ADVERTISEMENT

ಆಟ ಬೊಂಬಾಟು

ಸುರೇಖಾ ಹೆಗಡೆ
Published 3 ಜುಲೈ 2015, 19:30 IST
Last Updated 3 ಜುಲೈ 2015, 19:30 IST

ಕುಣಿದು ಕುಪ್ಪಳಿಸುವ ಮನಕ್ಕೆ ಕಂಡಿದ್ದೆಲ್ಲಾ ಆಟದ ವಸ್ತುವೇ. ಅಂಬೆಗಾಲಿಡುವ ಮಗುವಷ್ಟೇ ಅಲ್ಲ, ಊರುಗೋಲು ಹಿಡಿಯುವ ಮುದುಕರಿಗೂ ಆಟವೆಂದರೆ ಬಲು ಇಷ್ಟ. ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಗಳೂ ಬದಲಾಗುತ್ತವೆ.

ಆಟ ಬಯಸುವ ಮನಗಳಿಗಾಗಿ ವಿವಿಧ ಬಗೆಯ ಆಟಗಳನ್ನು ಪರಿಚಯಿಸಿಕೊಡುವ ಉದ್ದೇಶದಿಂದ 2013 ಆಗಸ್ಟ್‌ನಲ್ಲಿ ‘ಪ್ಲೇ  ಅರೆನಾ ಸ್ಪೋರ್ಟ್ಸ್‌ ಅಂಡ್‌ ಅಡ್ವೆಂಚರ್‌ ಪ್ರೈವೇಟ್‌ ಲಿಮಿಟೆಡ್‌’ ಸಂಸ್ಥೆಯೊಂದು ಪ್ರಾರಂಭವಾಗಿದೆ. ಆರು ಎಕರೆ ಪ್ರದೇಶದಲ್ಲಿ ದೇಶ ವಿದೇಶದ ಆಟಗಳನ್ನು  ಪರಿಚಯಿಸಿರುವ ಈ ಸಂಸ್ಥೆಯನ್ನು ಸ್ಥಾಪಿಸಿದ್ದು ನಗರದ ಶರತ್‌ ರೆಡ್ಡಿ.

ಅಮೆರಿಕದ ಯುನಿವರ್ಸಿಟಿ ಆಫ್‌ ಮಿಷಿಗನ್‌­ನಲ್ಲಿ ಎಂಎಸ್‌ ಪದವಿ ಪಡೆದ ಇವರಿಗೆ ಚಿಕ್ಕಂದಿ­ನಿಂದಲೂ ಕ್ರೀಡೆಗಳ ಬಗ್ಗೆ ವಿಶೇಷ ವ್ಯಾಮೋಹ ಇತ್ತು. ಭಾರತದಲ್ಲಿನ ವಿವಿಧ ಬಗೆಯ ಆಟಗಳ ಬಗ್ಗೆ ತಿಳಿದಿದ್ದ ಅವರು ಅಲ್ಲಿಯ ವೈವಿಧ್ಯಮಯ ಆಟಗಳ ವಿಷಯದಲ್ಲಿಯೂ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಅಂತರರಾಷ್ಟ್ರೀಯ ಖ್ಯಾತಿಯ ಆಟ­ಗಳನ್ನು ಅದೇ ಗುಣಮಟ್ಟದಲ್ಲಿ ನೀಡಬೇಕು ಎನ್ನುವ ಉತ್ಸಾಹದಿಂದ ಬೆಂಗಳೂರಿಗರಿಗಾಗಿ ‘ಪ್ಲೇ’ಯನ್ನು ಆರಂಭಿಸಿದರು. ಒಂದೇ ಸೂರಿನಡಿ ವಿವಿಧ ದೇಶಗಳ ಪ್ರಖ್ಯಾತ ಆಟ, ಸಾಹಸ ಪ್ರಧಾನ ಆಟಗಳ ರುಚಿ ಉಣಿಸುವ ಉದ್ದೇಶ ಇವರದ್ದು.

ಎರಡು ವರ್ಷಗಳ ಹಿಂದೆ 5 ವಿಭಿನ್ನ ಆಟಗಳ ಮೂಲಕ ಪ್ರಾರಂಭವಾದ ‘ಪ್ಲೇ’ ಇದೀಗ 30ಕ್ಕೂ ಅಧಿಕ ಆಟಗಳನ್ನು ಸೇರಿಸಿಕೊಂಡಿದೆ. ಒಂದು ವರ್ಷದ ಪುಟ್ಟ ಮಗುವಿನಿಂದ ಹಿಡಿದು 60 ವರ್ಷದ ವೃದ್ಧರಿಗೂ ಇಷ್ಟವಾಗುವಂಥ ಆಟಗಳು ಇಲ್ಲಿದ್ದು, ಪಳಗಿದ ತರಬೇತುದಾರರೂ ಇದ್ದಾರೆ.

ವಿಭಿನ್ನ ಹಾಗೂ ವಿಶೇಷ ಎನಿಸುವ ವಿದೇಶಿ ಆಟಗಳಷ್ಟೇ ಅಲ್ಲ, ಭಾರತೀಯ ಆಟಗಳಿಗೂ ಇಲ್ಲಿ ಮನ್ನಣೆ ಇದೆ. ಕಬಡ್ಡಿ ಹಾಗೂ ಕೊಕ್ಕೊ ಆಟಗಳಿಗೂ ಅವಕಾಶವಿದೆ. ‘ಬೇರೆ ಬೇರೆ ದೇಶಗಳನ್ನು ಸುತ್ತಿದಾಗ ಅಲ್ಲಿಯ ವೈವಿಧ್ಯಮಯ ಆಟಗಳನ್ನು ನಮ್ಮ ನಗರಕ್ಕೂ ಪರಿಚಯಿಸಬೇಕು ಎನಿಸುತ್ತಿತ್ತು.  ಅಲ್ಲದೆ ಟೀವಿ ವಾಹಿನಿಗಳಿಂದ ಆಟ ವೈವಿಧ್ಯ ತಿಳಿದುಕೊಳ್ಳುವುದು ಸುಲಭವಾಗಿದೆ. ಅವುಗಳಲ್ಲಿ ಕೆಲವು ಮಾತ್ರ ಬೆಂಗಳೂರಿನಲ್ಲಿ ಆಡಲು ಸಿಗುತ್ತವೆ. ಹೀಗಾಗಿ ಒಂದೇ ಸೂರಿನಡಿ ವಿವಿಧ ಆಟಗಳ ಸವಿ ಉಣ್ಣಲು ಅವಕಾಶ ನೀಡಬೇಕು ಎಂಬ ಕನಸನ್ನು ‘ಪ್ಲೇ’ ಮೂಲಕ ನನಸು ಮಾಡಿಕೊಂಡೆ.  ಭಾರತೀಯ ಆಟಗಳನ್ನು ಆಡಲು ಇಲ್ಲಿ ಸಾಕಷ್ಟು ಜಾಗವಿದೆ. ಆದರೆ ಆ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆ ಇದೆ. ಹೀಗಾಗಿ ಭಾರತೀಯ ಆಟಗಳತ್ತಲೂ ಜಾಗೃತಿ ಮೂಡಿಸುವ ಯೋಜನೆ ಇದೆ’ ಎನ್ನುತ್ತಾರೆ ಶರತ್‌.

ಪ್ರತಿ ಬಾರಿಯೂ ಒಂದಿಲ್ಲೊಂದು ವಿಭಿನ್ನ ಆಟವನ್ನು ಪರಿಚಯಿಸುವ ಪ್ಲೇಯನ್ನು ಅಂತರರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರವನ್ನಾಗಿಯೂ ಬಳಸಿಕೊಳ್ಳಲಾಗುತ್ತಿದೆ. ಪ್ಯಾರಿಸ್‌ ಮೂಲದ ಪಿಎಸ್‌ಜಿ ಹಾಗೂ ಅರ್ಜೆಂಟೀನಾ ಮೂಲದ ಬೋಕಾ  ಜೂನಿಯರ್ಸ್‌ ಫುಟ್‌ಬಾಲ್‌ ತರಬೇತುದಾರರು ಮುಂತಾದವರು ಪ್ಲೇ ಸ್ಥಳವನ್ನು ತರಬೇತಿ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಾರೆ.

ಮುಂದಿನ ಯೋಜನೆ
ಫುಟ್‌ಬಾಲ್‌, ಕ್ರಿಕೆಟ್‌ ಮುಂತಾದ ಆಟಕ್ಕೆ ಸಂಬಂಧಿಸಿದ ತರಬೇತಿಗಳು ಇಲ್ಲಿ ನಡೆಯುತ್ತವೆ. ಅಂತರರಾಷ್ಟ್ರೀಯ ಆಟಗಳನ್ನು ಅದೇ ಗುಣಮಟ್ಟದಲ್ಲಿ ನೀಡುವ ಉದ್ದೇಶ ಹೊಂದಿರುವ ಪ್ಲೇನಲ್ಲಿ ಆಟದ ಮೋಜು ಸವಿಯಲು ವಾರದ ಎಲ್ಲ ದಿನ ಪ್ರವೇಶವಿದೆ. ಆಟಗಳಿಗೆ ತಕ್ಕಂತೆ ಬೆಲೆ ನಿಗದಿಯಾಗಲಿದೆ.

ಈಗಾಗಲೇ ಫುಟ್‌ಬಾಲ್‌ ಹಾಗೂ ಕ್ರಿಕೆಟ್‌ ಪಂದ್ಯಾವಳಿಗಳನ್ನು ಆಯೋಜಿಸಿರುವ ‘ಪ್ಲೇ’ ಮುಂದಿನ ದಿನಗಳಲ್ಲಿ ವಿವಿಧ ಆಟಗಳ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಆಟಗಳ ಬಗ್ಗೆ ಆಸಕ್ತಿ ಮೂಡಿಸುವ ಹಂಬಲದಲ್ಲಿದೆ. ಸದ್ಯ ಆಸಕ್ತರು ಅಲ್ಲಿಗೇ ಹೋಗಿ, ಯಾವ ಆಟ ಆಡಬೇಕು ಅಥವಾ ಯಾವುದರಲ್ಲಿ  ವಿಶೇಷ ತರಬೇತಿ ಪಡೆಯಬೇಕೆಂದು ತೀರ್ಮಾನಿಸಬೇಕು. ಮುಂದೆ  ಈ ಆಯ್ಕೆ ಸುಲಭವಾಗಿಸಲು ವೆಬ್‌ಸೈಟ್‌ ಮೂಲಕ ಗ್ರಾಹಕರನ್ನು ತಲುಪುವ ಉದ್ದೇಶ ಸಂಸ್ಥೆಯದ್ದು.

ವಿವಿಧ ಆಟಗಳಿಗೆ ತರಬೇತಿ ನೀಡುವ ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿದ್ದು, ಈಜು ಕಲಿಸಲು ಮಹಿಳಾ ತರಬೇತುದಾರರಿರುವುದು ವಿಶೇಷ. ಅಲ್ಲದೆ ಬೇರೆ ಬೇರೆ ಆಟಗಳಲ್ಲಿ ನುರಿತವರು ತರಬೇತಿ ನೀಡಲಿದ್ದು, ಇನ್ನೆರಡು ತಿಂಗಳಲ್ಲಿ ಟ್ರಾಂಪೋಲಿಯನ್‌ ಪಾರ್ಕ್‌ ನಿರ್ಮಿಸಲಿದೆ. ಕ್ರೀಡಾಸಕ್ತರಿಗೆ ಸಹಾಯವಾಗುವಂತೆ ಫುಡ್‌ ಹಬ್‌ಗಳೂ ಇತ್ತೀಚೆಗೆ ಇಲ್ಲಿ ತಲೆ ಎತ್ತಿವೆ.

ಆಟ ವೈವಿಧ್ಯ...
ಕ್ರೀಡೆ ಹಾಗೂ ಸಾಹಸಿ ಆಟಗಳ ಬಗ್ಗೆ ಆಸಕ್ತಿ ಇದ್ದು, ಅದನ್ನು ಪಳಗಿಸಿಕೊಳ್ಳಬೇಕು ಎನ್ನುವ ಆಸಕ್ತಿ ಇರುವವರಿಗೂ ತರಬೇತಿ ನೀಡಲಿದೆ ಪ್ಲೇ. ಬೌಲಿಂಗ್ ಆ್ಯಲೀ, ಫುಟ್‌ಬಾಲ್‌, ಕ್ರಿಕೆಟ್‌, ಬಾಸ್ಕೆಟ್‌ಬಾಲ್‌, ವಾಲಿಬಾಲ್‌, ಬೀಚ್‌ ವಾಲಿಬಾಲ್‌, ಹಾಕಿ, ಗಾಲ್ಫ್‌ ಸಿಮ್ಯುಲೇಟರ್‌, ಆರ್ಚರಿ, ಏರ್‌ ರೈಫಲ್‌, ಕ್ಲೈಂಬಿಂಗ್‌ ವಾಲ್‌, ಬೌಲ್ಡರಿಂಗ್‌, ರೋಪ್‌ ಕೋರ್ಸ್‌, ಝಿಪ್‌ ಲೈನ್‌, ಜೂಮಾರಿಂಗ್‌, ವಿವಿಧ ಜಲ ಕ್ರೀಡೆಗಳು, ಪೇಂಟ್‌ಬಾಲ್‌, ಲೇಸರ್‌ ಟ್ಯಾಗ್‌, ಕಾರ್‌ ಸಿಮ್ಯುಲೇಟರ್‌, ಫ್ಲೈಟ್‌ ಸಿಮ್ಯುಲೇಟರ್‌, ಎಟಿವಿ ಟ್ರ್ಯಾಕ್‌, ಸ್ನೂಕರ್‌, ಸೆಗ್‌ವೆ ಜೋನ್‌, ಜಾರ್ಬ್‌, ಆರ್‌ಸಿ ಜೋನ್‌, ಕ್ರಿಕೆಟ್‌ ಕೇಜ್‌, ಕಿಡ್ಸ್‌ ಜೋನ್‌, ಸ್ಟೇಕ್‌ ಪಾರ್ಕ್‌ ಸೇರಿದಂತೆ ಇನ್ನೂ ಹಲವು ವಿಶೇಷ ಆಟಗಳ ಮೋಜನ್ನು ಒಂದೇ ಸೂರಿನಡಿ ಅನುಭವಿಸಬಹುದು.

ಪ್ಲೇ ಇರುವ ಸ್ಥಳ: ನಂ.75, ಕೇಂದ್ರ ಕಾರಾಗೃಹ ರಸ್ತೆ, ಸಿಲ್ವರ್‌ವುಡ್‌ ರಿಜೆನ್ಸಿ ಅಪಾರ್ಟ್‌ಮೆಂಟ್‌ ಎದುರು, ಟೋಟಲ್ ಮಾಲ್‌ ಸರ್ಜಾಪುರ ಬಳಿ, ಕಸವನಹಳ್ಳಿ. ಮಾಹಿತಿಗೆ: www.playarena.in, info@playarena.in, 99000 99911.

ಆಟಕ್ಕೆ ತಕ್ಕಂತೆ ಶುಲ್ಕ
ಪ್ಲೇದಲ್ಲಿ ಆಟದ ಮೋಜು ಅನುಭವಿಸುವ ಮನಸ್ಸಿರುವವರು ಒಂದೇ ಬಾರಿ ಹಣ ಪಾವತಿಸಿ ಕಾರ್ಡ್‌ ಪಡೆದುಕೊಳ್ಳಬಹುದು. ಕಾರ್ಡ್‌ ಸ್ವೈಪ್‌ ಮಾಡಿ ನಿಮ್ಮಿಷ್ಟದ ಆಟ ಆಡಬಹುದು. ವ್ಯಕ್ತಿ ಕೇಂದ್ರಿತ ಆಟಗಳಿಗೆ ಒಬ್ಬ ವ್ಯಕ್ತಿಗೆ ತಗುಲುವ ವೆಚ್ಚ ಕನಿಷ್ಠ ₨150ರಿಂದ ಗರಿಷ್ಠ ₨240. ಗುಂಪು ಆಟವಾದಲ್ಲಿ ಸ್ಥಳದ ವಿಸ್ತೀರ್ಣ ಪರಿಗಣಿಸಿ ಗಂಟೆಗೆ ₨1000ರಿಂದ ₨3000 ವರೆಗೆ ಶುಲ್ಕವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.