ADVERTISEMENT

ಇದು ಕನ್ನಡದ ಕುಟೀರ

ಬಾಲಚಂದ್ರ
Published 22 ನವೆಂಬರ್ 2016, 19:30 IST
Last Updated 22 ನವೆಂಬರ್ 2016, 19:30 IST
ಇದು ಕನ್ನಡದ ಕುಟೀರ
ಇದು ಕನ್ನಡದ ಕುಟೀರ   

ಹೊರಗಿನಿಂದ ನೋಡಿದರೆ ಸಾದಾ ಸೀದಾ ಮನೆ. ಒಳಗೆ ಕಾಲಿಟ್ಟರೆ, ಕನ್ನಡ ಪ್ರಪಂಚ. ರಾಜ್ಯದ ಹಿರಿಮೆ ನೆನಪಿಸುವ ಅಪೂರ್ವ ಶಿಲ್ಪಗಳ ಚಿತ್ತಾರದ ಜತೆಗೆ ಸಾಲುಸಾಲು ಸಾಹಿತಿಗಳ ಚಿತ್ರ. ಇದಕ್ಕೆ ಇನ್ನಷ್ಟು ರಂಗು ತುಂಬುವಂತಿರುವ ಚಿಕ್ಕ ವೇದಿಕೆ. ಅದರ ಒಳಭಾಗದಲ್ಲಿ ತಳಿರು ತೋರಣಗಳಿಂದ ಅಲಂಕರಿಸಿದ ತಾಯಿ ಭುವನೇಶ್ವರಿಯ ಚಿತ್ರ.

ಮತ್ತಿಕೆರೆಯ ಕನ್ನಡ ಅಭಿಮಾನಿ ರಾಜೇಶ್‌ ನಿವಾಸ ‘ಸಿರಿಸಂಪಿಗೆ’ಯನ್ನು ಅಕ್ಷರರೂಪದಲ್ಲಿ ಹೀಗೆ ವರ್ಣಿಸಬಹುದೇನೋ?

ಪ್ರತಿ ವರ್ಷ ನವೆಂಬರ್ ಬಂದರೆ ಸಾಕು, ಇವರ ಮನೆಯಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಬಂಧು– ಬಾಂಧವರು ಇವರ ಮನೆಯತ್ತ ದಾಂಗುಡಿಯಿಡುತ್ತಾರೆ. ಕನ್ನಡಪರ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಾರೆ. ರಾಜ್ಯೋತ್ಸವ ಹಬ್ಬವನ್ನು ಕಳೆದ 22 ವರ್ಷಗಳಿಂದ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವುದು ಇವರ ವೈಶಿಷ್ಟ್ಯ.

ADVERTISEMENT

ವಿಭಿನ್ನ ಆಚರಣೆ
ರಾಜ್ಯೋತ್ಸವ ಆಚರಣೆಗಾಗಿ ಬಹು ಮುಂಚಿತವಾಗಿಯೇ ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಾರೆ. ಅತಿಥಿಗಳನ್ನು ಗೊತ್ತುಪಡಿಸಿ, ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಕುಟುಂಬದ ಸದಸ್ಯರು ಮತ್ತು ಗೆಳೆಯರ ಬಳಗಕ್ಕೆ ಜವಾಬ್ದಾರಿ ಹಂಚಿಕೆಯಾಗುತ್ತದೆ.

ಹಬ್ಬಕ್ಕಾಗಿ ವಿಶೇಷ ವೇದಿಕೆ ನಿರ್ಮಿಸಿ, ಅದರಲ್ಲಿ ತಾಯಿ ಭುವನೇಶ್ವರಿ ಚಿತ್ರಪಟ ಇರಿಸುತ್ತಾರೆ. ರಾಜ್ಯದ ಏಳಿಗೆಗಾಗಿ ದುಡಿದ ಮಹನೀಯರ ಚಿತ್ರಗಳೂ ಮನೆಯನ್ನು ಅಲಂಕರಿಸುತ್ತವೆ. ಪ್ರತಿ ವರ್ಷ ನ.1ರಂದು ಕುಟುಂಬದ ಸದಸ್ಯರೆಲ್ಲರೂ ಜೊತೆಗೂಡಿ ನಾಡಹಬ್ಬ ಆಚರಿಸುವುದನ್ನು ನೋಡುವುದು ಕಣ್ಣಿಗೆ ಹಬ್ಬ ಎನಿಸುತ್ತೆ.

ಇದೀಗ ‘ಕನ್ನಡ ಕುಟೀರ ಬಳಗ’ ಎಂಬ ಹೊಸ ಹೆಸರಿನೊಂದಿಗೆ ಆಕರ್ಷಕ ವೇದಿಕೆ ನಿರ್ಮಿಸುವ ಕೆಲಸ ನಡೆಯುತ್ತಿದೆ.

ಗಮನ ಸೆಳೆಯುವ ಮಂಟಪಗಳು
ತಾಯಿ ಭುವನೇಶ್ವರಿ ಚಿತ್ರವನ್ನು ಇಡುವುದಕ್ಕಾಗಿಯೇ ವಿಶೇಷ ಮಂಟಪವನ್ನು ರಚಿಸುತ್ತಾರೆ. ಪ್ರತೀ ವರ್ಷವೂ ಯಾವ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನವು ನಡೆಯುತ್ತದೆಯೋ, ಅದಕ್ಕೆ ಪೂರಕವಾಗಿ ಆ ವರ್ಷ ಥರ್ಮಕೋಲ್‌ನಿಂದ ಮಂಟಪ ರಚಿಸುವುದು ವಿಶೇಷ.

ಚಿತ್ರದುರ್ಗದ ಸಾಹಿತ್ಯ ಸಮ್ಮೇಳನ ಕುರುಹಾಗಿ ಕಲ್ಲಿನ ಕೋಟೆ ಪ್ರತಿಕೃತಿ ನಿರ್ಮಿಸಿದ್ದರೆ, ಗದಗದ ಸಾಹಿತ್ಯ ಸಮ್ಮೇಳನದ ನೆನಪಿಗೆ ವೀರನಾರಾಯಣಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದ್ದರು. ಬೆಂಗಳೂರಿನ ಸಾಹಿತ್ಯ ಸಮ್ಮೇಳನ ನಡೆದ ವೇಳೆ ವಿಧಾನಸೌಧದ ಪ್ರತಿಕೃತಿ ನಿರ್ಮಿಸಿದ್ದರೆ, ಗಂಗಾವತಿ ಸಾಹಿತ್ಯ ಸಮ್ಮೇಳನದ ವೇಳೆ ಕುಕನೂರಿನ ಮಹಾಮಾಯಿ ದೇವಸ್ಥಾನ ಪ್ರತಿಕೃತಿ ರಚಿಸಿ ಗಮನ ಸೆಳೆದಿದ್ದರು.

ಯಾವುದೇ ಕಲಾಕೃತಿ ಮಾಡುವ ಮುನ್ನ, ಆ ಬಗ್ಗೆ ಸಾಕಷ್ಟು ಅಧ್ಯಯನ ನಡೆಸುತ್ತಾರೆ. ಅಂತರ್ಜಾಲದಲ್ಲಿ ಈ ವಿಚಾರ ಕುರಿತ ಮಾಹಿತಿ ಕಲೆಹಾಕಿ, ಸ್ನೇಹಿತರ ಜತೆ ಚರ್ಚಿಸುತ್ತಾರೆ. ಕೆಲವೇ ಗಂಟೆಗಳ ಕಾರ್ಯಕ್ರಮವಾದರೂ, ಎಲ್ಲಿಯೂ ಲೋಪವಾಗದಂತೆ ಸಣ್ಣಪುಟ್ಟ ವಿಚಾರಗಳಿಗೂ ಒತ್ತು ನೀಡುತ್ತಾರೆ.
ಕೇವಲ ವೇದಿಕೆಯನ್ನಷ್ಟೇ ನಿರ್ಮಿಸದೇ, ಸುತ್ತಲೂ ಅತ್ಯಂತ ಸುಂದರವಾಗಿ ಅಲಂಕಾರ ಮಾಡುತ್ತಾರೆ. ಒಂದರ್ಥದಲ್ಲಿ ಇಡೀ ಮನೆಯಲ್ಲಿ ಕನ್ನಡದ ಹಿರಿಮೆ ಎದ್ದು ಕಾಣಿಸುವಂತೆ ಅಲಂಕರಿಸುತ್ತಾರೆ.

ನೆನಪಿನ ಕಾಣಿಕೆ
ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ರಾಜ್ಯದ ಸಾಧನೆ ಬಿಂಬಿಸುವ ಶುಭಾಶಯ ಪತ್ರದ ಜತೆಗೆ ಕರ್ನಾಟಕದ ಏಳಿಗೆಗಾಗಿ ದುಡಿದ ಮಹನೀಯರು ಹಾಗೂ ಸಾಹಿತಿಗಳ ಚಿತ್ರವನ್ನು ಒಳಗೊಂಡ ವಿಶೇಷ  ಗಡಿಯಾರವನ್ನು ಸ್ಮರಣಿಕೆಯಾಗಿ ನೀಡಲಾಗುತ್ತದೆ.

ರಾಜ್ಯೋತ್ಸವಕ್ಕಾಗಿ ಉಳಿತಾಯ
ರಾಜೇಶ್‌ ಅವರು ಸಹಕಾರ ಬ್ಯಾಂಕ್‌ನಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಹೇಮಲತಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ.
ನವೆಂಬರ್‌ ತಿಂಗಳಲ್ಲಿ ರಾಜ್ಯೋತ್ಸವ ಆಚರಿಸಬೇಕೆಂಬ ಕಾರಣಕ್ಕಾಗಿ ಪ್ರತಿ ತಿಂಗಳು ತಲಾ ₹ 1 ಸಾವಿರ ತೆಗೆದಿಡುತ್ತಾರೆ. ಹೀಗೆ ಸಂಗ್ರಹವಾದ ಮೊತ್ತದ ಜತೆಗೆ ಒಂದಿಷ್ಟು ಹೆಚ್ಚುವರಿ ಹಣ ಸೇರಿಸಿ ಹಬ್ಬ ಆಚರಿಸುವುದು ವಿಶೇಷ.

ಸಂಪರ್ಕ ಸಂಖ್ಯೆ– 9844042817.

* ನನ್ನ ತಂದೆ ವೆಂಕಟರಮಣ ಬಿಇಎಲ್‌ನಲ್ಲಿ ನೌಕರರಾಗಿದ್ದರು. ಸಂಸ್ಥೆಯಲ್ಲಿ ರಾಜ್ಯೋತ್ಸವವನ್ನು ನೌಕರರೆಲ್ಲರೂ ಸೇರಿ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಕಾರ್ಯಕ್ರಮಕ್ಕೆ ತಂದೆಯ ಜತೆಗೆ ಹೋಗುತ್ತಿದ್ದೆ. ಆಗಲೇ ನನಗೆ ಕನ್ನಡದ ಸೇವೆ ಮಾಡಬೇಕೆಂಬ ತುಡಿತ ಮೂಡಿತು.

–ರಾಜೇಶ್‌, ಎಂಎಸ್‌ಆರ್‌ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.