ADVERTISEMENT

ಆಹಾ.. ಅಂಬೋಲಿ

ಕೆ.ವಿಷ್ಣುತೀರ್ಥ
Published 16 ಜನವರಿ 2019, 19:30 IST
Last Updated 16 ಜನವರಿ 2019, 19:30 IST
ದೇವಸ್ಥಾನ
ದೇವಸ್ಥಾನ   

ಅಂಬೋಲಿ - ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವಂತಹ ಒಂದು ಪುಟ್ಟ ನಗರ. ಇದು ಬೆಳಗಾವಿಯಿಂದ 70 ಕಿಮೀ ದೂರದಲ್ಲಿದೆ.

ಬೆಳಗಾವಿಯಿಂದ ಹೊರಟು ಅಂಬೋಲಿ ತಲುಪುವುದಕ್ಕೆ 7 ಕಿಮೀ ದೂರವಿರುವಾಗಲೇ ರಸ್ತೆಯಂಚಿಗೆ ತಾಕಿಕೊಂಡಿರುವ ದೇಗುಲವೊಂದು ಕಣ್ಣಿಗೆ ಬೀಳುತ್ತದೆ. ಅದರ ಹಿಂಭಾಗದಲ್ಲೊಂದು ಪುಟ್ಟ ಜಲಪಾತವಿದೆ. ಮೊದಮೊದಲಿಗೆ ರಸ್ತೆ ಪಕ್ಕದ ಕಾಡಿನಲ್ಲಿ ಇಳಿಜಾರಾಗಿ, ತೆಳುವಾಗಿ ಹರಿವ ನೀರು ಬಳಿಕ 40 ಅಡಿ ಆಳವಿರುವ ವೃತ್ತಾಕಾರದ ಕಮರಿಯಲ್ಲಿ ರಭಸದಿಂದ ಧುಮ್ಮಿಕ್ಕಿ ಆ ಕೊರಕಲಿನಲ್ಲೇ ಮುಂದೆ ಸಾಗುತ್ತದೆ. ಇದನ್ನು ವೀಕ್ಷಿಸುವುದಕ್ಕಾಗಿಯೇ ಕಟಕಟೆ ನಿರ್ಮಿಸಿದ್ದಾರೆ. ಮಳೆಗಾಲದಲ್ಲಂತೂ ಧುಮ್ಮಿಕುವ ಜಲಧಾರೆಯನ್ನು ಸವಿಯಲು ಎರಡು ಕಣ್ಣುಗಳು ಸಾಲದು.

ಅಂಬೋಲಿ ಜಲಪಾತ

ADVERTISEMENT

ಈ ಚಿಕ್ಕ ನಗರದಿಂದ 3 ಕಿಮೀ ಸಾಗಿದರೆ ಅಂಬೋಲಿ ಜಲಪಾತದ ದರ್ಶನ. ಎಡಮಗ್ಗುಲಲ್ಲಿ ಮುಗಿಲೆತ್ತರದ ಹಸಿರು ಬೆಟ್ಟಗಳ ರಾಶಿಗಳು, ನಡುವೆ ಡಾಂಬರು ರಸ್ತೆ, ಬಲಗಡೆ ದಿಗಿಲುಟ್ಟಿಸುವ ಆಳ-ಪ್ರಪಾತ. ರುದ್ರ ಮನೋಹರ ಕಾಡು. ಕಣಿವೆ. ಉತ್ತುಂಗ ಗಿರಿಪಂಕ್ತಿಗಳನ್ನು ನೋಡನೋಡುತ್ತಿದ್ದಂತೆಯೇ ಸ್ವರ್ಗಲೋಕದಲ್ಲಿ ವಿಹರಿಸುವಂತೆ ಭಾಸವಾಗುತ್ತದೆ. ಅಂಬೋಲಿ ಬಿಟ್ಟು 8 ಕಿಮೀ ಅಂತರವರೆವಿಗೂ ಈ ಘಟ್ಟಪ್ರದೇಶದಲ್ಲಿಯೇ ಸಾಗುತ್ತಿರುತ್ತೇವೆ.

ಅಂಬೋಲಿ ಜಲಪಾತ ರಸ್ತೆಯಂಚಿಗೆ ತಾಗಿಕೊಂಡಿದೆ. 50 ಅಡಿಗಳ ಕಲ್ಲುಬೆಟ್ಟದಂಚಿನಿಂದ ಜಲಧಾರೆ ದಬದಬನೆ ಸುರಿಯುತ್ತದೆ. ನೀರು ಕಡಿಮೆಯಿದ್ದಾಗ, ಈ ಜಲಪಾತಕ್ಕೆ ಮೈಯೊಡ್ಡಬಹುದು. ಒಂದು ರೋಮಾಂಚನದ ಅನುಭವ ಪಡೆಯಬಹುದು. ನೀರಿಗೆ ಮೈಯೊಡ್ಡುತ್ತಾ ಕತ್ತೆತ್ತಿ ನೀರಿಗೆ ಮುಖ ಕೊಟ್ಟಾಗ ನೀರು ಕಣ್ಣು, ಬಾಯಿ, ಮೂಗು, ಕಿವಿ ಸೇರಿ ಶುಭ್ರಗೊಳ್ಳುತ್ತವೆ.

ವೀಕ್ಷಕ ತಾಣಗಳು (ವ್ಯೂವ್ ಪಾಯಿಂಟ್‌)

ಕವಳೇಸೇಟ್, ಮಹದೇವ, ಶಿರಗಾಂವಕರ್, ಸನ್‍ಸೆಟ್ ಪಾಯಿಂಟ್‍ಗಳು ಈ ಅಂಬೋಲಿಯ ಸ್ಥಿರಾಸ್ತಿಗಳಿದ್ದಂತೆ. ಇವೆಲ್ಲ ನಾವು ಸಾಗುವ ರಸ್ತೆಯ ಬಲಭಾಗದಲ್ಲೇ ಇವೆ. ರಸ್ತೆ ತುದಿಯಲ್ಲೇ ನಿಂತು ಈ ವಿಹಂಗಮ ತಾಣಗಳ ಸೌಂದರ್ಯ ಸವಿಯಬಹುದು. ಇಲ್ಲಿ ನಿಂತರೆ ಮನಮೋಹಕ ಬೆಟ್ಟಗುಡ್ಡಗಳ ಸಾಲು ಸಾಲು, ಆಳ-ಪ್ರಪಾತಗಳು, ಉದ್ದಗಲ ವ್ಯಾಪಿತ ಕಾಡು–ಕಣಿವೆಗಳು ಕಣ್ಮನ ತೋಯಿಸುತ್ತವೆ.

ಸೂರ್ಯಾಸ್ತ ವೀಕ್ಷಣೆಗೆ ‘ಸನ್‍ಸೆಟ್ ಪಾಯಿಂಟ್‍’ ಇದೆ. ಅಲ್ಲಿ ನಿಂತರೆ, ಸೇಬಿನ ರೀತಿ ಕೆಂಪನೆಯ ಹೊಳಪಿನಿಂದ ರವರವನೆ ತಿರುಗುತ್ತಿರುವ ರವಿತೇಜನು ಪೂರ್ಣ, ಮುಕ್ಕಾಲು, ಅರ್ಧ, ಕಾಲುಭಾಗ - ಹೀಗೆ ಕ್ಷೀಣಗೊಂಡು ಬಳಿಕ ದೂರದ ಬೆಟ್ಟವೊಂದರ ಹಿಂದೆ ಲೀನವಾಗುವುದನ್ನು ವೀಕ್ಷಿಸಬಹುದು. ಸೂರ್ಯಾಸ್ತವಾಗುತ್ತಿದ್ದಂತೆಯೇ ಸುತ್ತಲೂ ಕತ್ತಲಾವರಿಸುತ್ತದೆ. ಬಾನಿನಲ್ಲಿ ಧ್ರುವತಾರೆ, ಚಂದ್ರಮ, ಮತ್ತು ಅಸಂಖ್ಯ ತಾರಾಮಂಡಲಗಳು ಉದಯಿಸಿ ಕಂಗೊಳಿಸುತ್ತವೆ.

ಸಿಂಧೂದುರ್ಗ ಕೋಟೆ

ಅಂಬೋಲಿ ಜಲಪಾತದ ಆಸುಪಾಸಿನಲ್ಲಿ ಹಿರಣ್ಯಕೇಶಿ ದೇವಾಲಯವಿದೆ. ಇಲ್ಲಿ ಘಟಪ್ರಭ ನದಿಯು ಉಗಮವಾಗುತ್ತದೆ. ಹಾಗೂ ಸ್ವಯಂಭೂ ಗಣಪತಿ ದೇವಾಲಯವೂ ನೆಲೆಸಿದೆ. ಅಂಬೋಲಿ ಬಿಟ್ಟು ಕುಡಾಲ್ ಮಾರ್ಗವಾಗಿ ಸಿಂಧೂದುರ್ಗ ಜಿಲ್ಲೆಯ ಸಾವಂತವಾಡಿ ತಾಲ್ಲೂಕಿನ ಮಾಲ್ವನ್ ಎನ್ನುವ ಪಟ್ಟಣವನ್ನು ತಲುಪಬಹುದು. ಇಲ್ಲಿಂದ 5 ಕಿ.ಮೀ ದೂರದಲ್ಲಿ ತರಕಾರ್ಲಿ ಎಂಬ ಊರು. ಇದು ಅರಬ್ಬಿಸಮುದ್ರದ ತಟದಲ್ಲಿದೆ. ಕಡಲತಡಿಯಗುಂಟ ಬೀಡುಬಿಟ್ಟಿರುವ ವಿವಿಧ ಗಾತ್ರ, ಬಣ್ಣಗಳ ದೋಣಿ, ಲಾಂಜ್‌ಗಳು ವರ್ಣಮಯವಾಗಿ ಕಾಣುತ್ತವೆ. ಇಲ್ಲಿ ಸ್ಕೂಬಾ ಡೈವಿಂಗ್, ಬನಾನಾ ರೈಡ್, ಪ್ಯಾರಾಸೈಲಿಂಗ್ ಮತ್ತಿತರ ಸಮುದ್ರಕ್ರೀಡೆಗಳನ್ನಾಡಿ ಮನ ತಣಿಸಿಕೊಳ್ಳಬಹುದು. ಈ ಎಲ್ಲದಕ್ಕೂ ಶುಲ್ಕವಿದೆ.

ಸಮುದ್ರದ ನಡುವೆ ಸಿಂಧೂದುರ್ಗ ಕೋಟೆ ಇದೆ. ಲಾಂಚ್‍ನಲ್ಲಿ ಹೋಗಿ ಈ ಕೋಟೆಯನ್ನು ನೋಡಿಬರಬಹದು. ಕೋಟೆಯನ್ನು ಪೂರ್ಣವಾಗಿ ವೀಕ್ಷಿಸುವುದಕ್ಕೆ ಸುಮಾರು ಒಂದು ಗಂಟೆ ಬೇಕಾಗುತ್ತದೆ. ಕೋಟೆ ಒಳಗಡೆ ಶ್ರೀಶಿವರಾಜೇಶ್ವರ ಮಂದಿರವಿದೆ. ತುಸು ಹೆಜ್ಜೆ ಇರಿಸಿದಂತೆ ಬುರುಜೊಂದು ಕಾಣುತ್ತದೆ. ಅದರಲ್ಲಿರುವ ಮೆಟ್ಟಿಲುಗಳನ್ನು ಏರಿದರೆ ಅಲ್ಲಿಂದ ಕೋಟೆ ಗೋಡೆಗಳು, ಆ ಗೋಡೆಗಳಾಚೆಗಿನ ಸಮುದ್ರದ ಅನಂತ ನೋಟ ಸವಿಯಬಹುದು. ನೋಡುಗರು ಇಷ್ಟಪಟ್ಟಲ್ಲಿ ಕೋಟೆ ಗೋಡೆಗಳ ಮೇಲೇರಿ ಸುತ್ತಲೂ ನಡೆದಾಡಬಹುದು. ಸೂರ್ಯಾಸ್ತ ವೀಕ್ಷಣೆಗಿದು ಹೇಳಿ ಮಾಡಿಸಿದ ಜಾಗ.

ಮಹಾರಾಷ್ಟ್ರದ ಕೊನೆಹಳ್ಳಿ ಕಿದ್ರಾಪುರ. ಅಲ್ಲಿಂದ ಕೆಲದೂರ ಸಾಗಿದರೆ ಚಿಕ್ಕೋಡಿ ಮೂಲಕ ಬೆಳಗಾವಿಗೆ ವಾಪಸಾಗಬಹುದು. ಪಯಣಕ್ಕೆ ಸ್ವಂತ ವಾಹನ, ಸಮಾನಮನಸ್ಕ ಸ್ನೇಹಿತರು, ಖರ್ಚಿಗೆ ಒಂದಷ್ಟು ಹಣದ ಜತೆಗೆ ಸಮಯವೂ ಇದ್ದರೆ ಈ ‘ಬೆಳಗಾವಿ ಟು ಬೆಳಗಾವಿ ವಯಾ ಅಂಬೋಲಿ ಜಲಪಾತ’ ಟ್ರಿಪ್ ಬಲು ಸುಂದರ.

ಹಾದಿಯಲ್ಲಿ ಸಿಗುವ ತಾಣಗಳು..

ಮಾಲ್ವನ್‌ನಿಂದ 10 ಕಿ.ಮೀ ಕ್ರಮಿಸಿದರೆ ದೇವ್‍ಭಾಗ್-ಸಂಗಮ ಸಿಗುತ್ತದೆ. ಇಲ್ಲಿ ನದಿ ಮತ್ತು ಸಮುದ್ರಗಳ ಸಂಗಮವಾಗುವುದನ್ನು ಕಾಣಬಹುದು. ಇಲ್ಲಿಯೂ ಪ್ರವೇಶ ಶುಲ್ಕ ಪಾವತಿಸಿ ಲಾಂಚ್‍ನಲ್ಲಿ ತುಸುದೂರ ಸಾಗಿದರೆ ಸಮುದ್ರದ ನಡುವೆ ಕಾಣುವ ಡಾಲ್ಫಿನ್‍ಗಳ ಚಿನ್ನಾಟದ ದೃಶ್ಯವನ್ನು ಸೂರೆಗೊಳ್ಳಬಹುದು.

ಮಾಲ್ವನ್‌ಲ್ಲಿ ಗಣೇಶ ದೇವಾಲಯವಿದೆ. ಸಮೀಪದಲ್ಲೇ ರಾಕ್‍ಗಾರ್ಡನ್ ಇದೆ. ಮುಂದೆ ದಾಮಾಪುರದಲ್ಲಿ ಬೃಹತ್ ಕೆರೆ ವೀಕ್ಷಿಸಬಹುದು. ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿ ದೇವಾಲಯ, ದಕ್ಷಿಣಕಾಶಿ ನರಸೋಬವಾಡಿ (ನರಸಿಂಹ ಮತ್ತು ದತ್ತಾತ್ರೇಯ ದೇಗುಲಗಳಿರುವ ತಾಣ) ವೀಕ್ಷಿಸಬಹುದು.

ಕಿದ್ರಾಪುರದಲ್ಲಿ ಕೋಪೇಶ್ವರ ದೇಗುಲವಿದೆ. ಇದನ್ನು ನೋಡಿದರೆ, ನಮ್ಮ ಬೇಲೂರು-ಹಳೇಬೀಡು-ಸೋಮನಾಥಪುರ ದೇಗುಲಗಳ ನೆನಪಾಗುತ್ತದೆ. ಅಷ್ಟೊಂದು ಕಲಾತ್ಮಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.