ADVERTISEMENT

ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ರಹಮತ್ ತರೀಕೆರೆ
Published 4 ಡಿಸೆಂಬರ್ 2022, 1:49 IST
Last Updated 4 ಡಿಸೆಂಬರ್ 2022, 1:49 IST
ಚಾರಣ– ಸಾಂದರ್ಭಿಕ ಚಿತ್ರ
ಚಾರಣ– ಸಾಂದರ್ಭಿಕ ಚಿತ್ರ   

ಹುಲ್ಲು ಎಂದರೆ ಕ್ಷುದ್ರ ಎಂಬ ಭಾವ ಇದೆ. ಆದರೆ, ಬೆಟ್ಟಕ್ಕೆ ಘನತೆ ಬರುವುದೇ ಅದರ ಅಡಿಯ ಹುಲ್ಲಿನಿಂದ ಮತ್ತು ಹುಲ್ಲಿನಲ್ಲಿ ನೆಲೆ ಪಡೆದ ಪುಟ್ಟ ಜೀವಿಗಳಿಂದ. ಈ ಹುಲ್ಲು ಮಾಡುವ ಕ್ರಾಂತಿಯೇನು ಸುಮ್ಮನೆಯೇ ಮತ್ತೆ? ಕುದುರೆಮುಖ ಬೆಟ್ಟದ ನೆತ್ತಿಯ ಮೇಲೆ ನಿಂತು ಹೀಗೊಂದು ಹುಲ್ಲಿನ ಧ್ಯಾನ....

ಅ ಡಿಗರ ಕವಿತೆಯೊಂದರಲ್ಲಿ ‘ಹುಲ್ಲಿಗಿಲ್ಲ ಕಳ್ಳಿಗಿಲ್ಲ ಹೂವಿಗೇಕೆ ಸೌಸವ?’ ಎಂಬ ಸಾಲಿದೆ. ಸಮಾನತಾವಾದಿಗಳು ಅಧಿಕಾರಕ್ಕೆ ಬಂದರೆ, ಹೂವಿನ ವೈಶಿಷ್ಟ್ಯವನ್ನು ಅಲ್ಲಗಳೆಯಲು ಇಂತಹ ಪ್ರಶ್ನೆ ಕೇಳುತ್ತಾರೆಂಬ ಆತಂಕದಲ್ಲಿ ಹುಟ್ಟಿದ ಸಾಲಿದು. ಕಳ್ಳಿ ಹುಲ್ಲು ಹೂವು ಒಂದೇ ಪ್ರಕೃತಿಯ ಸೃಷ್ಟಿಗಳಾದರೂ, ಸುಗಂಧ ಮತ್ತು ಆಕರ್ಷಕ ವರ್ಣಗಳಿರುವ ಹೂವಿನ ಅನನ್ಯತೆಯನ್ನು ಮನ್ನಿಸಬೇಕೆಂಬುದು ಇಲ್ಲಿನ ಆಶಯ. ಆದರೆ ಕುವೆಂಪು ಅವರಿಗೆ ನಿಸರ್ಗದ ಚರಾಚರದಲ್ಲಿ ಎಲ್ಲವೂ ಮಹತ್ವವಾದವೇ. ‘ಹೂವೇ ದೇವರು’ ಕವನ ಬರೆದರೂ, ಅವರು ಕಾಣಿಸುವ ಪ್ರಕೃತಿಯಲ್ಲಿ ‘ಯಾರೂ ಮುಖ್ಯರಲ್ಲ, ಯಾವುದೂ ಅಮುಖ್ಯವಲ್ಲ’.

ಮೇಲ್ಕಾಣಿಸಿದ ದೃಷ್ಟಿಕೋನಗಳು ಕನ್ನಡ ಸಾಹಿತ್ಯದಲ್ಲಿ ಸಹಸ್ರಮಾನದಿಂದಲೂ ಎದುರುಬದುರಾಗಿ ಹರಿಯುತ್ತ ಬಂದಿವೆ. ದೊರೆ, ದೇವತೆ, ಮುನಿಗಳು ಕಾವ್ಯಕ್ಕೆ ನಾಯಕರಾಗಬೇಕೆಂದು ಒಂದು ಮಾರ್ಗ ಬಯಸಿದರೆ, ಲೋಕದ ಸಾಮಾನ್ಯ ಸಂಗತಿಗಳೂ ಕಾವ್ಯಕ್ಕೆ ವಸ್ತುಗಳಾಗಬಹುದು ಎಂಬುದು ಇನ್ನೊಂದು ಜಾಡು. ಈ ಎರಡನೇ ದೃಷ್ಟಿಕೋನಗಳು ಭಾರತ 20ನೇ ಶತಮಾನದಲ್ಲಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಮೇಲೆ ಹೊಸ ಆಯಾಮ ಪಡೆದವು. ನಿಸರ್ಗದಲ್ಲಿ ಚರಾಚರವೂ ಸಮಾನ ಮಹತ್ವವುಳ್ಳವು ಮಾತ್ರವಲ್ಲ, ಪರಸ್ಪರ ಸಂಬಂಧವುಳ್ಳವು. ಒಂದಿಲ್ಲವಾದರೆ ಇನ್ನೊಂದಕ್ಕೆ ಅರ್ಥವಿಲ್ಲ, ಅಸ್ತಿತ್ವವೂ ಇಲ್ಲ ಎಂಬ ಪರಿಸರಪ್ರಜ್ಞೆ ರೂಪುಗೊಂಡ ಬಳಿಕ, ಈ ಆಯಾಮಕ್ಕೆ ಮತ್ತಷ್ಟು ಗಹನತೆ ಬಂತು. ಇಡೀ ತೇಜಸ್ವಿ ಬರೆಹ ಮೂಡಿರುವುದೇ ಈ ತತ್ವದಲ್ಲಿ. ಕಾಡು, ಮಣ್ಣು, ಮಂಜು, ಮಳೆ, ನೀರು, ಹಕ್ಕಿ, ಪ್ರಾಣಿ, ಮರ, ಬಳ್ಳಿ, ಹೂವು, ಹಣ್ಣುಗಳ ಪರಸ್ಪರ ನಂಟಿನ ಸರಪಣಿಯಲ್ಲಿ ಒಂದು ಕೊಂಡಿ ಕಳಚಿದರೂ ಇಡೀ ವ್ಯವಸ್ಥೆ ಕುಸಿಯುತ್ತದೆ ಎಂದು ಕಾಣಿಸುತ್ತದೆ.

ADVERTISEMENT

ಈ ಸತ್ಯವು ಚಾರಣದಲ್ಲಿ ಚೆನ್ನಾಗಿ ಮನವರಿಕೆ ಆಗುತ್ತದೆ. ಚಾರಣದಲ್ಲಿ ಮರ, ಹೊಳೆ, ಪರ್ವತ, ಪ್ರಾಣಿ-ಪಕ್ಷಿಗಳು ಸಹಜವಾಗಿಯೇ ಎದ್ದು ತೋರುತ್ತವೆ. ಹೀಗೆ ಎದ್ದುತೋರದ ಇಂಬಳ, ಜೇಡ, ಹುಳ, ಚಿಕ್ಕಪುಟ್ಟ ಗಿಡಬಳ್ಳಿ, ಹುಲ್ಲು ಕೂಡ ಅಲ್ಲಿ ಇಷ್ಟೇ ಪ್ರಾಮುಖ್ಯವುಳ್ಳವು. ಪರ್ವತಾರೋಹಣ ಮಾಡಿ ನೆತ್ತಿಯಲ್ಲಿ ನಿಂತು ಕೆಳಗೆ ಸಣ್ಣದಾಗಿ ಕಾಣುವ ವಸ್ತುಗಳನ್ನು ಪಕ್ಷಿನೋಟದಿಂದ ನೋಡುವಾಗ ಶಿಖರದ ಮಹತ್ವ ತಿಳಿಯುತ್ತದೆ. ಆದರೆ ಈ ಶಿಖರಾರೋಹಣದ ಹರ್ಷದಲ್ಲಿ, ಅದನ್ನು ಮುಟ್ಟಲು ನಡೆದ ಹಾದಿ ಬದಿಯ ಹುಲ್ಲು, ಕಲ್ಲು, ಮುಳ್ಳುಗಳ ಅನುಭವಗಳೂ ಮಿಳಿತವಾಗಿರುತ್ತವೆ. ಅವೆಲ್ಲ ಕೂಡಿಯೇ ಪರ್ವತದ ಗಾತ್ರವನ್ನೂ ಶಿಖರದೆತ್ತರವನ್ನೂ ಅಡವಿಯ ದಟ್ಟತನವನ್ನೂ ಹೊಳೆಯ ಭೋರ್ಗರೆತವನ್ನೂ ನಿರ್ಮಿಸಿರುತ್ತವೆ.

ಆರೂಢ ಸಾಧನೆಯಲ್ಲಿ ‘ಪಿಪೀಲಿಕಾ’, ‘ವಿಹಂಗಮ’ ಎಂಬ ಮಾರ್ಗಗಳಿವೆ. ವಿಹಂಗಮ (ಪಕ್ಷಿ) ಮಾರ್ಗದಲ್ಲಿ ಆಗಸದಲ್ಲಿ ಹಾರುತ್ತ ಬಂದು ಮರದಲ್ಲಿರುವ ಹಣ್ಣಿಗೆ ನೇರ ಇಳಿಯಬಹುದು. ಪಿಪೀಲಿಕಾದ (ಇರುವೆ) ಹಾದಿ ಹಾಗಲ್ಲ. ಅಲ್ಲಿ ನೆಲದ ಮೇಲೆ ಹೊಟ್ಟೆ ಹೊಸೆಯತ್ತ ಹರಿದು, ಬುಡವನ್ನೇರಿ ಕೊಂಬೆಯಲ್ಲಿ ಸಾಗಿ ಹಣ್ಣನ್ನು ಮುಟ್ಟಬೇಕು. ಅಲ್ಲಿ ತಲುಪಿದ ಗುರಿಯಷ್ಟೇ ನಡೆದ ಹಾದಿಯ ಅನುಭವವೂ ಮುಖ್ಯ. ಸಾಗಿದ ಹಾದಿಗೂ ಮುಟ್ಟಿದ ಗಮ್ಯಕ್ಕೂ ಭೇದವಿಲ್ಲ. ಚಾರಣವು ಮೂಲತಃ, ಪಿಪೀಲಿಕಾ ಮಾರ್ಗಿಯಾಗಿ ಗುಡ್ಡಬೆಟ್ಟಗಳನ್ನು ಹತ್ತಿ, ಶಿಖರದಲ್ಲಿ ವಿಹಂಗಮಗೊಳ್ಳುವ ಯಾನ. ಇಲ್ಲಿ ಗುರಿಗೆ ಕಣ್ಣಿಟ್ಟು ಸರಸರ ಏರುವುದಕ್ಕಿಂತ ಸಿಟಿ ಬಸ್ಸಿನಂತೆ ಅಲ್ಲಲ್ಲಿ ನಿಂತು ಹುಲ್ಲು, ಹೂವು, ಗಿಡ, ಪೊದೆಗಳನ್ನು ವೀಕ್ಷಿಸುತ್ತ ಹೋದರೆ, ಶಿಖರದ ಅನುಭವವೇ ಬೇರೆಯಾಗುತ್ತದೆ.

ಈಚೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿರುವ ಕುದುರೆಮುಖ, ಮೇರುತಿ ಹಾಗೂ ನೇತ್ರಾವತಿ ಪೀಕುಗಳನ್ನು ಏರುವ ಅವಕಾಶ ಒದಗಿತು. 44 ಕಿ.ಮೀ.ಗಳ ಚಾರಣ. ನವೆಂಬರ್ ತಿಂಗಳಾಗಿದ್ದರಿಂದ ಆಗಷ್ಟೆ ಮಳೆಮುಗಿದು ಸಣ್ಣಗಿನ ಚಳಿಬೆರೆತ ಚುರುಕು ಬಿಸಿಲು ಚಾದರದಂತೆ ಆವರಿಸಿತ್ತು. ಪರ್ವತಗಳ ಮೈಮೇಲೆ ಆಳೆತ್ತರದ ಮಾಣಿ, ಕರಡ ಮೊದಲಾಗಿ ನೂರಕ್ಕೂ ಹೆಚ್ಚು ಪ್ರಭೇದಗಳ ಹುಲ್ಲು ಬೆಳೆದಿತ್ತು. ಈ ಹುಲ್ಲಾದರೂ ಒಂಟಿಯಲ್ಲ. ಈಚಲು, ಫರ್ನ್, ಕುರಿಂಜಿ ಮೊದಲಾದ ಸಣ್ಣಗಿಡಗಳ ಸಂಗದೊಳಗಿತ್ತು. ಹುಲ್ಲೂ ಹೂವೂ ಒಟ್ಟಿಗಿದ್ದವು. ನಾವು ಬೆಳಬೆಳಿಗ್ಗೆಯೇ ಚಾರಣ ಆರಂಭಿಸುತ್ತಿದ್ದರಿಂದ ಹುಲ್ಲ ಗರಿಗಳು ಮಂಜಿನಿಂದ ಮುತ್ತಿನಹಾರಗಳಾಗಿದ್ದವು. ಪರ್ವತ ಮತ್ತು ಕಣಿವೆಗಳು ಹುಲ್ಲದಾರದಿಂದ ನೇಯ್ದ ಕುತನಿಯ ಅಂಗಿ ಧರಿಸಿದ್ದವು. ಚೂಪಾದ ಹುಲ್ಲಗರಿಗಳು ಆಗಸದ ಮಳೆಬಿಸಿಲಿಗೆ ಚಾಚಿದ ಪುಟ್ಟ ಕೈಗಳಂತಿದ್ದವು. ಹುಲ್ತೆನೆಗಳು ಚಾಮರದಂತೆ ಗಾಳಿಗೆ ಒಲೆದಾಡುತ್ತಿದ್ದವು. ಹಾಸುಹುಲ್ಲು ಶಿಖರಸ್ತನಗಳಿಗೆ ಕಟ್ಟಿದ ಹಸಿರು ಕಂಚುಕದಂತೆ ಕಾಣುತ್ತಿತ್ತು; ಮಂಜುಕವಿದು ತಣ್ಣನೆ ಗಾಳಿಬೀಸುವಾಗ ಸಮುದ್ರದ ತೆರೆಗಳಂತೆ ಹೊಯ್ದಾಡುತ್ತಿತ್ತು. ಮಲಗಿದ ಆನೆಯಂತೆ, ಬಸವನಂತೆ, ನಿಂತ ಕುದುರೆಯಂತೆ ಕಾಣುವ ಪರ್ವತಗಳ ಮೇಲೆ ಬೆಳೆದ ರೋಮಕವಚವಾಗಿತ್ತು.

ಕುದುರೆಮುಖ, ಮೇರುತಿ, ನೇತ್ರಾವತಿ ಪೀಕುಗಳ ಶಿಖರದಿಂದ ಸುತ್ತ ಹತ್ತಾರು ಮೈಲಿದೂರದ ದೃಶ್ಯಗಳೆಲ್ಲ ಕಾಣುತ್ತವೆ. ಅದೊಂದು ಅಪೂರ್ವ ಅನುಭೂತಿ. ನಿಜವಾದ ಚೆಲುವಿರುವುದು ಶಿಖರದ ತುದಿಯಲ್ಲಿ ಅಲ್ಲ, ಕೆಳಗೆ. ಅದರಲ್ಲೂ ಪರ್ವತದ ತೊಡೆಗಳಂತಿರುವ ಕಣಿವೆಗಳಲ್ಲಿ; ಹುಲ್ಲಬಟ್ಟೆಯ ಮೇಲೆ ಬಿಡಿಸಿದ ಕಸೂತಿಯಂತೆ ಒತ್ತಾಗಿ ಬೆಳೆದ ಅಡವಿಯಲ್ಲಿ; ಅದರೊಳಗೆ ಹುಟ್ಟಿ ದಬದಬಿಸುವ ಜಲದಲ್ಲಿ. ಈ ದೃಷ್ಟಿಯಿಂದ ಪರ್ವತಗಳನ್ನು ನೋಡಿದರೆ, ಅವು ತಮ್ಮೆತ್ತರ ಮತ್ತು ಗಾತ್ರದ ಗರ್ವಬಿಟ್ಟು ನಮ್ರಗೊಂಡಂತೆಯೂ, ಹುಲ್ಲುಹೂವು ತಮ್ಮ ಘನತೆಯನ್ನು ಮೆರೆಯುತ್ತಿರುವಂತೆಯೂ ಭಾಸವಾಗುತ್ತದೆ. ‘ಹುಲ್ಲಾಗು ಬೆಟ್ಟದಡಿ’ ಎಂದು ಕವಿ ಹೇಳಿದ್ದು, ಈ ವಿನಯ-ಘನತೆ ಸೂಚಿಸಲೆಂದೇ ಇರಬೇಕು.

ಪಶ್ಚಿಮಘಟ್ಟಗಳ ಶೋಲಾಗಳ ವಿಶಿಷ್ಟ ಲಕ್ಷಣವನ್ನು ವಿಶಾಲವಾದ ಬೋಳುಬೆಟ್ಟ ಮತ್ತು ಅಲ್ಲಲ್ಲಿ ತೇಪೆಹಾಕಿದಂತೆ ಕಾಡು ಎಂದೇ ವರ್ಣಿಸಲಾಗುತ್ತದೆ. ಈ ಬೋಳಲ್ಲೂ ಕಾಡಿದ್ದಿದ್ದರೆ ಎಷ್ಟು ಚಂದವಿತ್ತು ಎಂದೂ ಅನಿಸುತ್ತದೆ. ‘ಬೋಳು’ ಎನ್ನುವಾಗ ಅಲ್ಲಿ ಗಿಡಮರಗಳಿಲ್ಲ ಎಂಬ ದನಿಯಿದೆ. ಆದರೆ ಅಲ್ಲಿ ಹುಲ್ಲಿದೆ, ಹೂವುಗಳಿವೆ, ಅದರೊಳಗೆ ಪುಟ್ಟ ಜೀವಿಗಳಿವೆ! ಈ ಹುಲ್ಲುಬಯಲೇ ಅಲ್ಲವೇ ಕಡವೆ, ಆನೆ, ಕಾಡೆಮ್ಮೆ, ಹುಲ್ಲೆಗಳ ಅನ್ನದ ತಟ್ಟೆ? ಇವನ್ನು ಉಂಡು ತಾನೇ ಚಿರತೆ, ಹುಲಿಗಳು ಬದುಕಿರುವುದು? ಅಲ್ಲಲ್ಲಿ ಕಾಡುಕೋಣಗಳು ಹುಲ್ಲುಮೇದು ಹಾಕಿದ ತೊಪ್ಪೆಗಳೂ ಅವುಗಳಲ್ಲಿದ್ದ ಸಗಣಿಯನ್ನು ಉಂಡೆಕಟ್ಟಿ ಒಯ್ಯುವ ಹುಳುಗಳೂ ನಮಗೆ ಕಂಡವು. ಹುಲ್ಲಿನೊಳಗೆ ಗೂಡುಕಟ್ಟಿದ್ದ ಹಕ್ಕಿಗಳು ನಿರಂಕುಶಮತಿಗಳಾಗಿ ಹಾಡುತ್ತಿದ್ದವು. ಕರಡಿ-ಮುಳ್ಳುಹಂದಿಗಳು ಹುಲ್ಲಗೆಡ್ಡೆ ತಿನ್ನಲು ನೆಲ ತೋಡಿದ್ದವು. ಹುಲ್ಲು ಇಲ್ಲಿ ಬೀಳುವ ಭೀಷಣ ಮಳೆಯನ್ನು ತನ್ನ ಬೇರುಗಳ ಮೂಲಕ ಪರ್ವತದ ಹೊಟ್ಟೆಯೊಳಗಿಳಿಸಿ ಸಂಗ್ರಹಿಸಿ ವರ್ಷವಿಡೀ ಹರಿವ ಹೊಳೆಗಳಿಗೆ ಜನ್ಮಕೊಡುತ್ತದೆ. ಇಲ್ಲಿನ ಕಣಿವೆಗಳಲ್ಲಿ ಹುಟ್ಟುವ ಪ್ರತಿ ಹನಿಯೂ ಹುಲ್ಲಿನ ಕೊಡುಗೆಯೇ. ಮತ್ತೊಬ್ಬರ ದೃಷ್ಟಿಯಲ್ಲಿಯೂ ಲೋಕವನ್ನು ನೋಡತೊಡಗಿದರೆ, ನಾವು ಬರಡು, ನಿರ್ಜನ, ನೀರವ, ಬೋಳು ಶಬ್ದಗಳನ್ನು ಸರಳವಾಗಿ ಬಳಸಲಾರೆವು. ಖಾಲಿತನ ಕಾಣುವವರ ದೃಷ್ಟಿದೋಷವೇ ಹೊರತು, ಇರುವ ವಾಸ್ತವ ಅದಲ್ಲ.

ಪಶ್ಚಿಮಘಟ್ಟದ ಹುಲ್ಲು, ಪೈರಿನ ನಡುವೆ ತೆಗೆದೀಡಾಡುವ ಕಳೆಯಲ್ಲ. ಅದು ಅದರ ತೊಗಲು. ಶಿಖರಗಳಲ್ಲಿ ಬೀಸುವ ಗಾಳಿಗೆ ಮರದ ಕೊಂಬೆಗಳು ಮುರಿದಿದ್ದವು. ನೆತ್ತಿಯಲ್ಲಿದ್ದಾಗ ನಾವು ತರಗೆಲೆಗಳಂತೆ ಹಾರಿಹೋಗುವ ಭಯವೂ ಉಂಟಾಗುತ್ತಿತ್ತು. ಆದರೆ ಸುರಿಮಳೆಗೆ ಬೀಸುಗಾಳಿಗೆ ತುಸುವೇ ತಲೆಬಾಗಿ ಗಾಳಿಯನ್ನು ಹೋಗಲು ಬಿಟ್ಟ ಹುಲ್ಲು ಸೊಂಪಾಗಿ ಬದುಕಿತ್ತು. ಸಂಸೆ ಎಂಬಲ್ಲಿದ್ದ ನಮ್ಮ ಯೂತ್‍ಹಾಸ್ಟೆಲಿನ ಬೇಸ್‍ಕ್ಯಾಂಪು, ಸೋಮಾವತಿ ಹೊಳೆ ಬದಿಯಿತ್ತು. ಚಾರಣದಿಂದ ಬೆವೆತುಬಂದ ನಾವು ಸಂಜೆ ಅದರೊಳಗೆ ಬೀಳುತ್ತಿದ್ದೆವು. ಹೊಳೆಯಲ್ಲಿ ಮಳೆಗಾಲದ ಪ್ರವಾಹ ಎಷ್ಟು ರಭಸವಾಗಿ ಬಂದಿತ್ತೆಂದರೆ, ನೀರು ಹೊತ್ತುತಂದಿದ್ದ ಮರದ ದಿಮ್ಮಿಗಳು ಸೇತುವೆಯ ಕಿಂಡಿಗಳ ಮೂಲಕ ದಾಟದೆ ಅಡ್ಡ ನಿಂತು, ಕೋಟೆ ಕಟ್ಟಿದ್ದವು. ಇಂತಹ ಪ್ರವಾಹದಲ್ಲೂ ಹೊಳೆಯ ಮಧ್ಯೆ ದೊಡ್ಡದೊಡ್ಡ ಹುಲ್ಲು ತೆಂಡೆಗಳು ಕೊಚ್ಚಿ ಹೋಗದೆ ಮರಳುಗಲ್ಲೊಳಗೆ ಬೇರುಬಿಟ್ಟು ಸೊಂಪಾಗಿ ನಿಂತಿದ್ದವು. ಇವು ಬೇಸಗೆಯಲ್ಲೂ ಪ್ರವಾಹದಲ್ಲೂ ಬದುಕುಳಿವ ಉಪಾಯ ಕಂಡುಕೊಂಡಿವೆ. ಮಲೆನಾಡಿನ ಮಳೆಗೆ ಹುಲ್ಲುಬೆಳೆದು ಹೆಂಚಿನ ಮಾಡೆಲ್ಲವೂ ಬತ್ತದ ಗದ್ದೆಯಾಗುವುದಷ್ಟೆ. ಇದೇ ಹುಲ್ಲು, ಬಂಡೆಗಳ ಮೇಲಿನ ತೆಳುವಾದ ಧೂಲಿಯನ್ನೇ ಆಶ್ರಯಿಸಿ ಶಿಖರಗಳ ನೆತ್ತಿಯಲ್ಲೂ ಬದುಕಿತ್ತು. ಹುಲ್ಲು ನೆಲದ ಜತೆಗಿನ ಗಾಢನಂಟಿನ ರೂಪಕ. ರಾಜಕೀಯ ಪಕ್ಷಗಳು ಮತ್ತು ಚಳವಳಿಗಳು, ತಾವು ಜನಸಮುದಾಯಗಳ ಜತೆ ಸಾವಯವ ಸಂಬಂಧ ಹೊಂದಿದ್ದೇವೆ ಎಂಬರ್ಥದಲ್ಲಿ ‘ತೃಣಮೂಲ’ ‘ಗ್ರಾಸ್‍ರೂಟ್’ ಪರಿಭಾಷೆ ಬಳಸುತ್ತವೆ.

‘ಹುಲ್ಲು’ ಎಂದರೆ ಕ್ಷುದ್ರ ಎಂಬರ್ಥವೂ ಇದೆ. ಹಿಂದೆ ತಮ್ಮನ್ನು ಮಾರಾಟಕ್ಕೆ ಒಡ್ಡಿಕೊಂಡವರು, ತಲೆಯ ಮೇಲೆ ಹುಲ್ಲನ್ನು ಇರಿಸಿಕೊಂಡು ತಾವು ಪಶುಸಮಾನರೆಂದು ಸೂಚಿಸುತ್ತಿದ್ದರು. ಯುದ್ಧದಲ್ಲಿ ಸೋತವರು ಹುಲ್ಲನ್ನು ಬಾಯಲ್ಲಿ ಕಚ್ಚಿಹಿಡಿದರೆ, ‘ಶರಣಾಗತರಾಗಿದ್ದೇವೆ, ಜೀವದಯೆ ಕೊಡಿ’ ಎಂದರ್ಥ.

ರಾವಣ ಅಶೋಕವನಕ್ಕೆ ಬಂದಾಗ ಸೀತೆ ಕೈಯಲ್ಲಿ ಹುಲ್ಲುಕಡ್ಡಿ ಹಿಡಿದು ಮಾತಾಡುತ್ತಿದ್ದಳು - ನೀನೂ ನಿನ್ನ ಅಧಿಕಾರ ಸಂಪತ್ತುಗಳೂ ತೃಣಸಮಾನ ಎಂದು ಸೂಚಿಸುವಂತೆ. ಹುಲ್ಲು ಅಪಕೀರ್ತಿಯ ಪ್ರತೀಕ ಕೂಡ. ಮಹಾದೇವಿಯಕ್ಕ ‘ನಿಮ್ಮ ಮನೆಗೆ ಹೂವ ತಹೆನಲ್ಲದೆ ಹುಲ್ಲತಾರೆನು’ ಎನ್ನುತ್ತಾಳೆ. ಆದರೆ ಇದೇ ಹುಲ್ಲು ಕಡ್ಡಿಯಾಗಿ ಮುಳುಗುವವರಿಗೆ ನಾವೆಯಾಗುತ್ತದೆ; ಚಾರಣಿಗರಿಗೆ ಹತ್ತುವಾಗ ಇಳಿವಾಗ ಜಾರಿದರೆ, ಬೀಳದಂತೆ ಹಿಡಿದುಕೊಳ್ಳುವ ಅಭಯ ಹಸ್ತವಾಗುತ್ತದೆ; ಬಡವರ ಮನೆಯ ಚಾವಣಿಗೆ ಹೊದಿಕೆ, ಹಕ್ಕಿಗೂಡಿಗೆ ಮೆತ್ತೆ, ಕುದುರೆ, ಕುರಿ, ದನಕ್ಕೆ ಮೇವು ಆಗುತ್ತದೆ. ಹಿಮಾಲಯದ ಚಾರಣದಲ್ಲಿ ಸ್ಥಳೀಯರು ಹುಲ್ಲಹೊರೆ ಹೊತ್ತು ಎದುರಾಗುವುದನ್ನು ಕಾಣಬಹುದು. ‘ಬಿದಿರೇ ನೀನಾರಿಗಲ್ಲದವಳು’ ಎಂದು ಹಾಡುವಾಗ, ಶರೀಫರಿಗೆ ಬಿದಿರೂ ಹುಲ್ಲಿನ ಜಾತಿಯ ಸಸ್ಯವೆಂದು ಗೊತ್ತಿತ್ತೇ? ಪರ್ಯಾಯ ಬೇಸಾಯದ ಹರಿಕಾರ ಫುಕುವೋಕಾ ‘ಒಂದು ಹುಲ್ಲಿನ ಕ್ರಾಂತಿ’ ಎಂದು ಪುಸ್ತಕವನ್ನೇ ಬರೆದನು.

ಸಮಸ್ಯೆಯೆಂದರೆ, ಸರ್ವವ್ಯಾಪಿಯಾದ ಈ ಹುಲ್ಲೇ ಒಣಗಿದಾಗ ಕಾಡಿಗೆ, ಬೆಟ್ಟಕ್ಕೆ, ಹಕ್ಕಿ-ಪಕ್ಕಿಗಳಿಗೆ ಘಾತಕವಾಗುವುದು. ಹೊಸಹುಲ್ಲು ಹುಟ್ಟಲೆಂದು ಪಶುಗಾಹಿಗಳು ಬೆಟ್ಟಗಳಿಗೆ ಬೆಂಕಿಕೊಡುವ ಪದ್ಧತಿಯನ್ನು ಲಾಗಾಯ್ತಿನಿಂದ ಇಟ್ಟುಕೊಂಡಿದ್ದಾರೆ. ಸುಟ್ಟರೂ ಬುಡದಲ್ಲಿ ಜೀವವುಳಿಸಿಕೊಂಡ ತೆಂಡೆಯಲ್ಲಿ ಹೊಸಹುಲ್ಲು ಚಿಗುರುತ್ತದೆ. ಆದರೆ ಜತೆಗಿದ್ದ ಗಿಡಮರಗಳು ಬೂದಿಯಾಗುತ್ತವೆ. ಹುಲ್ಲಿನೊಳಗೆ ಮನೆಮಾಡಿದ ಹಕ್ಕಿ, ಕೀಟ ಅಳಿಯುತ್ತವೆ. ಮೇರುತಿ ಪರ್ವತದಲ್ಲಿ ಹುಲ್ಲಿನ ಸಂಗ ಮಾಡಿದ ಗಿಡಗಂಟೆಗಳೆಲ್ಲ ಸುಟ್ಟು ಅಸ್ಥಿಪಂಜರವಾಗಿ ನಿಂತಿದ್ದವು. ಹುಲ್ಲಿಗೆ ಬೆಂಕಿ ಬಿದ್ದಾಗ ಕಾಫಿ, ಚಹದ ತೋಟಗಳು ಸುಡಬಾರದೆಂದೂ ಎಸ್ಟೇಟಿನವರೇ ಕೆಳಗಿನಿಂದ ಬೆಂಕಿ ಕೊಡುವುದುಂಟಂತೆ. ಮಲೆನಾಡ ಸಂಪತ್ತಿಗೆ ಕಾರಣವಾಗಿರುವ ಕಾಫಿ, ಚಹ, ರಬ್ಬರ್, ಅಡಿಕೆ, ಏಲಕ್ಕಿ, ಮೆಣಿಸಿನ ತೋಟಗಳು, ಶೋಲಾ ಕಾಡು, ಹೊಳೆ, ಪ್ರಾಣಿಗಳ ಮೇಲೆ ಹೂಡಿದ ಕದನದ ಫಲಗಳೂ ಹೌದು. ನಮ್ಮ ಚಾರಣ ವೈಲ್ಡ್‌ಲೈಫ್ ಫೋಟೊಗ್ರಫಿಗಳಲ್ಲಿ ಎಷ್ಟೇ ನಿಸರ್ಗಪ್ರೀತಿ- ಪರಿಸರಪ್ರಜ್ಞೆ ಇದ್ದರೂ, ಅವು ಪ್ರಾಣಿಪಕ್ಷಿಗಳ, ಕಾಡು–ನದಿಗಳ ನೆಮ್ಮದಿಯ ಬಾಳುವೆಗೆ ತೊಡಕೇ.

ನಾವು ಕುದುರೆಮುಖದಲ್ಲಿ ಸಾಗರೋಪಮವಾಗಿ ಹಬ್ಬಿರುವ ಹುಲ್ಲುಗಾವಲಿನಲ್ಲಿ ನಡೆಯುತ್ತಿರುವಾಗ, ಒಂದು ಕಡವೆ ಗಾಬರಿಗೊಂಡು, ಸರಸರ ಕಣಿವೆಯನ್ನೇರಿ ಪರ್ವತದ ಇನ್ನೊಂದು ಬದಿಗೆ ಮರೆಯಾಯಿತು. ಮರೆಯಾಗುವ ಮುನ್ನ ಬೆಟ್ಟದ ತುದಿಯಲ್ಲೊಮ್ಮೆ ನಿಂತು ನಮ್ಮತ್ತ ನೋಡಿತು. ಆ ನೋಟದಲ್ಲಿ ಏನರ್ಥವಿತ್ತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.