ADVERTISEMENT

ಯೂರೋಪ್‌ನ ಮಿನಿ ನಯಾಗರ; ರೈನ್ ಫಾಲ್ಸ್

ಗೊರೂರು ಸಂಪತ್ ಶ್ರೀನಿವಾಸನ್
Published 27 ಮಾರ್ಚ್ 2019, 19:30 IST
Last Updated 27 ಮಾರ್ಚ್ 2019, 19:30 IST
ನಯಾಗರದ ಎದುರು ನಾವೆಲ್ಲ...
ನಯಾಗರದ ಎದುರು ನಾವೆಲ್ಲ...   

ಬ್ಯಾಂಕ್ ನೌಕರಿಯ ನಿವೃತ್ತಿಯ ನಂತರ ಕಳೆದ ವರ್ಷದ ಏಪ್ರಿಲ್ ಕೊನೆಯ ವಾರದಲ್ಲಿ ನಾನು ಮತ್ತು ನನ್ನ ಪತ್ನಿ ಎತಿಹಾದ್ ವಿಮಾನ ಹತ್ತಿ ಜರ್ಮನಿಯ ಮ್ಯೂನಿಕ್‌ಗೆ ಹೊರಟೆವು. ಯೂರೋಪ್‌ನಲ್ಲಿ ಬೇಸಿಗೆಯಾದ್ದರಿಂದ ಹವಾಮಾನ ಹಿತಕರವಾಗಿತ್ತು. ಮೂರು ತಿಂಗಳು ಜರ್ಮನಿ, ಇಟಲಿ, ಫ್ರಾನ್ಸ್, ಸ್ವಿಡ್ಜರ್ಲೆಂಡ್‌, ಆಸ್ಟ್ರಿಯ ಹಾಗೂ ಜೆಕ್ ರಿಪಬ್ಲಿಕ್ ಸುತ್ತಾಡಿದೆವು.

ನಾನು ನೋಡಿದ ಹಲವಾರು ಜಾಗಗಳಲ್ಲಿ ನೆನಪಿನಲ್ಲಿ ಅಚ್ಚಳಿಯದಂತೆ ಉಳಿದಿರುವ ಸ್ಥಳಗಳ ಪೈಕಿ ರೈನ್ ಫಾಲ್ಸ್ ಪ್ರಮುಖವಾದುದು. ಇದು ಸ್ವಿಡ್ಜರ್ಲೆಂಡ್‌ನಲ್ಲಿದ್ದು, ಜರ್ಮನಿಯ ಗಡಿಗೆ ಹೊಂದಿಕೊಂಡಂತಿದೆ. ಯೂರೋಪಿನ ಅತ್ಯಂತ ದೊಡ್ಡ ಜಲಪಾತವೆಂಬುದು ಇದರ ಹೆಗ್ಗಳಿಕೆ. ಇದನ್ನು ಯೂರೋಪಿನ ‘ನಯಾಗರ’ ಜಲಪಾತವೆಂದೂ ಕರೆಯುತ್ತಾರೆ. ಇದರ ಅಗಲ 150 ಮೀಟರ್ ಇದ್ದು, 23 ಮೀಟರ್ ಎತ್ತರದಿಂದ ನೀರು ಧುಮುಕುತ್ತದೆ. ನಮ್ಮ ಜೋಗ್ ಜಲಪಾತದಷ್ಟು ಅದ್ಭುತ ಎನಿಸದಿದ್ದರೂ, ಇದರ ಪರಿಸರವನ್ನು ಜನಾಕರ್ಷಕವಾಗಿರಿಸಿರುವ ಪರಿ ಅನನ್ಯ ಮತ್ತು ಅನುಕರಣೀಯ.

ನೀಲಿವರ್ಣದಲ್ಲಿ ಕಂಗೊಳಿಸುವ ನೀರು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ನೀರು ಆಳವಿಲ್ಲದಿದ್ದರೂ, ಅತ್ಯಂತ ವೇಗವಾಗಿ ಹರಿಯುತ್ತದೆ. ಜರ್ಮನಿ ಮತ್ತು ಸ್ವಿಡ್ಜರ್ಲೆಂಡ್‌ ಗಡಿಯಲ್ಲಿ ಹರಿಯುವ ರೈನ್ ನದಿಯು ನ್ಯೂಹಾವ್ ಸೆನ್ ಎಂಬಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಮೂವತ್ತು ನಿಮಿಷಗಳ ಬೋಟ್ ರೈಡಿನಲ್ಲಿ ನೇರವಾಗಿ ಜಲಪಾತದ ಅಡಿಗೆ ಹೋಗುವ ಯಾನ ರೋಮಾಂಚಕವಾದುದು.

ADVERTISEMENT

ಹೋಗುವ ಹಾದಿ
ಬೆಂಗಳೂರಿನಿಂದ ಸ್ವಿಡ್ಜರ್ಲೆಂಡ್‌ಗೆ ನೇರ ವಿಮಾನ ಸೌಲಭ್ಯವಿದೆ. ಸ್ವಿಡ್ಜರ್ಲೆಂಡ್‌ನ ಜೂರಿಕ್ ನಗರದಿಂದ ರೈನ್‌ಫಾಲ್ಸ್‌ಗೆ ಹೋಗಲು 45 ನಿಮಿಷಗಳು ಬೇಕು. ರೈಲಿನಲ್ಲಿ ಹೋಗಬಹುದು. ಈ ನಗರದಿಂದ ಜಲಪಾತದವರೆಗೂ ಹೋಗಬಹುದು. ಜಲಪಾತದ ಎರಡೂ ಬದಿಗಳಲ್ಲಿ ರೈಲ್ವೆ ನಿಲ್ದಾಣವಿದೆ. ಜರ್ಮನಿಯ ಗಡಿಭಾಗ ಅಥವಾ ಜೂರಿಕ್‌ನಿಂದ ಈ ನಿಲ್ದಾಣಗಳನ್ನು ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.