ಶಾಲೆಯಲ್ಲಿ ಎಲ್ಲರಂತೆ ತಾನೂ ಕಲಿತು ಸುಂದರ ಬದುಕು ಕಟ್ಟಿಕೊಳ್ಳಬೇಕೆನ್ನುವ ತುಡಿತ ಬಿಲ್ಲಾ ಎನ್ನುವ ಅನಾಥ ಬಾಲಕನದ್ದು. ಆದರೆ, ಬಡತನದ ಕಾರಣದಿಂದ ಶಾಲೆಯಿಂದ ದೂರವುಳಿದು ಪ್ಲಾಸ್ಟಿಕ್ ಕಸವನ್ನು ಹೆಕ್ಕುವ ಜಾಡಮಾಲಿಯಾಗಿ ದುಡಿಯುವ ಬಿಲ್ಲಾನಿಗೆ ‘ವುಲಾರ್’ ಕೆರೆಯೇ ಜೀವದಾಯಿನಿ.
ಸ್ವಚ್ಛ ಭಾರತ ಅಭಿಯಾನವೆಂದರೇನು ಎನ್ನುವ ಅರಿವೂ ಇಲ್ಲದ ಬಿಲ್ಲಾ ಏಷ್ಯಾದಲ್ಲೇ ಸಿಹಿನೀರಿನ ಕೆರೆ ಎನಿಸಿಕೊಂಡಿರುವ ವುಲಾರ್ ಕೆರೆಯಲ್ಲಿ ಪ್ಲಾಸ್ಟಿಕ್ ಆಯ್ದುಕೊಳ್ಳುವ ಕಾಯಕದಲ್ಲೇ ಬದುಕಿನ ನೆಮ್ಮದಿ ಕಂಡುಕೊಳ್ಳುತ್ತಾನೆ. ಒಂದೆಡೆ ವುಲಾರ್‌ಗೆ ಬಿಲ್ಲಾ ಜೀವಧಾತುವಾದರೆ, ಮತ್ತೊಂದೆಡೆ ಬಿಲ್ಲಾನಿಗೆ ವುಲಾರ್. ಕೆರೆಯ ನೀರನ್ನು ಮಾಲಿನ್ಯಗೊಳಿಸುವ ಪ್ಲಾಸ್ಟಿಕ್ ಮೂಲಕ ಬದುಕು ಕಟ್ಟಿಕೊಳ್ಳುವ ಬಿಲ್ಲಾ ಸದ್ದಿಲ್ಲದೇ ಸ್ವಚ್ಛ ಭಾರತದ ಅಭಿಯಾನ ಮಾಡುತ್ತಿರುತ್ತಾನೆ ಯಾವ ಪ್ರಚಾರವನ್ನೂ ಬಯಸದೇ...
–ಇದು ಕಾಶ್ಮೀರದ ನಿರ್ದೇಶಕ ಜಲಾಲುದ್ದೀನ್ ಬಾಬಾ ನಿರ್ದೇಶನದ ‘ಸೇವಿಂಗ್ ದಿ ಸೇವಿಯರ್’ ಸಿನಿಮಾದ ಕಥಾವಸ್ತು. ಪರಿಸರದ ಜೀವದ್ರವ್ಯವಾಗಿರುವ ನೀರನ್ನು ಕಾಪಾಡಿದರೆ ಅದು ನಮ್ಮ ಬದುಕನ್ನು ಕಾಪಾಡಬಲ್ಲದು ಎಂಬ ಸಂದೇಶ ಸಾರುವ ಈ ಚಿತ್ರ ಅನೇಕ ಪರಿಸರಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇಂಥ 37ಕ್ಕೂ ಹೆಚ್ಚು ಸಿನಿಮಾಗಳು ಈ ಬಾರಿಯ 11ನೇ ಅಂತರರಾಷ್ಟ್ರೀಯ ಟ್ರಾವೆಲಿಂಗ್ ಫಿಲಂ ಫೆಸ್ಟಿವಲ್ ಆನ್ ವಾಟರ್ 2017ನಲ್ಲಿ ಪ್ರದರ್ಶನಗೊಳ್ಳಲಿವೆ.
‘ಜಲ ಸಂರಕ್ಷಣೆ, ಜಲಮಾಲಿನ್ಯ, ಮನುಷ್ಯ ಮತ್ತು ನೀರಿನ ನಂಟಿನ ಕಥಾನಕಗಳನ್ನು ಒಳಗೊಂಡ ಚಲನಚಿತ್ರಗಳ ಪ್ರದರ್ಶನ ಈ ಜಲ ಚಿತ್ರೋತ್ಸವದ ವಿಶೇಷ. ಅಣೆಕಟ್ಟುಗಳಿಂದ ಆಗುತ್ತಿರುವ ಸಮಸ್ಯೆಗಳು, ಜನರ ವಲಸೆ, ಜಲ ವಿವಾದ ಹೀಗೆ ಅನೇಕ ಅಂಶಗಳ ಮೇಲೆ ಚಿತ್ರೋತ್ಸವ ಬೆಳಕು ಚೆಲ್ಲಲಿದೆ. ತಜ್ಞರೊಂದಿಗೆ ಸಂವಾದವೂ ನಡೆಯಲಿದೆ’ ಎನ್ನುತ್ತಾರೆ ಜಲ ಚಿತ್ರೋತ್ಸವದ ನಿರ್ದೇಶಕ
ಜಾರ್ಜ್ ಕುಟ್ಟಿ.
2005ರಲ್ಲಿ ಮೊದಲ ಬಾರಿಗೆ ಇಂಥ ಚಿತ್ರೋತ್ಸವವನ್ನು ಆಯೋಜಿಸಿದಾಗ ಇದು ಅಷ್ಟಾಗಿ ಜನರ ಗಮನ ಸೆಳೆಯಲಿಲ್ಲ. ಆದರೆ, ನಿತ್ಯ ಬದುಕಿನಲ್ಲಿ ನೀರಿನ ಅಭಾವ ತಲೆದೋರತೊಡಗಿದಾಗ ಜನಸಾಮಾನ್ಯರೂ ಚಿತ್ರೋತ್ಸವಕ್ಕೆ ಸ್ಪಂದಿಸತೊಡಗಿದರು. ಈಗ ಪರಿಸರ ಸಂರಕ್ಷಣಾ ಗುಂಪುಗಳು, ಪರಿಸರ ಪ್ರೇಮಿಗಳು ಜಲದ ಮಹತ್ವ ಸಾರುವ ಚಿತ್ರಗಳನ್ನು ಅಲ್ಲಲ್ಲಿ ಪ್ರದರ್ಶಿಸುತ್ತಿದ್ದಾರೆ. ಆ ಮೂಲಕ ಜನರಲ್ಲಿ ಜಲಜಾಗೃತಿ ಕೈಗೊಂಡಿದ್ದಾರೆ ಎಂದು ವಿವರಿಸುತ್ತಾರೆ ಅವರು.
ಈ ಚಿತ್ರೋತ್ಸವಕ್ಕೆ 60 ದೇಶಗಳಿಂದ 229 ಸಿನಿಮಾಗಳು ಪ್ರದರ್ಶನಕ್ಕೆ ಬಂದಿದ್ದವು. ಅದರಲ್ಲಿ ಆಯ್ದ ಅತ್ಯುತ್ತಮ 37 ಸಿನಿಮಾಗಳನ್ನು ಮಾತ್ರ ಇಲ್ಲಿ ಪ್ರದರ್ಶಿಸಲಾಗುತ್ತಿದೆ. ನಮಗೆ ಅನುದಾನ ಕಡಿಮೆ ಇದೆ. ಹಾಗಾಗಿ, ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಕರನ್ನು ಕರೆಸಲು ಆಗುತ್ತಿಲ್ಲ. ಈ ಬಾರಿ ಚಿತ್ರೋತ್ಸವಕ್ಕೆ ಕಾಶ್ಮೀರದ ಖ್ಯಾತ ನಿರ್ದೇಶಕ ಜಲಾಲುದ್ದೀನ್ ಬಾಬಾ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ದಿನದಂದು ಅವರ ನಿರ್ದೇಶನದ ‘ಸೇವಿಂಗ್ ದಿ ಸೇವಿಯರ್’ ಪ್ರದರ್ಶನವಾಗುತ್ತಿದೆ. ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ’ ಎಂದು ಮಾಹಿತಿ ನೀಡುತ್ತಾರೆ ಕುಟ್ಟಿ.
ಈ ಬಾರಿಯ ಚಿತ್ರೋತ್ಸವವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಆ್ಯಕ್ಷನ್ ಏಡ್, ಜೈನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಜತೆಗೂಡಿ ಆಯೋಜಿಸಲಾಗಿದೆ.
11ನೇ ಅಂತರರಾಷ್ಟ್ರೀಯ ಜಲ ಚಿತ್ರೋತ್ಸವ 2017 (ಡಿ. 14ರಿಂದ 16)
ದಿನಾಂಕ ಸಮಯ→ ಸಿನಿಮಾ → ಅವಧಿ → ನಿರ್ದೇಶಕ
ಡಿ. 14 ಮಧ್ಯಾಹ್ನ 12.15 ದಿ ಸೀ ಆಫ್ ಲೈಫ್ 52 ನಿಮಿಷ ಮೋನಿಕಾ ಗೊನ್ಸಾಲ್‌ವೆಸ್, ಡ್ಯಾನಿಯಲ್ ರೋಡ್ರಿಗಸ್
ಮಧ್ಯಾಹ್ನ 2 →ಎಂಪ್ಟಿ ಪ್ಲೇಸ್ →5 ನಿಮಿಷ →ಹೆನ್ರಿ ಮತ್ತು ಕ್ಲಾಡಿಯಾ
ಮಧ್ಯಾಹ್ನ 2.05 →ಜೊಲ್ಮೋಲಿಯಾ–ದಿ ಸೇಕ್ರಡ್ ವಾಟರ್ →54 ನಿಮಿಷ →ಸೈಫುಲ್ ವಾದದ್ ಹಿಲಾಲ್
ಮಧ್ಯಾಹ್ನ 3 →ರಿಸರ್ಜನ್ಸ್: ರಿಸ್ಟೋರಿಂಗ್ ಲೈಫ್ ಅಂಡ್ ಹೋಪ್ ಟು ಬ್ಯಾರೆನ್ ಲ್ಯಾಂಡ್ 30 ನಿಮಿಷ ಅಂಕಿತ್ ಶರ್ಮಾ
ಮಧ್ಯಾಹ್ನ 3.40 →ಸ್ವಿಮ್ಮಿಂಗ್ ಇನ್ ದಿ ಡೆಸರ್ಟ್ →15 ನಿಮಿಷ →ಅಲ್ವರೋ ರಾನ್
ಸಂಜೆ 4.20 →ದಿ ಪ್ರೈಸ್ ಆಫ್ ಒನ್ ಮಿಸ್ಟೇಕ್ →10ನಿಮಿಷ →ಟೊಕ್ಟೋಮುಶ್ ಜೆಖ್ಸೆನ್‍ಬೆ ಊಲು
ಸಂಜೆ 4.30 →ಅಮರ್ತ (ದಿ ಗರ್ಲ್ ಅಂಡ್ ವಾಟರ್) →20 ನಿಮಿಷ →ಬಾಂಬಾಂಗ್ ಐಪೊಂಕ್ ಕೆ.ಎಂ.
ಸಂಜೆ 4.50 →ಎಲಿಮೆಂಟ್ →4 ನಿಮಿಷ
ಸಂಜೆ 4.55 →ಎವ್ರಿ ಡ್ರಾಪ್ ಕೌಂಟ್ಸ್ →1 ನಿಮಿಷ →ಧೀಮಂತ್ ವ್ಯಾಸ್
ಸಂಜೆ5 →ಗಾರ್ಡಿಯನ್ಸ್ ಆಫ್ ದಿ ಏಜಿಯನ್ →1ಗಂಟೆ 25 ನಿಮಿಷ →ಒಮಿರಸ್ ಇವಾಂಜಿಲಿನೊಸ್
ಸಂಜೆ 6.45 →ಸುಂದರ್‌ಬನ್ಸ್: ರೈಸಿಂಗ್ ವಾಟರ್, ಎಬ್ಬಿಂಗ್ ಲೈಫ್ →50 ನಿಮಿಷ →ಧೀರಜ್ ಸಾರ್ಥಕ್
ಸ್ಥಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚರ್ಚ್ ಸ್ಟ್ರೀಟ್, ಪ್ರವೇಶ ಉಚಿತ.ಹೆಸರು ನೋಂದಣಿಗೆ: http://www.movingwatersfilmsfestival.org
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.