ADVERTISEMENT

ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

71 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ ಸುಮಾರು ಆರು ಸಾವಿರದಷ್ಟಿದೆ. ಆದರೆ ಪ್ರಯತ್ನಿಸುವವರ ಸಂಖ್ಯೆ ಮಾತ್ರ ಎವರೆಸ್ಟ್‌ನಷ್ಟೇ ಎತ್ತರವಿದೆ.

ಇ.ಎಸ್.ಸುಧೀಂದ್ರ ಪ್ರಸಾದ್
Published 7 ಜುಲೈ 2024, 0:28 IST
Last Updated 7 ಜುಲೈ 2024, 0:28 IST
ಮೌಂಟ್ ಎವರೆಸ್ಟ್ ತುದಿ ತಲುಪಲು ಸರತಿ ಸಾಲಿನಲ್ಲಿ ನಿಂತಿರುವ ಪರ್ವತಾರೋಹಿಗಳು
ಮೌಂಟ್ ಎವರೆಸ್ಟ್ ತುದಿ ತಲುಪಲು ಸರತಿ ಸಾಲಿನಲ್ಲಿ ನಿಂತಿರುವ ಪರ್ವತಾರೋಹಿಗಳು   

ಅದು 2019. ಪಕ್ಕದಲ್ಲಿರುವ ಚಿತ್ರ ವಿಶ್ವದ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ದೊಡ್ಡ ಜಾಗವನ್ನು ಗಿಟ್ಟಿಸಿಕೊಂಡಿತ್ತು. ಅದು ಹಿಮಾಲಯದಲ್ಲಿ ಪರ್ವತಾರೋಹಿಗಳು ಮೌಂಟ್‌ ಎವರೆಸ್ಟ್‌ ಏರಲು ಸಾಲುಗಟ್ಟಿ ತಮ್ಮ ಸರದಿಗಾಗಿ ಕಾಯುತ್ತಿರುವ ಚಿತ್ರವವಾಗಿತ್ತು. ಇದನ್ನು ಓದುಗರು ನಿಬ್ಬೆರಗಾಗಿ ನೋಡಿದ್ದರು. ನಮ್ಮ ಬೆಂಗಳೂರಿನ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಪ್ರತಿ ದಿನ ಕಾಣಿಸುವ ಟ್ರಾಫಿಕ್‌ ಜಾಮ್‌ನಂತೆಯೇ ಇತ್ತು ಅದು! ಸಮುದ್ರಮಟ್ಟದಿಂದ 29,031 ಅಡಿಗಳಷ್ಟು ಎತ್ತರ ಇರುವ ಮೌಂಟ್‌ ಎವರೆಸ್ಟ್‌ನಲ್ಲಿ ಈಗಲೂ ಪರ್ವತಾರೋಹಿಗಳದೇ ದಟ್ಟಣೆ. ಕ್ಷಣಕಾಲ ಉಸಿರಾಡಲು ಆಮ್ಲಜನಕವೇ ಸಿಗದು ಎಂಬಂತಹ ಪ್ರದೇಶದಲ್ಲಿ ಶಿಖರದ ತುತ್ತತುದಿ ತಲುಪಲು ಬರೋಬ್ಬರಿ ಎರಡೂವರೆ ತಾಸು ಪರ್ವತಾರೋಹಿಗಳು ಕಾದಿದ್ದು ಒಂದೆಡೆ ಅಚ್ಚರಿಗೆ, ಮತ್ತೊಂದೆಡೆ ಆತಂಕಕ್ಕೂ ಕಾರಣವಾಗಿತ್ತು.

71 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ ಸುಮಾರು ಆರು ಸಾವಿರದಷ್ಟಿದೆ. ಆದರೆ ಪ್ರಯತ್ನಿಸುವವರ ಸಂಖ್ಯೆ ಮಾತ್ರ ಎವರೆಸ್ಟ್‌ನಷ್ಟೇ ಎತ್ತರವಿದೆ. 2019ರ ಎವರೆಸ್ಟ್ ದಟ್ಟಣೆಯ ಪೂರ್ವದಲ್ಲಿ ವರ್ಷಕ್ಕೆ ಸುಮಾರು 900 ವಿದೇಶಿಯರಿಗೆ ನೇಪಾಳ ಸರ್ಕಾರ ಎವರೆಸ್ಟ್ ಏರಲು ಅನುಮತಿ ನೀಡಿದ ಉದಾಹರಣೆಗಳಿವೆ.

ಮೇ 29, 1953 ರಂದು ನೇಪಾಳದ ತೇನ್‌ಸಿಂಗ್‌ ಹಾಗೂ ನ್ಯೂಜಿಲೆಂಡ್‌ನ ಎಡ್ಮಂಡ್‌ ಹಿಲರಿ ಎವರೆಸ್ಟ್‌ನ ಮೇರು ತಲುಪುವ ಮೂಲಕ ಜಗತ್ತಿಗೆ ಮೊದಲಿಗರಾದರು. ಆದರೆ ಇಂದಿನ ಎವರೆಸ್ಟ್ ಹಾದಿ ಯಾವುದೇ ಮಹಾನಗರದ ಟ್ರಾಫಿಕ್‌ನಂತೆ ಕಂಡರೂ ಅಚ್ಚರಿಯೇನಲ್ಲ.

ADVERTISEMENT

‘ಚಾರಣ ಎಂಬ ಸಾಹಸ ಕುರಿತ ಮಾಹಿತಿ ಲಭ್ಯತೆ ಹೆಚ್ಚಾಗಿದೆ. ಪರ್ವತ ಏರಲು ಅಗತ್ಯವಿರುವ ಸೌಕರ್ಯಗಳೂ ಸುಲಭವಾಗಿ ಸಿಗುತ್ತಿವೆ. ಮಾಹಿತಿ, ತರಬೇತಿ, ಅನುಮತಿ ಎಲ್ಲವೂ ಲಭ್ಯ. ಆದರೆ ಹಿಮಾಲಯ ಮಾತ್ರ ಬದಲಾಗಿದೆ. ಎವರೆಸ್ಟ್ ಎಂಬ ತುದಿ ಎಂಥ ಪರ್ವತಾರೋಹಿಗಳಿಗೂ ಪಂಥಾಹ್ವಾನ ನೀಡುತ್ತದೆ. ಆದರೆ ಪ್ರಕೃತಿ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದ ಅನುಕೂಲಕರ ವಾತಾವರಣ ಸಿಗದು. ಇದುವೇ ಹಿಮಾಲಯದಲ್ಲಿನ ಹೊಸ ಸವಾಲು’ ಎಂದು ಮೌಂಟ್ ಎವರೆಸ್ಟ್ ಏರಿದ ಕರ್ನಾಟಕದ 2ನೇ ಮಹಿಳೆ (ಎವರೆಸ್ಟ್‌ ಏರಿದ ಮೊದಲ ಮಹಿಳೆ ಮೇಜರ್ ಸ್ಮಿತಾ ಲಕ್ಷ್ಮಣ್) ಮೈಸೂರಿನ ಡಾ.ಉಷಾ ಹೆಗಡೆ ಅವರ ಅನುಭವದ ಮಾತು.

ಅವರೇ ಹೇಳುವಂತೆ ಶೇಕಡ 40ರಷ್ಟು ದೈಹಿಕ ಶ್ರಮ ಹಾಗೂ ಶೇಕಡ 60ರಷ್ಟು ದೃಢ ಮನಸ್ಸು ಇದ್ದರೂ ಸಾಗರಮಾತಾ (ನೇಪಾಳಿಗಳು ಹಿಮಾಲಯವನ್ನು ಕರೆಯುವುದೇ ಹೀಗೆ) ಕೃಪೆ ಅತ್ಯಗತ್ಯ. ಹಿಮರಾಶಿಯ ಪ್ರವಾಹ ಒಂದೆಡೆಯಾದರೆ, ಹಿಮವೇ ಇಲ್ಲದೆ ಕಲ್ಲುಬಂಡೆಗಳ ಕಂದಕಗಳೇ ತುಂಬಿದ್ದರೂ ಹಿಮಾಲಯ ಏರುವುದು ಕಷ್ಟ.

ಪರ್ವತಾರೋಹಣಕ್ಕೆ ಲಭ್ಯವಿರುವ ಆಧುನಿಕ ಸಲಕರಣೆಗಳು, ತಪ್ಪಲಿಗೆ ತಲುಪಿಸಿ, ಕರೆತರುವ ಶೇರ್ಪಾಗಳ ಅವಿರತ ಶ್ರಮ ಎವರೆಸ್ಟ್ ಹಾದಿಯನ್ನು ಹಿಂದಿಗಿಂತಲೂ ಸುಗಮಗೊಳಿಸಿದೆ. ಇಷ್ಟೇ ಏಕೆ? ಡ್ಯಾಂಡಿ ಶೇರ್ಪಾ ಅವರ ನೇತೃತ್ವದ ತಂಡ ಮೇ ತಿಂಗಳಲ್ಲಿ ಎವರೆಸ್ಟ್ ಏರಿ, ಪರ್ವತಾರೋಹಿಗಳಿಗೆ ನೆರವಾಗಲು ಹಗ್ಗ ಅಳವಡಿಸುತ್ತದೆ. ಇದು ಎವರೆಸ್ಟ್ ಏರುವವರಿಗೆ ಹೆಚ್ಚು ಸಹಕಾರಿಯಾಗಿದೆ.

26 ಸಾವಿರ ಅಡಿ ಎತ್ತರ ತಲುಪಿದ ನಂತರ ಆಮ್ಲಜನಕ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ಪರ್ವತಾರೋಹಿಗಳು ಆಮ್ಲಜನಕದ ಸಿಲಿಂಡರ್ ಬಳಸುವುದು ಸಾಮಾನ್ಯ. ಆದರೆ ಉದ್ದನೆಯ ಸರತಿ ಸಾಲಿನಿಂದ ಕಾಯುವ ಸಮಯ ಹೆಚ್ಚಾದಷ್ಟೂ ಆಮ್ಲಜನಕ ಪ್ರಮಾಣ ಕಡಿಮೆಯಾಗುವುದೂ ಪರ್ವತಾರೋಹಿಗಳ ಆತಂಕಕ್ಕೆ ಮತ್ತೊಂದು ಕಾರಣ. ‘ಮೇಲೆ ಮೇಲೆ ಏರುತ್ತಿದ್ದಂತೆ ದೇಹದಲ್ಲಿ ದ್ರವದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಶ್ವಾಸಕೋಶ ಹಾಗೂ ಮಿದುಳಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದರ ಪರಿಣಾಮ ಉಸಿರಾಟ ಸಮಸ್ಯೆ, ಸುಸ್ತು, ಕಿರಿಕಿರಿ ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ಪರ್ವತಾರೋಹಿಯೂ ಆಗಿರುವ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ರಾಜೇಂದ್ರ.

ಹಿಮಾಲಯ ಎದುರಿಸುತ್ತಿದೆ ಸಂಕಷ್ಟಗಳು

ಪರ್ವತಾರೋಹಿಗಳು ಹಿಮಾಲಯದಲ್ಲಿ ಎದುರಿಸುವ ಸಮಸ್ಯೆ ಒಂದೆಡೆಯಾದರೆ, ಇವರಿಂದಲೇ ಹಿಮಾಲಯ ಎದುರಿಸುತ್ತಿರುವ ಸಮಸ್ಯೆಗಳು ಹತ್ತಾರು. ದೂರದಿಂದ ಶುಭ್ರವಾದ ಬಿಳಿ ದಟ್ಟ ಮಂಜನ್ನು ಹೊದ್ದಿರುವ ಹಿಮಾಲಯ, ಸಮೀಪದಿಂದ ತ್ಯಾಜ್ಯ ತುಂಬಿದ ‍ಪರ್ವತ. ಸರೋವರಗಳು ಕಲುಷಿತಗೊಂಡಿವೆ. ಪರ್ವತಾರೋಹಿಗಳು ಮೇಲೇರಲು ಬಳಸುವ ಪ್ಲಾಸ್ಟಿಕ್‌, ಆಮ್ಲಜನಕ ಸಿಲಿಂಡರ್, ಆಹಾರ ಪದಾರ್ಥ ಹಾಗೂ ಬಹಿರ್ದೆಸೆ ತ್ಯಾಜ್ಯ ಹಿಮಾಲಯಕ್ಕೆ ಮಾರಕವಾಗಿವೆ. ಅನುಮತಿಗೆ ಮಿತಿ ಹಾಕುವಂತೆ ಪರಿಸರವಾದಿಗಳು, ಪರ್ವತಾರೋಹಿಗಳು ಒತ್ತಡ ಹೇರುತ್ತಿದ್ದಾರೆ. ನೇಪಾಳದ ಸುಪ್ರೀಂ ಕೋರ್ಟ್‌ ಕೂಡಾ ಎವರೆಸ್ಟ್ ಏರಲು ನೀಡುವ ಪರ್ಮಿಟ್‌ ಸಂಖ್ಯೆಯನ್ನು ಕಡಿತಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

2023ರಲ್ಲಿ ಎವರೆಸ್ಟ್ ಮಾರ್ಗದಲ್ಲಿ ಸಂಭವಿಸಿದ ಸಾವುಗಳು, ಶಿಖರದ ತುತ್ತತುದಿಯವರೆಗೂ ಹಬ್ಬಿದ ಮಾಲಿನ್ಯ ನೇಪಾಳ ಸರ್ಕಾರಕ್ಕೆ ಹೊಸ ಕಾನೂನು ಜಾರಿಗೆ ತರುವ ಅನಿವಾರ್ಯ ಸೃಷ್ಟಿಸಿತು. ಪರ್ವತಾರೋಹಿಗಳ ಸುರಕ್ಷತೆಗಾಗಿ ಬೇಸ್‌ ಕ್ಯಾಂಪ್‌ಗಳಲ್ಲಿ ಟೆಂಟ್‌ಗಳಿಗೆ ಅನುಮತಿ ನೀಡಲಾಯಿತು. ಆದರೆ ಕಠಿಣವಾಗಿ ಜಾರಿಗೆ ತಂದ ಕಾನೂನೆಂದರೆ, ಮನುಷ್ಯರು ತಮ್ಮ ಬಹಿರ್ದೆಸೆಯ ತ್ಯಾಜ್ಯವನ್ನು ಕೆಳಗೆ ತರುವುದನ್ನು ಕಡ್ಡಾಯಗೊಳಿಸಿತು. ಅದಕ್ಕಾಗಿ ಜೈವಿಕವಾಗಿ ಕಳಿಯುವ ಚೀಲಗಳನ್ನೇ ಪರ್ವತಾರೋಹಿಗಳಿಗೆ ನೀಡಲು ಸರ್ಕಾರ ಆದೇಶಿಸಿತು.

‘ದೊಡ್ಡ ಮೊತ್ತದ ರಾಯಧನವನ್ನು ನೇಪಾಳ ಸರ್ಕಾರ ಪಡೆದು ಅನುಮತಿ ನೀಡುತ್ತದೆ. ಮೇಲಿನಿಂದ ತ್ಯಾಜ್ಯಗಳನ್ನು ತರಲು ಶೇರ್ಪಾಗಳಿಗೆ ಕಠಿಣ ಕಾನೂನು ವಿಧಿಸಿದೆ. ತಾರದಿದ್ದರೆ ಠೇವಣಿ ಮೊತ್ತ ಹಿಂದಿರುಗಿಸುವುದಿಲ್ಲ. ಹಿಮದಲ್ಲೇ ಗುಂಡಿ ತೆಗೆದು ಬಹಿರ್ದೆಸೆ ಮಾಡಿ ನಂತರ ಅದನ್ನು ಅಲ್ಲಿಯೇ ಮುಚ್ಚುವ ಪರಿಪಾಟ ಮುಂದುವರಿದಿದೆ. ಇದು ನಮ್ಮಂತವರಿಗೂ ಬೇಸರ ತರಿಸಿದೆ. ಅದರೆ ಬೇರೆ ದಾರಿಯೇ ಇಲ್ಲ’ ಎನ್ನುತ್ತಾರೆ ಡಾ.ಉಷಾ.

ಹಿಮಾಲಯ ಶುಚಿ ಕಾರ್ಯ

ನೇಪಾಳ, ಟಿಬೆಟ್ ಹಾಗೂ ಭಾರತವೂ ಸೇರಿದಂತೆ ಕೆಲವು ದೇಶಗಳು ಹಿಮಾಲಯವನ್ನು ಶುಚಿಗೊಳಿಸುವ ಕೆಲಸ ಮಾಡುತ್ತಲೇ ಇವೆ. 2019ರಲ್ಲಿ ನಡೆಸಿದ ಮೊದಲ ಅಭಿಯಾನದಲ್ಲಿ ಹತ್ತು ಟನ್‌ ಕಸ ಹಾಗೂ ನಾಲ್ಕು ಶವಗಳನ್ನು ಸಂಗ್ರಹಿಸಲಾಗಿತ್ತು. 2022ರಲ್ಲಿ ಎಂಟು ಟನ್‌ ಕಸ ಹಾಗೂ ಎರಡು ಶವಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಇದು ಪರಿಹಾರವಂತೂ ಅಲ್ಲ. ಏಕೆಂದರೆ ಎವರೆಸ್ಟ್ ಪ್ರದೇಶವನ್ನು ನೋಡಿಕೊಳ್ಳುತ್ತಿರುವ ಸ್ಥಳೀಯ ಆಡಳಿತವಾದ ಖುಮಬು ಪಸಾಂಗ್‌ ಲಾಮು ರೂರಲ್ ಮುನ್ಸಿಪಾಲ್ಟಿಗೆ ಮನುಷ್ಯರ ತ್ಯಾಜ್ಯದ ನಿರ್ವಹಣೆ ವಹಿಸಲಾಗಿದೆ. ಅಲ್ಲಿನ ಆಡಳಿತಾಧಿಕಾರಿ ಜಗತ್‌ಪ್ರಸಾದ್ ಭುಸಲ್ ಅವರ ಪ್ರಕಾರ, ‘ಸಂಗ್ರಹವಾಗುವ ಇಷ್ಟೊಂದು ಮಲವನ್ನು ಗೊಬ್ಬರ ಮಾಡಬೇಕೇ ಅಥವಾ ತೆಂಗ್ಬೋಚೆ ಅಥವಾ ಪಾಂಗ್ಬೋಚೆ ಬಳಿ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆ ಎಂಬ ಗೊಂದಲವಿದೆ’ ಎಂದಿದ್ದು ವರದಿಯಾಗಿತ್ತು.

ಸವಾಲುಗಳು ಏನು?

ಈಶಾನ್ಯ ದಿಕ್ಕಿನಿಂದ ಎವರೆಸ್ಟ್ ಏರುವುದು ಕಡಿಮೆ ಅಪಾಯದ ಮಾರ್ಗ ಎಂದೇ ಹೇಳಲಾಗುತ್ತದೆ. ಏಕೆಂದರೆ ದಕ್ಷಿಣದ ದಿಕ್ಕಿಗೆ ಹೋಲಿಸಿದಲ್ಲಿ ಈಶಾನ್ಯದಲ್ಲಿ ಹಿಮಪಾತವಾಗಲಿ ಅಥವಾ ಬಂಡೆಗಳ ಕುಸಿತ ಪ್ರಮಾಣ ಕಡಿಮೆ. ಚೀನಾ ಕಡೆಯಿಂದ ಹತ್ತುವವರ ಸಂಖ್ಯೆಯೂ ಕಡಿಮೆ. ಹೀಗಾಗಿ ‘ಟ್ರಾಫಿಕ್ ಜಾಮ್’ನಂಥ ಸಮಸ್ಯೆಯೂ ಇರದು. ಎವರೆಸ್ಟ್‌ನ ಪಶ್ಚಿಮದ ದಿಕ್ಕಿನಿಂದ ಮೇಲೇರುವ ಮಾರ್ಗದಲ್ಲಿ ಕೆಲವು ಸಾವಿನ ಕಂದಕಗಳಿವೆ. ಇವುಗಳಲ್ಲಿ ಖುಂಬು ಐಸ್‌ಫಾಲ್‌ ಅನ್ನು ‘ಮೃತ್ಯುಕೋಣೆ’ ಎಂದೇ ಕರೆಯಲಾಗುತ್ತದೆ. ಇಲ್ಲಿ ಅಪಘಾತಗಳು ಸಾಮಾನ್ಯ. ಈ ಮೃತ್ಯುಕೋಣೆಯಲ್ಲಿ ಪರ್ವತಾರೋಹಿಗಳನ್ನು ಸುರಕ್ಷಿತವಾಗಿ ದಾಟಿಸಲು ಶೇರ್ಪಾಗಳ ಪಡೆಯೇ ಸಿದ್ಧವಾಗಿರುತ್ತದೆ. ಇವರನ್ನು ‘ಐಸ್‌ಫಾಲ್‌ ಡಾಕ್ಟರ್ಸ್‌’ ಎಂದೇ ಕರೆಯಲಾಗುತ್ತದೆ. ಎವರೆಸ್ಟ್‌ನ 21 ಸಾವಿರ ಅಡಿಗಳ ಎತ್ತರದಲ್ಲಿ ಇಂಥ ಐದು ಮೃತ್ಯುಕೋಣೆಗಳಿವೆ. ತುಸುವೇ ಎಚ್ಚರ ತಪ್ಪಿದರೂ ಹಿಮ ಸಮಾಧಿಯಾಗುವುದು ಗ್ಯಾರಂಟಿ.

1953ರಲ್ಲಿನ ಮೊದಲ ಯಶಸ್ವಿ ಯತ್ನದ ನಂತರ 2024ರ ಜನವರಿವರೆಗೂ 6,664 ಪರ್ವತಾರೋಹಿಗಳು 11,996 ಬಾರಿ ಎವರೆಸ್ಟ್ ಶಿಖರವನ್ನು ಏರಿದ್ದಾರೆ. ಎವರೆಸ್ಟ್ ಏರುವ ಅತ್ಯಂತ ಪ್ರಮುಖ ಮಾರ್ಗವಾದ ನೇಪಾಳದ ಕಡೆಯಿಂದ 8,350 ಬಾರಿ ಶಿಖರ ಏರಲಾಗಿದೆ. ಈ ಮಾರ್ಗದಲ್ಲಿ ಸಾವಿನ ಸಂಖ್ಯೆ ಕಡಿಮೆ ಎಂದರೂ, ಈವರೆಗೂ 217 ಪರ್ವತಾರೋಹಿಗಳು ಪ್ರಾಣ ಕಳೆದುಕೊಂಡಿದ್ದಾರೆ. 2024ರಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.

ಆಸ್ತಿಕರಿಗೆ ಸ್ವರ್ಗ, ನಾಸ್ತಿಕರಿಗೆ ಸೌಂದರ್ಯ, ಸಾಹಸಿಗಳಿಗೆ ಸವಾಲಾಗಿ ನಿಲ್ಲುವ ಹಿಮಾಲಯವು ಪ್ರಕೃತಿ ಏರುಪೇರು, ಮನುಷ್ಯರನ್ನೂ ಒಳಗೊಂಡಂತೆ ಇತರ ಜೀವಿಗಳನ್ನೂ ಸಹಿಸಿಕೊಳ್ಳುತ್ತಿದೆ. ಇತ್ತೀಚೆಗೆ ಮನುಷ್ಯರ ಅತಿಯಾದ ಹಸ್ತಕ್ಷೇಪದಿಂದ ಅದರ ನೆಮ್ಮದಿಗೆ ಭಂಗ ಬಂದಿದೆ. ಹೀಗಾಗಿ ಆಗಾಗ ಮೈಮುರಿಯುತ್ತಿರುತ್ತದೆ. ಆದರೆ ‍ಪರ್ವತಾರೋಹಿಗಳು, ಸರ್ಕಾರಗಳು ಮಾತ್ರ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. 

ಕಠಿಣ ಹಾದಿ

ದಂತ ವೈದ್ಯೆ ಉಷಾ ಅವರು, ಹಿಮಾಲಯ ಏರಲು ಏಕಾಏಕಿ ಸಜ್ಜಾದವರಲ್ಲ. ಸುಮಾರು 12 ವರ್ಷಗಳಲ್ಲಿ ಅವರು 5 ಕಿ.ಮೀ. ಓಟದಿಂದ ಆರಂಭಿಸಿ  42 ಕಿ.ಮೀ.ಯ ಮ್ಯಾರಥಾನ್ ಪೂರ್ಣಗೊಳಿಸಿದ್ದಾರೆ. ಓಟ, ಸೈಕ್ಲಿಂಗ್ ಹಾಗೂ ಈಜು ಒಳಗೊಂಡ ಟ್ರಯಥ್ಲಾನ್‌ನಲ್ಲಿ ‘ಐರನ್‌ಮ್ಯಾನ್‌’ ಸಾಧನೆ ಮಾಡಿದ ಮೊದಲ ಮಹಿಳೆ. ನಿತ್ಯ 14 ಕೆ.ಜಿ. ಬ್ಯಾಗ್‌ಪ್ಯಾಕ್ ಹೊತ್ತು ಚಾಮುಂಡಿಬೆಟ್ಟ ಸಹಿತ ವಿವಿಧ ಬೆಟ್ಟಗಳನ್ನು ನಿರಂತರವಾಗಿ ಹತ್ತಿದ ಇವರು ಎವರೆಸ್ಟ್ ಏರಲು ತೆಗೆದುಕೊಂಡ ಅವಧಿ 45 ದಿನಗಳು. 

‘ಮೂರು ಪರ್ವತಾರೋಹಿಗಳಿದ್ದ ನಮ್ಮ ತಂಡಕ್ಕೆ 15 ಶೇರ್ಪಾಗಳು ನೆರವಾದರು. ಟಾಟಾ ಸ್ಟೀಲ್ ಅಡ್ವೆಂಚರ್‌ ಅಕಾಡೆಮಿಯಲ್ಲಿನ ಕಲಿಕೆ, ಕರೆದುಕೊಂಡು ಹೋದ ಅಕಾಡೆಮಿಯ ಕರಾರುವಕ್ಕಾದ ಮಾರ್ಗದರ್ಶನದಿಂದ ಎವರೆಸ್ಟ್ ಏರುವ ಕಾರ್ಯ ಪೂರ್ಣಗೊಂಡಿತು. ಆದರೆ ಜೋರಾಗಿ ಬೀಸುವ ಗಾಳಿ, ಹಿಮ ಕುಸಿತ ಇಂಥ ಅವಘಡಗಳು ಹಿಮಾಲಯದಲ್ಲಿ ಸದ್ದಿಲ್ಲದೇ ಅಪ್ಪಳಿಸುತ್ತಿರುತ್ತವೆ. ಈ ವರ್ಷ ಎವರೆಸ್ಟ್ ಏರುವವರಲ್ಲಿ ಎಂಟು ಜನ ಮೃತಪಟ್ಟಿದ್ದಾರೆ’ ಎಂದು ಸಾಧನೆಯ ಹಿಂದಿನ ಕಠಿಣ ಹಾದಿಯನ್ನು ವಿವರಿಸಿದರು.

ನೇಪಾಳದ ಆದಾಯ ಮೂಲ ಹಿಮಾಲಯ

ಹಿಮಾಲಯ ಚಾರಣಕ್ಕೆ ಬರುವವರನ್ನೇ ನೇಪಾಳ ಸರ್ಕಾರ ಆದಾಯದ ಮೂಲವನ್ನಾಗಿ ಮಾಡಿಕೊಂಡಿದೆ ಎಂಬ ಆರೋಪ ಪಾಶ್ಚಿಮಾತ್ಯ ಪರ್ವತಾರೋಹಿಗಳಿಂದ ಆಗಾಗ್ಗೆ ಕೇಳಿಬರುತ್ತಲೇ ಇದೆ. ₹10 ಲಕ್ಷ ನೀಡಿದರೆ ಯಾರನ್ನು ಬೇಕಾದರೂ, ಎಷ್ಟು ಜನರಿಗೆ ಬೇಕಾದರೂ ಅಲ್ಲಿನ ಸರ್ಕಾರ ಅನುಮತಿ ನೀಡುತ್ತದೆ.

ನೇಪಾಳ ಸರ್ಕಾರಕ್ಕೆ ಕೊಡುವ ಶುಲ್ಕವನ್ನು ಹೊರತುಪಡಿಸಿ, ಪ್ರತಿಯೊಬ್ಬ ಪರ್ವತಾರೋಹಿಯೂ ಗ್ಯಾಸ್, ಊಟ, ಗೈಡ್ ಮತ್ತು ಸ್ಥಳೀಯ ಓಡಾಟ ಹಾಗೂ ಶೇರ್ಪಾಗಳ ಶುಲ್ಕ ಸೇರಿದಂತೆ 27 ಸಾವಿರ ಅಮೆರಿಕನ್ ಡಾಲರ್‌ ಅನ್ನು ಈ ಸಾಹಸಕ್ಕೆ ಖರ್ಚು ಮಾಡಬೇಕಾಗಿದೆ’ ಎಂಬುದು ಅವರ ವಾದ. ಇಲ್ಲಿಗೆ ಬರುವ ಚಾರಣಿಗರಿಗಾಗಿಯೇ ಟೀ ಹೌಸ್‌ ಜತೆಗೆ, ಹಾಸ್ಟೆಲ್, ಹೋಟೆಲ್‌ಗಳೂ ಆರಂಭವಾಗಿವೆ. ಹೆಚ್ಚು ಹಣ ನೀಡಿದರೆ ಹೆಚ್ಚು ಸೌಕರ್ಯ. ಹೀಗಾಗಿ ಹಿಮಾಲಯದ ಸುತ್ತಮುತ್ತ ಅತಿಯಾದ ಅಭಿವೃದ್ಧಿ ಕಾರ್ಯಗಳೂ ಪರ್ವತಕ್ಕೆ ಮಾರಕವಾಗಿವೆ ಎನ್ನುವುದು ಪರಿಸರವಾದಿ ದೂರು. ಎವರೆಸ್ಟ್ ಏರುವವರಿಗೆ ನೆರವಾಗಲೆಂದೇ ಬಹಳಷ್ಟು ಏಜೆನ್ಸಿಗಳು ಹುಟ್ಟಿಕೊಂಡಿವೆ. ಇದು ಭಾರತದಲ್ಲಿ ಮಾತ್ರವಲ್ಲ. ಅಮೆರಿಕ, ಲಂಡನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂಥ ರಾಷ್ಟ್ರಗಳಲ್ಲೂ ಎವರೆಸ್ಟ್‌ ಪರ್ವತಾರೋಹಣಕ್ಕೆ ಕರೆದೊಯ್ಯುವ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ.

ಡಾ. ಉಷಾ ಹೆಗಡೆ
ಎವರೆಸ್ಟ್ ಬೇಸ್‌ ಕ್ಯಾಂಪ್‌ನಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಕಸ
ಮೌಂಟ್ ಎವರೆಸ್ಟ್ ಬೇಸ್ಕ್ಯಾಂಪ್‌ನಲ್ಲಿ ಡಾ. ಉಷಾ ಹೆಗಡೆ
ಮೌಂಟ್ ಎವರೆಸ್ಟ್‌ನಿಂದ ಸಂಗ್ರಹಿಸಿದ ತ್ಯಾಜ್ಯ
ಮೌಂಟ್ ಎವರೆಸ್ಟ್ ಏರಲು ಸರತಿ ಸಾಲಿನಲ್ಲಿ ನಿಂತಿರುವ ಸಾಹಸಿಗರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.