ನೀನಾಸಮ್ ರೆಪರ್ಟರಿಯ ಈ ಸಲದ ತಿರುಗಾಟದ ನಾಟಕ ‘ಕಾಲಂದುಗೆಯ ಕತೆ’.
ಇದು ಇಳಂಗೋ ಅಡಿಗಳು ನಾಲ್ಕನೆಯ ಶತಮಾನದಲ್ಲಿ ರಚಿಸಿದ ‘ಶಿಲಪ್ಪದಿಕಾರಂ’ ಕಾವ್ಯದ ನಾಟಕ ರೂಪ. ಅದನ್ನು ನಾಟಕಕ್ಕೆ ರೂಪಾಂತರಿಸಿದವರು ಎಚ್.ಎಸ್.ಶಿವಪ್ರಕಾಶ್, ನಿರ್ದೇಶನ ಬಿ.ಆರ್. ವೆಂಕಟರಮಣ ಐತಾಳ ಅವರದು.
ಚೋಳರ ಕಾವೇರಿ ಪಟ್ಟಣದ ಶ್ರೀಮಂತ ವರ್ತಕ ಕೋವಲನ್. ಕನ್ನಗಿ ಅವನ ಮಡದಿ. ಅವಳೂ ಸಹ ಅಷ್ಟೇ ಶ್ರೀಮಂತ ಕುಟುಂಬದಿಂದ ಬಂದವಳು. ಗಂಡನಿಗೆ ಪ್ರೀತಿಯ ಮಡದಿ. ಹೆಂಡತಿಯೊಡನೆ ಇನ್ನಿಲ್ಲದ ಪ್ರೇಮದಿಂದಿದ್ದ ಕೋವಲನ್‌ನ ಮನಸೆಳೆಯುವ ಮಾಧವಿ ಎಂಬಾಕೆ ಚೋಳರಾಜನ ಆಸ್ಥಾನ ನರ್ತಕಿ.
ಅವಳ ಚೆಲುವಿಗೆ ಕೋವಲನ್ ಸಂಪೂರ್ಣವಾಗಿ ಸೋಲುತ್ತಾನೆ. ಮನೆ, ವ್ಯಾಪಾರ, ಮಡದಿ ಎಲ್ಲವನ್ನೂ ಬಿಟ್ಟು ಅವಳ ಜೊತೆ ಇದ್ದು ಬಿಡುತ್ತಾನೆ. ಅವನ ಆಸ್ತಿ, ಹಣ, ವ್ಯಾಪಾರ ಹಾಳಾದ ಮೇಲೆ ಮರಳಿ ಹೆಂಡತಿಯ ಬಳಿ ಬರುತ್ತಾನೆ. ಹೊಸ ಬದುಕು ಕಟ್ಟಿಕೊಳ್ಳಲು ಅವರು ಮಧುರೆಗೆ ಬರುತ್ತಾರೆ. ಅಲ್ಲಿ ವ್ಯಾಪಾರ ಆರಂಭಿಸಲು ಬಂಡವಾಳಕ್ಕೆ ಹಣವಿಲ್ಲದೆ, ಕನ್ನಗಿಯ ಒಂದು ಕಾಲಂದುಗೆ ಮಾರಿ ಹಣ ಜೋಡಿಸಲು ಕೋವಲನ್ ಆಸ್ಥಾನದ ಚಿನ್ನಾಭರಣ ಆಚಾರಿಯ ಬಳಿ ಹೋಗುತ್ತಾನೆ.
ಏನೇನೋ ಆಗಿ ಅದೇ ವಿನ್ಯಾಸ ಇದ್ದ ರಾಣಿಯ ಕಾಲಂದುಗೆ ಕದ್ದ ಆರೋಪ ಕೋವಲನ್ ತಲೆ ಮೇಲೆ ಬರುತ್ತದೆ. ಯಾವುದೇ ವಿಚಾರಣೆಯಿಲ್ಲದೆ, ಅರೋಪಿಗೆ ತನ್ನ ನಿರಪರಾಧಿತನವನ್ನು ಸಾಬೀತುಪಡಿಸಿಕೊಳ್ಳುವ ಒಂದು ಅವಕಾಶವನ್ನೂ ಕೊಡದೆ ರಾಜ ಅವನ ಜೀವ ತೆಗೆಸುತ್ತಾನೆ.
ಆಗ ಸಿಡಿದೇಳುತ್ತಾಳೆ ಕನ್ನಗಿ. ಒಂದು ಕೈಯಲ್ಲಿ ಪತಿಯ ರುಂಡ, ಇನ್ನೊಂದು ಕೈಯಲ್ಲಿ ಕಾಲಂದುಗೆ ಹಿಡಿದುಕೊಂಡು, ತಲೆ ಕೂದಲು ಬಿರಿ ಹೊಯ್ದುಕೊಂಡು, ಸಾಕ್ಷಾತ್ ಕಾಳಿಯಂತೆ ರಾಜನ ಆಸ್ಥಾನಕ್ಕೆ ಬರುತ್ತಾಳೆ. ಅಲ್ಲಿ ತನ್ನ ಗಂಡನ ಮೇಲಿನ ಆರೋಪವನ್ನು ನಿರಾಕರಿಸುವುದಷ್ಟೇ ಅಲ್ಲದೆ, ಅವನ ನಿರಪರಾಧಿತ್ವವನ್ನು ಸಾಬೀತು ಸಹ ಮಾಡುತ್ತಾಳೆ.
‘ಮಧುರೈ ಸ್ಮಶಾನವಾಗಲಿ, ಪ್ರಜೆಗಳು ಒಬ್ಬರನ್ನೊಬ್ಬರು ಬೇಟೆಯಾಡಿಕೊಂಡು ಸಾಯಲಿ, ಅರಮನೆ ಪಾಳುಬೀಳಲಿ’ ಎಂದು ಶಾಪ ಕೊಡುತ್ತಾಳೆ.
ಹೆಣ್ಣೊಬ್ಬಳ ಕಣ್ಣೀರಿನ ಶಾಪಕ್ಕೆಒಂದು ಇಡೀ ಸಾಮ್ರಾಜ್ಯ ಹಾಗೆ ಕುಸಿದು ಬೀಳುವ ಕಥೆ ‘ಶಿಲಪ್ಪದಿಕಾರಂ’.
ಈ ಕತೆ ರಂಗದ ಮೇಲೆ ಬಂದಾಗ ರಂಗಪರಿಕರಗಳ ಪ್ರಯೋಗ ಅತ್ಯಂತ ಸುಂದರವಾಗಿ, ಕಣ್ಣಿಗೆ ದೃಶ್ಯಕಾವ್ಯವಾಗಿ ಮೂಡಿ ಬಂದಿದೆ. ಬಟ್ಟೆಯ ಪಟಗಳು, ಅವುಗಳ ವರ್ಣ ವೈಭವ ರಂಗವನ್ನು ರಂಗೇರಿಸುತ್ತವೆ, ಹಾಗೆಯೇ ಹಾಡುಗಳೂ ಸಹ. ದೃಶ್ಯ ಸಂಯೋಜನೆ ಸೊಗಸಾಗಿ ಬಂದಿದೆ. ಆದರೆ ನಾಟಕದ ಉದ್ದವೇ ಅದಕ್ಕೆ ಒಂದು ಹೊರೆಯಾಗಿದೆ.
ಉದ್ದ ತುಂಬಲು ಬಳಸಿದ ಎಷ್ಟೋ ದೃಶ್ಯಗಳು ನಾಟಕದ ಒಟ್ಟು ಭಾವವನ್ನು ತೆಳುವಾಗಿಸಿಬಿಡುತ್ತವೆ. ಇಲ್ಲಿನ ಬಹಳಷ್ಟು ಪಾತ್ರಗಳಿಗೆ ತಮ್ಮ ಪಾತ್ರದ ಲಯವನ್ನು, ಕೇಂದ್ರವನ್ನು ಗಟ್ಟಿಯಾಗಿ ಪೋಷಿಸುವ ಸಾಮರ್ಥ್ಯವೇ ಇಲ್ಲ. ಇದರಿಂದ ತಪ್ಪಿಸಿಕೊಂಡ ಒಂದು ಪಾತ್ರ ಕನ್ನಗಿಯದು. ಆ ಪಾತ್ರದ ಪಾತ್ರಪೋಷಣೆ ಅದ್ಭುತವಾಗಿ ಬಂದಿದೆ.
ಕಾಲಂದುಗೆ ಕೈಲಿ ಎತ್ತಿ ಹಿಡಿದು ‘ಮಧುರೆ ಮಣ್ಣಾಗಿ ಹೋಗಲಿ’ ಎಂದು ಆಕೆ ಶಾಪ ಕೊಟ್ಟಾಗ ನೋಡುವವರಿಗೆ ಅಕ್ಷರಶಃ ರೋಮಾಂಚನವಾಗುತ್ತದೆ. ಅವಳ ಆ ಸಿಟ್ಟು ನಮ್ಮನ್ನು ಅಲ್ಲಾಡಿಸಿಬಿಡುತ್ತದೆ. ಆದರೆ ಅವಳ ಸಿಟ್ಟನ್ನು ತೋರಿಸಿದಷ್ಟು ಪರಿಣಾಮಕಾರಿಯಾಗಿ ಗಂಡನನ್ನು ಕಳೆದುಕೊಂಡ ಅವಳ ಸಂಕಟವನ್ನು ತೋರಿಸಿಲ್ಲ.
ಗಂಡ ಇನ್ನೊಬ್ಬಳ ಬಳಿ ಇದ್ದಾಗ ಈ ಹೊಸ ಮದುವಣಗಿತ್ತಿ ಸಂಕಟ ಪಡುವುದು ದೀಪ ಹಚ್ಚಲೂ ಎಣ್ಣೆ ಇಲ್ಲ ಎಂದು. ಮತ್ತೆ ಸ್ವಲ್ಪ ಕಾಲದ ನಂತರ ಗಂಡ ಹಿಂದಿರುಗಿದಾಗ ಮನೆಯಲ್ಲಿ ದೀಪ ಹಚ್ಚಲು ಎಣ್ಣೆ ಇಲ್ಲ ಎಂದ ಅದೇ ಹೆಣ್ಣು ದೇವರಿಗೆ ತುಪ್ಪದ ದೀಪ ಹಚ್ಚಿ, ಹಾಲನ್ನು ನೈವೇದ್ಯ ಮಾಡಿ ಬರುತ್ತೇನೆ ಎಂದು ಒಳಗೆ ಹೋಗುತ್ತಾಳೆ.
ಅದೇ ರೀತಿ ಕೋವಲನ್ ಮಾಧವಿಯನ್ನು ಬಿಟ್ಟಾಗ ಅವಳು ಗರ್ಭಿಣಿ ಎಂದಿಟ್ಟುಕೊಂಡರೂ ಆ ನಂತರ ಆಕೆಯ ತಾಯಿ ಅವಳನ್ನು ಕುಲಕಸುಬು ಮುಂದುವರೆಸಲು ಪ್ರೇರೇಪಿಸುವುದು, ಮಾಧವಿ ನಿರಾಕರಿಸುವುದು, ತಾಯಿ ಸಾಯುವುದು, ನಿಜಕ್ಕೂ ಪ್ರೇಕ್ಷಕರ ಪಾಲಿಗೂ ವಿಪ್ರಲಂಬವಾದ ವಿರಹದ ದೃಶ್ಯಗಳು, ಆಮೇಲೆ ಕನ್ನಗಿ ಕೋವಲನ್ ಮಧುರೆಗೆ ಸೇರುವುದು, ಅಲ್ಲಿ ಕೋವಲನ್ ವಧೆ, ಕನ್ನಗಿಯ ಸಿಟ್ಟು, ಆನಂತರ ಕನ್ನಗಿ ಮತ್ತು ಮಾಧವಿ ಸಂಧಿಸುವುದು, ಇಷ್ಟು ಕಾಲದುದ್ದಕ್ಕೂ ಮಾಧವಿ ಗರ್ಭಿಣಿಯಾಗೇ ಇರುತ್ತಾಳೆ.
ಇಲ್ಲಿ ಕಾಲದ ನಿರ್ವಹಣೆಯ ಲೆಕ್ಕಾಚಾರವೇ ಗೊಂದಲವಾಗಿಬಿಡುತ್ತದೆ. ಕೋವಲನ್ ಮಾಧವಿಯನ್ನು ಬಿಟ್ಟು ಬಂದ ಮೇಲೆ ನೇರ ಕನ್ನಗಿಯ ಬಳಿ ಬರುತ್ತಾನೆ, ಇಲ್ಲಿಯವರೆಗೂ ವಿಪ್ರಲಂಬವಾಗಿದ್ದ ಕನ್ನಗಿಯ ವಿರಹ ಈಗ ಮಾಧವಿಯ ಪಾಲಾಗುತ್ತದೆ ಎನ್ನುವುದನ್ನು ಅಲ್ಲಿ ತೋರಿಸಬಹುದಿತ್ತು.
ಆದರೆ ಅಲ್ಲಿ ಒಂದೇ ಸಮಯಕ್ಕೆ ಇಬ್ಬರ ವಿರಹವನ್ನೂ ತೋರಿಸುತ್ತಾರೆ, ಅದೂ ಸುಮಾರು ಅರ್ಧ ಗಂಟೆಗಳ ಕಾಲ. ಹಾಗಾದರೆ ಇಬ್ಬರನ್ನೂ ಬಿಟ್ಟು ಈ ಕೋವಲನ್ ಇನ್ನೆಲ್ಲಿ ಹೋಗಿದ್ದ ಅನ್ನಿಸಿಬಿಡುತ್ತದೆ.
ಆ ದೃಶ್ಯಕ್ಕಾಗಿ ಬಳಸಿಕೊಂಡಿರುವ ಜೋಡು ಕನ್ನಡಿಗಳ ಪರಿಕಲ್ಪನೆ ಮನೋಹರವಾಗಿದೆ. ಆ ಎರಡೂ ಹೆಣ್ಣುಗಳೂ ಕೋವಲನ್ ಎನ್ನುವ ಒಂದೇ ಕನ್ನಡಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳಲು ಪರಿತಪಿಸುವ ಬಗೆ ನಮ್ಮನ್ನು ತಾಕಲು ಸೋಲುತ್ತದೆ, ವಾಚ್ಯವಾಗಿಯೇ ಉಳಿದುಬಿಡುತ್ತದೆ.
ನಾಟಕದ ನಡುನಡುವೆ ಬರುವ ಅಕ್ಕನ ವಚನ, ಪುರಂದರ ದಾಸರ ಕೀರ್ತನೆ ಎಲ್ಲವೂ ಬಿಡಿಬಿಡಿಯಾಗಿ ಬಹಳ ಚೆನ್ನಾಗಿ ಬಂದಿದೆ. ಆದರೆ ನಾಟಕದ ಒಟ್ಟಂದಕ್ಕೆ ಅವು ಯಾವ ಕೊಡುಗೆಯನ್ನೂ ನೀಡುವುದಿಲ್ಲ. ಈ ಎಲ್ಲ ಅನಿಸಿಕೆಗಳ ನಡುವೆಯೂ ನಾಟಕದ ನಡುನಡುವೆ ಕೆಲವು ಹೊಳಹುಗಳು ಮನಸ್ಸಿಗೆ ಮುದ ನೀಡುತ್ತವೆ.
ಅದರಲ್ಲಿ ಒಂದು ಕನ್ನಗಿಯ ತಾಯಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಕೊಟ್ಟ ಆ ಉಪ್ಪಿನಕಾಯಿ ಜಾಡಿಯ ಕಲ್ಪನೆ. ತಾಯಿ ಆ ಜಾಡಿಯ ತುಂಬಾ, ಚಂದ್ರನನ್ನೂ, ನಕ್ಷತ್ರಗಳನ್ನೂ ಸೇರಿಸಿ ಉಪ್ಪಿನಕಾಯಿ ಹಾಕಿ ಮಗಳಿಗೆ ಕೊಟ್ಟಿರುತ್ತಾಳೆ. ಗಂಡನ ಮನೆಯಲ್ಲಿ ಯಾವುದೇ ಕಾರಣಕ್ಕೆ ಮನಸು ಮುದುಡಿದರೆ ಜಾಡಿಯೊಳಗಿಂದ ಒಂದೊಂದು ಹೋಳು ತೆಗೆದು ಚೀಪು ಮಗಳೇ ಎಂದು ಹೇಳಿ ಕಳಿಸಿರುತ್ತಾಳೆ.
ಈ ಕಲ್ಪನೆಯೇ ಮುದ ನೀಡುತ್ತದೆ. ಇಡಿಯಾಗಿ ನೋಡುವಾಗ ಬಿಡಿಬಿಡಿಯಾದ ಕೆಲವು ದೃಶ್ಯಗಳು ಮನಸ್ಸಿಗೆ ಮುದ ನೀಡಿದರೂ ಸುಮಾರು ಎರಡೂವರೆ ಗಂಟೆಗಳ ಈ ನಾಟಕ ಒಟ್ಟಾಗಿ ಕೊಡುವ ಅನುಭವ ನಿರಾಸೆ ಉಂಟು ಮಾಡುತ್ತದೆ.