ADVERTISEMENT

ಅರ್ಥವಾಗೋದು ಕವಿತೆಯೇ ಅಲ್ಲ..!

ಕ್ಯಾಂಪ‌‌ಸ್‌ ಕಲರವ

ದಯಾನಂದ ಎಚ್‌.ಎಚ್‌.
Published 1 ಜೂನ್ 2015, 19:30 IST
Last Updated 1 ಜೂನ್ 2015, 19:30 IST

ಕಾಲೇಜು ದಿನಗಳಲ್ಲಿ ಕವಿತೆಯ ಗುಂಗು ಅದು ಆ ವಯಸ್ಸಿಗೆ ಸಹಜ ಕ್ರಿಯೆಯೇನೋ ಎನ್ನುವಷ್ಟು ಸಾಮಾನ್ಯ. ತನ್ನ ನೆಚ್ಚಿನ ಹುಡುಗಿಗೆ ಪ್ರೇಮ ನಿವೇದಿಸಿಕೊಳ್ಳಲು ಹುಡುಗನಿಗೆ ತೋಚುವ ಮೊದಲ ಮಾರ್ಗ ಕವಿತೆ. ಪ್ರೇಮಪತ್ರಗಳ ಚುಟುಕುಗಳಿಂದ ಆರಂಭವಾಗುವ ಈ ‘ಕಾವ್ಯ ಪ್ರೇಮ’ ದಿನಗಳು ಕಳೆದಂತೆ ವಿರಹ ಗೀತೆಗಳ ಕಡೆಗೆ ತಿರುಗಿ ಮುಂದೆ ‘ಆತ್ಮಶೋಧ’ದ ಕಡೆಗೆ ಹೊರಡುವ ಹೊತ್ತಿಗೆ ಹುಡುಗ ‘ಕವಿ’ಯಾಗಿರುತ್ತಾನೆ. ಆ ಹೊತ್ತಿಗೆ ಲೋಕವ್ಯವಹಾರಗಳೆಲ್ಲಾ ಅವನ ಕಾವ್ಯಕ್ಕೆ ವಸ್ತುವೂ ಆಗಿರುತ್ತವೆ. ಹೀಗಾಗಿ ‘ಪ್ರತಿಭೆ’ ಹುಟ್ಟುವುದು ಕಾಲೇಜಿನಲ್ಲೇ ಎಂದರೆ ತಪ್ಪಲ್ಲ!

ಹುಡುಗಿಯರೂ ಕಾಲೇಜು ದಿನಗಳಲ್ಲಿ ಕವಿತೆಗಳನ್ನು ಬರೆದರೂ ಅವು ಹೆಚ್ಚು ‘ಪ್ರಕಾಶ’ವಾಗುವುದಿಲ್ಲ. ‘ಕಲಾ ವಿಭಾಗದ ಹುಡುಗರಿಗೇನು ಕೆಲಸ, ಕತೆ ಗಿತೆ, ಕವಿತೆ ಗಿವಿತೆ ಅಂತ ಬರ್ಕೋತಾರೆ’ ಎಂದು ಮೂಗುಮುರಿಯುವ ವಿಜ್ಞಾನ, ವಾಣಿಜ್ಯ ವಿಭಾಗದ ಹುಡುಗರೂ ಒಳಗೊಳಗೆ ಪ್ರೇಮಕವಿತೆಗಳ ಗಾಳಕ್ಕೆ ಬಿಳದೇ ಇರುವುದಿಲ್ಲ. ವಿಜ್ಞಾನ, ವಾಣಿಜ್ಯ ವಿಭಾಗದ ಹುಡುಗರೂ ಕವಿತೆ ಬರೆಯುತ್ತಾರೆ ಎಂಬುದು ಗೊತ್ತಾಗುವುದು ಕಾಲೇಜಿನ ವಾರ್ಷಿಕ ಕವನ ವಾಚನ ಸ್ಪರ್ಧೆಯಲ್ಲಿ. ಕೆಲವರು ಹಿಂದಿಯ ಶಾಯರಿಗಳನ್ನೋ, ಹಳೆಯ ಹಿಂದಿ ಚಲನಚಿತ್ರ ಗೀತೆಗಳನ್ನೋ ಕನ್ನಡಕ್ಕಿಳಿಸಿ ‘ಮೂಲ’ ಅರಿಯದ ತೀರ್ಪುಗಾರರಿಂದ ಶಹಬ್ಬಾಸ್‌ಗಿರಿ ಪಡೆಯುವುದೂ ಇದೆ.

ಮಲ್ಲೇಶ್ವರದ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳವು. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಹುಡುಗರು ಎಣ್ಣೆ- ಸೀಗೆಕಾಯಿಯ ಹಾಗೆ ಅನ್ಯೋನ್ಯವಾಗಿದ್ದೆವು! ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಪರ್ವ ಆರಂಭವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಸ್ವರಚಿತ ಕವನ ವಾಚನ ಸ್ಪರ್ಧೆಯೂ ನಿಗದಿಯಾಗಿತ್ತು. ಶಾಲಾ ದಿನಗಳಲ್ಲೇ ಪ್ರಾಸದ ಪದ್ಯ ಬರೆದು ಶಿಕ್ಷಕರಿಂದ ಮೆಚ್ಚುಗೆ ಪಡೆದಿದ್ದ ನಾನೂ ಸ್ಪರ್ಧೆಗೆ ಹುಮ್ಮಸ್ಸಿನಿಂದಲೇ ‘ನಾಮಪತ್ರ’ ಸಲ್ಲಿಸಿದ್ದೆ. (ಸ್ಪರ್ಧೆಗೆ ವಿದ್ಯಾರ್ಥಿಯ ಹೆಸರು, ತರಗತಿ, ವಿಭಾಗ, ವಾಚಿಸಲಿರುವ ಕವಿತೆಯ  ಶೀರ್ಷಿಕೆ ಮತ್ತು ಕವಿತೆಯ ಮೊದಲ ನಾಲ್ಕು ಸಾಲುಗಳನ್ನು ಒಂದು ಬಿಳಿಹಾಳೆಯಲ್ಲಿ ಸ್ವಹಸ್ತಾಕ್ಷರದಲ್ಲಿ ದುಂಡಗೆ ಬರೆದುಕೊಡಬೇಕೆಂಬ ನಿಯಮ ಆಗ ಇತ್ತು!)

ಕವಿತೆ ವಾಚಿಸಲು ಸಾಕಷ್ಟು ಅಭ್ಯಾಸ ನಡೆಸಿದ್ದೆ. ಒಂದು ಪುಟದ ಕವಿತೆಯನ್ನು ಕನಿಷ್ಠ ಎರಡು ನೂರು ಬಾರಿಯಾದರೂ ಏರಿಳಿತಗಳೊಂದಿಗೆ ಎರಡೆರೆಡು ಬಾರಿ ವಾಚಿಸುವ ಅಭ್ಯಾಸ ಮಾಡಿದೆ. ಮನೆಯಲ್ಲಿ ಮಂಚದ ಮೇಲೆ ನಿಂತು ವೇದಿಕೆ ಭಯ ನೀಗಿಕೊಳ್ಳುವ ಪ್ರಯತ್ನವೂ ನಡೆಯಿತು. ಕಾಲೇಜಿನ ತರಗತಿ, ಮನೆಯವರು ಹೇಳುವ ಕೆಲಸಗಳೆಲ್ಲಾ ಯಾಂತ್ರಿಕವಾಗಿ ಕವಿತೆಯೊಂದೇ ಸತ್ಯ ಉಳಿದದ್ದೆಲ್ಲವೂ ‘ಮಿಥ್’ ಎಂಬಂತಾಗಿತ್ತು. ನಾನೂ ಕವಿತೆ ಬೇರೆ ಬೇರೆಯಲ್ಲ, ಕವಿತೆಯೇ ನಾನು ಎಂಬಂಥ ‘ಕಾವ್ಯಾದ್ವೈತ’ ನನ್ನನ್ನು ಆವರಿಸಿಕೊಂಡಿತ್ತು! ಕಾವ್ಯಪ್ರೀತಿಯನ್ನು ಇಷ್ಟರಮಟ್ಟಿಗೆ ಆವಾಹಿಸಿಕೊಂಡ ಮೇಲೆ ಸ್ಪರ್ಧೆಯಲ್ಲಿ ನಾನಲ್ಲದೆ ಇನ್ಯಾರು ಗೆಲ್ಲಲು ಸಾಧ್ಯ ಎಂಬ ಗರ್ವವೂ ಆ ಹೊತ್ತಿಗೆ ಬೆಳೆದಿತ್ತು.

ಅಂತೂ ಇಂತೂ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿತು. ಬಿಳಿಯ ಉದ್ದ ತೋಳಿನ ಅಂಗಿ, ಕಪ್ಪನೆಯ ದೊಗಳೆ ಪ್ಯಾಂಟ್ ತೊಟ್ಟು, ಎಳೆ ಗಡ್ಡ ಮೀಸೆಯನ್ನು ತೀಡಿಕೊಂಡು, ‘ಇಕ್ಷುಗಂಗೋತ್ರಿ’ಯೊಳಗೆ ನನ್ನ ಕವಿತೆಯ ಎರಡು ಪ್ರತಿ ಇಟ್ಟುಕೊಂಡು ಕಾಲೇಜಿಗೆ ನಿತ್ಯಕ್ಕಿಂತ ಒಂದು ಗಂಟೆ ಮೊದಲೇ ಹೊರಟೆ. ಸ್ಪರ್ಧೆಯ ದಿನಾಂಕವೇನೊ ಮೊದಲೇ ನಿಗದಿಯಾಗಿದ್ದರೂ ಸಮಯವನ್ನು ಪ್ರಕಟಿಸಿರಲಿಲ್ಲ. ಕಾಲೇಜಿಗೆ ಹೊತ್ತಿಗಿಂತ ಮೊದಲು ಬಂದು ಗೇಟ್ ಕಾದಿದ್ದೇ ಬಂತು. ಸ್ಪರ್ಧೆಯ ದಿನ ಕಾಯುತ್ತಿದ್ದವನಿಗೆ ಈಗ ಯಾವಾಗ ಕಾಲೇಜಿನ ಬೆಲ್ ಹೊಡೆಯುತ್ತದೋ ಎಂಬ ಚಡಪಡಿಕೆ ಶುರುವಾಯಿತು. ಬೆಲ್ ಹೊಡೆಯುತ್ತಲೇ ಸ್ಟಾಫ್ ರೂಂಗೆ ಹೋಗಿ ಕನ್ನಡ ಅಧ್ಯಾಪಕರನ್ನು ವಿಚಾರಿಸಿದರೆ, ‘ಮೆಮೊ ಕಳಿಸ್ತೀವಿ. ನೀನು ಈಗ ಕ್ಲಾಸ್‌ಗೆ ಹೋಗಪ್ಪ’ ಎಂಬ ತಣ್ಣೀರೆರಚುವ ಮಾತು!

ತರಗತಿಯಲ್ಲಿ ಕಾವ್ಯಮನಸ್ಕನಾಗಿ ‘ಕವಿ ಸಮಯ’ಕ್ಕಾಗಿ ಕಾಯುತ್ತಾ ಕುಳಿತೆ. ಒಂದೊಂದು ಗಂಟೆಯೂ ಒಂದೊಂದು ಯುಗ ಕಳೆದಂತೆ! ಈ ಕಾಯುವ ಕಷ್ಟಕ್ಕೆ ಕಾರಣರಾದವರಿಗೆಲ್ಲಾ ಮನಸ್ಸಲ್ಲೇ ಹಿಡಿಶಾಪ ಹಾಕಿದೆ. ಮನದಲ್ಲೇ ಕವಿತೆಯನ್ನು ಉರು ಹೊಡೆಯುತ್ತಾ ಕಾಲ ಹಾಕಿದೆ. ಮರುಭೂಮಿಯಲ್ಲಿ ನೀರ ಬುಗ್ಗೆ ಚಿಮ್ಮುವಂತೆ ಅಂತೂ ಆ ಮೆಮೊ ಬಂದೇ ಬಿಟ್ಟಿತು. ‘ಕಾಂಪಿಟೇಷನ್‌ಗೆ ಹೆಸ್ರು ಕೊಟ್ಟಿರೋರು ಸ್ಟಾಫ್ ರೂಂಗೆ ಹೋಗ್ರಪ್ಪ’ ಎನ್ನುತ್ತಲೇ ಸ್ಟಾಫ್ ರೂಂ ಕಡೆಗೆ ಕಾಲು ಬೀಸಿದೆ.

ಸ್ಟಾಫ್ ರೂಂನಲ್ಲಿ ಸಾಲಾಗಿ ಹಾಕಿದ್ದ ಕುರ್ಚಿಗಳಲ್ಲಿ ಮುಂದಿನ ಸಾಲಿನಲ್ಲೇ ಕುಳಿತರೂ ನನ್ನ ಸರದಿ ಬಂದಿದ್ದು ಹನ್ನೆರಡನೆಯವನಾಗಿ. ಕನ್ನಡ ಅಧ್ಯಾಪಕರು ಮಾತ್ರವಲ್ಲದೆ, ಇತಿಹಾಸ, ತರ್ಕಶಾಸ್ತ್ರ, ಅರ್ಥಶಾಸ್ತ್ರ, ಸಂಸ್ಕೃತ, ವಾಣಿಜ್ಯ ವಿಭಾಗದ ಅಧ್ಯಾಪಕರೂ ಸ್ಪರ್ಧೆಯ ತೀರ್ಪುಗಾರರಾಗಿ ಕುಳಿತಿದ್ದರು. ಸ್ಪರ್ಧಿಗಳು ವಾಚಿಸಿದ ಕವಿತೆಯ ಬಗ್ಗೆ ತೀರ್ಪುಗಾರರು ಅಲ್ಲೇ ತಮ್ಮ ಅಭಿಪ್ರಾಯವನ್ನೂ ಹೇಳಿ ‘ಟೀಕಿ’ಸುತ್ತಿದ್ದರು. ನನ್ನ ಸರದಿ ಬಂದಾಗ ಮುಂದೆ ಏನಾಗುವುದೋ ಎಂದುಕೊಂಡು ಎದ್ದು ಎಲ್ಲರೆದುರು ಕವಿತೆಯನ್ನು ಓದಲು ಶುರು ಮಾಡಿದೆ. ‘ಕವಿತೆಯನ್ನ ಏರಿಳಿತದೊಂದಿಗೆ ವಾಚಿಸಬೇಕು. ಪದ್ಯ ಓದಿದ ಹಾಗೆ ಓದೋದಲ್ಲ’ ಎಂದು ಸಂಸ್ಕೃತ ಅಧ್ಯಾಪಕರು ಕುಟುಕಿದರು. ‘ಹೆದರ ಬೇಡ. ಧೈರ್ಯವಾಗಿ ವಾಚನ ಮಾಡು’ ಕನ್ನಡ ಅಧ್ಯಾಪಕರು ಬೆನ್ನಿಗೆ ನಿಂತರು.

‘ಆದಂಗಾಗಲಿ ಮಾದಪ್ಪನ ಜಾತ್ರೆ’ ಎಂದು ಮನದಲ್ಲೇ ಅಂದುಕೊಂಡು ಕವಿತಾ ವಾಚನ ಮುಂದುವರಿಸಿದೆ. ವಾಚನ ಮುಗಿಸಿ ನಿರುಮ್ಮಳನಾಗಿ ಕುರ್ಚಿಗೆ ಮರಳಲು ಮುಂದಾಗಬೇಕು ಎನ್ನುವಷ್ಟರಲ್ಲಿ ಅರ್ಥಶಾಸ್ತ್ರದ ಅಧ್ಯಾಪಕರು, ‘ಇದು ನೀನೇ ಬರೆದ ಕವಿತೇನಾ?’ ಎಂಬ ಆಘಾತಕಾರಿ ಪ್ರಶ್ನೆ ಎಸೆದರು. ‘ಹೌದು, ನನ್ನದೇ ಸ್ವಂತದ್ದು’ ಎಂದೆ. ‘ಕವಿತೆ ತುಂಬಾ ಸಡಿಲ, ಸರಳ ಆಯ್ತು. ಗಟ್ಟಿ ಇಲ್ಲ’ ಎಂದರು ಇತಿಹಾಸ ಅಧ್ಯಾಪಕರು. ಅಲ್ಲಿಯವರೆಗೂ ಕಿಟಕಿಯ ಮೂಲೆಯಿಂದ ದೃಷ್ಟಿ ತೆಗೆಯದೇ ಕುಳಿತಿದ್ದ ತರ್ಕಶಾಸ್ತ್ರದ ಅಧ್ಯಾಪಕರು, ‘ಈ ಕವಿತೆ ತಲೆಗೆ ಕೆಲಸಾನೇ ಕೊಡಲ್ಲ. ಕವಿತೆ ಹಾಗೆ ನೇರವಾಗಿ ಅರ್ಥ ಆಗಬಾರದು. ಹಾಗೆ ನೊಡಿದ್ರೆ ಅರ್ಥ ಆಗೋದು ಕವಿತೆಯೇ ಅಲ್ಲ’ ಎನ್ನುತ್ತಾ ಸಂಸ್ಕೃತ ಅಧ್ಯಾಪಕರ ಕಡೆಗೆ ನೋಡಿದರು. ಸಂಸ್ಕೃತ ಅಧ್ಯಾಪಕರೂ ಸೇರಿದಂತೆ ಎಲ್ಲ ತೀರ್ಪುಗಾರರೂ ‘ಹೌದೌದು’ ಎಂಬಂತೆ ಗೋಣು ಹಾಕಿದರು. ಇಷ್ಟೆಲ್ಲಾ ಆದ ಮೇಲೆ ನನಗೆ ತಲೆತಿರುಗುವುದೊಂದೇ ಬಾಕಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT