ADVERTISEMENT

ಯೂತ್ ಹಾಸ್ಟೆಲ್ ಹೇಗಿದೆ ಗೊತ್ತಾ?

ಪಯಣದ ಭಾಗವಾಗಲಿ ‘ಯೂಥ್ ಹಾಸ್ಟೆಲ್’ ಸಂಪರ್ಕ ಬೆಳೆಸಿ, ಅನುಭವ ನಿಮ್ಮದಾಗಿಸಿ

ಹೇಮಂತ್ ಕುಮಾರ್ ಎಸ್.
Published 16 ಆಗಸ್ಟ್ 2018, 4:36 IST
Last Updated 16 ಆಗಸ್ಟ್ 2018, 4:36 IST
ಅ
   

ಉತ್ತರ ಭಾರತದ ಕಡೆಗೆ ಚಾರಣ ಹೊರಟ್ಟಿದ್ದೇನೆ. ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾದ ವಸತಿ ವ್ಯವಸ್ಥೆ ಬೇಕು. ಎಲ್ಲಾದರೂ ಸಿಗುತ್ತಾ ?

ಹಿಮಾಲಯದಲ್ಲಿರುವ ಹೂವಿನ ಕಣಿವೆ (ವ್ಯಾಲಿ ಆಫ್ ಫ್ಲವರ್) ನೋಡಲು ಹೋಗಬೇಕೆನಿಸದೆ. ಯಾರನ್ನು ಸಂಪರ್ಕಿಸಬೇಕು ? ಹೇಗೆ ಹೋಗಬೇಕು ?

ನೇಪಾಳದ ಹಿಮ ಕಣಿವೆಗಳಲ್ಲಿ ಟ್ರೆಕ್ಕಿಂಗ್ ಮಾಡಬೇಕು. ಯಾರಾದರೂ ಮಾರ್ಗದರ್ಶಕರಿದ್ದಾರಾ? ಟ್ರೆಕ್ಕಿಂಗ್ ತರಬೇತಿ ಕೊಡುವವರಿದ್ದಾರೆ ?

ADVERTISEMENT

ಅರೆ, ಇದಕ್ಕೆ ಯಾಕೆ ಯೋಚನೆ ಮಾಡ್ತೀರಿ. ಚಾರಣ, ಪ್ರವಾಸ ಎಂದು ಸುತ್ತುವವರಿಗಾಗಿಯೇ ದೇಶಾದ್ಯಂತ ಯೂತ್ ಹಾಸ್ಟೆಲ್‌ಗಳಿವೆ. ಈ ಹಾಸ್ಟೆಲ್‌ಗಳು ಕಡಿಮೆ ವೆಚ್ಚದಲ್ಲಿ ಊಟ – ವಸತಿ ನೀಡುವ ಜತೆಗೆ, ಚಾರಣ, ಪ್ರವಾಸ, ಅಧ್ಯಯನಕ್ಕೆ ಮಾರ್ಗದರ್ಶನವನ್ನೂ ನೀಡುತ್ತವೆ. ಆದರೆ, ಈ ಸೌಲಭ್ಯಗಳನ್ನು ಪಡೆಯಬೇಕೆಂದರೆ, ನೀವು ಯೂತ್ ಹಾಸ್ಟೆಲ್ ಅಸೋಷಿಯೇಷನ್‌ (ವೈಎಚ್‌ಎಐ) ಸದಸ್ಯತ್ವ ಪಡೆದಿರಬೇಕು.

ಯುವ ಸಮೂಹದಲ್ಲಿ ಸಾಹಸ ಮನೋಭಾವ, ಪರಿಸರ ಕಾಳಜಿ ಹಾಗೂ ರಾಷ್ಟ್ರೀಯ ಭಾವೈಕ್ಯ ಮೂಡಿಸುವುದಕ್ಕಾಗಿ ವೈಎಚ್‍ಎಐ ಕೆಲಸ ಮಾಡುತ್ತಿದೆ. ಉತ್ತರ ಭಾಗದ ಹಿಮಾಲಯ ಪರ್ವತ ಶ್ರೇಣಿ, ದಕ್ಷಿಣದ ಗುಡ್ಡ-ಬೆಟ್ಟಗಳು, ಪಶ್ಚಿಮ ಘಟ್ಟಗಳ ಅನನ್ಯತೆ, ರಾಜಸ್ಥಾನದ ಮರುಭೂಮಿ ಹೀಗೆ ದೇಶದ ಯಾವುದೇ ದಿಕ್ಕಿನಲ್ಲಿ ಅಧ್ಯಯನ, ಚಾರಣ, ಪ್ರವಾಸಕ್ಕೆ ಹೊರಟವರಿಗೆ ಅಲ್ಲೊಂದು ಯೂಥ್ ಹಾಸ್ಟೆಲ್ ಆಹ್ವಾನಕ್ಕೆ ಸಿದ್ಧವಿರುತ್ತದೆ. ನಾವು ಅದರೊಂದಿಗೆ ಸಂಪರ್ಕ ಸಾಧಿಸಿದರೆ ಸೌಲಭ್ಯವೂ ಸಿಗಲಿದೆ.

ವೈಎಚ್‌ಎಐ ಆರಂಭವಾಗಿದ್ದು...

ಜರ್ಮನಿಯಲ್ಲಿ 1912ರಲ್ಲಿ ಚಿಗುರೊಡೆದ ಯೂಥ್ ಹಾಸ್ಟೆಲ್ ಕನಸು 1919ರಲ್ಲಿ ಅಸೋಸಿಯೇಷನ್ ಆಗಿ ರೂಪು ಪಡೆಯಿತು. ಇದು ಯುರೋಪಿನಾದ್ಯಂತ ವಿಸ್ತರಿಸಿಕೊಂಡಿತು. ಸಮಾನ ಮನಸ್ಕರ ಶೃಂಗಸಭೆಯ ಫಲವಾಗಿ 1932ರಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಾಗಿ ರೂಪಗೊಂಡಿತು. ಇಂಟರ್‌ನ್ಯಾಷನಲ್‌ ಯೂಥ್ ಹಾಸ್ಟೆಲ್ ಫೆಡರೇಷನ್(ಐವೈಎಚ್‍ಎಫ್) ಸ್ಥಾಪನೆಯಾಯಿತು. 1945ರಲ್ಲಿ ಇಂಥ ಹಾಸ್ಟೆಲ್‍ಗಳ ಪರಿಕಲ್ಪನೆ ಭಾರತಕ್ಕೆ ಪರಿಚಯವಾಯಿತು. ಅದಕ್ಕೆ ಕಾರಣವಾಗಿದ್ದು ಪಂಜಾಬ್ ಸರ್ಕಲ್‍ನ ಸ್ಕೌಟ್ಸ್ ಮತ್ತು ಗೈಡ್ಸ್.

ದೂರದ ಜರ್ಮನಿಯಲ್ಲಿ ಹಾಸ್ಟೆಲ್ ಆರಂಭವಾದರೂ, ಭಾರತದಲ್ಲಿ ಮೊದಲು ಚಾಲನೆ ಸಿಕ್ಕಿದ್ದು ಮೈಸೂರಿನಿಂದ. ಅಲ್ಲಿನ ಉತ್ಸಾಹಿ ಯುವ ಸಮೂಹದ ಪ್ರಯತ್ನದಿಂದಾಗಿ 1949ರಲ್ಲಿ ಭಾರತ ಅಂತರರಾಷ್ಟ್ರೀಯ ಯೂತ್ ಹಾಸ್ಟೆಲ್ ಫೆಡರೇಷನ್ ಸದಸ್ಯತ್ವ ಪಡೆಯಲು ಸಾಧ್ಯವಾಯಿತು. ಇದಾದ ನಂತರ, ಯೂತ್ ಹಾಸ್ಟೆಲ್‌ಗಳು ದೇಶದಾದ್ಯಂತ ವಿಸ್ತರಣೆಗೊಂಡವು.

1970ರಲ್ಲಿ ದೆಹಲಿಯಲ್ಲಿ ಅಧಿಕೃತವಾಗಿ ಯೂತ್‌ ಹಾಸ್ಟೆಲ್ ಅಸೋಷಿಯೇಷನ್ ಆಡಳಿತ ಮಂಡಳಿ ಆರಂಭವಾಯಿತು. ಹಾಸ್ಟೆಲ್ ಕಟ್ಟಡ ನಿರ್ಮಾಣ ಶುರುವಾಯಿತು. ಈಗ ದೇಶದಾದ್ಯಂತ 23 ರಾಜ್ಯ ಮಟ್ಟದ ಶಾಖೆಗಳು, 300ಕ್ಕೂ ಹೆಚ್ಚು ಜಿಲ್ಲಾ ಘಟಕಗಳು ಸ್ಥಾಪನೆಯಾಗಿವೆ. ಇವುಗಳ ಮೂಲಕ ಸಾವಿರಾರು ಸದಸ್ಯರಿಗೆ ಹಾಸ್ಟೆಲ್‌ ಸೇವೆ ಲಭ್ಯವಾಗುತ್ತಿದೆ. ಲೇಹ್-ಲಡಾಕ್‍ನಿಂದ ಅಂಡಮಾನ್-ನಿಕೋಬಾರ್‌ವರೆಗೂ ವೈಎಚ್‍ಎಐನಿಂದ ಪರವಾನಗಿ ಪಡೆದಿರುವುದು ಸೇರಿದಂತೆ 95ಕ್ಕೂ ಹೆಚ್ಚು ಹಾಸ್ಟೆಲ್‍ಗಳು ನಡೆಯುತ್ತಿವೆ. 2 ಲಕ್ಷಕ್ಕೂ ಅಧಿಕ ಮಂದಿ ಸದಸ್ಯತ್ವ ಹೊಂದಿದ್ದಾರೆ.

ಸದಸ್ಯತ್ವ ಹೇಗೆ-ಏನು?

ವೈಎಚ್‍ಎಐ ಅಧಿಕೃತ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಹಾಕಬಹುದು. ಇಲ್ಲವೇ ಅರ್ಜಿ ಡೌನ್‍ಲೋಡ್ ಮಾಡಿ, ಫೋಟೊ ಹಾಗೂ ಅಗತ್ಯ ದಾಖಲೆಗಳ ಸಹಿತ ಸೂಚಿತ ವಿಳಾಸಕ್ಕೆ ಕಳುಹಿಸುವ ಮೂಲಕ ಮೂಲಕ ಸದಸ್ಯತ್ವ ಪಡೆಯಬಹುದು.

ಆನ್‍ಲೈನ್ ಅರ್ಜಿಗೆ ಆನ್‍ಲೈನ್‍ನಲ್ಲೇ ಶುಲ್ಕ ಪಾವತಿಸಬೇಕು. ಅಂಚೆ ಮೂಲಕ ಸದಸ್ಯತ್ವ ಬಯಸುವವರು ಡಿಡಿ ಪಡೆದು ಕಳುಹಿಸಬೇಕು. ವೈಯಕ್ತಿಕವಾಗಿ ಹಾಗೂ ಶೈಕ್ಷಣಿಕ ಸಂಸ್ಥೆಗಳು ಸದಸ್ಯತ್ವ ಹೊಂದಬಹುದು. ವಿದೇಶಗಳಲ್ಲಿ ಪ್ರಯಾಣಿಸುವ ಯುವಕರಿಗಾಗಿ ಇಂಟರ್‌ನ್ಯಾಷನಲ್‌ ಯೂಥ್ ಟ್ರಾವೆಲ್ ಕಾರ್ಡ್(ಐವೈಟಿಸಿ) ಆಯ್ಕೆ ಇದೆ. ಜಗತ್ತಿನಾದ್ಯಂತ 3,300 ಸ್ಥಳಗಳಲ್ಲಿ ಈ ಕಾರ್ಡ್ ಮಾನ್ಯತೆ ಹೊಂದಿರುತ್ತದೆ.

ಆಹಾರ, ವಸತಿ, ಮನರಂಜನೆ, ಪ್ರಯಾಣ ಸೇರಿ ವಿವಿಧ ವಿಭಾಗಗಳಲ್ಲಿ 40 ಸಾವಿರಕ್ಕೂ ಹೆಚ್ಚು ವಿವಿಧ ರಿಯಾಯಿತಿ ಸೌಲಭ್ಯವನ್ನು ಒಳಗೊಂಡಿರುತ್ತದೆ. ಐವೈಟಿಸಿ ರೀತಿಯಲ್ಲೇ ವಿದೇಶ ಪ್ರಯಾಣ ಮಾಡುವ ವಿದ್ಯಾರ್ಥಿಗಳು ಇಂಟರ್‌ನ್ಯಾಷನಲ್‌ ಸ್ಟೂಡೆಂಟ್ ಐಡಿ ಕಾರ್ಡ್(ಐಎಸ್‍ಐಸಿ) ಸಹ ಪಡೆಯಬಹುದು. ವೈಎಚ್‍ಎಐನ ಯಾವುದೇ ಕ್ಯಾಂಪ್, ಟ್ರಕ್ಕಿಂಗ್‍ನಲ್ಲಿ ಭಾಗಿಯಾಗಲು ಅಥವಾ ಹಾಸ್ಟೆಲ್ ಸೌಲಭ್ಯ ಪಡೆಯಲು ಸದಸ್ಯತ್ವ ಪಡೆದಿರಲೇಬೇಕು.

ಕಾರ್ಯಕ್ರಮ-ಆಯೋಜನೆ

ದೇಶದ ನಾಲ್ಕು ಇಂಟರ್‌ನ್ಯಾಷನಲ್‌ ಯೂಥ್ ಹಾಸ್ಟೆಲ್‍ಗಳ ಪೈಕಿ ಮೈಸೂರು ಸಹ ಪ್ರಮುಖವಾದದ್ದು. ಕೊಡಗು ಮತ್ತು ಮೈಸೂರಿನಲ್ಲಿ ನಿಯಮಿತವಾಗಿ ಕ್ಯಾಂಪ್ ಮತ್ತು ಕುಟುಂಬ ಪ್ರವಾಸ ಆಯೋಜಿಸಲಾಗುತ್ತಿರುತ್ತದೆ. ವೈಎಚ್‍ಎಐ ರಾಷ್ಟ್ರೀಯ, ರಾಜ್ಯಮಟ್ಟದ ಸದಸ್ಯರಿಗಾಗಿ ಹಾಗೂ ಕುಟುಂಬಗಳಿಗಾಗಿಯೇ (ದಂಪತಿ ಮತ್ತು ಇಬ್ಬರು ಮಕ್ಕಳು) ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿರುತ್ತದೆ.

ಟ್ರೆಕ್ಕಿಂಗ್, ಪರಿಸರ ಅಧ್ಯಯನ, ಬೈಸಿಕಲ್ ಹಾಗೂ ಮೋಟಾರ್ ಬೈಕ್ ಯಾನ, ಪಾರಂಪರಿಕ ತಾಣಗಳ ಭೇಟಿಯನ್ನು ಶಿಸ್ತುಬದ್ಧವಾಗಿ ನಡೆಸುತ್ತಿರುವ ವೈಎಚ್‌ಎಐ, ಸಮಯಕ್ಕೆ ಹೆಚ್ಚು ಮಹತ್ವ ನೀಡುತ್ತದೆ. ಸದಸ್ಯರನ್ನು ಸಮಾನವಾಗಿ ಕಾಣುತ್ತದೆ. ಪೌಷ್ಟಿಕ ಆಹಾರ, ಸ್ಥಳೀಯ ಸ್ಥಳಗಳ ಬಗ್ಗೆ ಅನುಭವ ಹೊಂದಿರುವ ಗೈಡ್‍ಗಳು, ಸ್ವಯಂ ಸೇವಕರು, ಉತ್ಸಾಹ ಮತ್ತು ಆಸಕ್ತಿ ಇವು ವೈಎಚ್‍ಎಐ ಯಶಸ್ಸಿನ ಪಾಲುದಾರರು.

ಕ್ಯಾಂಪ್ ಲೀಡರ್‌ಗಳು ಹಾಗೂ ವೈದ್ಯಕೀಯ ಸಹಕಾರ ನೀಡಲು ಬಯಸುವವರು ಸ್ವಯಂ ಸೇವಕರಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು ವಾರದಿಂದ ತಿಂಗಳವರೆಗೂ ಕ್ಯಾಂಪ್‍ಗಳ ಜವಾಬ್ದಾರಿವಹಿಸುವ ಅನೇಕ ಸ್ವಯಂ ಸೇವಕರು ಶಿಬಿರಗಳಲ್ಲಿರುತ್ತಾರೆ. ವೈಎಚ್‍ಎಐನ ಚಾಲನ ಶಕ್ತಿಗಳಲ್ಲಿ ಉತ್ಸಾಹಿ ಮತ್ತು ಅನುಭವಿ ಸ್ವಯಂ ಸೇವಕರ ಪಾಲು ಹಿರಿದು.

ಯೂತ್‌ ಹಾಸ್ಟೆಲ್ ಜನಪ್ರಿಯ ಕಾರ್ಯಕ್ರಮಗಳಲ್ಲಿ ಹಿಮಾಚಲ ಪ್ರದೇಶದ ಸರ್‌ಪಾಸ್‌ ಟ್ರೆಕ್ಕಿಂಗ್ ಪ್ರಮುಖವಾದದು. ಇದರ ಜತೆಗೆ ಮೋಟಾರ್‍ ಬೈಕ್‍ನಲ್ಲಿ ದೆಹಲಿ-ಲೇಹ್-ದೆಹಲಿ ಹಿಮಾಲಯನ್ ಎಕ್ಸ್‌ಪೆಡಿಷನ್, ಡಾರ್ಜಿಲಿಂಗ್ ಫ್ಯಾಮಿಲಿ ಪ್ಯಾಕೇಜ್, ರೂಪ್‌ಕುಂಡ್, ಹಂಪ್ತಾ ಪಾಸ್ ಚಾರಣ ಹಾಗೂ ಗೋವಾ ಬೈಕಿಂಗ್ ಸಹ ಸೇರುತ್ತವೆ.

ಸಾಂಸ್ಕೃತಿಕ ಸಭೆಯಾಗುವ ಕ್ಯಾಂಪ್

ಸಾಮಾನ್ಯವಾಗಿ ಚಾರಣ ಹೊರಡುವ ಮುನ್ನ ಬೇಸ್ ಕ್ಯಾಂಪ್‍ನಲ್ಲಿ ಸಾಂಸ್ಕೃತಿಕ ಸಂಜೆ ನಡೆಯುತ್ತದೆ. ಚಾರಣದ ಮೇಲಿನ ಕ್ಯಾಂಪ್‍ಗಳಲ್ಲಿಯೂ ಇದು ಮುಂದುವರಿಯುತ್ತದೆ. ಆದರೆ, ಬೇಸ್ ಕ್ಯಾಂಪ್ ಕಾರ್ಯಕ್ರಮ ವಿಶೇಷ. ಇಲ್ಲಿ ಮೂರು ತಂಡಗಳ ಸಮಾಗಮವಾಗುತ್ತದೆ. ಮಾರನೆಯ ದಿನ ಚಾರಣ ಹೊರಡಲು ಅಣಿಯಾಗಿರುವವರು, ಆಗಷ್ಟೇ ಬೇಸ್ ಕ್ಯಾಂಪ್‍ಗೆ ಬಂದಿರುವವರು ಮತ್ತು ಯಶಸ್ವಿ ಚಾರಣ ಮುಗಿಸಿರುವವರು ಒಂದೆಡೆ ಸೇರುತ್ತಾರೆ. ಆಗ ಅಲ್ಲೊಂದು ‘ಮಿನಿ ಭಾರತವೇ’ ಸೃಷ್ಟಿಯಾದಂತೆ ಕಾಣುತ್ತದೆ.

ದೇಶದ ವಿವಿಧ ಭಾಗದ ಯುವ ಜನಾಂಗ ಹಾಗೂ ಹಿರಿಯರ ನಡುವೆ ಬಹು ಸಂಸ್ಕೃತಿಗಳ ಅನಾವರಣ ಮತ್ತು ವಿನಿಮಯ ನಡೆಯುತ್ತದೆ. ಹಾಡು, ನೃತ್ಯ, ನಾಟಕ, ಮಾತು-ಕತೆ, ಅನುಭವ ಎಲ್ಲದರೊಂದಿಗೆ ಹೊಸ ಸ್ನೇಹ, ಹೊಸ ಅನುಭಾವ ನಮ್ಮದಾಗುತ್ತದೆ.

ವೈಎಚ್‌ಎಐನ ಎಲ್ಲ ಕಾರ್ಯಕ್ರಮಗಳು ಬೇಸ್ ಕ್ಯಾಂಪ್‍ನಿಂದ ಪ್ರಾರಂಭವಾಗಿ ನಿಗದಿತ ಪ್ರಯಾಣ ಮುಗಿಸಿ ಮತ್ತೆ ಬೇಸ್ ಕ್ಯಾಂಪ್‍ನಲ್ಲಿ ಪೂರ್ಣಗೊಳ್ಳುತ್ತದೆ. ನಿಗದಿತ ಕ್ಯಾಂಪ್ ಅಥವಾ ಹಾಸ್ಟೆಲ್‍ಗೆ ತಲುಪುವುದು ಹಾಗೂ ಅಲ್ಲಿಂದ ಮತ್ತೆ ನಮ್ಮೂರಿಗೆ ಪ್ರಯಾಣಿಸುವುದು ನಮ್ಮದೇ ಜವಾಬ್ದಾರಿ. ಈ ಎಲ್ಲ ಅನುಭವಗಳನ್ನು ಒಮ್ಮೆಯಾದರು ನಮ್ಮದಾಗಿಸಿಕೊಳ್ಳಲು ವೈಎಚ್‍ಎಐನೊಂದಿಗೆ ಸಂಪರ್ಕ ಸಾಧಿಸಬಹುದು. ಯೂಥ್ ಹಾಸ್ಟೆಲ್‍ನ ಸಂಪೂರ್ಣ ಮಾಹಿತಿ ಅದರ ಅಧಿಕೃತ http://www.yhaindia.org/ ವೆಬ್‍ಸೈಟ್‍ನಲ್ಲಿ ಲಭ್ಯ.

ಸದಸ್ಯತ್ವ ಶುಲ್ಕ

ಸದಸ್ಯತ್ವ- 1 ವರ್ಷ- 2 ವರ್ಷ-5 ವರ್ಷ- ಜೀವಮಾನ- ಜೂನಿಯರ್(18 ವರ್ಷಕ್ಕಿಂತ ಕೆಳಗಿನವರು)
ವೈಯಕ್ತಿಕ ₹ 170– ₹ 300-(ಅವಕಾಶ ಇಲ್ಲ)- ₹ 2500- ₹ 70
ಶೈಕ್ಷಣಿಕ(12ನೇ ತರಗತಿ ವರೆಗೆ)- ₹ 750-(ಅವಕಾಶ ಇಲ್ಲ)-₹ 3000-(ಅವಕಾಶ ಇಲ್ಲ)
ಶೈಕ್ಷಣಿಕ(12ನೇ ತರಗತಿ ನಂತರ)- ₹ 1500-(ಅವಕಾಶ ಇಲ್ಲ)- ₹ 5,500-(ಅವಕಾಶ ಇಲ್ಲ)
ಇಂಟರ್‍ನ್ಯಾಷನಲ್ ಯೂಥ್ ಟ್ರಾವೆಲ್ ಕಾರ್ಡ್ (11-30 ವರ್ಷ ವಯಸ್ಸು)-₹ 500
(ಅಂಚೆ ಅರ್ಜಿಗಳಿಗೆ ₹ 50 ಹೆಚ್ಚುವರಿ ಶುಲ್ಕವಿದೆ)

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.