ಮುಗಿಲು ಚುಂಬಿಸುವ, ಬೃಹದಾಕಾರದ ಮರಗಳು. ದಪ್ಪ ಹಾಗೂ ಆಳೆತ್ತರವಾಗಿ ಬೆಳೆದು ನಿಂತ ಬಿದಿರು, ಕಾಡಿನ ಮೌನವನ್ನು ಭೇದಿಸುವ ಹಕ್ಕಿಗಳ ಕಲರವ, ಕಣ್ಣೆದುರಿಗೆ ಚಂಗನೆ ಹಾರಿ ಹೋಗುವ ಜಿಂಕೆಗಳು – ನಾಲ್ಕು ನೂರ ತೊಂಬತ್ತೆರಡು ಚ.ಕಿ.ಮೀದಷ್ಟು ವಿಸ್ತಾರವಿರುವ ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ಹೀಗೆ ಕಾನನದ ಸಂಪತ್ತು ಕಣ್ಣೆದುರು ಪರದೆಯಂತೆ ತೆರೆದುಕೊಂಡಿತು.
ಹುಲಿಯ ಸಂರಕ್ಷಣೆಗಾಗಿ ಸರ್ಕಾರ ಗುರುತಿಸಿರುವ ಈ ಭದ್ರಾ ರಕ್ಷಿತಾರಣ್ಯ ಇರುವುದು ಪಶ್ಚಿಮಘಟ್ಟದ ಸಾಲಿನಲ್ಲಿ. ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿರುವ ಈ ತಾಣ ನಿಸರ್ಗ ಪ್ರವಾಸೋದ್ಯಮದ ಪ್ರಮುಖ ಸ್ಥಳಗಳಲ್ಲಿ ಪ್ರಮುಖವಾದದು. ಈ ತಾಣದ ಮೊದಲ ಹೆಸರು ‘ಜಾಗರ ಕಣಿವೆ’. 1974 ರಲ್ಲಿ ಭದ್ರಾ ಅರಣ್ಯವೆಂದು ಮರು ನಾಮಕರಣವಾಯಿತು. 1998 ರಲ್ಲಿ ಹುಲ್ಲಿ
ಸಂರಕ್ಷಿತ ಪ್ರದೇಶ ಎಂದು ಘೋಷಿಸಲ್ಪಟ್ಟಿದೆ.
ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ 38 ಕಿ.ಮೀ.ದೂರದಲ್ಲಿ ಇರುವ ಭದ್ರಾ ಅಭಯಾರಣ್ಯ ಅನೇಕ ಪ್ರಾಣಿ, ಪಕ್ಷಿಗಳ ಆವಾಸಸ್ಥಾನ. ಪ್ರಮುಖವಾಗಿ ಕಾಡೆಮ್ಮೆ, ಹುಲಿ, ಆನೆ, ಚಿರತೆ, ಜಿಂಕೆ ಸೇರಿದಂತೆ ನಾನಾ ಬಗೆಯ ಪ್ರಾಣಿಗಳು ಇಲ್ಲಿ ನೆಲೆಸಿವೆ. ಅಪರೂಪದ ಪುನುಗು ಬೆಕ್ಕು ಇಲ್ಲಿನ ಪ್ರಮುಖ ಆಕರ್ಷಣೆ. ವರ್ಷಪೂರ್ತಿ ಹರಿಯುವ ಸೋಮವಾಹಿನಿ ನದಿ ಪ್ರಾಣಿಗಳಿಗೆ ಪ್ರಮುಖ ನೀರಿನ ಆಸರೆ. ನಿಸರ್ಗ ಪ್ರವಾಸೋದ್ಯಮಕ್ಕೆ ಹೆಸರು ಪಡೆದ ಭದ್ರಾ ಅಭಯಾರಣ್ಯ ಮುತ್ತೋಡಿ, ಹೆಬ್ಬೆ, ಲಕ್ಕವಳ್ಳಿ, ತಣಿಗೆಬೈಲು ವಲಯಗಳಾಗಿ ವಿಂಗಡಣೆಯಾಗಿದೆ.
ಲಕ್ಕವಳ್ಳಿ ಹಾಗೂ ಮುತ್ತೋಡಿ ವಲಯಗಳಲ್ಲಿ ಮಾತ್ರ ಪ್ರವಾಸಿಗರಿಗೆ ಪ್ರವೇಶ. ಚಿಕ್ಕಮಗಳೂರು ಮಲ್ಲಂದೂರು ಮಾರ್ಗವಾಗಿ ಮುತ್ತೋಡಿ ಪ್ರವೇಶಿಸಬಹುದು. ಲಕ್ಕವಳ್ಳಿ ಜಂಗಲ್ ಲಾಡ್ಜ್ ಬಳಿಯಿಂದ ಅಭಯಾರಣ್ಯ ಪ್ರವೇಶಿಸಿದರೆ, ದಟ್ಟ ಅರಣ್ಯವನ್ನು ಹೊಕ್ಕ ಅನುಭವ ನಿಮ್ಮದಾಗುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಸುತ್ತಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ನೋಡಬಹುದು. ಮರಗಳನ್ನು ಸೀಳುತ್ತಾ ನಿಂತ ಆನೆಗಳು, ಕಾಡೆಮ್ಮೆ, ನವಿಲಿನ ನರ್ತನ ಕಾಣಬಹುದು. ಅದೃಷ್ಟ ಚೆನ್ನಾಗಿದ್ದರೆ ಹುಲಿಯ ದರ್ಶನವೂ ಆದೀತು. ಕಡು ಬೇಸಿಗೆಯ ದಿನಗಳಲ್ಲಿ ಬೆಂಕಿಯಿಂದ ವನ್ಯ ಸಂಪತ್ತನ್ನು ರಕ್ಷಿಸುವ ಉದ್ದೇಶದಿಂದ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿರುತ್ತದೆ.
ಈ ವನ್ಯಜೀವಿಧಾಮದಲ್ಲಿ ಎಲ್ಲೆಂದರಲ್ಲಿ ಸುತ್ತಾಡುವ ಹಾಗಿಲ್ಲ. ಅರಣ್ಯ ಇಲಾಖೆ ನಿಗದಿಪಡಿಸಿದ ಮಾರ್ಗದಲ್ಲಿ ಅರಣ್ಯ ಸಿಬ್ಬಂದಿ ಬೆಂಗಾವಲಿನಲ್ಲಿ ಈ ಕಾಡು ಸುತ್ತಬೇಕು. ಕಾಡು ಸುತ್ತಾಡುವ ಪ್ರವಾಸಿಗರಿಗೆ ನಿರ್ದಿಷ್ಟ ದರ ನಿಗದಿಪಡಿ ಸಲಾಗಿದೆ. ಶುಲ್ಕದ ಜತೆಗೆ ಅರಣ್ಯ ಇಲಾಖೆಯ ಪೂರ್ವಾನುಮತಿಯೂ ಅಗತ್ಯ.
ಮತ್ತೋಡಿಯಲ್ಲಿ ಉಳಿದುಕೊಳ್ಳಲು ಸೂಕ್ತ ಕೊಠಡಿ, ಕಾಟೇಜ್ ವ್ಯವಸ್ಥೆ ಇದೆ. ಊಟೋಪಚಾರಕ್ಕೆ ಅಗತ್ಯ ಇರುವ ವಸ್ತುಗಳನ್ನು ತೆಗೆದುಕೊಂಡು ಹೋದರೆ ರುಚಿಕರ ಅಡುಗೆಯನ್ನು ತಯಾರಿಸಿ ಕೊಡುವ ಸೌಲಭ್ಯವೂ ಇದೆ. ಪ್ರವಾಸಿಗರು ತಮ್ಮ ತಿನಿಸುಗಳನ್ನು ಕೊಂಡೊಯ್ಯಲು ಅಡ್ಡಿಯಿಲ್ಲ.
ಈ ಅಭಯಾರಣ್ಯಕ್ಕೆ ಗಂಗೆಗಿರಿ, ಹೆಬ್ಬೆಗಿರಿ, ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ ಶಿಖರಗಳು ಕಾವಲುಗೋಡೆಯಂತೆ ನಿಂತಿವೆ. ಈ ಗಿರಿಗಳ ಮೇಲೆ ನಿಂತರೆ ಸುತ್ತಲೂ ಮುಗಿಲೆತ್ತರಕ್ಕೆ ಬೆಳೆದುನಿಂತ ಹಸಿರ ರಾಶಿ ಕಣ್ಮನ ತುಂಬಿಕೊಳ್ಳುತ್ತದೆ. ಪ್ರಶಾಂತ ಪರಿಸರದಲ್ಲಿ ಹೆಜ್ಜೆಗಳನ್ನು ಹಾಕುತ್ತಾ ಸಾಗಿದರೆ ಹಕ್ಕಿಗಳ ಕಲರವ ಸಂಗೀತದ ರಸದೌತಣ ಉಣಬಡಿಸುತ್ತದೆ.
ಹೆಬ್ಬೆ ವಲಯದಲ್ಲಿ ಭದ್ರಾ ನದಿಯ ಹಿನ್ನೀರು, ಅದರಲ್ಲಿ ದೋಣಿ ಮೂಲಕ ಸಾಗುವ ಪರಿ ಅದ್ಭುತ. ಕಾಡು, ವನ್ಯಜೀವಿ ಸಂಪತ್ತು ಕುರಿತು ಅಧ್ಯಯನ ಮಾಡಲು ಇದೊಂದು ವಿಶ್ವವಿದ್ಯಾಲಯದಂತೆ ನೆರವಾಗುತ್ತದೆ. ಹೀಗಾಗಿ ಪರಿಸರ ಪ್ರೇಮಿಗಳಿಗೆ ಈ ಜಾಗ ಗ್ರಂಥ ಬಂಡಾರ.
ಭದ್ರಾ ಅರಣ್ಯ ನೋಡಿಕೊಂಡು, ಚಿಕ್ಕಮಗಳೂರು ತಲುಪಿ, ಅಲ್ಲಿಂದ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿಯನ್ನೂ ನೋಡಿಬರಬಹುದು.
ಲಕ್ಕವಳ್ಳಿಯಲ್ಲಿ ಭದ್ರಾ ಜಲಾಶಯ ಸಮೀಪದ ಪ್ರವಾಸಿ ತಾಣ. ಇಲ್ಲಿ ಉಳಿದುಕೊಳ್ಳಲು ಸರ್ಕಾರಿ ವಸತಿ ಗೃಹ (08261 -257121 ) ಅಥವಾ ಕಿಸೆ ಗಟ್ಟಿ ಇದ್ದವರು ಜಂಗಲ್ ರೆಸಾರ್ಟ್ (08261 215425)ನಲ್ಲೂ ಉಳಿಯಬಹುದು. ಚಿಕ್ಕಮಗಳೂರಿನಲ್ಲಿ ಭದ್ರಾ ವನ್ಯಜೀವಿ ವಲಯದ ಸಂಪರ್ಕ ಸಂಖ್ಯೆ 08262-234904.
ಹೋಗುವುದು ಹೇಗೆ ?
ಚಿಕ್ಕಮಗಳೂರಿಗೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಬಸ್ಸಿನ ಸೌಲಭ್ಯ ಇದೆ. ರೈಲಿನ ಮೂಲಕ ಬರುವವರು ಕಡೂರಿಗೆ ಬಂದು ಚಿಕ್ಕಮಗಳೂರು ತಲುಪಬಹುದು. ಶಿವಮೊಗ್ಗ– ತರೀಕರೆ ಕಡೆಯಿಂದ ಬರುವ ಪ್ರವಾಸಿಗರಿಗೆ ಲಕ್ಕವಳ್ಳಿ ಮೂಲಕ ಅರಣ್ಯ ಪ್ರವೇಶಿಸಬಹುದು.
ಚಿಕ್ಕಮಗಳೂರಿನಲ್ಲಿ ವಾಸ್ತವ್ಯವಿದ್ದು ಭದ್ರಾ ಅಭಯಾರಣ್ಯಕ್ಕೆ ಬೆಳಿಗ್ಗೆ ಹೋಗಿ ಸಂಜೆಗೆ ಹಿಂದಿರುಗಲು ಅವಕಾಶವಿದೆ. ಹಾಗೆಯೇ, ಜಂಗಲ್ ಲಾಡ್ಜ್ ನಲ್ಲಿ ಉಳಿಯುವ ಆಸಕ್ತಿ ಇರುವವರಿಗೂ, ಕಾಡಿನೊಳಗೆ ಅವಕಾಶವಿದೆ. ಅದಕ್ಕೆ ಇಲಾಖೆಯ ಪೂರ್ವಾನುಮತಿ ಪಡೆಯಬೇಕು.
(ಚಿತ್ರಗಳು : ಲೇಖಕರವು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.