ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಕಿರಿಯ ಕಲಾವಿದರು ವಿದೇಶಗಳಿಗೆ ಹೋಗಿ ಕಛೇರಿ ನೀಡುವುದು ಸಾಮಾನ್ಯವಾಗಿದೆ. ಗಾಯಕರಲ್ಲದೆ ಇಲ್ಲಿನ ಲಯವಾದ್ಯಗಾರರೂ ವಿದೇಶಗಳಲ್ಲಿ ಚಿರಪರಿಚಿತರಾಗಿದ್ದಾರೆ.
ಆದರೆ ನಾಗಸ್ವರಕ್ಕೆ ಈ ಭಾಗ್ಯ ದೊರಕಿರುವುದು ತುಂಬಾ ಕಡಿಮೆ. ಅಂತಹುದರಲ್ಲಿ ಈಗ ಯುವ ನಾಗಸ್ವರ ವಾದಕ ಎಂ. ದುರ್ಗೇಶ್ ಅವರಿಗೆ ಅಮೆರಿಕದ ಪಿಟ್ಸ್‌ಬರ್ಗ್‌ನ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಆಹ್ವಾನ ಬಂದಿದೆ. ಈ ದೇವಾಲಯದಲ್ಲಿ ಎರಡು ವರ್ಷಗಳ ಅವಧಿಗೆ ಆಸ್ಥಾನ ವಿದ್ವಾಂಸರಾಗಿರಲು ದುರ್ಗೇಶ್ ಆಹ್ವಾನಿತರಾಗಿದ್ದಾರೆ.
ಈ ಅವಧಿಯಲ್ಲಿ ಅವರು ದೇವಸ್ಥಾನದಲ್ಲಿ ನಡೆಯುವ ಬ್ರಹ್ಮೋತ್ಸವ, ಪವಿತ್ರೋತ್ಸವ, ಕಲ್ಯಾಣೋತ್ಸವ, ತೆಪ್ಪೋತ್ಸವಗಳಲ್ಲದೆ ನಿತ್ಯ ಸೇವೆಯಲ್ಲೂ ನಾಗಸ್ವರ ನುಡಿಸಲಿದ್ದಾರೆ.
ದುರ್ಗೇಶ್ ಅವರೊಂದಿಗೆ ಯುವ ಡೋಲು ವಾದಕ ಎಂ.ವಿ. ಅಜಯಕುಮಾರ್ ಸಹ ಆಹ್ವಾನಿತರಾಗಿದ್ದಾರೆ. ರಾಜಾಜಿನಗರ ಬಳಿಯ ಪ್ರಕಾಶ ನಗರದ ನಿವಾಸಿ ದುರ್ಗೇಶ್ ಅವರ ತಾತ ಮತ್ತು ತಂದೆ ಕೂಡಾ ಕಲಾವಿದರೇ. ತಂದೆ ಎಂ. ಮುರಳಿಯವರಿಂದ ಬಾಲ್ಯದಲ್ಲೇ ಸಂಗೀತಾಭ್ಯಾಸ ಪ್ರಾರಂಭಿಸಿದ ದುರ್ಗೇಶ್ ಮುಂದೆ ಶ್ರೀರಂಗಪಟ್ಟಣದ ಪಿ. ರಾಜಗೋಪಾಲ್ ಅವರಲ್ಲಿ ಪ್ರೌಢ ಶಿಕ್ಷಣ ಗಳಿಸಿ, ಎ.ವಿ. ನಾರಾಯಣಪ್ಪ ಅವರ ಶಿಷ್ಯ ಪರಂಪರೆಗೆ ಸೇರಿದವರು. ಜಿ.ಕೆ. ರಘುರಾಯನ್ ಅವರಿಂದಲೂ ಮಾರ್ಗದರ್ಶನ ಪಡೆದು, ಅನೇಕ ಕಾರ್ಯಕ್ರಮ ನೀಡಿದ್ದಾರೆ.
ಪಿಟ್ಸ್‌ಬರ್ಗ್‌ನ ಶ್ರೀನಿವಾಸ ದೇವಾಲಯ ಅಮೆರಿಕವಾಸಿ ಭಾರತೀಯರಲ್ಲಿ ಹೆಸರುವಾಸಿ. ಈ ದೇವಸ್ಥಾನದ ಎಲ್ಲ ಕಟ್ಟಳೆಗಳು ತಿರುಪತಿ ದೇವಸ್ಥಾನದ ಪದ್ಧತಿಯಂತೆಯೇ ನಡೆಯುವುದು ವಿಶೇಷ.
‘ನಾಗಸ್ವರ’ - ಒಂದು ಮಂಗಳವಾದ್ಯವಾಗಿ ದಕ್ಷಿಣ ಭಾರತದ ಎಲ್ಲ ಕಡೆ ಮಾನಿತ. ಸುಶಿರ ವಾದ್ಯವಾದ ನಾಗಸ್ವರ ಧಾರ್ಮಿಕ, ಸಾಮಾಜಿಕಗಳೆರಡೂ ಕಡೆ ಗೌರವಾನ್ವಿತ. ಅನೇಕ ಕಾರ್ಯಕ್ರಮಗಳಲ್ಲಿ ಓಲಗ ಒಂದು ಅನಿವಾರ್ಯ ಅಂಗ. ಓಲಗ ಮೊಳಗದೆ ದೇವರ ರಥ ಹೊರಡುವುದೇ ಇಲ್ಲ! ಮದುವೆಯಲ್ಲೂ ನಾಗಸ್ವರ ನುಡಿಸದೆ ಮಾಂಗಲ್ಯ ಕಟ್ಟುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.