ADVERTISEMENT

ಒಮ್ಮೆ ನೋಡಿರಣ್ಣ ಕುರುಡುಮಲೆಯಾ...

ಸುತ್ತಾಣ

ಸುನಿಲ್‌ ಕುಮಾರ್‌
Published 20 ಮಾರ್ಚ್ 2015, 19:30 IST
Last Updated 20 ಮಾರ್ಚ್ 2015, 19:30 IST

ಬೆಟ್ಟದ ತಪ್ಪಲಿನಲ್ಲಿರುವ ಸುಂದರ ದೇವಾಲಯ, ಸದಾ ಬೀಸುವ ತಂಗಾಳಿ, ಕಪ್ಪು ಶಿಲೆಯಲ್ಲಿ ಕಡೆದ ಗಣಪನ ಮೂರ್ತಿಯ ಸ್ನಿಗ್ಧ ಚೆಲುವು... –ಇದು ಕುರುಡುಮಲೆ ಕ್ಷೇತ್ರದಲ್ಲಿ ನಿತ್ಯ ಕಂಡು ಬರುವ ನೋಟ. ಕೋಲಾರ ಜಿಲ್ಲೆ ಮುಳಬಾಗಿಲಿನಿಂದ 10 ಕಿ.ಮೀ. ದೂರದಲ್ಲಿರುವ ದೇವಾಲಯವು ಅನೇಕ ವರ್ಷಗಳಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಚೋಳರ ಕಾಲದ ದೇವಾಲಯಗಳಿರುವ ಈ ಕ್ಷೇತ್ರ ಕುರುಡುಮಲೆ ಗಣಪನ ಸನ್ನಿಧಿಯೆಂದೆ ಪ್ರಸಿದ್ಧಿ  ಪಡೆದಿದೆ. ತ್ರಿಮೂರ್ತಿಗಳು ತ್ರಿಪುರಾಸುರನ ಸಂಹಾರಕ್ಕಾಗಿ ಇಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದರು ಹಾಗೂ ತ್ರೇತಾ ಯುಗ, ದ್ವಾಪರ ಯುಗಗಳಲ್ಲಿ ದೇವಾನುದೇವತೆಗಳೂ ಇಲ್ಲಿನ ವಿನಾಯಕ ಮೂರ್ತಿಯನ್ನು ಪೂಜಿಸುತ್ತಿದ್ದರು ಎಂಬ ಪ್ರತೀತಿ ಇದೆ.

ಕುರುಡುಮಲೆ ಬಯಲು ಗಣಪನಿಗೆ ವಿಜಯನಗರ ಅರಸರ ಕಾಲದಲ್ಲಿ ಈಗಿನ ದೇವಾಲಯ ನಿರ್ಮಿಸಲಾಯಿತು. ಮುಂದೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಅವರು ದೇಗುಲವನ್ನು ಅಭಿವೃದ್ಧಿಪಡಿಸಿದ್ದರು. ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪ  ವಿಗ್ರಹವನ್ನು 10 ಅಡಿ ಎತ್ತರದ ಕಪ್ಪು ಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ.

ಗಣಪನ ದೇವಸ್ಥಾನದ ಪಕ್ಕದಲ್ಲಿರುವ ಚೋಳರ ಕಾಲಕ್ಕೆ ಸೇರಿದ ಕುರುಡುಮಲೆ ಸೋಮೇಶ್ವರ ದೇವಸ್ಥಾನದ ವಾಸ್ತುಶಿಲ್ಪ ಬೇಲೂರು, ಹಳೇಬೀಡು ದೇವಾಲಯಗಳ ಶೈಲಿಯನ್ನು ಹೋಲುವಷ್ಟು ಕಲಾತ್ಮಕವಾಗಿದೆ. ಇದರ ಮುಖ್ಯ ದ್ವಾರದ ಬಲಭಾಗದಲ್ಲಿ ಪಂಜರದಲ್ಲಿರುವ ಬಯಲು ಗಣಪನನ್ನು ನೋಡಬಹುದು.

ಗರ್ಭಗುಡಿ, ನವರಂಗ, ಮುಖಮಂಟಪ, ಸುಖನಾಸಿಗಳಿರುವ ವಿಶಾಲ ದೇವಾಲಯದ ಒಳಪ್ರಕಾರದಲ್ಲಿ ಅಷ್ಟಮೂಲೆಗಳಿರುವ ಶಿಲಾ ಸ್ತಂಭಗಳ ಮೇಲಿನ ಚೋಳರಾಜ, ಜಕಣಾಚಾರಿ ಹಾಗೂ ದೇವತೆಗಳ ಉಬ್ಬುಚಿತ್ರಗಳು ಕಣ್ಮನ ಸೆಳೆಯುತ್ತವೆ. ತ್ರಿಮೂರ್ತಿಗಳೇ ಈ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಿದರು, ದೇವಾಲಯಕ್ಕೆ ಕಾವಲಂತಿರುವ ಬೆಟ್ಟದಲ್ಲಿ ಕೌಂಡಿನ್ಯ ಮುನಿಗಳು ತಪಸ್ಸು ಮಾಡಿದ್ದರು. ತ್ರೇತಾಯುಗದಲ್ಲಿ ಶ್ರೀರಾಮಚಂದ್ರ, ದ್ವಾಪರಯುಗದಲ್ಲಿ ಶ್ರೀಕೃಷ್ಣ, ಮಹಾ ಭಾರತದಲ್ಲಿ ಪಾಂಡವರು ಪೂಜೆ ಮಾಡಿದ್ದರೆಂಬುದು ಇಲ್ಲಿನ ಪ್ರತೀತಿ.

ಗಣೇಶ ಚತುರ್ಥಿಯ ಮಾರನೇ ದಿನ ಇಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಗಣೇಶ ಹಬ್ಬದ ದಿನಗಳಲ್ಲಿ ಆಂಧ್ರ ಪ್ರದೇಶ, ತಮಿಳುನಾಡು

ರಾಜ್ಯದಿಂದಲೂ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ಇದು ಸಂಪೂರ್ಣ ಕಲ್ಲುಗಳಿಂದ ಕೆತ್ತಿ ನಿರ್ಮಿಸಲಾಗಿದ್ದರೂ ತಳಪಾಯವನ್ನು ಹೊಂದಿಲ್ಲ. ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಕೌಂಡಿನ್ಯ ನದಿ ಹುಟ್ಟುತ್ತದೆ. ಕುರುಡುಮಲೆ ತಪ್ಪಲ್ಲಿನಲ್ಲಿ ಜೀವಿಸುತ್ತಿದ್ದ ಕೌಂಡಿನ್ಯ ಮಹರ್ಷಿಯ ಹೆಸರು ನದಿಗೆ ಬಂದಿದೆ ಎಂಬುದು  ಪ್ರತೀತಿ.

ಪಂಜರದಲ್ಲಿ ಗಣಪನ ಬಂಧನ
ಗಣೇಶನ ದರ್ಶನ ಪಡೆದು ಹೊರಬಂದರೆ, ಕೊಂಚ ದೂರದಲ್ಲೆ ಇರುವ ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪಂಜರದಲ್ಲಿರುವ ಕಲ್ಲಿನ ಗಣಪ ಕಣ್ಣಿಗೆ ಬೀಳುತ್ತಾನೆ. ಈ ಮೂರ್ತಿಗೆ ಕಲ್ಲಿನಿಂದ ಹೊಡೆದರೆ ನಾದ ಹೊಮ್ಮುತ್ತಿತ್ತು. ಹೀಗಾಗಿ ದೇವಸ್ಥಾನಕ್ಕೆ ಭೇಟಿ ನೀಡಿದವರು ಮೂರ್ತಿಗೆ ಕಲ್ಲಿನಿಂದ ಹೊಡೆಯುತ್ತಿದ್ದರು. ಹೀಗಾಗಿ ಮೂರ್ತಿಯ ಮೈಯೆಲ್ಲ ಕುಳಿಬಿದ್ದಿವೆ. 
ಅದನ್ನು ತಡೆಯಲು  ಮೂರ್ತಿಯ ಸುತ್ತ ಕಬ್ಬಿಣದ ಪಂಜರವನ್ನು ನಿರ್ಮಿಸಲಾಗಿದೆ.

ಬೆಟ್ಟದ ಮಧ್ಯದಲ್ಲಿ ಗುಹೆ
ಗಣಪನ ದೇವಾಲಯದ ಪಕ್ಕದ ಬೆಟ್ಟದಲ್ಲಿರುವ ಗುಹೆಯಲ್ಲಿ ಕೌಂಡಿನ್ಯ ಮಹರ್ಷಿ ತಪ್ಪಸ್ಸು ಮಾಡುತ್ತಿದ್ದರೆಂದು, ಈಗಲೂ ಕೆಲವೊಮ್ಮೆ ಅವರು ಪಠಿಸುವ ಮಂತ್ರಗಳು ಅಲ್ಲಿಗೆ ಭೇಟಿ ನೀಡಿ ಧ್ಯಾನದಲ್ಲಿ ಕುಳಿತವರಿಗೆ ಕೇಳುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇಲ್ಲಿ ಕೌಂಡಿನ್ಯ ಆಶ್ರಮವಿದ್ದು, ಕೌಂಡಿನ್ಯ ಮಹರ್ಷಿಯ ವಿಗ್ರಹದ ದರ್ಶನ ಮಾಡಬಹುದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.