‘ಭರ್ಜರಿ ಮಳೆ ಆಗುತ್ತಿದೆ. ಕಣಿವೆಗಳಲ್ಲಿ ದಟ್ಟ ಹಸಿರಿನೊಟ್ಟಿಗೆ ಮೈದುಂಬಿದ ಜಲಪಾತಗಳ ನೋಡುವ ಸುಯೋಗ ಸಿಕ್ಕಿದೆ…’ ಚಾರಣಿಗರಾದ ಸಂಡೂರಿನ ರಾಮಘಡ ಶ್ರೀನಿವಾಸ್ ಅಂದ್ರು. ಕುತೂಹಲ ಹುಟ್ಟಿತು. ಸಂಡೂರು ಸಮಿಟರ್ಸ್ ತಂಡದೊಂದಿಗೆ ಚಾರಣಕ್ಕೆ ಹೊರಟೆ. ಅವರೆಂದಂತೆ ಈ ಸಲ ಸಂಡೂರಿನ ಮಲೆಗಳ ಜಲಮೂಲಗಳೆಲ್ಲ ಭರ್ತಿ ಆಗಿದ್ದವು. ಜಲಕನ್ಯೆಯರ ವೈಯಾರವಂತೂ ನಯನ ಮನೋಹರ!
ಸಂಡೂರೆಂದರೆ ಗಣಿಗಾರಿಕೆಗೆ ಮುಕ್ಕಾದ ಬೆಟ್ಟ-ಗುಡ್ಡಗಳು, ಅಲ್ಲಲ್ಲಿ ದಟ್ಟವಾದ ಕಾಡು, ಮಂಜಿನ ಮೇಲಾಟ... ಎಂದಷ್ಟೇ ಬಹುತೇಕರಿಗೆ ಗೊತ್ತು. ಆದರೆ ಇಲ್ಲಿಯ ಭೈರವ ತೀರ್ಥ ಮತ್ತು ಧುಮುಕು ಜಲಪಾತಗಳ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಯಾಕಂದ್ರೆ ಇವು ಅಜ್ಞಾತ ಜಲಪಾತಗಳು! ನೋಡಲಿಕ್ಕೆ ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯಬೇಕು. ಬೆವರು ಹರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಧೈರ್ಯ ಮಾಡಬೇಕು! ದಟ್ಟ ಕಾಡಿನ ಮಧ್ಯೆ ಇರುವ ಇವುಗಳ ಚರಣ ತಲುಪಲು ಚಾರಣ ಅಗತ್ಯ.
ನೀರ ಹಾಡ ಜಾಡು ಹಿಡಿದು...
ಬಟ್ಟಲು ಆಕಾರದ ದಟ್ಟ ಕಾಡಿನ ಮಧ್ಯದ ಪ್ರಾರಂಭದ ಕಾಲು ಹಾದಿಯಲಿ ನಡೆದರೆ ನೀರು ಹರಿಯುವ ಜಾಡು ಸಿಗುತ್ತೆ. ಅದು ಅಡಿ ಅಡಿಗೂ ಮನ ಸೆಳೆಯುವ ತಾಳಬದ್ಧ ನೀರ ಹಾಡ ಸದ್ದು. ಈ ಇಂಪಾದ ನೀರ ನಿನಾದಕ್ಕೆ ಹಿಮ್ಮೇಳ ಹಕ್ಕಿಗಳ ಚಿಲಿಪಿಲಿ ಕಲರವ. ಕಲ್ಲುಬಂಡೆಗಳ ಸಂದಿಗೊಂದಿಯಲ್ಲಿ, ಕಣ್ಣಾಮುಚ್ಚಾಲೆ ಆಡುತ್ತಾ ಕಲ್ಲುಬಂಡೆಗಳನ್ನು ಮುಳುಗೇಳಿಸುತ್ತಾ ಹರಿಯುವ ನೀರಿನ ಗತ್ತು-ಗಮ್ಮತ್ತು ಬೆರಗು ತರುತ್ತೆ. ನೀರ ಹರಿವಿನ ದಿಕ್ಕಿನತ್ತ ನಡೆದಂತೆ ಧುಮ್ಮಿಕ್ಕುವ ನೀರ ಸದ್ದು ಜೋರಾಗುತ್ತೆ. ಕಣ್ಣರಳಿಸಿ, ಕಿವಿ ನಿಮಿರಿಸಿ ಅತ್ತ ನಡೆದರೆ ಹಚ್ಚಹಸಿರಿನ ಮಧ್ಯೆ ಇದ್ದಕ್ಕಿದ್ದಂತೆ ಕಲ್ಲಿನ ಬೆಟ್ಟ ಕಾಣುತ್ತದೆ. ಅದರ ನೆತ್ತಿಯ ಮೇಲಿಂದ ಸಾಕ್ಷಾತ್ ಹರನ ಜಡೆಯಿಂದ ಗಂಗೆ ಧರೆಗೆ ಇಳಿದು ಬರುತ್ತಿರುವಂತೆ ನೀರು ಬೀಳುತ್ತೆ! ತಳ ತಲುಪಿ ಥಳುಕು ಬಳುಕಿನಲ್ಲಿ, ಧೋ ಎಂದು ಭೋರ್ಗರೆಯುವ ಜಲಪಾತದ ಬಿನ್ನಾಣ, ಸೊಬಗು-ಸೊಗಸು ಅವರ್ಣನೀಯ. ಬಂಡೆಗಳಿಗೆ ಬಿದ್ದು ಚದುರುವ ತುಂತುರು ಹನಿಗಳು ಮೈಮನ ಸ್ಪರ್ಶಿಸಿ ಪುಳಕ ತರುತ್ತವೆ.
ಧುಮುಕು ಫಾಲ್ಸ್
ಆಡುಭಾಷೆಯಲ್ಲಿ ಢುಮ್ಕು ಫಾಲ್ಸ್ ಎನ್ನುತ್ತಾರೆ. ಸುಮಾರು 120 ಅಡಿ ಎತ್ತರದಿಂದ ನೀರು ಧುಮ್ಮಿಕ್ಕಿ ಹರಿಯುತ್ತೆ. ಪದರು ಶಿಲೆಯ ಮೇಲೆ ಹಂತ ಹಂತವಾಗಿ ಬೀಳುವ ನೀರಿನ ದೃಶ್ಯ ನಯನ ಮನೋಹರ. ಇದರ ನೀರು ಸ್ವಚ್ಛ ಮತ್ತು ಶುಭ್ರ. ಆದರೆ ಯಥೇಚ್ಛ ಮಳೆ ಬಂದ ಒಂದೆರಡು ದಿನ ಮಾತ್ರ ಫಾಲ್ಸ್ ನೀರು ರೆಡ್ ಆಕ್ಸೈಡ್ ಬಣ್ಣಕ್ಕೆ ತಿರುಗುತ್ತದೆ! ಈ ಫಾಲ್ಸ್ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿರುವುದು ಇದಕ್ಕೆ ಕಾರಣ. ಫಾಲ್ಸ್ ಕೆಳಗೆ ನಿಂತು ಕತ್ತು ಮೇಲೆತ್ತಿ ನೋಡಿದರೆ ಯಾರೋ ನಮ್ಮ ಮೇಲೆ ಕೆಂಪು ಬಣ್ಣದ ಓಕುಳಿ ಎರಚುತ್ತಿರುವಂತೆ ಭಾಸ ಆಗುತ್ತದೆ. ಈ ನೀರು ಅಂಕಮನಹಾಳ್ ಕೆರೆ ಸೇರುತ್ತದೆ.
ಸಂಡೂರು-ಕೂಡ್ಲಿಗಿ ಮಾರ್ಗದಲ್ಲಿ ಯಶವಂತನಗರ ಸಿಗುತ್ತೆ. ಅಲ್ಲಿಂದ ಅಂಕಮನಹಾಳ್ ರಸ್ತೆಯಲ್ಲಿ 4 ಕಿ.ಮೀ. ಕ್ರಮಿಸಿದರೆ ಎಡಕ್ಕೆ ಅಡವಿ ದಾರಿ ಸಿಗುತ್ತೆ. ಇಲ್ಲಿಯವರೆಗೆ ವಾಹನದಲ್ಲಿ ಹೋಗಬಹುದು. ಅಲ್ಲಿಂದ ಕಾಲ್ನಡಿಗೆಯಲ್ಲಿ ಸುಮಾರು 2 ಕಿ.ಮೀ. ನಡೆದರೆ ನೀರ ಹರಿವು ಸಿಗುತ್ತೆ. ಆ ನೀರು ಬರುವ ದಿಕ್ಕಿನೆಡೆಗೆ ನಡೆದರೆ ಫಾಲ್ಸ್ ಸಿಗುತ್ತೆ. ಫಾಲ್ಸ್ ನೋಡಿ, ಬಲಭಾಗದ ಬೆಟ್ಟ ಹತ್ತಿದರೆ ಫಾಲ್ಸ್ ನೆತ್ತಿ ತಲುಪುತ್ತೇವೆ. ಅಲ್ಲಿಂದ ಒಂದು ಕಿ.ಮೀ. ನಡೆದರೆ ನೀರುಕೊಳ್ಳ/ಕಡತಿ ಮಡಗು ಸಿಗಲಿದ್ದು, ಇದು ಈ ಜಲಪಾತದ ಮೂಲ ಆಗಿದೆ.
ವೀಕ್ಷಣಾ ಸ್ಥಳ: ಸಮೃದ್ಧ ಮಳೆ
ಯಾದರೆ ಇಲ್ಲಿ ಹತ್ತಾರು ಫಾಲ್ಸ್, ಝರಿಗಳನ್ನು ಕಾಣುತ್ತೇವೆ. ಆದರೆ ಮಳೆಗಾಲದ ಉದ್ದಕ್ಕೂ ಮೈದುಂಬಿ ಬೀಳುವ ಮತ್ತು ಇತರ ದಿನಗಳಲ್ಲಿ ಸಣ್ಣಗೆ ಬೀಳುವ ಫಾಲ್ಸ್‌ಗಳೆಂದರೆ ಈ ಭೈರವ ತೀರ್ಥ ಮತ್ತು ಧುಮುಕು ಫಾಲ್ಸ್‌ಗಳಷ್ಟೆ. ಇಂತಹ ಫಾಲ್ಸ್‌ಗಳ ನೆತ್ತಿ ಮೇಲೆ ಹೋದರೆ ರೋಮಾಂಚನ ಆಗುತ್ತದೆ. ಬೀಸುವ ತಂಗಾಳಿ ಮೈಮನ ಸೋಕಿ ಆಯಾಸ ಕರಗುತ್ತೆ. ಸುತ್ತಲಿನ ದಟ್ಟ ಕಾನನ, ಮೈದುಂಬಿರುವ ಕೆರೆ-ಕಟ್ಟೆಗಳು, ನಾರಿಹಳ್ಳ, ಹಳ್ಳ-ಕೊಳ್ಳಗಳ ವಿಹಂಗಮ ನೋಟ ಸಿಗುತ್ತದೆ.
ಈ ಫಾಲ್ಸ್‌ಗಳಿಗೆ ತಲುಪಲು ನಿಖರ ದಾರಿ ಇಲ್ಲ. ಪೊದೆ, ಮುಳ್ಳಿನ ಗಿಡಗಂಟಿಗಳು, ಹುಲ್ಲುಗಾವಲಿನಲ್ಲಿ ದಾರಿ ಮಾಡಿಕೊಂಡು ಹೋಗಬೇಕು. ಇದಕ್ಕಾಗಿ ಕೊಡಲಿಯಂತಹ ಆಯುಧಗಳು ಜೊತೆಗಿರಲಿ. ಕುಡಿಯಲಿಕ್ಕೆ ನೀರು, ಆಹಾರ ಒಯ್ಯಬೇಕು. ಸೊಳ್ಳೆ, ಮುಳ್ಳುಗಳಿಂದ ರಕ್ಷಣೆಗೆ ಮೈಕೈ ಮುಚ್ಚುವ ಉಡುಪು, ಶೂ ಧರಿಸಬೇಕು. ಹುಳ-ಹುಪ್ಪಡಿ, ಕಾಡುಪ್ರಾಣಿಗಳ ಬಗ್ಗೆ ಎಚ್ಚರಿಕೆ ಇರಲಿ. ಒಟ್ಟಿನಲ್ಲಿ ಸಾಮೂಹಿಕ ಚಾರಣ ಸೂಕ್ತ. ಈ ತಾಣದ ಬಗ್ಗೆ ತಿಳಿದಿರುವ ವ್ಯಕ್ತಿಗಳ ಸಹಾಯ ಪಡೆದರೆ ಇನ್ನೂ ಲೇಸು.
ಚಿತ್ರಗಳು: ಸಂಡೂರು ಸಮಿಟರ್ಸ್ ತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.