ADVERTISEMENT

ಚಾರಣ ಮುಗಿಸಿದ ‘ಬೆಟ್ಟದ ಜೀವ’

‘ಚಾರಣಿಗರ ಅನ್ನದಾತ’ ಗಿರಿಗದ್ದೆ ಮಹಾಲಿಂಗೇಶ್ವರ ಭಟ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 23:41 IST
Last Updated 23 ಡಿಸೆಂಬರ್ 2023, 23:41 IST
ಮಹಾಲಿಂಗೇಶ್ವರ ಭಟ್
ಮಹಾಲಿಂಗೇಶ್ವರ ಭಟ್   

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 13 ಕಿ.ಮೀ. ದೂರದಲ್ಲಿರುವ ‘ಕುಮಾರ ಪರ್ವತ’ದ ಚಾರಣ ಹಾದಿ, ತುಳಿದವರಿಗೇ ಗೊತ್ತು. ಕನ್ನಡ ಸಾಹಿತ್ಯದ ಮೇರುಪರ್ವತ ಕೋಟ ಶಿವರಾಮ ಕಾರಂತರಿಂದ ‘ಬೆಟ್ಟದ ಜೀವ’ ಕಾದಂಬರಿ ಬರೆಸಿಕೊಂಡ ಈ ಪರ್ವತದ ಎತ್ತರಕ್ಕೆ ನಡೆಯುತ್ತ 4 ಕಿ.ಮೀ. ಸಾಗಿದಂತೆ ತೋಟದ ನಡುವೆ ಮನೆಯೊಂದು ಕಾಣುತ್ತದೆ. ಅದೇ ‘ಭಟ್ಟರ ಮನೆ’. ಗಿರಿಗದ್ದೆ ಅಲ್ಲಿನ ಹೆಸರು. ಮನೆಯಂಗಳದಲ್ಲಿ ನಿಂತು, ನಗುತ್ತ ಸ್ವಾಗತಿಸುತ್ತಿದ್ದ ಮಹಾಲಿಂಗ ಭಟ್ಟರು ಡಿಸೆಂಬರ್ 20ರಂದು 67ನೇ ವಯಸ್ಸಿನಲ್ಲಿ ಬದುಕಿನ ಚಾರಣ ಮುಗಿಸಿದರು.

ನಸುಕಿನಲ್ಲಿ ಕುಮಾರಪರ್ವತಕ್ಕೆ ಚಾರಣ ಆರಂಭಿಸಿದರೆ ಸಂಜೆಯಾಗುವ ಹೊತ್ತಿಗೆ ಗಿರಿಗದ್ದೆಯ ಭಟ್ಟರ ಮನೆ ತಲುಪುತ್ತೇವೆ. 40 ವರ್ಷಗಳಿಂದ ಬೆಟ್ಟದ ನಡುವೆ ಒಂಟಿ ಮನೆಯಲ್ಲಿ ಬದುಕುತ್ತ, ಚಾರಣಕ್ಕೆ ಬರುವವರಿಗೆ ಅನ್ನ, ನೀರು, ಆಶ್ರಯ ನೀಡುತ್ತ ಬಂದ ಮನೆಯದು. 1974ರಲ್ಲಿ ಪರಮೇಶ್ವರ ಭಟ್‌ ಗಿರಿಗದ್ದೆಗೆ ಬಂದು ನೆಲೆಸಿದರು. ಅವರ ಕಾಲಾನಂತರ ಮಕ್ಕಳಾದ ಮಹಾಲಿಂಗೇಶ್ವರ ಭಟ್‌, ನಾರಾಯಣ ಭಟ್‌ ಮನೆ ನಡೆಸಿಕೊಂಡು ಬಂದರು.

ಮಣ್ಣಿನಿಂದ ನಿರ್ಮಿತ ಮನೆಗೆ ಹೊಸಕಾಲದ ನವೀಕರಣವಿಲ್ಲ. ಇಲ್ಲಿ ವಿದ್ಯುತ್ತಿಗೂ ನೀರು ಮೂಲ. ಮನೆಯ ಪಕ್ಕದಲ್ಲಿಯೇ ಹಟ್ಟಿ ನಿರ್ಮಿಸಿ ಹಸುಗಳನ್ನು ಸಾಕುತ್ತಿದ್ದ ಭಟ್ಟರು, ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದರು. ಬೆಟ್ಟದ ನಡುವಿನ ಒಂಟಿ ಮನೆಯೊಳಗೆ ಆರಾಮವಾಗಿ ಕೂತು ಸ್ಮಾರ್ಟ್‌ ಟಿವಿಯಲ್ಲಿ ಜಗತ್ತಿನ ಸುದ್ದಿಗಳನ್ನು ವೀಕ್ಷಿಸುತ್ತಿದ್ದ ಭಟ್ಟರನ್ನು ಕಂಡು ಚಾರಣಿಗರು ಕಣ್ಣರಳಿಸುತ್ತಿದ್ದರು. ನಾಡಿನ ಅರಿವಿಗೆ ಊರಿನ ಸುತ್ತಾಟವೇ ಬೇಕೆಂಬ ನಿಯಮವಿಲ್ಲ. ಕಾಡಿನ ಅರಿವಿಗೆ ಕಾಡು ಸುತ್ತಲೇಬೇಕಲ್ಲ.

ADVERTISEMENT

ಮಧ್ಯಾಹ್ನವಾದಂತೆ ಬಿಸಿಬಿಸಿ ಕುಚ್ಚಲಕ್ಕಿ ಗಂಜಿ, ತರಕಾರಿ ಸಾಂಬಾರು, ಉಪ್ಪಿನಕಾಯಿ, ಜೊತೆಗೊಂದಿಷ್ಟು ಮಜ್ಜಿಗೆ ನೀಡುತ್ತಿದ್ದ ಭಟ್ಟರು, ಅದಕ್ಕೆ ತಕ್ಕನಾದ ದರ ನಿಗಡಿಪಡಿಸಿದ್ದರು. ದಣಿವಿಗೆ ಸೂಕ್ತವಾದ ಆ ಆಹಾರ ನಿಜವಾದ ಅನ್ನದ ರುಚಿ, ಮಹತ್ವ ತಿಳಿಸುತ್ತಿತ್ತು. ಅನ್ನಕ್ಕೆ ಮೂಲವೇ ಇಲ್ಲದ ಬೆಟ್ಟದ ನಡುವೆ ಮಹಾಲಿಂಗೇಶ್ವರ ಭಟ್ಟರು ‘ಚಾರಣಿಗರ ಪಾಲಿನ ಅನ್ನದಾತ’ ಎಂದೇ ಹೆಸರಾದರು.

ಬೆಟ್ಟ ಹತ್ತುವುದೇ ಸಾಹಸವೆಂದು ಚಾರಣಿಗರು ಅಂದುಕೊಂಡರೆ, ಭಟ್ಟರು ಸಲೀಸಾಗಿ ಒಂದೇ ದಿನದೊಳಗೆ ಸುಬ್ರಹ್ಮಣ್ಯ ಪೇಟೆಗೆ ಬಂದು ಹೋಗುತ್ತಿದ್ದರು.

ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತ ಬಂದ ಕಾಲಘಟ್ಟದಲ್ಲಿ ಭಟ್ಟರು ಆಡಿದ ಮಾತೊಂದು ನೆನಪಾಗುತ್ತದೆ; ‘ಬರಿಗೈಯಲ್ಲಿ ಬಂದಿದ್ದೇವೆ. ಬರಿಗೈಯಲ್ಲಿಯೇ ಮರಳುತ್ತೇವೆ. ಈ ವಾಸ್ತವ ತಿಳಿದೇ ನಾನು ನಿತ್ಯ ನಗುನಗುತ್ತ ಇರುತ್ತೇನೆ’.

ಕುಮಾರಪರ್ವತದ ನಡುನೆತ್ತಿಯಲ್ಲಿ ಗಿರಿಗದ್ದೆಯ ‘ಭಟ್ಟರ ಮನೆ’ ಹಾಗೂ ತೋಟ
ಕುಮಾರಪರ್ವತದ ನಡುನೆತ್ತಿಯಲ್ಲಿ ಗಿರಿಗದ್ದೆಯ ‘ಭಟ್ಟರ ಮನೆ’ ಹಾಗೂ ತೋಟ
ಮಹಾಲಿಂಗೇಶ್ವರ ಭಟ್
ಮಹಾಲಿಂಗೇಶ್ವರ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.