ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಮುದ್ರಿಸಿ ಕಡಿಮೆ ಬೆಲೆಗೆ ನೀಡುವ ಯೋಜನೆ ರೂಪಿಸಿದೆ. ಕುವೆಂಪು ಅವರ ಕನ್ನಡ ಸಾಹಿತ್ಯದ ಜೊತೆಗೆ ಇಂಗ್ಲಿಷ್ ಅನುವಾದವೂ ಸೇರಿದಂತೆ 67 ಪುಸ್ತಕಗಳನ್ನು 11 ಸಂಪುಟದಲ್ಲಿ ಹೊರತರಲಾಗಿದೆ. ಹತ್ತು ಸಾವಿರ ಪುಟಗಳಿರುವ ಈ ಸಂಪುಟಕ್ಕೆ ಕರ್ನಾಟಕ ಸರ್ಕಾರವು ಆರ್ಥಿಕ ನೆರವು ನೀಡಿದ್ದೆ. ಇದರ ಒಟ್ಟು ಬೆಲೆ 3,500 ರೂಪಾಯಿ ಆಗಿದ್ದು, ಬಿಡುಗಡೆಯ ದಿನದಂದು 3000 ರೂಪಾಯಿಗೆ ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ. ಈ ಸಂಗ್ರಹ ಸಂಪುಟವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಡುಗಡೆ ಮಾಡಲಿದ್ದಾರೆ.
ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದ ಶ್ರೀರಾಮಾಯಣದರ್ಶನಂ ಗಮಕ ಕಲಾವಿದರು ವಾಚನ ಮತ್ತು ವ್ಯಾಖ್ಯಾನಿಸಿದ ಧ್ವನಿ ಸುರುಳಿ ಮುದ್ರಿಸಲಾಗಿದೆ. ಎಂಪಿ3 ರಚನೆಯಾಗಿದ್ದು `ಅಯೋಧ್ಯ' ಹಾಗೂ `ಕಿಷ್ಕಿಂದಾ' ಸಂಪುಟ ಮಾತ್ರ 50 ಗಂಟೆಗಳ 10 ಡಿವಿಡಿಗಳಲ್ಲಿ ಮುದ್ರಿಸಿ ನೀಡಲಾಗುತ್ತಿದೆ. ನ್ಯಾಯಾಧೀಶರಾದ ಎ.ಜೆ.ಸದಾಶಿವ ಹಾಗೂ ಪ್ರೊ. ಎಂ.ಎಚ್. ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಗಮಕ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಲಹರಿ ರೆಕಾರ್ಡಿಂಗ್ ಕಂಪೆನಿಯು ತಾಂತ್ರಿಕ ಸಲಹೆ ಹಾಗೂ ಡಿವಿಡಿ ಮುದ್ರಿಸಿದ್ದು ಗಮಕ ಪರಿಷತ್ತಿನ ಅಧ್ಯಕ್ಷ ಎ.ಆರ್. ಸತ್ಯನಾರಾಯಣ ಅವರು ಇದರ ನೇತೃತ್ವ ವಹಿಸಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಡಿವಿಡಿ ಬಿಡುಗಡೆ ಮಾಡುವರು.
ಪ್ರತಿ ವರ್ಷ ಕುವೆಂಪು ಅವರ ಜನ್ಮ ದಿನೋತ್ಸವದಂದು `ಕುವೆಂಪು ರಾಷ್ಟ್ರೀಯ ಪುರಸ್ಕಾರ' ನೀಡುವ ಯೋಜನೆಗೆ ಚಾಲನೆ ನೀಡಲಿದ್ದು, ಭಾರತದ ಅಧಿಕೃತ ಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಮೊತ್ತ 5ಲಕ್ಷ ರೂಪಾಯಿ. ಈ ಯೋಜನೆಯ ಪ್ರಾರಂಭಕ್ಕೆ ದಿ. ಎಂ.ಚಂದ್ರಶೇಖರ ಅವರ ನೆನಪಿನಲ್ಲಿ ಅವರ ಮಗ ಎಂ.ಸಿ.ನರೇಂದ್ರ ಅವರು ಆರ್ಥಿಕ ನೆರವು ನೀಡಿದ್ದಾರೆ. 55 ಲಕ್ಷ ರೂಪಾಯಿಗಳ ಠೇವಣಿಯನ್ನಿಟ್ಟು ಅದರಿಂದ ವರ್ಷಕ್ಕೆ 5ಲಕ್ಷ ರೂಪಾಯಿ ದೇಣಿಗೆಯಲ್ಲಿ ಕುವೆಂಪು ಸಾಹಿತ್ಯ ಮತ್ತು ಸಂದೇಶದ ಪ್ರಚಾರವನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಈ ಹಣ ಬಳಕೆಯಾಗಲಿದೆ. ಈ ಯೋಜನೆಗೆ ಸಂಸದ ಡಿ.ಬಿ. ಚಂದ್ರೇಗೌಡ ಚಾಲನೆ ನೀಡಲಿದ್ದಾರೆ.
ಕುವೆಂಪು ಪ್ರತಿಷ್ಠಾನವು ತನ್ನದೇ ಆದ ಸ್ವಂತ ಜಾಲತಾಣವನ್ನು ತೆರೆಯಲಿದ್ದು, ಇದರಲ್ಲಿ ಕುಪ್ಪಳಿಯಲ್ಲಿರುವ ಪ್ರತಿಷ್ಠಾನದ ಮಾಹಿತಿ ಹಾಗೂ ಪ್ರತಿಷ್ಠಾನದ ಚಟುವಟಿಕೆಗಳ ಮಾಹಿತಿ ಲಭ್ಯವಿರುತ್ತದೆ. ಕುವೆಂಪು ಹಾಗೂ ಕುಪ್ಪಳಿಗೆ ಸಂಬಂಧಿಸಿದ ಚಿತ್ರಗಳನ್ನು ಈ ಜಾಲತಾಣವು ಒಳಗೊಂಡಿರುತ್ತದೆ. ನಡೆದಾಡುವ ಚಿತ್ರೀಕರಣದ ಮೂಲಕ ಕವಿಮನೆಯನ್ನು ಈ ಜಾಲತಾಣದ ಮೂಲಕ ನೋಡಬಹುದು. ಜಾಲತಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಚಾಲನೆ ನೀಡಲಿದ್ದಾರೆ.
ಹಿರಿಯ ಸಂಶೋಧಕ ಹಾಗೂ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂಪ ನಾಗರಾಜಯ್ಯ ಅವರು ಬರೆದ ಕುವೆಂಪು ಅವರ ವ್ಯಕ್ತಿ ಮತ್ತು ವ್ಯಕ್ತಿತ್ವ ಕುರಿತ ಪುಸ್ತಕ ಇದಾಗಿದ್ದು ಈಗಾಗಲೇ ಈ ಪುಸ್ತಕ ಇಂಗ್ಲಿಷ್, ಗುಜರಾತಿ, ರಾಜಸ್ತಾನಿ ಭಾಷೆಗಳಲ್ಲಿ ಅನುವಾದವಾಗಿರುತ್ತದೆ. ಇದೀಗ ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗೆ ಅನುವಾದವಾಗಿರುವ ಪುಸ್ತಕಗಳು ಬಿಡುಗಡೆಯಾಗಲಿವೆ. ನೂತನವಾಗಿ ಅನುವಾದಗೊಂಡ ಆವೃತ್ತಿಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಬಿಡುಗಡೆ ಮಾಡಲಿದ್ದಾರೆ.
ಶನಿವಾರ (ಜೂನ್ 29) ಸಂಜೆ 5ಕ್ಕೆ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ಕೊ. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದ ವೇಳೆ ಕುವೆಂಪು ಅವರ ಪುಸ್ತಕಗಳ ಪ್ರದರ್ಶನ ರಿಯಾಯಿತಿ ಮಾರಾಟದ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.