ಹೈಫೈ ಕಾರುಗಳಲ್ಲಿ ಓಡಾಟ. ದೊಡ್ಡ ದೊಡ್ಡ ಗಾಜಿನ ಕಟ್ಟಡಗಳ ತಂಪಾದ ಹವಾ ನಿಯಂತ್ರಿತ ಕೋಣೆಗಳಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಐಷಾರಾಮಿ ಜೀವನ ಕಳೆಯುವ ನಮಗೆ ಮರಗಳ ನೆನಪಾಗುತ್ತದೆಯೇ? ದೊಡ್ಡ ಮರದ ಕೆಳಗೆ ಬೆಳಗಿನ ಆರಾಧನೆ, ಮಧ್ಯಾಹ್ನದ ಸಣ್ಣ ನಿದ್ದೆ, ಸಂಜೆಯ ಹರಟೆ ಇವೆಲ್ಲ ಯಾವುದೇ ಕತೆಯ ಸನ್ನಿವೇಶ ಎನಿಸುವುದಿಲ್ಲವೇ?
ಅದೆಲ್ಲವೂ ಲಭ್ಯ ಇದ್ದಾಗ ಜನರು ಆರೋಗ್ಯ ಮತ್ತು ಖುಷಿಗಳ ನಡುವೆ ಜೀಕುತ್ತಿದ್ದರು. ಸದೃಢರಾಗಿದ್ದರು. ಮರಗಳು ಸಮೃದ್ಧವಾಗಿದ್ದವು. ಮನುಷ್ಯನಿಗೆ ಸಂಪತ್ತಿನ ದಾಹ ಆರಂಭವಾಯಿತು. ಮರಗಳು ಉರುಳಿದವು. ಜೋಕಾಲಿಯ ಹಗ್ಗ ನೇಣಾಗಿ ಪರಿಣಮಿಸಿತು. ಇಷ್ಟಂದ ಕೂಡಲೇ ರೈತನ ಮುಖ ನೆನಪಾಗಿರಬೇಕಲ್ಲ... ಇಲ್ಲ ಸ್ವಾಮಿ, ಇಲ್ಲಿ ಹೇಳಹೊರಟಿರುವುದು ನಮ್ಮ ನಿಮ್ಮ ಬಗ್ಗೆ.
ನೇಣಾಗಿರುವುದು ಹಗ್ಗವಲ್ಲ. ಸ್ಥೂಲಕಾಯ, ಮಧುಮೇಹ, ರಕ್ತದ ಏರೊತ್ತಡಗಳು... ಎತ್ತಣ ಮಾಮರ ಎತ್ತಣ ಕೋಗಿಲೆ ಎನಿಸುತ್ತಿದೆಯೇ? ಮರ ಮತ್ತು ಆರೋಗ್ಯ ಇವೆರಡಕ್ಕೂ ನೇರವಾದ ಸಂಬಂಧವಿದೆ. ಮನುಷ್ಯ ಉಸಿರಾಡಲು ಆಮ್ಲಜನಕ ನೀಡುವ ಮರಗಳು ನಗರದಲ್ಲಿ ಸಾಕಷ್ಟಿವೆಯೇ? ಮೊದಲು ಒಬ್ಬನಿಗೊಂದು ಮರ ಎಂಬ ಲೆಕ್ಕವಿತ್ತು. ಸದ್ಯ ಏಳು ಜನರಿಗೆ ಒಂದು ಮರ ಎಂಬ ಅನುಪಾತಕ್ಕೆ ಬಂದಿಳಿದಿದೆ.
ಕಾರಣ ಸ್ಪಷ್ಟ... ಮರಗಳಿಲ್ಲದ ರಸ್ತೆಗಳು, ವನಗಳಿಲ್ಲದ ಊರುಗಳು, ಕೈತೋಟವಿಲ್ಲದ ಮನೆಗಳು... ಕಳೆದ 20 ವರ್ಷದಲ್ಲಿ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ 280 ಪಿ.ಪಿ.ಎಂ.ನಿಂದ 382 ಪಿ.ಪಿ.ಎಂ.ಗೆ ಏರಿಕೆಯಾಗಿದೆ. 2011ರಲ್ಲಿ 390 ಪಿ.ಪಿ.ಎಂ.ರಷ್ಟಕ್ಕೆ ಏರಿತ್ತು. ಮರ ಮತ್ತು ಮಣ್ಣು ಇಂಗಾಲದ ಡೈಆಕ್ಸೈಡ್ ಅನ್ನು ಹಿಡಿದಿಟ್ಟುಕೊಂಡು ಉಷ್ಣಾಂಶವನ್ನು ಕಾಪಾಡುವ ಸಾಮರ್ಥ್ಯ ಹೊಂದಿವೆ.
ಆದರೆ ನಗರಗಳಲ್ಲಿ ಹೆಚ್ಚುತ್ತಿರುವ ಭೂ ಪ್ರದೇಶದ ಬೇಡಿಕೆಯಿಂದಾಗಿ ಕೆರೆ, ಅದರ ಸುತ್ತಮುತ್ತಲ ಜೌಗುಭೂಮಿ ಹಾಗೂ ಹಸಿರು ಪ್ರದೇಶಗಳು ನೋಡನೋಡುತ್ತಲೇ ಮಾಯವಾಗುತ್ತಿವೆ. ಆರೋಗ್ಯಕರ ಜೀವನ ನಡೆಸಲು ಪ್ರತಿ ವ್ಯಕ್ತಿಗೆ 9.5 ಚ.ಮೀ.ನಷ್ಟು ಹಸಿರು ಪ್ರದೇಶ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿದೆ. ನಮಗಿದೆಯೇ ಅಷ್ಟು?
ಆಮ್ಲಜಕದ ಕೊರತೆ
ಮರಗಳ ಮಾರಣಹೋಮದಿಂದಾಗಿ ಈಗಾಗಲೇ ನಗರದಲ್ಲಿ ಆಮ್ಲಜಕದ ಕೊರತೆ ಕಾಡುತ್ತಿದೆ. ಒಬ್ಬ ವ್ಯಕ್ತಿ ಒಂದು ದಿನಕ್ಕೆ 540ರಿಂದ (ಹಿರಿಯ ನಾಗರಿಕ) 900 (ಯುವಕ/ಯುವತಿ) ಗ್ರಾಂ ನಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಉಸಿರಾಟದ ಮೂಲಕ ಹೊರಹಾಕುತ್ತಾನೆ. ವರ್ಷಕ್ಕೆ 192ರಿಂದ 328 ಕಿ.ಗ್ರಾಂ.ನಷ್ಟು ಇಂಗಾಲ ಕೇವಲ ಉಸಿರಾಟದ ಮೂಲಕ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಹೀಗೆ ಒಬ್ಬ ವ್ಯಕ್ತಿಯಿಂದ ಬಿಡುಗಡೆಯಾದ ಇಂಗಾಲವನ್ನು ಮಿತಗೊಳಿಸಲು 32ರಿಂದ 55 ಮರಗಳ ಅಗತ್ಯ ಇದೆ.
ಒಂದು ಮರ 8 ಕೆ.ಜಿ. ಇಂಗಾಲದ ಡೈ ಆಕ್ಸೈಡ್ ಅನ್ನು ಬಳಸಿಕೊಳ್ಳುತ್ತದೆ. ಕೇವಲ ಮನುಷ್ಯ ಹೊರಹಾಕುವ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳಲು ಎಂಟು ಮರಗಳು ಬೇಕು. ಉಳಿದಂತೆ ಕೈಗಾರಿಕೆಗಳು, ವಾಹನಗಳು ಹಾಗೂ ಕಸದ ರಾಶಿಯಿಂದ ಹೊರಹೊಮ್ಮುವ ಅನಿಲಗಳಿಂದ ಮುಕ್ತಿ ಪಡೆಯಲು ಇನ್ನೆಷ್ಟು ಮರಗಳ ಅಗತ್ಯ ಇರುತ್ತದೆ ಎಂದು ನೀವೇ ಲೆಕ್ಕ ಹಾಕಿ.
ಬೆಂಗಳೂರಿನಲ್ಲಿ ಪ್ರತಿ ನೂರು ವ್ಯಕ್ತಿಗಳಿಗೆ ಕೇವಲ 17 ಮರಗಳಿದ್ದರೆ, ಮುಂಬೈನಲ್ಲಿ 15, ಅಹಮದಾಬಾದಿನಲ್ಲಿ 11 ಹಾಗೂ ಗಾಂಧಿನಗರದಲ್ಲಿ 416 ಮರಗಳಿವೆ. ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಯ ಸಮಗ್ರ ಪ್ರಗತಿಗೆ ಕನಿಷ್ಠ ಶೇ.33ರಷ್ಟು ಹಸಿರು ಹೊದಿಕೆ ಇರುವಂತೆ ನೋಡಿಕೊಳ್ಳಬೇಕಾದ ಕರ್ತವ್ಯ ನಗರ ಯೋಜಕರದ್ದು.
ಈ ಕಾರ್ಯ ಸರಿಯಾಗಿ ನಡೆದಲ್ಲಿ ಪ್ರತಿ ವ್ಯಕ್ತಿಗೆ ಕನಿಷ್ಠ 1.15ರಷ್ಟು ಮರವಾದರೂ ಉಳಿಯಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಶಕ್ತಿ ಮತ್ತು ಜೌಗುಭೂಮಿ ಸಂಶೋಧನಾ ತಂಡ ನಡೆಸಿದ ಸಮೀಕ್ಷೆ ‘ಎನ್ವಿಸ್ ತಾಂತ್ರಿಕ ವರದಿ–2014’ ಬಹಿರಂಗಪಡಿಸಿತ್ತು.
ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ, ಚಿಕ್ಕಪೇಟೆ, ದಯಾನಂದನಗರ ವಾರ್ಡ್‌ಗಳಲ್ಲಿ ಪ್ರತಿ ವ್ಯಕ್ತಿಗೆ 0.002ರಷ್ಟಕ್ಕಿಂತ ಕಡಿಮೆ ಮರ ಲಭ್ಯವಿದೆ. ಇಲ್ಲಿ ಒಂದು ಮರದ ಮೇಲೆ 500 ಜನ ಅವಲಂಬಿತರಾಗಿದ್ದಾರೆ. ಇನ್ನು ವರ್ತೂರು, ಬೆಳ್ಳಂದೂರು, ಜಕ್ಕೂರು, ಅಗರ ಹಾಗೂ ಅರಮನೆ ಪ್ರದೇಶಗಳಲ್ಲಿ ಜನಸಂಖ್ಯೆಗಿಂತ ಹೆಚ್ಚಿನ ಮರಗಳಿವೆ.
‘ರಿಸೋರ್ಸ್ಯಾಟ್–2 ಎಂಎಸ್‌ಎಸ್’ ಮತ್ತು ‘ಕಾರ್ಟೋಸ್ಯಾಟ್– 2’ರ ಅಂಕಿಅಂಶಗಳ ಸಹಾಯದಿಂದ ನಡೆಸಿದ ಭೂ ಬಳಕೆಯ ವಿಶ್ಲೇಷಣೆ ಪ್ರಕಾರ ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ ವಾರ್ಡ್‌ಗಳಲ್ಲಿ ಒಂದು ಹೆಕ್ಟೇರ್‌ಗಿಂತ ಕಡಿಮೆ ಹಸಿರು ಪ್ರದೇಶವಿದೆ ಎಂದು ಬಹಿರಂಗವಾಗಿದೆ.
ವರ್ತೂರು, ಬೆಳ್ಳಂದೂರು, ಅಗರದ ಪ್ರದೇಶಗಳಲ್ಲಿ 300 ಹೆಕ್ಟೇರ್‌ಗಿಂತ ಅಧಿಕ ಹಸಿರು ಪ್ರದೇಶವಿದೆ. ಅರಮನೆ ನಗರ, ಹೂಡಿ, ವಸಂತಪುರ ವಾರ್ಡ್‌ಗಳಲ್ಲಿ ಹಸಿರು ಭೂ ಹೊದಿಕೆ ಪ್ರಮಾಣ (0.4) ಹೆಚ್ಚಾಗಿದ್ದರೆ, ಚಿಕ್ಕಪೇಟೆ, ಲಗ್ಗೆರೆ, ಹೆಗ್ಗನಹಳ್ಳಿ, ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ಅತಿ ಕಡಿಮೆ ಮರ ಸಾಂದ್ರತೆ (0.015) ಇದೆ. ನಗರಲ್ಲಿ ಸರಾಸರಿ ಮರ ಸಾಂದ್ರತೆ 0.14 ರಷ್ಟಿದೆ ಎಂದು ತಿಳಿದುಬಂದಿದೆ.
‘ಒಂದು ಹೆಕ್ಟೇರ್ ಅರಣ್ಯ ಪ್ರದೇಶ ವರ್ಷಕ್ಕೆ ಸುಮಾರು ಆರು ಟನ್ ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಒಂದು ದೊಡ್ಡ ಮರ ವರ್ಷಕ್ಕೆ 6 ಕಿ.ಗ್ರಾಂ.ನಷ್ಟು ಇಂಗಾಲವನ್ನು ಬಳಸಿಕೊಳ್ಳುತ್ತದೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ.
‘ಮರಗಳ ಮೇಲ್ಚಾವಣಿ ಚಿತ್ರಿಸುವಿಕೆ ಹಾಗೂ ಸ್ಥಳೀಯ ಅಂಕಿ ಅಂಶಗಳ ಪ್ರಕಾರ ವರ್ತೂರು, ಬೆಳ್ಳಂದೂರು, ಅಗರ, ಅರಮನೆ ನಗರ ವಾರ್ಡ್‌ಗಳಲ್ಲಿ 40 ಸಾವಿರಕ್ಕೂ ಹೆಚ್ಚಿನ ಮರಗಳಿವೆ. ಹಾಗೆಯೇ ಚಿಕ್ಕಪೇಟೆ, ಪಾದರಾಯನಪುರ, ಶಿವಾಜಿನಗರ, ಕೆಂಪಾಪುರ ಅಗ್ರಹಾರದಲ್ಲಿ ನೂರಕ್ಕಿಂತ ಕಡಿಮೆ ಮರಗಳಿವೆ.
ಈ ಲೆಕ್ಕದ ಪ್ರಕಾರ ನಗರದಲ್ಲಿ ಪ್ರಸ್ತುತ ಸುಮಾರು 14 ಸಾವಿರಕ್ಕಿಂತ ಹೆಚ್ಚಿನ ಮರಗಳಿವೆ ಎಂದು ಅಂದಾಜಿಸಲಾಗಿದೆ’ ಎಂದು ವಿವರಿಸುತ್ತಾರೆ ಅವರು. ಕಾಂಕ್ರೀಟ್‌ಮಯವಾಗುತ್ತಿರುವ ನಗರದಲ್ಲಿ ಜನರು ಇನ್ನಾದರೂ ಪರಿಸರದ ಉಳಿಗಾಗಿ ಶ್ರಮಿಸದ ಹೊರತು ಕೆಲವೇ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಆಮ್ಲಜನಕದ ಕೊರತೆ ತೀವ್ರವಾಗುವುದಂತೂ ಖಚಿತ.
ಸ್ಥಳೀಯ ಮರಗಳ ಬಗ್ಗೆ ಅರಿವು
ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಹೋದರೂ ಅವರ ಆಲೋಚನೆಗಳು ಮಾತ್ರ ಇನ್ನು ನಮ್ಮಲ್ಲಿ ಹಾಗೇ ಉಳಿದುಕೊಂಡಿವೆ. ಇದಕ್ಕೆ ಸಾಕ್ಷಿ ನಗರದಲ್ಲಿ ಕಾಣಸಿಗುವ ವಿದೇಶಿ ತಳಿಯ ಮರಗಳು. ನಮ್ಮಲ್ಲಿನ ಅಧಿಕಾರಿಗಳಿಗೆ ಸ್ವದೇಶಿ ಗಿಡ, ಮರ ಕುರಿತಂತೆ ಅರಿವೇ ಇಲ್ಲದಂತಾಗಿದೆ. ಈಗಲೂ ಎಲ್ಲೇ ಗಿಡಗಳನ್ನು ನೆಟ್ಟರೂ ಕೇವಲ ಮಳೆ ಮರ, ಗುಲ್‌ಮೊಹರ್‌ನಂತಹ ವಿದೇಶಿ ಗಿಡಗಳನ್ನು ಹೆಚ್ಚಾಗಿ ನೆಡುತ್ತಾರೆ.
ವಿದೇಶಿ ಮರಗಳು ಎಷ್ಟು ಬೇಗ ಬೆಳೆಯುತ್ತವೆಯೋ ಅಷ್ಟೇ ಟೊಳ್ಳಾಗಿ ಇರುತ್ತವೆ. ಹೀಗಾಗಿಯೇ ಜೋರಾಗಿ ಗಾಳಿ ಬೀಸಿದಾಗ ಮತ್ತು ಮಳೆ ಬಂದಾಗ ಧರೆಗುರುಳುವುದನ್ನು ಕಾಣುತ್ತೇವೆ. ಜೊತೆಗೆ ಅವುಗಳು ಹೀರಿಕೊಳ್ಳುವ ಇಂಗಾಲದ ಪ್ರಮಾಣವೂ ಸ್ವದೇಶಿ ಮರಗಳಿಗಿಂತ ಕಡಿಮೆ ಇರುತ್ತದೆ. ಅದೇ ಸ್ವದೇಶಿ ಮರಗಳಾದ ಹೊಂಗೆ, ಬೇವು, ಹುಣಸೆ, ಅತ್ತಿ ಮರ, ಆಲದ ಮರ ಸೇರಿದಂತೆ ಹಲವು ಮರಗಳು ಗಟ್ಟಿಯಾಗಿ ಬೇರೂರಿ ನೆರಳಿನ ಜೊತೆಗೆ ಪಶು ಪಕ್ಷಿಗಳಿಗೆ ಆಹಾರವನ್ನೂ ನೀಡುತ್ತವೆ.
ಜೊತೆಗೆ ಅವುಗಳು ನಿಧಾನಗತಿಯಲ್ಲಿ ಬೆಳೆದರೂ ಕೆಲವೊಂದು ವಿದೇಶಿ ಮರಗಳಿಗಿಂತ ಆರು ಪಟ್ಟು ಹೆಚ್ಚು ಇಂಗಾಲವನ್ನು ವಾತಾವರಣದಿಂದ ಬಳಸಿಕೊಳ್ಳುತ್ತವೆ.ಬಣ್ಣ ಬಣ್ಣದ ಹೂಗಳನ್ನು ಬಿಡುವ ಮರಗಳನ್ನೇ ಸಾಲಾಗಿ ನೆಡುವುದರಿಂದ ಹೂ ಅರಳುವಾಗ ನಡೆಯುವ ಕ್ರಿಯೆಯಿಂದ ಬಿಡುಗಡೆಯಾಗುವ ಪಾರಾಗರೇಣುಗಳಿಂದ ಉಸಿರಾಟದ ಸಮಸ್ಯೆಯೂ ಕಾಡುತ್ತದೆ.
ದೇಸೀ ಮರಗಳು ಆಳಕ್ಕೆ ಬೇರು ಬಿಡುತ್ತವೆ ಹಾಗೂ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಇನ್ನು ಶೀತ ಪ್ರದೇಶಗಳಲ್ಲಿ ಬೆಳೆಯುವ ಮರಗಳು ಹೆಚ್ಚಾಗಿ ನೀರು ಬೇಡುವ ಕಾರಣ ವಿದೇಶಿ ಮರಗಳಿಂದ ಅಂತರ್ಜಲದ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.