ADVERTISEMENT

ಆತ್ಮಚರಿತ್ರೆ ಬರವಣಿಗೆಯೇ ಔಷಧ: ಬಾಬಿ ಬ್ರೌನ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2015, 19:32 IST
Last Updated 14 ಅಕ್ಟೋಬರ್ 2015, 19:32 IST

ಏಳು ತಿಂಗಳುಗಳ ಕಾಲ ಕೋಮಾದಲ್ಲಿದ್ದು, ಸಾವನ್ನಪ್ಪಿದ್ದ ಮಗಳು ಬಾಬಿ ಕ್ರಿಸ್ಟಿನಾ ಅವರ ನೆನಪಿನಲ್ಲಿ ಹಾಡುಗಾರ ಬಾಬಿ ಬ್ರೌನ್‌ ಬರೆದ ಆತ್ಮಚರಿತ್ರೆ ‘ಮೈ ಪ್ರಿರಾಗಟಿವ್‌’ ಪುಸ್ತಕ ಮುಂದಿನ ಜೂನ್‌ನಲ್ಲಿ ಬಿಡುಗಡೆಗೊಳ್ಳಲಿದೆ.

46 ವರ್ಷದ ಬಾಬಿ ತಮ್ಮ ಆತ್ಮಚರಿತ್ರೆ ಪ್ರಕಟಗೊಳಿಸಲು ‘ಡೇ ಸ್ಟ್ರೀಟ್‌ ಬುಕ್ಸ್‌’ ಎಂಬ ಪಬ್ಲಿಕೇಶನ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

‘ನಾನು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಅಘಾತ ನೀಡಿದ ಮಗಳ ಸಾವಿನ ದುಃಖದಿಂದ ಹೊರಬಂದ ನಂತರ ನನ್ನ ಆತ್ಮಕಥೆಯನ್ನು ಬರೆಯಲು ನಿರ್ಧರಿಸಿದ್ದೆ’ ಎಂದು ಬಾಬಿ ಹೇಳಿದ್ದಾರೆ.

ಬದುಕಿನಲ್ಲಿ ನಡೆದ ಹಳೆಯ ಸಿಹಿಘಟನೆಗಳನ್ನು ನೆನೆದು ತಮ್ಮ ಇಂದಿನ ನೋವು, ದುಃಖಗಳನ್ನು ಮರೆಯಲು ಯತ್ನಿಸುತ್ತಿದ್ದಾರೆ ‘ಕ್ಯಾಂಡಿ ಗರ್ಲ್‌’ನ ಯಶ್ವಸಿ ಗಾಯಕ ಬಾಬಿ ಬ್ರೌನ್‌. 

‘ನಾನು ನನ್ನ ಆತ್ಮಕಥೆ ಬರೆಯುತ್ತಾ ಬರೆಯುತ್ತಾ ನನ್ನ ಬದುಕಿನ ಆಘಾತಗಳನ್ನು ನಿಧಾನವಾಗಿ ಮರೆಯುತ್ತಿದ್ದೇನೆ. ನನಗೇ ಗೊತ್ತಿಲ್ಲದಂತೆ ಇದು ನನಗೆ ನೋವನ್ನು ಮರೆಸುವ ಔಷಧವಾಗಿತ್ತು’ ಎಂದು ಬ್ರೌನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ನಾನು ನನ್ನ ಜೀವನದ ಪ್ರತಿಯೊಂದು ಘಳಿಗೆಯನ್ನು ಕೂಡ ಈ ಪುಸ್ತಕದಲ್ಲಿ ನಮೂದಿಸಿದ್ದೇನೆ. ನನ್ನ ಪ್ರತಿ ನೋವು, ನಲಿವಿನ ಹಂತವನ್ನು ಈ ಪುಸ್ತಕ ಓದುಗರೊಂದಿಗೆ ತೆರೆದುಕೊಳ್ಳುತ್ತದೆ. ನನ್ನ  ಜೀವನ ಯಾತ್ರೆಯ ಪ್ರತಿ ಹಂತವನ್ನು ನನ್ನ ಅಭಿಮಾನಿಗಳು ಹಾಗೂ ಓದುಗರು ತಿಳಿದು ಸಂತೋಷಪಡುತ್ತಾರೆ’ ಎಂದು ಬಾಬಿ ತಿಳಿಸಿದ್ದಾರೆ. 

ಬಾಬಿ ಅವರ ವೈಯಕ್ತಿಕ ಜೀವನ, ವಿಟ್ನಿ ಹೋಸ್ಟನ್‌ ಅವರೊಂದಿಗಿನ ಸಂಬಂಧ, ತಮ್ಮ ಮಗಳೊಂದಿಗಿನ ಬಾಂಧವ್ಯ ಮುಂತಾದ ವಿಷಯಗಳ ಕುರಿತು ಬಿಡಿಬಿಡಿಯಾಗಿ  ಈ ಪುಸ್ತಕದಲ್ಲಿ ಬಾಬಿ ಚಿತ್ರಿಸಿದ್ದಾರೆ ಎಂದು ಪ್ರಕಾಶಕ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.