ಕಣ್ಮುಚ್ಚಿ ನಿಂತರೆ ಜಗತ್ತನ್ನೇ ಮರೆವಷ್ಟು ಆಹ್ಲಾದ ನೀಡುವ ಗಾಳಿ, ದಣಿವಾರಿಸಿಕೊಳ್ಳಲು ಕಲ್ಲಿನ ಬಂಡೆಗಳು, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ವಿಹಂಗಮ ನೋಟ. ಇವೆಲ್ಲ ಕಾಣಸಿಗುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಬಳಿ ಇರುವ ಗುಡಿಬಂಡೆ ಕೋಟೆಯಲ್ಲಿ.
ವಾರಾಂತ್ಯದಲ್ಲಿ ಬೆಂಗಳೂರಿನಿಂದ ಒಂದೊಳ್ಳೆ ಜಾಗಕ್ಕೆ ಭೇಟಿ ನೀಡಬೇಕು, ಪ್ರಶಾಂತತೆಯನ್ನು ಅನುಭವಿಸಬೇಕು, ಸಣ್ಣದಾದರೂ ಚಾರಣ ಮಾಡಬೇಕು ಎನ್ನುವ ಬಯಕೆ ಇದ್ದವರಿಗೆ ಗುಡಿಬಂಡೆ ಕೋಟೆ ಹೇಳಿ ಮಾಡಿಸಿದ ಜಾಗ. ಹಾಂ ಸೂರ್ಯೋದಯ ನೋಡಬೇಕು ಎನ್ನುವವರಿಗೂ ಈ ಜಾಗ ಇಷ್ಟವಾಗುತ್ತದೆ. ದೂರದ ಆಗಸದಲ್ಲಿ ಬಣ್ಣದೋಕುಳಿಯನ್ನು ಸೃಷ್ಟಿಸಿ ಎದ್ದು ಬರುವ ಬಾಲಸೂರ್ಯನ ಸ್ನೇಹ ಮಾಡಬಹುದು.
ಬೆಂಗಳೂರಿನಿಂದ 92 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಎನ್ನುವ ಊರಿನಲ್ಲಿ ಈ ಕೋಟೆಯಿದೆ. ಬೆಂಗಳೂರಿನಿಂದ ಎರಡು ಗಂಟೆ ಪ್ರಯಾಣ ಮಾಡಿದರೆ ಈ ಜಾಗಕ್ಕೆ ತಲುಪಬಹುದು. ಬೈಕ್ ಅಥವಾ ಕಾರ್ ಯಾವುದರಲ್ಲಾದರೂ ಹೋಗಬಹುದು.
ಆರಂಭದ ಸ್ಥಳದಿಂದ 30 ನಿಮಿಷಗಳ ಕಾಲ ನಡೆದು ಸಾಗಬೇಕು. ಮಳೆಗಾಲದ ಆರಂಭ ಮತ್ತು ಚಳಿಗಾಲ ಈ ಜಾಗಕ್ಕೆ ಹೋಗಲು ಹೆಚ್ಚು ಸೂಕ್ತವಾದ ಸಮಯ. ಸಾಗುವ ದಾರಿಯಲ್ಲಿ ಕಾಣುವ ಹಚ್ಚಹಸುರಿನ ಗಿಡಗಳು, ತಂಪನೆಯ ಗಾಳಿ, ಅಲ್ಲಲ್ಲಿ ಕಾಣುವ ಸುರಂಗ, ಕಲ್ಲಿನ ಗೋಪುರಗಳು ಹೆಚ್ಚು ದಣಿವಾಗದಂತೆ ಮಾಡುತ್ತವೆ. ತೀರಾ ಕಡಿದಾದ ಹಾದಿಯೇನೂ ಅಲ್ಲ. ಒಪ್ಪವಾದ ಮೆಟ್ಟಿಲುಗಳಿವೆ. ಆದರೆ ಅಲ್ಲಲ್ಲಿ ಮಣ್ಣಿನ ದಾರಿಯಿದೆ. ಗಿಡ- ಗಂಟಿಗಳ ನಡುವೆ ನಡೆಯಬೇಕಾಗುತ್ತದೆ. ಹೀಗಾಗಿ ಹೆಜ್ಜೆ ಇಡುವಾಗ ಎಚ್ಚರಿಕೆ ಅವಶ್ಯ.
ಇಲ್ಲಿ ನಡೆದು ಸಾಗಬೇಕಾದರೆ ಅಲ್ಲಲ್ಲಿ ಸಣ್ಣ ಸಣ್ಣ ಕೊಳಗಳನ್ನು ಕಾಣಬಹುದು. ಕೋಟೆಯಲ್ಲಿ ಮಳೆಕೊಯ್ಲು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು ಒಟ್ಟು 19 ಕೊಳಗಳನ್ನು ನಿರ್ಮಿಸಲಾಗಿದೆ. ಪ್ರತಿ ಕೊಳಗಳೂ ಒಂದಕ್ಕೊಂದು ಸಂಪರ್ಕ ಹೊಂದಿದ್ದು, ಒಟ್ಟು ಮೂರು ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆಯಂತೆ.
ಏಳು ಹಂತಗಳಿರುವ ಈ ಕೋಟೆಯನ್ನು ಶತ್ರುಗಳಿಂದ ತಪ್ಪಿಸಿಕೊಳ್ಳಲು ಬೇಕಾದ ಗುಪ್ತಮಾರ್ಗವನ್ನು ಇಲ್ಲಿ ನಿರ್ಮಿಸಲಾಗಿದೆ. ಗುಡಿಬಂಡೆಯ ಸ್ಥಳೀಯ ಆಡಳಿತಗಾರನಾಗಿದ್ದ ಬೈರೇಗೌಡ ಎನ್ನುವವರು ಈ ಕೋಟೆಯನ್ನು 17ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ.
ಕೋಟೆಯ ಮೇಲೊಂದು ಶಿವನ ದೇವಾಲಯವಿದೆ. ಒಳಹೊಕ್ಕು ಕೈಮುಗಿದರೆ ಮನಸ್ಸಿಗೊಂದಿಷ್ಟು ನಿರಾಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.