ADVERTISEMENT

53 ಗಂಟೆಗಳಲ್ಲಿ 3620 ಕಿ.ಮೀ ಸಾಹಸಯಾನ!

ಎಸ್.ರಶ್ಮಿ
Published 17 ಆಗಸ್ಟ್ 2024, 23:36 IST
Last Updated 17 ಆಗಸ್ಟ್ 2024, 23:36 IST
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ ರೈಡು ಕೈಗೊಂಡ ಚಿನ್ಮಯ್‌ ಸುದರ್ಶನ್‌
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ ರೈಡು ಕೈಗೊಂಡ ಚಿನ್ಮಯ್‌ ಸುದರ್ಶನ್‌   

ಮನಸಲ್ಲಿ ಹಟ ಹುಟ್ಟಿತ್ತು. ರಟ್ಟೆಗಳಲ್ಲಿ ಕಸುವಿತ್ತು. ಕಂಗಳಲ್ಲಿ ಕನಸು ಮೂಡಿತ್ತು. ಹಗಲಿರುಳೂ ಕನವರಿಕೆಯಾಗಿ ಬದಲಾಯಿತು. ಇನ್ನಿದನ್ನು ನನಸಾಗಿಸದಿದ್ದರೆ... ಎಂಬ ಯೋಚನೆಯೇ ಆತಂಕ ಮೂಡಿಸುತ್ತಿತ್ತು.

ಹೋಗುವುದೇ ನಿಜವಾದರೆ ದಾಖಲೆ ನಿರ್ಮಿಸೋಣ ಎಂದೆನಿಸಿದ್ದೇ ತಡ, ದಾಖಲೆ ನಿರ್ಮಿಸಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳನ್ನೆಲ್ಲ ಪೂರ್ಣಗೊಳಿಸಿದೆ. ಫೆಬ್ರುವರಿ 25ರಂದು ಪ್ರಯಾಣ ಆರಂಭಿಸಿ, 27ರ ಸಂಜೆ ಜಮ್ಮು ಮತ್ತು ಕಾಶ್ಮೀರ ತಲುಪಿದೆ.

ಬೆಂಗಳೂರಿನ ಯುವಕ ಚಿನ್ಮಯ್‌ ಸುದರ್ಶನ್‌ ತಮ್ಮ ಸಾಹಸಗಾಥೆಯನ್ನು ಹೀಗೆ ಸರಳವಾಗಿ ಹೇಳುತ್ತಿದ್ದರು. ಅಂದಾಜು 3620 ಕಿ.ಮೀ. ದೂರ. 53 ಗಂಟೆಗಳಲ್ಲಿ ಪೂರೈಸಿದ್ದರು. ಪ್ರತಿಗಂಟೆಗೆ ಸರಾಸರಿ 57ಕಿ.ಮೀ ವೇಗ.

ADVERTISEMENT
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ ರೈಡು ಕೈಗೊಂಡ ಚಿನ್ಮಯ್‌ ಸುದರ್ಶನ್‌

ಸವಾಲು ಇದ್ದದ್ದು 53 ಗಂಟೆ ನಿರಂತರ ಬೈಕ್‌ ಓಡಿಸುವುದರಲ್ಲಿ. ಗಾಡಿಯ ಮೇಲೆ ಕುಳಿತ ನಂತರ ಗಡಿ ನಿರ್ಧಾರವಾಗಿದ್ದವು. ಬೆಂಗಳೂರಿನಿಂದ ಕನ್ಯಾಕುಮಾರಿ ತಲುಪಿದ ಮೇಲೆ ಇಡೀ ದಿನ ವಿರಮಿಸಿದೆ. ಸೋಮವಾರ ಸಂಜೆ ಪ್ರಯಾಣ ಆರಂಭಿಸಿದೆ. 

ಇಲ್ಲಿಂದ ಶುರುವಾಯ್ತು ಪ್ರಯಾಣ. ಕನ್ಯಾಕುಮಾರಿಯಿಂದ ಬೆಂಗಳೂರು, ಬೆಂಗಳೂರಿನಿಂದ ಹೈದರಾಬಾದ್‌. ಹೈದರಾಬಾದ್‌ ಬಳಿ ರಸ್ತೆ ಕಾಮಗಾರಿ ನಡೀತಿತ್ತು. ನಗರದೊಳಗೆ ನುಸುಳಿದ್ದೇ ಒಂದೂವರೆ ಎರಡು ಗಂಟೆ ಹಿಂದೆ ಬೀಳುವಂತಾಯಿತು. ಅದನ್ನು ಸರಿಪಡಿಸಲು ವೇಗ ಹೆಚ್ಚಿಸಲೇಬೇಕಿತ್ತು. ಪ್ರತಿ 250 ಕಿ.ಮೀ ಗೆ ಇಂಧನ ತುಂಬಿಸಲು ನಿಲ್ಲಿಸುತ್ತಿದ್ದೆ. ಆ ಎರಡು ಮೂರು ನಿಮಿಷ ಮಾತ್ರ ವಿರಾಮ. ಆಗಲೇ ಕೈಕಾಲು ಸಡಿಲಿಸಿಕೊಂಡು, ಮತ್ತೆ ಮುನ್ನಡೆಯುತ್ತಿದ್ದೆ. ಗುರಿ ಮುಟ್ಟುವವರೆಗೂ ವಿರಾಮವೆಂದರೆ ಅಷ್ಟೇನೆ.

ಹಸಿವಾಗದಂತೆ, ದಣಿವಾಗದಂತೆ ಎಲೆಕ್ಟ್ರಾಲ್‌ ಮತ್ತು ನೀರನ್ನು ಜೊತೆಗಿರಿಸಿಕೊಂಡಿದ್ದೆ. ಎರಡು ದಿನಗಳಲ್ಲಿ ಕೇವಲ ಮೂರು ಲೀಟರ್‌ ನೀರು ಮತ್ತು ಎಲೆಕ್ಟ್ರಾಲ್‌ ಮಾತ್ರ ಸೇವಿಸಿದ್ದೆ. ಎಲ್ಲವೂ ಸರಿಯಾಗಿದೆ ಎಂದುಕೊಂಡು ಹೊರಟಾಗಲೇ ಮಧ್ಯಪ್ರದೇಶ ಪ್ರವೇಶಿಸಿದ್ದೆ. ಚಂಬಲ್‌ ಘಾಟಿ ದಾಟಬೇಕಿತ್ತು. ಚಂಬಲ್‌ ಕಣಿವೆಯ ಎಲ್ಲ ಕತೆಗಳೂ ನೆನಪಾಗಿದ್ದವು. ಧೃತಿಗೆಡದೆ ಹೊರಟಿದ್ದೆ. ಆದರೆ ಇದ್ದಕ್ಕಿದ್ದಂತೆ ನನ್ನ ಹಿಂದೆ ಒಂದೆರಡು ಬೈಕುಗಳು ಬೆನ್ನಟ್ಟಿ ಬಂದವು. ಕನ್ನಡಿಯಲ್ಲಿ ಅವರು ಬರುವುದು ಕಾಣುತ್ತಿತ್ತು. ಮುಂದೆ ಹೋದಂತೆ ಎರಡಿದ್ದವು ನಾಲ್ಕು ಬೈಕುಗಳಾದವು. ಕಣಿವೆಯ ಕತೆ ನೆನಪಾಗತೊಡಗಿತ್ತು. ಜೊತೆಗೆ ವಿಪರೀತ ದೂಳು. ಕಣ್ಣು ಕೆಂಪಾಗತೊಡಗಿದ್ದವು. ಇನ್ನು ವೇಗ ಹೆಚ್ಚಿಸದಿದ್ದಲ್ಲಿ ಕಣಿವೆಯಲ್ಲಿಯೇ ಕಣ್ಮರೆಯಾಗುವ ಎಲ್ಲ ಸಾಧ್ಯತೆಗಳೂ ಕಂಡವು. ವೇಗ ಹೆಚ್ಚಿಸಿ, ಅವರನ್ನ ಹಿಂದಿಕ್ಕಿ ಕಣಿವೆ ದಾಟಿದ ಮೇಲೆಯೇ ನಿರಾಳವಾಗಿದ್ದು.

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ ರೈಡು ಕೈಗೊಂಡ ಚಿನ್ಮಯ್‌ ಸುದರ್ಶನ್‌

ಮಧ್ಯಪ್ರದೇಶದಿಂದ ನವದೆಹಲಿ ಪ್ರವೇಶಿಸಿದಾಗ ಕಣ್ಣೆಳೆಯತೊಡಗಿದ್ದವು. ಬೆನ್ನು ಮಾತಾಡತೊಡಗಿತ್ತು. ಒಂದು ಚಹಾ, ಜೊತೆಗೊಂದು ಬನ್‌ ಕೊಂಡೆ. ಗಾಡಿಗೆ ಇಂಧನ ತುಂಬಿಸುತ್ತಿದ್ದೆ. ಆ ಬಿಡುವಿನಲ್ಲಿಯೇ ಇದನ್ನೆಲ್ಲ ಮಾಡಿದೆ. ಉಣ್ಣಲು, ತಿನ್ನಲೆಂದು ನಿಲ್ಲುವಂತಿರಲಿಲ್ಲ. ಗುರಿ ಸಮೀಪ ಇತ್ತು. ಆದರೆ...

ಕಂಗಳಿಗೆ ಚೂರು ವಿರಾಮ ನೀಡಿದಂತೆ ಒಂದರೆಕ್ಷಣ ಕಣ್ಮುಚ್ಚಿ ತೆರೆದು ಮಾಡುತ್ತಲೇ ಚಹಾ ಸೇವಿಸುತ್ತಾ ಬನ್‌ ತಿಂದು ಪಂಜಾಬ್‌ ರಾಜ್ಯವನ್ನು ಪ್ರವೇಶಿಸಿದೆ. ರೈತರ ಪ್ರತಿಭಟನೆ ನಡೆದಿತ್ತು. ಹೆದ್ದಾರಿಯನ್ನು ಬಿಟ್ಟು ಒಳಹಾದಿಗಳಿಂದ ಪ್ರಯಾಣ ಕೈಗೊಳ್ಳಬೇಕಾಯಿತು. ಆದರೆ ಪಂಜಾಬ್‌ ರಾಜ್ಯದಾದ್ಯಂತ ಪ್ರತಿಭಟನೆ ನಡೆದಿತ್ತು. ಈಗಾಗಲೇ ಎರಡೂವರೆಗಂಟೆ ಹಿಂದಿದ್ದೆ. ಮತ್ತೆ ಸಮಯದೊಂದಿಗೆ ರಾಜಿಯಾಗುವುದು ಬೇಕಾಗಿರಲಿಲ್ಲ. ಕೂಡಲೇ ದಾರಿ ಬದಲಿಸಿದೆ. ಹಿಮಾಚಲ ಪ್ರದೇಶ ಪ್ರವೇಶಿಸಿದೆ. ಹಿಮಾಚಲ ಪ್ರದೇಶದಿಂದ ಹಾಯ್ದು, ಪಠಾಣ್‌ ಕೋಟ್‌ ತಲುಪಿದೆ. ಪಠಾಣ್‌ ಕೋಟ್‌ ನಿಂದ ಜಮ್ಮು ಮತ್ತು ಕಾಶ್ಮೀರದ ಗಡಿ ತಲುಪಿದೆ. 

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ ರೈಡು ಕೈಗೊಂಡ ಚಿನ್ಮಯ್‌ ಸುದರ್ಶನ್‌

ಇದಿಷ್ಟೂ ದಾಖಲೆಗಾಗಿ ಆದ ಯಾನ. ಆದರೆ ನನ್ನೊಳಗಿನ ಯಾತ್ರೆ ಅಲ್ಲಿಂದ ಶುರುವಾಗಿತ್ತು. ಹಸಿವಿನ ಬಗ್ಗೆ ಬಾಲ್ಯದಿಂದಲೇ ಅರಿವಿತ್ತು. ಆದರೆ ಚಹಾದ ಗುಟುಕೊಂದು ಜೀವದಾಯಿನಿ ಅನಿಸಿದ್ದು, ರೈತರ ಬಗ್ಗೆ, ಅನ್ನದ ಬಗ್ಗೆ ಇನ್ನಷ್ಟು ಗೌರವ ಹುಟ್ಟಿತು. ಕಾಶ್ಮೀರ ತಲುಪಿದಾಗ ಕನ್ನಡದ ಯುವ ಸೈನಿಕರು ತಾವಾಗಿಯೇ ಬಂದು ಮಾತಾಡಿಸಿದರು. ಗಡಿದಾಟಿದಾಗಲೇ ಹೆಚ್ಚು ಹೆಚ್ಚು ನಮ್ಮತನದ ಅರಿವು ಮೂಡುವುದು. ಅವರೊಟ್ಟಿಗೆ ಮಾತಾಡಿ, ಫೋಟೊ ಕ್ಲಿಕ್ಕಿಸಿಕೊಂಡೆವು. 

ಹೇಳಲೇಬೇಕಾದ ಮಾತೊಂದಿದೆ. ಕಾಶ್ಮೀರದಿಂದ ವಾಪಸ್‌ ಮರಳುತ್ತಿದ್ದೆ. ಇದ್ದಕ್ಕಿದ್ದಂತೆ ಹಿಮಪಾತ ಶುರುವಾಯಿತು. ಏನದು ಎಂದು ನೋಡುವಾಗಲೇ ನನ್ನ ಎಡಬದಿಯ ಬೆಟ್ಟ ಕುಸಿಯಿತು. ನನ್ನ ಗಾಡಿಯೂ ಸೇರಿದಂತೆ ನಾನೂ ಒಂದೆರಡು ಅಡಿ ಪಕ್ಕಕ್ಕೆ ಜರುಗಿದ್ದೆ. ಅದೃಷ್ಟ, ಬದುಕಿಕೊಂಡೆ ಅಂತನಿಸಿದ್ದು ಅದೇ ಕ್ಷಣ. ಆದರೆ ಕಣ್ಮುಂದೆಯೇ ಅದೆಷ್ಟು ಜನ ಹೂತುಹೋದರು. ಕಣಿವೆಯಲ್ಲಿ ಕುಸಿದ ಬದುಕು ನೋಡಿದಾಗ, ಇರುವುದೊಂದೇ ಜನ್ಮ. ಪರೋಪಕ್ಕಾರಕ್ಕೆ ಇದನ್ನ ತೇಯಬೇಕು ಎಂದೆನಿಸಿತು. ಬದುಕುವುದೆಂದರೆ ಬರೀ ಉಸಿರಾಡುವುದಷ್ಟೇ ಅಲ್ಲ. ಆ ಗಳಿಗೆಯ ನಂತರ ಅನಿಸಿದ್ದು ಕನ್ನಡದ ನೆಲಕ್ಕೆ ಕೂಡಲೇ ತಲುಪಬೇಕು. ಕನ್ನಡಿಗರ ನಡುವೆ ಬರಬೇಕು. ಅಷ್ಟೇ... ಮತ್ತೆ ಪ್ರಯಾಣ ಆರಂಭವಾಯಿತು. ಮತ್ತೆಲ್ಲಿಯೂ ನಿಲ್ಲಿಸಲಿಲ್ಲ. ಬೆಂಗಳೂರಿಗೆ ಬಂದೆ...

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ ರೈಡು ಕೈಗೊಂಡ ಚಿನ್ಮಯ್‌ ಸುದರ್ಶನ್‌

ಉಫ್‌... ಅಂತ ಬ್ರೆತ್‌ಲೆಸ್‌ ಹಾಡಿನಂತೆ ತಮ್ಮ ಯಾನವನ್ನು ಬಿಚ್ಚಿಟ್ಟ ಚಿನ್ಮಯ್‌ ಇನ್ನು ಪೂರ್ವದಿಂದ ಪಶ್ಚಿಮಕ್ಕೆ ಒಂದು ಯಾತ್ರೆ ಕೈಗೊಳ್ಳಬೇಕು ಎಂಬ ಯೋಚನೆಯಲ್ಲಿದ್ದಾರೆ. ಮೊದಲ ಪ್ರಯಾಣ ಸಾಕಷ್ಟು ಪಾಠಗಳನ್ನೂ ಹೇಳಿದೆ. ಎರಡನೆಯದ್ದು ತಮ್ಮ ದಾಖಲೆಯನ್ನು ತಾವೇ ಮುರಿಯುವಂತಾಗಲಿ ಎಂಬ ಆಸೆ ಅವರದ್ದು.

ಪ್ರಯಾಣಕ್ಕೂ ಮುನ್ನ

* ಆರೋಗ್ಯದ ಕಡೆಗೆ ಗಮನವಿರಲಿ

* ಹೆಚ್ಚು ನೀರು ಕುಡಿಯದೇ ಓಡಿಸುವಾಗ ನಿರ್ಜಲೀಕರಣ ಆಗುವ ಸಾಧ್ಯತೆ ಇರುತ್ತದೆ. ವೈದ್ಯರಿಂದ ತಪಾಸಣೆಗೆ ಒಳಗಾಗಿ ಅವರ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ

* ಎಲ್ಲ ಆಧುನಿಕ ಗ್ಯಾಜೆಟ್‌ಗಳೂ ನಿಮ್ಮೊಂದಿಗಿರಲಿ. ಪವರ್‌ಬ್ಯಾಂಕ್‌ ಇರಿಸಿಕೊಳ್ಳಿ. ದೂರಸಂಪರ್ಕ ಸೇವೆಗಳ ಬಗ್ಗೆ ಮುಂಚೆಯೇ ಗೊತ್ತಿರಲಿ.

* ಸಾಧ್ಯವಿದ್ದಷ್ಟೂ ಏಕಾಂಗಿ ಟ್ರಿಪ್ಪುಗಳನ್ನು ಕೈಗೊಳ್ಳಬೇಡಿ. ಜೊತೆಗೆ ಇನ್ನೊಬ್ಬರು ಇದ್ದರೆ ಒಳಿತು

*ಪ್ರತಿ ಯಾನವೂ ನಿಮ್ಮಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಆ ಪ್ರಯಾಣವನ್ನು ಬದುಕಿನ ಪಾಠವೆಂದೇ ಪರಿಗಣಿಸಿ

* ತುರ್ತು ಸಂಪರ್ಕದ ಸಂಖ್ಯೆಗಳನ್ನು ಫೋನಿನಲ್ಲಿ ದಾಖಲಿಸಿಡಿ

ಯಾನದ ವಿವರಗಳು

ಕ್ರಮಿಸಿದ ದೂರ 3600 ಕಿ.ಮೀ.

ಸಮಯ: ಎರಡು ದಿನ

ಇಂಧನ ಖರ್ಚು: ₹ 67000

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬೈಕ್‌ ರೈಡು ಕೈಗೊಂಡ ಚಿನ್ಮಯ್‌ ಸುದರ್ಶನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.