ADVERTISEMENT

ಅಮ್ಮನ ಫ್ರೇಮಿನಲ್ಲಿ ಅಪ್ಪನ ಪ್ರೇಮ

ರೋಹಿಣಿ ಮುಂಡಾಜೆ
Published 15 ಜೂನ್ 2019, 8:54 IST
Last Updated 15 ಜೂನ್ 2019, 8:54 IST
ಅಮ್ಮನ ಫ್ರೇಮಿನಲ್ಲಿ ಅಪ್ಪನ ಪ್ರೇಮ
ಅಮ್ಮನ ಫ್ರೇಮಿನಲ್ಲಿ ಅಪ್ಪನ ಪ್ರೇಮ   

ನಗರದ ಬದಲಾದ ದಿನಚರಿಯಲ್ಲಿ ಅಪ್ಪಂದಿರ ಪಾತ್ರ ಬದಲಾಗುತ್ತಿದೆ. ತನ್ನ ಕಚೇರಿ ಕೆಲಸಗಳ ನಡುವೆಯೂ ಅಮ್ಮನ ಪಾತ್ರವನ್ನೂ ಅಪ್ಪ ವಹಿಸಬೇಕಾಗಿದೆ. ಅಪ್ಪ ಅಂದರೆ ಸಿಡುಕು, ಭಯ, ಮುಕ್ತವಾಗಿ ಮಾತನಾಡಲು ಸಾಧ್ಯವೇ ಆಗದ ಬಿಗುಮಾನ ಎಂಬೆಲ್ಲಾ ‘ಪುರುಷಾಹಂಕಾರ’ಕ್ಕೆ ಜೋತು ಬೀಳದೆ ಅಮ್ಮನ ‘ಫ್ರೇಮ್‌’ನಲ್ಲಿ ಮಕ್ಕಳನ್ನು ಲಾಲನೆ ಮಾಡಿರುವ ಮೂವರು ಅಪ್ಪಂದಿರ ಜೀವನಗಾಥೆ ಇಲ್ಲಿದೆ. ವಿಶ್ವ ಅಪ್ಪಂದಿರ ದಿನ. ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆವ ಅಪ್ಪಂದಿರ ನೆನೆವ ದಿನ.

***

ಆ ದಿನವನ್ನು ನಾನು ಹೇಗೆ ಮರೆಯಲಿ. ಅದು ನವೆಂಬರ್ 1, 2012. ನಾನು ಅಪ್ಪನಾದ ಸಂಭ್ರಮದಲ್ಲಿದ್ದೆ. ಅವಳಿ ಗಂಡು ಮಕ್ಕಳು. ನನ್ನ ಹೆಂಡತಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಮೇಲೆ ಮನೆಗೆ ಕರೆದುಕೊಂಡು ಹೋದೆ. ನ.11ಕ್ಕೆ ತೊಟ್ಟಿಲು ಶಾಸ್ತ್ರವಿತ್ತು. ರಾತ್ರಿ ಮಲಗುವಾಗ ಬಹಳ ತಡವಾಗಿತ್ತು.

ADVERTISEMENT

ಆಸ್ಪತ್ರೆಯ ಓಡಾಟದಿಂದ ಶುರು ಮಾಡಿ ಮನೆಯಲ್ಲಿ ಸಮಾರಂಭದವರೆಗೆ ವಿಶ್ರಾಂತಿಯೇ ಇರದ ಕಾರಣ ರಾತ್ರಿ ಭಯಂಕರ ನಿದ್ದೆ ಬಂದಿತ್ತು. ತಾಯಿ ಮಕ್ಕಳು ಇದ್ದ ಅದೇ ಕೋಣೆಯಲ್ಲಿ ಮಲಗಿದ್ದ ನನಗೆ ಮರುದಿನದ ಬೆಳಗು ಘೋರವಾಗಿತ್ತು. ನಾನು ಮತ್ತು ಮುದ್ದು ಮಕ್ಕಳು ಹಾಗೆ ನಿದ್ರಿಸಿದ್ದಾಗಲೇ ನನ್ನ ಹೆಂಡತಿ– ನನ್ನ ಮಕ್ಕಳ ತಾಯಿ ಕೊನೆಯುಸಿರೆಳೆದಿದ್ದಳು.

ಎಷ್ಟೋ ಹೊತ್ತು ಅದು ಕನಸು ಅಂತಲೇ ನನ್ನನ್ನು ಸಂತೈಸಿಕೊಂಡಿದ್ದೆ. ವಾಸ್ತವವನ್ನು ಅರಗಿಸಿಕೊಳ್ಳಲಾಗದೆ ಹುಚ್ಚನಂತಾಗಿದ್ದೆ. ಮಕ್ಕಳಿಗೂ ಎಚ್ಚರವಾಗಿತ್ತು. ವಾಸ್ತವವನ್ನು ಅರಗಿಸಿಕೊಳ್ಳಲೇಬೇಕಾಯ್ತು. ಮಕ್ಕಳಿಗಾಗಿ ಮನಸ್ಸು ಕಲ್ಲು ಮಾಡಿಕೊಂಡು ಮುಂದೆ ಸಾಗಿದೆ. ಈಗ ನನ್ನ ಮುಂದಿರುವುದು ಮಕ್ಕಳ ಭವಿಷ್ಯದ ಕನಸು ಮಾತ್ರ.

ಸ್ನೇಹಿತರು, ಬಂಧುಗಳು, ಪರಿಚಯದವರು ಎಲ್ಲರೂ ಮತ್ತೆ ಮದುವೆಯಾಗುವಂತೆ ಸಲಹೆ ನೀಡಿದ್ದರು. ಈಗಲೂ ಅದು ನಿಂತಿಲ್ಲವೆನ್ನಿ. ಮಕ್ಕಳಿಗಾಗಿ ಮದುವೆಯಾಗು ಅಂತಾರೆ. ಹೌದು, ಮಕ್ಕಳಿಗೆ ಅಮ್ಮ ಎಂಬ ‘ಶಕ್ತಿ’ ಬೇಕು ಎಂಬುದು ವಾಸ್ತವವೂ ಹೌದು.

ಆದರ್ಶ, ಮಾನವೀಯತೆ, ಅನುಕಂಪದ ಮೇಲೆ ನನ್ನನ್ನು ಯಾರಾದರೂ ಮದುವೆಯಾಗಲು ಒಪ್ಪಿದರೂ ಅದೇ ಭಾವ ಕೊನೆಯವರೆಗೂ ಉಳಿಯುತ್ತದೆಯೇ? ಮಾನವ ಸಹಜವಾದ, ವಯೋ ಸಹಜವಾದ ವಾಂಛೆಯಿಂದ ನನ್ನ ಇಬ್ಬರು ಮಕ್ಕಳನ್ನು ದೂರ ಮಾಡಿದರೆ? ತಾನು ತಾಯಿಯಾಗುವವರೆಗೂ ಗಂಡನ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಂಡ ಎರಡನೇ ಹೆಂಡತಿ ಆಮೇಲೆ ಆ ಮಕ್ಕಳಿಗೆ ನರಕ ದರ್ಶನ ಮಾಡಿಸಿರುವ ದೃಷ್ಟಾಂತಗಳು ನಮ್ಮ ಮುಂದೆಯೇ ಇವೆ. ಅವರು ತಬ್ಬಲಿಗಳಾಗೋದೇ ಆವಾಗ. ಅದಕ್ಕೆ ಮದುವೆಯ ಸಹವಾಸವೇ ಬೇಡ ಎಂದು ನಿರ್ಧರಿಸಿದೆ.

ಅವಳು ಸಾವನ್ನಪ್ಪಿ ಸ್ವಲ್ಪ ದಿನವಾಗಿತ್ತಷ್ಟೇ. ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ ಎಂಬ ಭಂಡ ಧೈರ್ಯದಿಂದ ಕೇರ್‌ ಟೇಕರ್‌ ಸಹಾಯದೊಂದಿಗೆ ನನ್ನೊಂದಿಗೇ ಮೈಸೂರಿನಲ್ಲಿ ಇಟ್ಟುಕೊಂಡಿದ್ದೆ. ಅವರ ಹಸಿವು, ದಾಹ, ನಿದ್ದೆ, ಅಳು ಯಾವುದೂ ಅರ್ಥವೇ ಆಗುತ್ತಿರಲಿಲ್ಲ.

ಕೊನೆಗೆ, ದೊಡ್ಡವನನ್ನು ನಾನಿಟ್ಟುಕೊಂಡು ಎರಡನೆಯವನನ್ನು ನನ್ನ ಚಿಕ್ಕಪ್ಪ– ಚಿಕ್ಕಮ್ಮನ ಜತೆ ಕಳುಹಿಸಿಕೊಟ್ಟೆ. ಅಪ್ಪ– ಅಮ್ಮನನ್ನು ಕಳೆದುಕೊಂಡಿರುವ ನನಗೆ ಮತ್ತು ಮಕ್ಕಳಿಗೆ ಅವರೇ ಆಸರೆಯಾದರು.

ಈಗ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಸ್ವಲ್ಪ ನಿರುಮ್ಮಳ ಭಾವ. ಆದರೂ ಪ್ರತಿದಿನವೂ ಏನೋ ಆತಂಕ, ಕಳವಳ ಇದ್ದೇ ಇದೆ. ಅಮ್ಮ ಮತ್ತು ಅಪ್ಪನ ದ್ವಿಪಾತ್ರದಲ್ಲಿ ನಾನು ಎಲ್ಲಾದರೂ ಎಡವುತ್ತಿದ್ದೇನೆಯೇ? ಮಕ್ಕಳಿಗೆ ಏನಾದರೂ ಕೊರತೆಯಾಗುತ್ತಿದೆಯೇ ಎಂದು ಅವರ ಕಣ್ಣಲ್ಲಿ ಕಣ್ಣಿಟ್ಟು ಹುಡುಕುತ್ತೇನೆ. ಅವರ ಮುಖ ಕಳೆಗುಂದಿದೆಯೇ ಎಂದು ಕಸಿವಿಸಿಗೊಳ್ಳುತ್ತೇನೆ.
ನನ್ನ ಉಸಿರು ನನ್ನ ಕರುಳಕುಡಿಗಳಿಗೆ ಮುಡಿಪು.

–ಗುಣವಂತ ರಾವ್‌, ಲಗ್ಗೆರೆ

-

ಬದುಕಿಗೆ ಕೈಮರ ನನ್ನಪ್ಪ

ನನ್ನಪ್ಪ ಎ.ಕೃಷ್ಣಪ್ಪ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದರು. ಕನಕಪುರ ರಸ್ತೆ ಬಳಿಯ ಕೋಣನಕುಂಟೆಯಲ್ಲಿ ನಮ್ಮ ಮನೆ. ತಮಗೆ ಹೆಣ್ಣು ಮಕ್ಕಳಿಲ್ಲ ಎಂಬ ಕಾರಣಕ್ಕೆ ಚನ್ನಪಟ್ಟಣದಂತಹ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮೂರು ದಶಕಗಳ ಹಿಂದೆಯೇ ಕೆಲಸ ಮಾಡಿದ್ದ ನಮ್ಮಪ್ಪ ನಿಜಕ್ಕೂ ಗ್ರೇಟ್‌ ಅನಿಸುತ್ತದೆ.

ರೇಣುಕಾ ನಾಗರಾಜು ಟ್ರಸ್ಟ್‌ ಮೂಲಕ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುತ್ತಿದ್ದ ಅಪ್ಪ ನಂತರ ತಾವೇ ಸ್ವತಂತ್ರವಾಗಿ ಆ ಕೆಲಸ ಮುಂದುವರಿಸಿದ್ದರು. ನಾನು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಪರಿಸರ ಮತ್ತು ಸಮಾಜಮುಖಿ ಚಿಂತನೆಗಳನ್ನು ತಲೆಯಲ್ಲಿ ತುಂಬಿದರು. ಈಗ ನಾನು ಸರ್ಕಾರಿ ಜಾಗದಲ್ಲಿ ಮತ್ತು ಒತ್ತುವರಿಯಾಗುತ್ತಿರುವ ಅರಣ್ಯ ಪ್ರದೇಶದಲ್ಲಿ ಮತ್ತೆ ಗಿಡಗಳನ್ನು ಬೆಳೆಸುವ ಪ್ರಯತ್ನದಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇನೆ. ಇದಕ್ಕೆ ಅವರೇ ಪ್ರೇರಣೆ.

ಕಠಿಣ ಪರಿಶ್ರಮ, ತಾಳ್ಮೆ ಮತ್ತು ಸಾಮಾಜಿಕ ಹೊಣೆಗಾರಿಕೆ, ಮೊದಲು ನೀನು ಒಳ್ಳೆಯವಾಗಿ ಇತರರಿಗೂ ಒಳ್ಳೆಯದನ್ನು ಮಾಡು, ಪ್ರಾಮಾಣಿಕವಾಗಿರು ಎಂಬುದು ಅಪ್ಪ ನಮಗೆ ಪರಿಚಯಿಸಿದ ಪಂಚಸೂತ್ರಗಳು. ಗಂಡು ಮಕ್ಕಳಿಗೆ ಅಮ್ಮನ ಮೇಲೆ ಹೆಚ್ಚು ಅಕ್ಕರೆ ಅಂತಾರೆ. ಗೆಳೆಯರೂ ಹಾಗೇ ಅಂತಾರೆ. ಆದರೆ ಉನ್ನತ ಹುದ್ದೆಯಲ್ಲಿದ್ದರೂ ಬಿಗುಮಾನವಿಲ್ಲದೆ ಅಪ್ಪ ನಮ್ಮೊಂದಿಗೆ ಮತ್ತು ಇತರರೊಂದಿಗೆ ಸ್ನೇಹಭಾವದಿಂದ ಬೆರೆಯುವ ರೀತಿ, ಕೆಲಸದ ಮೂಲಕವೇ ಮೌನವಾಗಿ ಮೌಲ್ಯಗಳನ್ನು ಮುಂದಿಡುವ ರೀತಿ ನಿಜಕ್ಕೂ ಅದ್ಭುತ. ನನಗಂತೂ ನನ್ನಪ್ಪ ಮಾದರಿ.

ನಮ್ಮಪ್ಪ ಒಳ್ಳೆಯ ಪಾಕಪ್ರವೀಣ. ಮೊನ್ನೆ ಮೊನ್ನೆ ನಾನು ನನ್ನ ಹೆಂಡತಿ ಜತೆ ತೋಟದ ಮನೆಗೆ ಹೋಗಿದ್ದಾಗ ಯಾವ ಸಾಂಬಾರಿಗೆ ಯಾವ ಮಸಾಲೆ ಎಷ್ಟು ಹಾಕಬೇಕು ಅಂತ ತೋರಿಸಿಕೊಟ್ಟರು. ಅಪ್ಪನಿಗೆ ಈಗ 67 ವರ್ಷ. ಅಮ್ಮ ಹೇಮಾವತಿ ಗೃಹಿಣಿಯಾದರೂ ಅಪ್ಪ ಪ್ರತಿದಿನ ಕಡ್ಡಾಯವಾಗಿ ಅಡುಗೆಯಲ್ಲಿ ನೆರವಾಗುತ್ತಾರೆ. ಹೆಂಡತಿಯೆಂದರೆ ದುಡಿಯುವ ಯಂತ್ರವಲ್ಲ, ಅವಳು ನೆಮ್ಮದಿಯಾಗಿದ್ದಷ್ಟು ಸಂಸಾರ ನೆಮ್ಮದಿಯಾಗಿರುತ್ತದೆ ಅನ್ನೋದು ನಮ್ಮಪ್ಪನ ನಂಬಿಕೆ.

- ನಿತೇಶ್‌ ಕೃಷ್ಣಪ್ಪ, ಪರಿಸರ ಕಾರ್ಯಕರ್ತ

---

ಪಾಲನೆ ಹೊಣೆ ಇಬ್ಬರದ್ದೂ

‘ಮಕ್ಕಳ ಲಾಲನೆಪಾಲನೆ ಹೆಂಡತಿಯ ಜವಾಬ್ದಾರಿ ಎಂಬ ಅಭಿಪ್ರಾಯ ಯಾಕೆ ಬೆಳೆದುಬಂತೋ ಕಾಣೆ. ನನ್ನ ಹೆಂಡತಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿ (ವೇದ ಕುಸುಮಾ). ಸರ್ಕಾರಿ ನೌಕರಿ ಅಂದಾಗ ವರ್ಗಾವಣೆ ಸಹಜ. ಮದುವೆಯಾಯ್ತು, ಮಕ್ಕಳಾಯ್ತು ಅಂತ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಲು ನಾನು ಸಿದ್ಧನಿರಲಿಲ್ಲ. ಮದುವೆಯವರೆಗೂ ಕುಡಿದ ಕಾಫಿ ಲೋಟ ಆಚೆ ಎತ್ತಿಟ್ಟವನೂ ಅಲ್ಲ ನಾನು. ಆದರೆ ಮದುವೆಯಾದ ತಕ್ಷಣ ನನ್ನನ್ನು ನಾನು ಬದಲಾಯಿಸಿಕೊಂಡೆ.

ನಾನು ಖಜಾನೆ ಇಲಾಖೆಯಲ್ಲಿ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದೆ. ಆಗ ವೇದಾ ಮೈಸೂರಿಗೆ ದಿನಾ ಹೋಗಿ ಬರುತ್ತಿದ್ದಳು. ಬೆಳಿಗ್ಗೆ 6.45ಕ್ಕೆ ರೈಲು. ಅಷ್ಟರೊಳಗೆ ಕೈಲಾದಷ್ಟು ಮಾಡಿಟ್ಟು ಹೋಗುತ್ತಿದ್ದಳು. ಆದರೆ ಅವಳಿಗಿಂತ ಮೊದಲೇ ಎದ್ದು ಅವಳಿಗೆ ನಾನು ನೆರವಾಗುತ್ತಿದ್ದೆ. ಅವಳು ಹೊರಟ ನಂತರ ಮಗಳು ಸುಷ್ಮಾಳಿಗೆ ಅಮ್ಮನಾಗುತ್ತಿದ್ದೆ. ಅದು ನನಗೆ ಬಹಳ ಖುಷಿಯ ವಿಚಾರ.

ಸುಷು ಒಂದು ದಿನ ಅಳುತ್ತಾ ಕಚೇರಿಗೆ ಫೋನ್‌ ಮಾಡಿದ್ದಳು. ಬಟ್ಟೆಯಲ್ಲಿ ಏನೋ ಕಲೆಯಾಗಿದೆ. ನನಗೆ ಏನೋ ಆಗಿದೆ ಅಂತ ಮತ್ತೆ ಅಳತೊಡಗಿದಳು. ಮಗಳು ದೊಡ್ಡವಳಾಗಿದ್ದಾಳೆಂದು ಅರ್ಥವಾಯಿತು. ಅದು ನೈಸರ್ಗಿಕ ಕ್ರಿಯೆ. ಸಮಸ್ಯೆ ಅಲ್ಲ ಅಂತ ಧೈರ್ಯ ತುಂಬಿ ಮನೆಗೆ ಬಂದೆ. ಕಲೆಯಾಗಿದ್ದ ಬಟ್ಟೆಗಳನ್ನು ತೊಳೆದುಹಾಕಿ ಅವಳನ್ನು ಸ್ನಾನ ಮಾಡಿಸಿದ ಮೇಲೆ ಸುಧಾರಿಸಿಕೊಂಡಳು. ಆಮೇಲೆ ಅವಳಿಗೆ ಎಲ್ಲಾ ತಿಳಿಹೇಳಿದೆ.

ಆರತಿ ಶಾಸ್ತ್ರಕ್ಕೆ ಸ್ಕರ್ಟ್‌ ಹಾಕಿಕೊಂಡೇ ಕೂರುತ್ತೇನೆ ಸೀರೆ ಉಟ್ಟರೆ ನಾನೂ ಅಮ್ಮನಂತಾಗುತ್ತೇನೆ ಅಂತ ಅವಳ ಹಟ. ಸರಿ ಅಂದೆ. ಅವಳ ಕಣ್ಣಲ್ಲಿ ನೀರು ಬರದಂತೆ ಕಾಳಜಿ ವಹಿಸೋದು ಅಪ್ಪನಾಗಿ ನನ್ನ ಕರ್ತವ್ಯ. ಅವಳ ಅದೃಷ್ಟಕ್ಕೆ ಗಂಡನ ತಂದೆ ತಾಯಿಯೂ ನಮ್ಮಂತೆಯೇ ಜೋಪಾನ ಮಾಡುತ್ತಿದ್ದಾರೆ. ಅದೇ ಸಮಾಧಾನ.

-ಮಲ್ಲೇಶ್‌ ಎಸ್‌.ಎಂ, ಬಸವೇಶ್ವರನಗರ, ನಿವೃತ್ತ ನೌಕರ, ಖಜಾನೆ (ವಿಧಾನಸೌಧ)

ಅಪ್ಪ ಇಷ್ಟಪಟ್ಟು ಮನೆ ಕೆಲಸ ಮಾಡೋರು

‘ನಿನ್ನಂಥ ಅಪ್ಪ ಇಲ್ಲ’ ಎಂಬ ಸಿನಿಮಾ ಹಾಡು ನನ್ನ ಅಪ್ಪನಂತಹ ಅಪ್ಪಂದಿರಿಗಾಗಿಯೇ ಕಟ್ಟಿರಬೇಕು. ಇವತ್ತಿಗೂ ನನಗೆ ಅಮ್ಮನಿಗಿಂತ ಅಪ್ಪನ ಮೇಲೆ ಒಂದು ತೂಕ ಹೆಚ್ಚು ಪ್ರೀತಿ. ಅಮ್ಮ ಇಷ್ಟು ಕಾಳಜಿ ಮಾಡ್ತಿದ್ದಳಾ ಅಂತ ಕೆಲವೊಮ್ಮೆ ಯೋಚಿಸುತ್ತೇನೆ.
ಅಪ್ಪ ಇಷ್ಟಪಟ್ಟು ಮನೆ ಕೆಲಸಗಳನ್ನು ಮಾಡೋರು. ಬೆಳಿಗ್ಗೆ ಎದ್ದು ಹಾಲು ಬಿಸಿ ಮಾಡಿ ತಿಂಡಿ ಮತ್ತು ಸಾಂಬಾರಿಗೆ ತರಕಾರಿಗಳನ್ನು ನೀಟಾಗಿ ಕತ್ತರಿಸಿ ಕಟ್ಟೆ ಮೇಲೆ ಮುಚ್ಚಿಟ್ಟು ವಾಕಿಂಗ್ ಹೋಗೋರು. ಇದು ಅಮ್ಮನ ಬಗ್ಗೆ ಅವರು ತಗೊಳ್ಳೋ ಕೇರ್‌.
‘ಮೇಲ್‌ ಇಗೋ’ ಅಂತೀವಲ್ಲ? ಅಮ್ಮ ಮತ್ತು ಅಪ್ಪನ ಮಧ್ಯೆ ಒಂದು ದಿನವೂ ಅದು ಅಡ್ಡಿಯಾಗಿಲ್ಲ. ನನಗೀಗ 27 ವರ್ಷ. ಒಂದು ದಿನವೂ ಈ ದಿನಚರಿ ಬದಲಾಗಿದ್ದು ಕಂಡಿಲ್ಲ.

–ಸುಷ್ಮಾ, ಮಲ್ಲೇಶ್‌ ಅವರ ಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.