ADVERTISEMENT

Trekking: ಮಾನ್ಸೂನ್‌ ಚಾರಣ.. ಅನುಭವದ ಹೂರಣ..!

ಶೇಖರ್ ಗೌಳೇರ್ ಅವರ ಲೇಖನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 21:25 IST
Last Updated 14 ಸೆಪ್ಟೆಂಬರ್ 2024, 21:25 IST
ಮಳೆಗಾಲದಲ್ಲಿ ಹೀಗೆ ಜಿಟಿ ಜಿಟಿ ಮಳೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುವುದೇ ಭಿನ್ನ ಅನುಭವ...
ಮಳೆಗಾಲದಲ್ಲಿ ಹೀಗೆ ಜಿಟಿ ಜಿಟಿ ಮಳೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುವುದೇ ಭಿನ್ನ ಅನುಭವ...   

ಜುಲೈ ತಿಂಗಳ ಮಳೆಗಾಲ ಆರಂಭವಾಗುತ್ತಿದ್ದಂತೆ ಶಿವಮೊಗ್ಗದ ಯೂಥ್ ಹಾಸ್ಟೆಲ್ ಗೆಳೆಯರು ಗೋವಾದ ನ್ಯಾಷನಲ್ ಮಾನ್ಸೂನ್ ಟ್ರೆಕಿಂಗ್ ಹೊರಡಲು ಪ್ರೇರೇಪಿಸುತ್ತಿದ್ದರು. ಆಗುಂಬೆ, ಹುಲಿಕಲ್ ಘಾಟಿಗಳಲ್ಲಿ ಮಳೆಗಾಲದ ಚಾರಣ ಮಾಡಿದ ನನಗೆ, ಗೋವಾ ಮಾನ್ಸೂನ್ ಚಾರಣ ಕೈಬೀಸಿ ಕರೆದಂತಿತ್ತು. ಶಿವಮೊಗ್ಗದಿಂದ ಹೊನ್ನಾವರಕ್ಕೆ ಬಸ್ಸಲ್ಲಿ ಹೊರಟಾಗ ಮಳೆ ಜಿಟಿ ಜಿಟಿ ಬೀಳುತ್ತಲೇ ಇತ್ತು. ಜೋಗ ದಾಟಿದ ಕೂಡಲೇ ಮಳೆ ರಪ ರಪ ಸುರಿಯುತ್ತಿತ್ತು. ಗೇರುಸೊಪ್ಪ ಕಣಿವೆಯ ಬಂಗಾರ ಕುಸುಮ ಜಲಪಾತ ಕಿಟಕಿಯ ಮೂಲಕ ರುದ್ರರಮಣೀಯವಾಗಿ ಕಾಣಿಸಿತ್ತು. ರಸ್ತೆಬದಿಯ ಕಿರುಜಲಪಾತಗಳಂತೂ ಕಣ್ಣಿಗೆ ಹಬ್ಬ ಉಂಟುಮಾಡಿದ್ದವು.

ಕರಾವಳಿಯ ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಮಿರ್ಜಾನ, ಅಂಕೋಲಾ ಹಾಗೂ ಕಾರವಾರ ಭಾರೀ ಮಳೆ ನೀರಿನಿಂದ ಸುತ್ತುವರಿದಿದ್ದವು. ಕೆಲವು ತೋಟದ ಮನೆಗಳು ನೀರಲ್ಲಿ ಮುಳುಗಿ ನಿಂತಿದ್ದವು. ಮಡಗಾಂವ್ ತಲುಪುವವರೆಗೂ ಮಳೆ ಧೋ ಎಂದು ಬೀಳುತ್ತಲೇ ಇತ್ತು. ಸದಾ ಬಣ್ಣಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ಗೋವಾ ಮಳೆಯ ಮಾಯಾಲೋಕದಲ್ಲಿ ಮುಚ್ಚಿಹೋಗಿತ್ತು.

ಗೋವಾ ‘ನ್ಯಾಷನಲ್ ಮಾನ್ಸೂನ್ ಟ್ರೆಕಿಂಗ್‌’ಗೆ ಹೆಸರುವಾಸಿ. ದೂದ್‌ ಸಾಗರ ಜಲಪಾತವನ್ನು ನೋಡಲೆಂದೇ ನಾವು ಎರಡು ದಿನ ಮೊದಲೇ ಗೋವಾ ತಲುಪಿದ್ದೆವು. ಆದರೆ ಎಡೆಬಿಡದ ಮಳೆಯಿಂದ ಗೋವಾ ಸರ್ಕಾರ ದೂದ್‌ ಸಾಗರ ಭೇಟಿಗೆ ಒಂದು ವಾರ ನಿರ್ಬಂಧ ಹೇರಿತ್ತು. ನಾವು ಪಣಜಿಯಿಂದ 40 ಕಿಲೊಮೀಟರ್‌ ದೂರದ ಸಿಕ್ವೇಲಿಯಂ ಬಳಿಯ ಅರವಲಮ್ ಜಲಪಾತ ನೋಡಿ ತೃಪ್ತಿ ಪಟ್ಟುಕೊಂಡೆವು. ಶಿಬಿರಾಧಿಕಾರಿಗಳು ನಮ್ಮ ಗುರುತಿನಪತ್ರ, ವೈದ್ಯಕೀಯಪತ್ರ ಪರಿಶೀಲಿಸಿ ನಮ್ಮನ್ನು 50 ಕಿಲೊಮೀಟರ್‌ ದೂರದ ಹೊರವಲಯದ ಬೇಸ್‌ಕ್ಯಾಂಪ್‌ಗೆ ಕರೆದೊಯ್ದರು. ನಮ್ಮ ಮೂಲ ಶಿಬಿರ ಡೊಂಗುರ್ಲಿ ಠಾಣೆ ಮಹದಾಯಿ ರಾಷ್ಟ್ರೀಯ ಅಭಯಾರಣ್ಯದ ಪ್ರಶಾಂತ ಜಾಗದಲ್ಲಿ ನೆಲೆಗೊಂಡಿತ್ತು.

ADVERTISEMENT

ಮಣಿಪುರ, ಗುರುಗಾಂವ್‌, ನವದೆಹಲಿ, ಮುಂಬೈ, ಪೂನಾ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ–ಹೀಗೆ ದೇಶದ ನಾನಾ ಭಾಗಗಳಿಂದ 60ಕ್ಕೂ ಹೆಚ್ಚು ಚಾರಣಿಗರು ಬಂದಿದ್ದರು. ವಿಭಿನ್ನ ಜಾತಿ, ಧರ್ಮ, ವೇಷ, ಭಾಷೆ ಎಲ್ಲವನ್ನು ಮರೆತು ಪ್ರಕೃತಿಯ ಮಳೆಯಲ್ಲಿ ಒಂದುಗೂಡಿದ್ದೆವು. ಶಿಬಿರಾಧಿಕಾರಿಗಳು ಚಾರಣದ ನಿಯಮಗಳನ್ನು, ಕಾಲ್ನಡಿಗೆಯ ದೈನಿಕ ವೇಳಾಪಟ್ಟಿಯನ್ನು ಹಾಗೂ ಎಚ್ಚರಿಕೆ, ನಿಬಂಧನೆ, ರಾಷ್ಟ್ರೀಯ ಅಭಯಾರಣ್ಯದ ಕಾನೂನುಗಳನ್ನು ವಿವರಿಸಿದರು. 

ಮೊದಲ ದಿನ ಹಿವರ್‌ಖುರ್ದ್ ಜಲಪಾತಕ್ಕೆ ಹೊರಟೆವು. ಕೈಯಲ್ಲಿ ಕೋಲು, ಕಾಲಲ್ಲಿ ವಾಟರ್ ಪ್ರೂಫ್ ಶೂ ಅಥವಾ ಚಪ್ಪಲಿ, ತಲೆಗೆ ಕ್ಯಾಪು, ಮೈಗೆ ರೇನ್‌ಕೋಟ್‌ ಧರಿಸಿ ನಡಿಗೆ ಆರಂಭಿಸಿದೆವು. ಮಳೆಯಂತೂ ಬೀಳುತ್ತಲೇ ಇತ್ತು. ಅದಿಲ್ಲದಿದ್ದರೆ ಮಳೆ ಚಾರಣ ಎಂದು ಕರೆಯಲಾದೀತೆ? ಕೆಲವು ಯುವಕ-ಯುವತಿಯರಂತೂ ಹಾಫ್‌ಪ್ಯಾಂಟ್, ಆ್ಯಂಕಲ್ ಲೆನ್ತ್‌ ಪ್ಯಾಂಟ್‌, ಟಿ ಶರ್ಟ್ ಧರಿಸಿ ರೇನ್‌ಕೋಟ್‌, ಜರ್ಕಿನ್‌, ಛತ್ರಿಗಳ ಕಿರಿಕಿರಿಯನ್ನು ಬಿಟ್ಟು ಮಳೆಯಲ್ಲಿ ತೊಯ್ಯುತ್ತ ಸ್ವಚ್ಛಂದವಾಗಿ ವಿಹರಿಸುತ್ತಿದ್ದರು. ಹಸಿರುಹಾದಿಯಲ್ಲಿ ಹಲಸು, ಸೀಬೆ, ಸಪೋಟ ಹಾಗೂ ಗೋಡಂಬಿ ತೋಟಗಳು ಕಾಣಿಸುತ್ತಿದ್ದವು. ಮಧ್ಯ ಮಧ್ಯ ತೋಟದ ಮನೆಗಳು ಇಣುಕುತ್ತಿದ್ದವು. ದೂರದ ಪಶ್ಚಿಮಘಟ್ಟಗಳ ನೆತ್ತಿಯಿಂದ ದಾರದ ಎಳೆಗಳಂತೆ ಧರೆಗಿಳಿಯುವ ಜಲಪಾತಗಳು ಕಣ್ಣಿಗೆ ಮುದ ನೀಡುತ್ತಿದ್ದವು. ಮೊಶಾಚೊವಾಜಾರ್ ಗ್ರಾಮವನ್ನು ದಾಟಿ ಅಜ್ಞಾತ ಜಲಪಾತದ ಕಾಡುದಾರಿಯನ್ನು ತುಳಿದೆವು. ಜಾರುವ ಮೊನುಚಾದ ಕಲ್ಲುಗಳು, ಕೆಸರುಗುಂಡಿಗಳು, ಗಿಡ ಮರ, ಪೊದೆಗಳ ಸಂದಿಯಲ್ಲಿ ಸಾಗುವುದೇ ಮಳೆಗಾಲದ ವಿಶೇಷತೆ. ಆದರೆ ಜಿಗಣೆ ಇಂಬಳಗಳು ಇಲ್ಲದಿರುವುದರಿಂದ ತುರಿಕೆ ತಪ್ಪಿಸಿಕೊಂಡೆವು. ಸ್ವಲ್ಪ ಹತ್ತಿರದಲ್ಲಿಯೇ ಜುಳು ಜುಳು ನೀನಾದ ಮಾಡುವ, ಹಾವಿನಂತೆ ಹರಿಯುವ ಹಳ್ಳ ಎದುರಾಯಿತು. ಗೈಡ್ ಕೆಲವರನ್ನು ಕೈ ಹಿಡಿದು ದಾಟಿಸಿದರು. ಕೆಲವರು ಜಾರಿಬಿದ್ದು ತೊಯ್ಸಿಸಿಕೊಂಡರು. ಹೆಜ್ಜೆ ಹಾಕುತ್ತಾ ಪುಟ್ಟ ಪುಟ್ಟ ಜಲಪಾತಗಳ ಸರಣಿಯೇ ತೆರೆದುಕೊಂಡಿತು. ಸೆಲ್ಫಿಗಳು ಚುರುಕಾದವು. ಚಾರಣಿಗರು ನೀರಿಗೆ ಇಳಿದೇ ಬಿಟ್ಟರು. ನೀರಲ್ಲಿ ಮುಳುಗಿದರು. ಈಜಿದರು, ದಬದಬೆಗೆ ತಲೆಕೊಟ್ಟು ನಿಂತರು. ಮತ್ತೆ ಕೆಲವರು ನೀರಲ್ಲೇ ಕುಳಿತು ಬಿಟ್ಟರು.

ಹತ್ತಿರದ ಮತ್ತೊಂದು ಎತ್ತರದ ಜಲಪಾತಕ್ಕೆ ತೆರಳಲು ಅನುಮತಿ ಸಿಗದೇ ಇರುವುದರಿಂದ ಅಲ್ಲಿಯೇ ಒಂದು ಗಂಟೆ ನೀರಿನಲ್ಲಿಯೇ ಕಾಲ ಕಳೆದೆವು. ಮಧ್ಯಾಹ್ನ ಬಿಡುವು ಇದ್ದುದರಿಂದ ನದಿ ದಡದ, ಹಚ್ಚ ಹಸಿರು ಪರಿಸರದ ನಡುವಿನ ಪುರಾತನ ಜೈನ ಶೈಲಿಯ ಮಹಾದೇವ ದೇವಸ್ಥಾನವನ್ನು ವೀಕ್ಷಿಸಿ ಮೂಲ ಶಿಬಿರಕ್ಕೆ ವಾಪಸ್ಸಾದೆವು.

ಎರಡನೇ ದಿನದ ಮಳೆ ಚಾರಣ ಪಾಲೀ ಜಲಪಾತದ ಕಡೆ ಸಾಗಬೇಕಿತ್ತು. ಅದರ ಸುತ್ತಲಿನ ನದಿ, ತೊರೆ, ಹಳ್ಳ, ಕೊಳ್ಳಗಳು ಭರ್ಜರಿ ಮಳೆಯಿಂದ ಉಕ್ಕಿ ಹರಿಯುತ್ತಿದ್ದರಿಂದ ಅರಣ್ಯ ಇಲಾಖೆಯ ಅನುಮತಿ ದೊರೆಯದೆ ಏಳು ಕಿಲೊಮೀಟರ್‌ ದೂರದ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಅಂಜಲಿ ಡ್ಯಾಮಿನ ಹಿನ್ನೀರಿಗೆ ತೆರಳಬೇಕಾಯಿತು. ಮಳೆ ಬೀಳುತ್ತಲೇ ಇತ್ತು. ರಸ್ತೆ ಬದಿಯಲ್ಲಿ ಕಾಡಿನ ಗರ್ಭದಿಂದ ಪುಟ್ಟ ಪುಟ್ಟ ಜಲಪಾತಗಳು ಭೋರ್ಗರೆಯುತ್ತಿದ್ದವು. ಯಾವುದೇ ಜಲಪಾತ ಎಷ್ಟೇ ಎತ್ತರವಿದ್ದರೂ ಅದಕ್ಕೆ ತಲೆಕೊಟ್ಟು ಯುವಕರು ಸ್ನಾನ ಮಾಡುತ್ತಿದ್ದರು. ಹರಿಯುವ ತೊರೆ ಸಿಕ್ಕರೂ ಸಾಕು, ಅದರಲ್ಲಿ ಮುಳುಗಿ ಸ್ನಾನ ಮಾಡುತ್ತಿದ್ದರು. ಸುಮಾರು 15 ಕಿಲೊಮೀಟರ್‌ ಅಂಜಲಿ ಡ್ಯಾಮಿನ ಹಿನ್ನೀರು ತಲುಪಿ ಅಲ್ಲಿಯೇ ಊಟ ಮಾಡಿ ಸಂಜೆ ಮೂಲ ಶಿಬಿರ ಸೇರಿದೆವು.

ಮೂರನೇ ದಿನದ ಮಳೆ ಚಾರಣವನಂತೂ ಮರೆಯಲು ಅಸಾಧ್ಯ. ಮಹಾದಾಯಿ ನದಿ ಸೇತುವೆ ದಾಟುತ್ತಲೇ ತೋಟ, ಮನೆ ಎಸ್ಟೇಟುಗಳನ್ನು ದಾಟಿ ಗುಡ್ಡ ಏರುತ್ತಿದ್ದೆವು. ಕಾಡಿನ ಗರ್ಭಹೊಕ್ಕು ಪುಟ್ಟ ಪುಟ್ಟ ತೊರೆದಾಟಿ ಏಳೂವರೆ ಕಿಲೊಮೀಟರ್‌ ನಡೆದಿರಬಹುದು. ಶೆಲೋಪ್ ಬುಡ್ರಕ್ ಹಳ್ಳಿಯ ಸಮೀಪದ ದೇವಸ್ಥಾನದ ಬಳಿ ಕಾಡಿನ ಕಿರುದಾರಿ ಹಿಡಿದು ಒಂದು ಕಿಲೊಮೀಟರ್‌ ನಡೆದಿರಬಹುದು. ಜಲಪಾತದ ಸಪ್ಪಳ ಕೇಳಿಸಿತು. ದಿಣ್ಣೆಯಿಂದ ಕೆಳಗಿಳಿದಾಗ 50-60 ಅಡಿ ಎತ್ತರದ ಎರಡು ಹಂತದ ಜಲಪಾತ ಎಲ್ಲರನ್ನೂ ಆಕರ್ಷಿಸಿತು. ಕೆಳಗೆ ಗುಂಡಿ ಇದ್ದುದರಿಂದ ಎಲ್ಲರಿಗೂ ನೀರಿಗಿಳಿದು ಸ್ನಾನ ಮಾಡಲು ಪ್ರಶಸ್ತವಾಗಿತ್ತು. ಜಲಪಾತದ ಹೆಸರು ‘ಸುಲುಸುಲು’ ಅಂದರೆ ಸೂರ್ಯನ ಬಿಸಿಲಿಗೆ ಫಳಫಳ ಹೊಳೆಯುವುದು. ಮತ್ತೆ ಎಲ್ಲರೂ ನದಿ ಹರಿದು ಬರುವ ವಿರುದ್ಧ ದಿಕ್ಕಿನಲ್ಲಿ ಸಾಗಿದೆವು. ದಟ್ಟಕಾಡಿನ ಅಜ್ಞಾತ ಜಾಗದಲ್ಲಿ ದಟ್ಟಕಾಡಿನ ನಡುವೆ ಮತ್ತೊಂದು 20 ಅಡಿ ಎತ್ತರದ ಸುಲುಸುಲು ಜಲಪಾತ ಕಾಣಿಸಿತು. ಹೀಗೆ ಐದಾರು ಕಿಲೊಮೀಟರ್‌ ವ್ಯಾಪ್ತಿಯ ಒಳಗೆ ನಾಲ್ಕಕ್ಕೂ ಹೆಚ್ಚು ಜಲಪಾತಗಳನ್ನು ನೋಡಿರಬಹುದು. ಬಹುತೇಕ ಎಲ್ಲಾ ಚಾರಣಿಗರು ಜಲಪಾತವಿದ್ದಲ್ಲಿ ಈಜಿದರು. ಸುಲುಸುಲು ಜಲಪಾತ ಎಲ್ಲರಿಗೂ ಸಂಭ್ರಮ ಮೂಡಿಸಿದ್ದವು. ಒಟ್ಟು 14 ಕಿಲೊಮೀಟರ್‌ ನಡೆದಿದ್ದರೂ ಯಾರ ಮುಖದಲ್ಲೂ ದಣಿವಿನ ಛಾಯೆ ಕಾಣಿಸುತ್ತಿರಲಿಲ್ಲ.

ಅವತ್ತು ಚಾರಣದ ಕೊನೆಯ ದಿನ. ಕಮತಾಲ್, ಕೆಸರವಾಲ್, ಸುರಾಲ್‌ನಂಥ ಅತಿ ಸುಂದರ ಜಲಪಾತ ನೋಡಲು ಅಬ್ಬರದ ಮಳೆಯಿಂದ ಸಾಧ್ಯವಾಗಲೇ ಇಲ್ಲ. ಆರು ಕಿಲೊಮೀಟರ್‌ ದೂರದ ಸಲೇಲಿ ಗ್ರಾಮದ ಹತ್ತಿರದಲ್ಲಿಯೇ ಇದ್ದ ಸಲೇಲಿ ಜಲಪಾತ ನೋಡಿ ಬಂದೆವು. 70-80 ಅಡಿ ಎತ್ತರದ ಆ ಜಲಪಾತ ನೋಡುವಾಗಲೂ ಅರಣ್ಯಾಧಿಕಾರಿಗಳು ಹಿಂಬಾಲಿಸುತ್ತಿದ್ದರು. ಹೀಗೆ ನಮ್ಮ ನಾಲ್ಕು ದಿನಗಳ ಕಾಡಿನ ಮಳೆನಡಿಗೆ, ಅಡಿಯಿಂದ ಮುಡಿಯವರೆಗೆ ಜಲಪಾತ ವೀಕ್ಷಣೆ, ಮಕ್ಕಳಂತೆ ಮಳೆಯಲ್ಲಿ ನೆನೆಯುವುದು, ನೀರಲ್ಲಿ ಕುಣಿದು ಕುಪ್ಪಳಿಸುವುದು ಅನನ್ಯ ಅನುಭವ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಗಳಲ್ಲಿ ಇಂಥ ಸಹಜ ಅನುಭವಗಳಾಗುತ್ತಿದ್ದೆವು. ಈಗ ಇಂಥ ಟ್ರೆಕಿಂಗ್ ಶಿಬಿರಗಳಲ್ಲಿ ಮಾತ್ರ ಇದು ಸಾಧ್ಯ. 

ಕಾಡಿನೊಳಗೆ ಕಾಣಸಿಗುವ ಜಲಪಾತಗಳು 
ಕಾಡಿನೊಳಗೆ ಕಾಣಸಿಗುವ ಜಲಪಾತಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.