ADVERTISEMENT

ಓದಿ ಓದಿಸಿ ಅದನ್ನೇ ಸುಖಿಸಿ...

ಕೇಶವರೆಡ್ಡಿ ಹಂದ್ರಾಳ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಓದಿ  ಓದಿಸಿ  ಅದನ್ನೇ  ಸುಖಿಸಿ...
ಓದಿ ಓದಿಸಿ ಅದನ್ನೇ ಸುಖಿಸಿ...   

ನಾನು ಈಚೆಗೆ ಗೆಳೆಯರೊಬ್ಬರ ಮನೆಗೆ ಹೋಗಿದ್ದೆ. ಗಂಡ–ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಬೆಳಿಗ್ಗೆ ಕೆಲಸಕ್ಕೆ ಹೊರಡುವ ಆತುರ, ಸಂಜೆ ಮನೆಗೆ ಬಂದ ಮೇಲೆ ಟೀವಿ ನೋಡುವ ಕಾತರ. ಇನ್ನು ಓದಲು–ಓದಿಸಲು ಸಮಯವೆಲ್ಲಿದೆ?
‘ನನ್ನ ಮಗಳು ಸದಾ ಮೊಬೈಲ್‌ಗೆ ಅಂಟಿಕೊಂಡೇ ಇರ್ತಾಳೆ. ಊಟ ಮಾಡುವಾಗಲೂ ಅದನ್ನು ಕೆಳಗಿಡೋಲ್ಲ’ ಎಂದು ಗೆಳೆಯನ ಹೆಂಡತಿ ದೂರಿದರು. ಆದರೆ ಅದರಲ್ಲಿ ಹೆಮ್ಮೆಯೇ ಇಣುಕುತ್ತಿತ್ತು.

ಬೆಂಗಳೂರಿನಲ್ಲಿ ನಾನು ನೋಡಿರುವ ಶೇ 60ರಷ್ಟು ಕುಟುಂಬಗಳು ಹೀಗೆಯೇ ಇವೆ. ಶೇ 40ರಷ್ಟು ಕುಟುಂಬಗಳಲ್ಲಿ ಮಹಿಳೆಯರು ದುಡಿಯಲು ಹೊರಗೆ ಹೋಗುವುದಿಲ್ಲ. ಆದರೆ ಅವರ ಮಕ್ಕಳೂ ಹೀಗೆಯೇ ಮೊಬೈಲ್‌ ಹಿಡಿದು ಕೂರುತ್ತಾರಂತೆ.

ಮೊಬೈಲ್‌– ಟ್ಯಾಬ್‌ ಹಿಡಿದು ಎಂಜಾಯ್ ಮಾಡುವ ಮಕ್ಕಳ ಕೈಗಳು ಪುಸ್ತಕ ಹಿಡಿದು ಯಾಕೆ ಖುಷಿಪಡುತ್ತಿಲ್ಲ? ಮಕ್ಕಳು ಪುಸ್ತಕ ಓದುವಂತೆ ಮಾಡುವುದು ಹೇಗೆ? ನನ್ನನ್ನು ತೀವ್ರವಾಗಿ ಕಾಡಿದ ಎರಡು ಪ್ರಶ್ನೆಗಳು ಇವು. ನಾನು ಕಂಡುಕೊಂಡ ಉತ್ತರಗಳು ಹೀಗಿವೆ...

ADVERTISEMENT

ಕುಟುಂಬಕ್ಕೆ ಅಂತ ಸಮಯ ಇರಲಿ: ಅಪ್ಪ–ಅಮ್ಮ, ಮಗ–ಮಗಳು ಇರುವ ನಾಲ್ಕು ಜನರ ಕುಟುಂಬ ನಿಮ್ಮದು ಎಂದುಕೊಳ್ಳೋಣ. ನೀವೂ ನಾಲ್ಕೂ ಜನರು ದಿನದಲ್ಲಿ ಎರಡು ಬಾರಿಯಾದರೂ ಕೂಡಿ ಕಳೆಯುವ ಅವಧಿ ನಿಗದಿ ಮಾಡಿಕೊಳ್ಳಿ. ಬೆಳಿಗ್ಗೆ ಧಾವಂತ ಆಗಲ್ಲ ಎಂದರೆ ಕಾಫಿ ಕುಡಿಯುವ ಐದು ನಿಮಿಷ ಪರಸ್ಪರ ಮಾತನಾಡಿ. ಈ ಅವಧಿಯಲ್ಲಿ ದಿನಪತ್ರಿಕೆ ನಿಮ್ಮ ಕೈಲಿದ್ದರೆ ಸಹಜವಾಗಿಯೇ ಮಕ್ಕಳ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ರಾತ್ರಿ ಊಟ ಒಟ್ಟಿಗೆ ಮಾಡಿ. ಈ ಅವಧಿಯಲ್ಲಿ ನೀವು ಓದಿದ ಪುಸ್ತಕದ ಬಗ್ಗೆ ಪ್ರಸ್ತಾಪ ಮಾಡಿ. ಮಕ್ಕಳಿಗೆ ಆಸಕ್ತಿ ಹುಟ್ಟುತ್ತದೆ.

ನೀವು ಮೊದಲು ಓದಿ: ಅಪ್ಪ ಅಮ್ಮನಿಗೆ ಓದುವ ಹವ್ಯಾಸ ಇಲ್ಲದಿದ್ದಾಗ ಮಕ್ಕಳಿಂದ ಅದನ್ನು ನಿರೀಕ್ಷಿಸುವುದು ಹೇಗೆ? ಪ್ರತಿದಿನ ಒಂದು ದಿನಪತ್ರಿಕೆ ಓದುವ, ಒಂದಾದರೂ ಪುಸ್ತಕ ತಿರುವಿಹಾಕುವ ಹವ್ಯಾಸ ಬೆಳೆಸಿಕೊಳ್ಳಿ. ನಿಮ್ಮನ್ನು ನೋಡಿ ನಿಮ್ಮ ಮಕ್ಕಳು ಕಲಿಯುತ್ತವೆ.
ಮೊಬೈಲ್‌ ಬಳಸದ ಅವಧಿ: ದಿನದ ನಿರ್ದಿಷ್ಟ ಅವಧಿಯಲ್ಲಿ ಮೊಬೈಲ್ ಬಳಸುವುದಿಲ್ಲ ಎಂದು ಘೋಷಿಸಿ. ಅದನ್ನು ಕಡ್ಡಾಯವಾಗಿ ಜಾರಿಗೆ ತನ್ನಿ. ಮನೆ ಹೇಗೆ ಬದಲಾಗುತ್ತೆ ಎಂಬುದನ್ನು ಗಮನಿಸಿ. ನೀವು ಮೊಬೈಲ್‌ಗೆ ಅಂಟಿಕೊಳ್ಳುತ್ತಿಲ್ಲ, ನಿಮಗೆ ಅದು ರುಚಿಸುತ್ತಿಲ್ಲ ಎಂದರೆ ನಿಮ್ಮ ಮಕ್ಕಳೂ ಅದರಿಂದ ದೂರ ಉಳಿಯುತ್ತಾರೆ.

ಟೈಂ ಇಲ್ಲ ಅನ್ನೋದು ನೆಪ: ‘ಇಡೀ ದಿನ ಹೇಗೆ ಕಳೆಯುತ್ತೋ ಗೊತ್ತೇ ಆಗಲ್ಲ. ಓದೋಕೆ ಟೈಂ ಸಿಗಲ್ಲ’ ಎಂದೂ ಅನೇಕರು ಹೇಳುತ್ತಾರೆ. ನನ್ನ ಪ್ರಕಾರ ಇದು ನೆಪಮಾತ್ರ. ಓದುವ ಮನಸ್ಸಿದ್ದರೆ ಸಮಯ ಸಿಕ್ಕೇ ಸಿಗುತ್ತೆ.

ಪುಸ್ತಕಗಳು ಮಕ್ಕಳ ಕೈಗೆ ಸಿಗುವಂತಿರಲಿ: ಮಕ್ಕಳ ಕೈಗೆ ಸಿಕ್ಕರೆ ಪುಸ್ತಕಗಳು ಹಾಳಾಗುತ್ತವೆ ಎಂದು ಕೆಲವರು ಅವನ್ನು ಅತಿ ಜೋಪಾನ ಮಾಡುತ್ತಾರೆ. ಇದು ಸಲ್ಲದು. ನಿಮ್ಮ ಊಟದ ಮೇಜು, ಮಲಗುವ ಮಂಚ, ಡ್ರೆಸಿಂಗ್‌ ರೂಂ ಹೀಗೆ ಎಲ್ಲ ಕಡೆ ಪುಸ್ತಕಗಳು ಇರಬೇಕು. ನೀವು ಓದಿದ ಪುಸ್ತಕದ ಬಗ್ಗೆ, ಅದರಲ್ಲಿರುವ ವಿಷಯಗಳ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಿಳಿಹೇಳಿ, ‘ನೋಡೋ ಪುಟ್ಟ ಈ ಪುಸ್ತಕ ಚೆನ್ನಾಗಿದೆ’ ಅಂತ ಅವನ ಕೈಗಿಡಿ. ಆ ಕ್ಷಣಕ್ಕೆ ಮಗು ಆ ಪುಸ್ತಕ ಓದದಿದ್ದರೂ ಅದರ ಬಗ್ಗೆ ಪ್ರೀತಿಯಂತೂ ಹುಟ್ಟುತ್ತದೆ. ನಿಧಾನವಾಗಿ ಮುಂದೆಂದಾದರೂ ಓದುತ್ತದೆ.

ಯಾವುದು ಓದಬೇಕು: ‘ಸಿಲಬಸ್ ಹೊರೆಯೇ ಸಿಕ್ಕಾಪಟ್ಟೆ ಇರುತ್ತೆ. ಇನ್ನು ಇತರ ಪುಸ್ತಕಗಳನ್ನು ಓದಿ ಆಗಬೇಕಾದ್ದು ಏನು?’ ಎಂದು ಅನೇಕರು ಕೇಳುತ್ತಾರೆ. ಇಂಥವರಿಗೆ ನಾನು ಹೇಳುವುದು ಇಷ್ಟೇ. ‘ಪಠ್ಯದ ಅಭ್ಯಾಸ ತಪ್ಪಿಸಬೇಡಿ. ಆದರೆ ದಿನದಲ್ಲಿ ಕನಿಷ್ಠ ಅರ್ಧಗಂಟೆಯಾದರೂ ಮಕ್ಕಳಿಂದ ಸೃಜನಶೀಲ ಕೃತಿಗಳನ್ನು ಓದಿಸಿ. ಅವರ ಮನೋವಿಕಾಸಕ್ಕೆ ಅವಕಾಶ ಮಾಡಿಕೊಡಿ.

ಯಾವ ವಯಸ್ಸು ಸೂಕ್ತ: ನನ್ನನ್ನು ಕೇಳಿದರೆ ಎಲ್ಲ ವಯಸ್ಸೂ ಸೂಕ್ತವೇ. ಚಿಕ್ಕ ವಯಸ್ಸಿನ ಮಗುವಿಗೆ ಓದಲು ಬರುವುದಿಲ್ಲವೇ? ನೀವು ಅದರ ಪಕ್ಕ ಕುಳಿತು ಓದಿ ಹೇಳಿ. ಮಗುವಿಗೆ ಅಕ್ಷರ– ಕಾಗುಣಿತ ಗುರುತಿಸುವ ಸಾಮರ್ಥ್ಯ ಬಂದ ನಂತರ ದಪ್ಪ ಅಕ್ಷರಗಳ– ಬಣ್ಣದ ಚಿತ್ರಗಳು ಇರುವ ಕಥೆ ಪುಸ್ತಕಗಳನ್ನು ತಂದುಕೊಟ್ಟು ಜೊತೆಯಲ್ಲಿ ಕುಳಿತು ಓದಿಸಿ. ಮಗು ತಿಣುಕಾಡದೇ ಓದಬಲ್ಲದು ಎಂಬ ವಿಶ್ವಾಸ ಬಂದ ನಂತರ ಸೃಜನಶೀಲ ಕೃತಿಗಳನ್ನು ತಂದುಕೊಡಿ. ಒಂದೇ ಪುಸ್ತಕವನ್ನು ಇಬ್ಬರೂ ಓದಿ, ಮನೆಯಲ್ಲಿ ಚರ್ಚಿಸಿ. ಹೈಸ್ಕೂಲ್‌ನಿಂದ ಮೊದಲ ಪಿಯುಸಿಯ ಅವಧಿ ಮಕ್ಕಳ ಬದುಕಿನ ಚಿನ್ನದ ಕಾಲ. ಈ ಅವಧಿಯಲ್ಲಿ ಮಗುವಿಗೆ ಓದುವ ಆಸೆ ಇರುವಂತೆ ಮಾಡುವುದು ಹೆತ್ತವರ ಕರ್ತವ್ಯ.

ಬರೆಯಲು ಪ್ರೋತ್ಸಾಹಿಸಿ: ಮಗುವಿನ ಅನುಭವಗಳನ್ನು ಪ್ರಬಂಧದ ರೂಪದಲ್ಲಿ ಬರೆಯಲು ಪ್ರೋತ್ಸಾಹಿಸಿ. ಓದು ಅದರ ಕಲ್ಪನೆಯನ್ನು ಹಿಗ್ಗಿಸಿದಂತೆ ಬರಹ ಅದರ ಸೃಜನಶೀಲತೆಯನ್ನು ವಿಸ್ತರಿಸುತ್ತದೆ. ಮುಖ್ಯವಾಗಿ ಓದುವುದೂ ಒಂದು ಸುಖ ಎನ್ನುವುದನ್ನು ನೀವು ಮನಗಾಣಿ, ನಿಮ್ಮ ಮಗುವಿಗೂ ಮನಗಾಣಿಸಿ.
(ಲೇಖಕರು ಕನ್ನಡದ ಖ್ಯಾತ ಕತೆಗಾರರು) (ನಿ: ಡಿ.ಎಂ.ಘನಶ್ಯಾಮ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.