿಗ್ರಹಗಳಾಗಿ ಅವರ ಜೀವನದ ವಿವಿಧ ಹಂತಗಳನ್ನು ಕೆತ್ತಲಾಗಿದೆ. ಹೀಗೆ 500ಕ್ಕೂ ಹೆಚ್ಚು ನುಣುಪಾದ ಕೆತ್ತನೆಯ ಶಿಲೆಗಳನ್ನು ನೋಡುತ್ತಾ ನಿಂತರೆ ಸಮಯವೇ ಸಾಲುವುದಿಲ್ಲ. ಅದರಲ್ಲೂ ನಾಗಕನ್ನಿಕೆ, ಅಪ್ಸರೆ, ಯೋಗಿನಿ, ವಿಗ್ರಹಗಳನ್ನು ನೋಡಲು ಎರಡು ಕಣ್ಣು ಸಾಲದು. ಜತೆಗೆ 16 ಬೇರೆ ಬೇರೆ ರೀತಿಯ ಶೃಂಗಾರ ವಿಗ್ರಹಗಳನ್ನು ಕೆತ್ತಲಾಗಿದೆ. ಅದನ್ನು ‘ಸೋಲಾಃ ಶೃಂಗಾರ್’ ಎಂದು ಕರೆಯಲಾಗಿದೆ.

ನೀರು ಕೊಂಡೊಯ್ಯಲು ಬಂದ ಜನರು ವಿಶ್ರಾಂತಿ ಪಡೆದುಕೊಳ್ಳಲು ಶಿಲಾ ಕಂಬಗಳನ್ನು ಒಳಗೊಂಡಿರುವ ನೆರಳಿನ ತಡಿಗಳನ್ನು ನಿರ್ಮಿಸಲಾಗಿದೆ. ಕಂಬದ ಕೋನಗಳಲ್ಲಿ ರಂಧ್ರಗಳನ್ನು ಮಾಡಿ ನುಣುಪು ಮಾಡಲಾಗಿದೆ. ಗಜಪಡೆಯ ಸಾಲುಗಳು, ಮಲ್ಲ ಯುದ್ದ, ಗಜ ಯುದ್ದ, ಅಂದಿನ ಜೀವನ ಪದ್ಧತಿಯನ್ನು ಸಾಲಾಗಿ ಕೆತ್ತಲಾಗಿದೆ. ಕಂಬಗಳು ಮತ್ತು ಗೋಡೆಯ ಮೇಲಿರುವ ವ್ಯಾರ್ಘ ಮುಖತೋರಣ ಗಮನ ಸೆಳೆಯುತ್ತದೆ. ಮುಖ್ಯವಾಗಿ ಮಧ್ಯದ ಭಾಗದಲ್ಲಿ ಪರಿವಾರ ಸಮೇತನಾಗಿರುವ ನಾಗಶಯನ ವಿಷ್ಣು ಕೆತ್ತನೆ ಆಕರ್ಷಕವಾಗಿದೆ.

ಆದರೆ ಹಿಂದೆ ಭೂಕಂಪನ ಮತ್ತು ಅಪಾರ ಮಳೆಯಿಂದಾಗಿ ಕೆಲವಾರು ಕಂಬಗಳು ಬಿಗಿ ಕಳೆದುಕೊಂಡಿವೆ. ಹೀಗಾಗಿ ನೋಡುಗರನ್ನು ನಾಲ್ಕನೇ ಹಂತದವರೆಗೆ ನೋಡಲು ಅವಕಾಶಕಲ್ಪಿಸುತ್ತಾರೆ. ಇನ್ನೂ ಮೂರು ಹಂತಗಳಲ್ಲೂ ಕಂಬಗಳನ್ನು ಬಿಗಿ ಮಾಡುವ ಕೆಲಸ ನಡೆಯುತ್ತಿದೆ. ಹಾಗಾಗಿ ಅಲ್ಲಿಗೆ ಪ್ರವೇಷ ನಿಷಿದ್ಧ. ‌

ಕೊಳದ ಈ ಒಂದು ಜಾಗದಲ್ಲಿ ಸುರಂಗ ಮಾರ್ಗವಿದೆ. ಅದು ಸುಮಾರು 30 ಕಿಮೀ ಎಂದು ಹೇಳುತ್ತಾರೆ. ಶತೃ ಪಡೆಯುವರಿಂದ ತಪ್ಪಿಸಿಕೊಳ್ಳಲು ಈ ದಾರಿ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಅದನ್ನು ಈಗ ಮುಚ್ಚಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆ ಕಾಲದಲ್ಲೇ ಇಟ್ಟಿಗೆಗಳನ್ನು ಜೋಡಿಸಿ ಅದಕ್ಕೆ ಗಾರೆ ಮಾಡಲಾಗಿದೆ. ಇಷ್ಟು ವರ್ಷಗಳು ಮಳೆಯಲ್ಲಿ ನೆನದು ಹಾಗೂ ಪ್ರವಾಹದಿಂದ ಇಡೀ ಜಾಗವೇ ಮುಚ್ಚಿ ಹೋಗಿದ್ದರೂ ಇಂದಿಗೂ ಆ ಗಾರೆ ಹಾಗೆ ಇದೆ. ಅಂದಿನ ತಂತ್ರಜ್ಞಾನದ ಆಯುಸ್ಸಿನ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ.

ತರಾತುರಿಯಲ್ಲಿ ಪಠಾಣ್ ನಗರದ ನೋಡಿ ಹೋಗಲು ಬಂದ ನಮಗೆ ಅಲ್ಲಿನ ಗೈಡ್ ಸಹಾಯದಿಂದ ಸುಮಾರು ಒಂದೂವರೆ ತಾಸು ನೆಮ್ಮದಿಯಿಂದ ರಾಣಿಕೊಳ ನೋಡುವ ಹಾಗೆ ಆಯಿತು. ಹೆಚ್ಚುವರಿ ಕಿಲೋಮೀಟರ್ ಸುತ್ತಾಡಿದ್ದು ಸಾರ್ಥಕ ಎನ್ನಿಸಿತು.

ಚಿತ್ರಗಳು: ಲೇಖಕರವು

**

ನೂರರ ನೋಟಿನಲ್ಲಿ ‘ರಾಣಿಕೊಳ’ !

ಇತಿಹಾಸದ ದಾಖಲೆಗಳ ಪ್ರಕಾರ 10 ಮತ್ತು 11ನೇ ಶತಮಾನದಲ್ಲಿ ಸೋಲಂಕಿ (ಚಾಲುಕ್ಯ) ಸಾಮ್ರಾಜ್ಯದ ರಾಜ ಒಂದನೇ ಭೀಮ ಈ ಕೊಳವನ್ನು ನಿರ್ಮಿಸಿದ್ದಾನೆ. ಪತ್ನಿ ಉದಯಮತಿಯ ಹೆಸರನ್ನು ಈ ಕೊಳಕ್ಕೆ ಇಡಲಾಗಿದೆ. ಆ ರಾಜನ ಮಗ ಕರ್ಣನ ಕಾಲದಲ್ಲಿ ಮುಕ್ತಾಯವಾಗಿದೆ. 1022 ರಿಂದ 1064 ಇಸವಿಯವರೆಗೆ ಈ ಕೊಳದಿಂದ ಸಾರ್ವಜನಿಕರಿಗೆ ಕುಡಿಯುವ ಹಾಗೂ ದಿನಬಳಕೆಗಾಗಿ ನೀರು ಪೂರೈಸಲಾಗಿದೆ. ಕಾಲಾನಂತರದಲ್ಲಿ ಸರಸ್ವತಿ ನದಿಯ ಪ್ರವಾಹಕ್ಕೆ ಒಳಪಟ್ಟು ಕೊಳ ಪೂರ್ಣ ಮುಚ್ಚಿ ಹೋಗಿತ್ತು.

1980 ರ ಉತ್ಖನನದ ಮೂಲಕ ಮತ್ತೆ ಕೊಳ ಪುನರುಜ್ಜೀವನಗೊಂಡಿದೆ. ಅಂದಿನಿಂದ ಇಂದಿನವರೆಗೂ ‘ಭಾರತೀಯ ಪುರತತ್ವ ಇಲಾಖೆ’ಯ ಸಂರಕ್ಷಣೆಯಲ್ಲಿರುವ ಈ ಜಾಗವು ಇತ್ತೀಚೆಗೆ ಅಂದರೆ 2014ರಿಂದ ಯುನೆಸ್ಕೋದಿಂದ ‘ವಿಶ್ವ ಪಾರಂಪರಿಕ ಜಾಗ’ ವಾಗಿ ಗುರುತಿಸಲ್ಪಟ್ಟಿದೆ. ಹಾಗಾಗಿ ಈ ಜಾಗವನ್ನು ನಾವು ಹೊಸದಾಗಿ ಮುದ್ರಿತವಾಗಿರುವ ₹ 100ರ ನೋಟಿನಲ್ಲೂ ಕಾಣಬಹುದು.

ಕೊಳದ ವಿವರಣೆ ನೀಡುತ್ತಿದ್ದ ಗೈಡ್‌, ‘ಸರ್, ಆಪ್ ಉಸ್ ನೋಟ್ಕೋ ದೇ ಸಕ್ತೇಹೇ ಕ್ಯಾ..?’ ಎಂದು ವಿನಯದಿಂದ ಕೇಳಿದ್ದ. ಆ ನೋಟ್ ಕೊಡದಿದ್ದರೆ ಮುಂದಿನದೆಲ್ಲಿ ಹೇಳುವುದಿಲ್ಲವೋ ಎಂದು ಅಲ್ಲೇ ಕೊಟ್ಟೆವು. ಅಲ್ಲಿಂದ ಆತನ ಹುರುಪು ಇನ್ನೂ ಹೆಚ್ಚಾಗಿ, ಸ್ಥಳಗಳ ಬಗ್ಗೆ ತುಸು ಹೆಚ್ಚಾಗಿಯೇ ವಿವರಿಸತೊಡಗಿದ.

**

ಪಠಾಣ್‌ಗೆ ಹೋಗುವುದು ಹೇಗೆ ?

ಬೆಂಗಳೂರಿನಿಂದ ಅಹಮದಾಬಾದ್‌ಗೆ ರೈಲು, ವಿಮಾನ ಸೌಲಭ್ಯಗಳಿವೆ. ಅಹಮದಾಬಾದ್‌ನಿಂದ 125 ಕಿಮೀ ದೂರದಲ್ಲಿ ಪಠಾಣ್‌ ಪಟ್ಟಣವಿದೆ. ಇಲ್ಲಿಗೂ ಬಸ್ ಮತ್ತು ರೈಲಿನ ವ್ಯವಸ್ಥೆ ಇದೆ. ಈ ನಗರದಲ್ಲಿ ರಾಣಿ ಕೊಳದ ಜತೆಗೆ ಇಂಥದ್ದೇ ಮೆಟ್ಟಿಲಿರುವ ಕೊಳಗಳು, ಕೋಟೆಗಳು ಮತ್ತು ಸಹಸ್ರಲಿಂಗ ಬಾವಿ ಇದೆ. ಗುಜರಾತ್ ಪ್ರವಾಸಕ್ಕೆ ಹೋಗುವವರು ಈ ರಾಣಿಯ ಕೊಳವನ್ನು ಒಮ್ಮೆ ನೋಡಿ ಬನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.