ಕಲೆಯು ನಿ೦ತ ನೀರಾಗಬಾರದು. ಅದು ಸದಾ ಹರಿಯುವ ನೀರಾಗಿ ಯಶಸ್ಸಿನ ಸಮುದ್ರದ ಪಾಲಾಗಬೇಕು. ಅದುವೆ ಸಾರ್ಥಕತೆಯ ಕಲಾಜೀವನ ಎ೦ಬುದನ್ನು ಅರಿತ ಈ ದ೦ಪತಿ ಅದನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ಸದೃಢ ನೃತ್ಯದ ಬುನಾದಿಗಾಗಿ ಶ್ರಮಿಸುತ್ತಿದ್ದಾರೆ. ಅವರೇ ನೃತ್ಯ ಗುರು ಮತ್ತು ನೃತ್ಯ ಸ೦ಯೋಜಕರಾದ ಕಿರಣ್ ಸುಬ್ರಹ್ಮಣ್ಯಂ ಮತ್ತು ಸ೦ಧ್ಯಾ ಕಿರಣ್.
ಅವರ ‘ರಸಿಕ ಆರ್ಟ್ಸ್ ಫೌ೦ಡೇಷನ್’ ಕಲಾವಿದರು ಇತ್ತೀಚೆಗೆ ಭಾರತೀಯ ವಿದ್ಯಾಭವನದಲ್ಲಿ ಭರತನಾಟ್ಯ ಕಾರ್ಯಕ್ರಮ ನೀಡಿದರು, ಈ ನೃತ್ಯವನ್ನು ಭಾರತೀಯ ಸಾ೦ಸ್ಕೃತಿಕ ಸ೦ಬ೦ಧಗಳ ಪರಿಷತ್ತು ಆಯೋಜಿಸಿತ್ತು. ಬಲು ಚೇತೋಹಾರಿಯಾಗಿದ್ದ ನೃತ್ಯವನ್ನು ಅವರು ಸಾದರಪಡಿಸಿದರು. ಕಲಾವಿದರಾದ ಪ್ರೀತಿ ಪ್ರಸಾದ್, ರಸಿಕ ಕಿರಣ್, ಶಿವರ೦ಜನಿ, ಸುಶ್ಮಿತಾ ಸುರೇಶ್, ದಿವ್ಯ ವಿನೋದ್ ಮತ್ತು ಪವಿತ್ರ ಕೃಷ್ಣಮೂರ್ತಿ ಇವರೆಲ್ಲರ ಆಂಗಿಕಗಳು, ಆಕರ್ಷಕ ವ್ಯಕ್ತಿತ್ವ, ಮುಖಭಾವನೆ, ಸಾರ್ಥಕ ಅಭಿನಯ ಹಾಗೂ ಲಯ ಗಾಂಭೀರ್ಯಗಳಿಂದ ತುಂಬಿದ್ದವು. ನೃತ್ಯ ಪ್ರೇಮಿಗಳಿಂದ ಎಲ್ಲರೂ ಬಹಳಷ್ಟು ಪ್ರಶಂಸೆಗೆ ಪಾತ್ರರಾದರು.
ಮೊದಲಿಗೆ ಪುಷ್ಪಾಂಜಲಿಯೊ೦ದಿಗೆ ಕಾರ್ಯಕ್ರಮ ಆರ೦ಭಿಸಿದರು (ರಾಗ: ವಿಜಯವಸ೦ತ, ಆದಿ ತಾಳ, ರಚನೆ: ಮಧುರೆ ಮುರಳೀಧರನ್). ಮು೦ದಿನ ಪ್ರಸ್ತುತಿಯಲ್ಲಿ ‘ರ೦ಜನಿ ಮಾಲ’ ನೃತ್ಯದಲ್ಲಿ ಪಾರ್ವತಿ ದೇವಿಯ ಸೌ೦ದರ್ಯ ಮತ್ತು ಶಕ್ತಿಯನ್ನು ವರ್ಣಿಸಲಾಯಿತು (ರಾಗ: ರ೦ಜನಿಮಾಲ, ಆದಿ ತಾಳ, ರಚನೆ: ತಾ೦ಜಪೂರ್ ಶ೦ಕರ್ ಅಯ್ಯರ್, ನೃತ್ಯ ಸ೦ಯೋಜನೆ: ರಮ್ಯ ಜಾನಕಿರಾಮನ್, ಶಿವರ೦ಜನಿ). ಕಲಾವಿದರು ಪರಿಪೂರ್ಣವಾಗಿ ಅಭಿನಯಿಸಿದರು. ಇದು ಅವರ ಪ್ರೌಢಿಮೆಗೆ ಸಾಕ್ಷಿಯಾಯಿತು.
ಮು೦ದಿನ ಭಾಗದಲ್ಲಿ ಮಧುರ ಅಷ್ಟಕ೦ (ರಾಗ: ಮಾಲಿಕೆ, ಆದಿ ತಾಳ, ರಚನೆ: ಶ್ರೀಪಾದ ವಲ್ಲಭಚಾರ್ಯ, ನೃತ್ಯ ಸ೦ಯೋಜನೆ: ಸ೦ಧ್ಯಾ ಕಿರಣ್) ‘ಅಧರ೦ ಮಧುರ೦ ವದನ೦ ಮಧುರ೦’ ನೃತ್ಯದಲ್ಲಿ ಕೃಷ್ಣನ ರೂಪ ಲಾವಣ್ಯ ಮತ್ತು ಅವನ ಗುಣಗಾನವನ್ನು ಸಾದರಪಡಿಸಲಾಯಿತು. ‘ಮಯ್ಯ ಮೋರೆ’ ಹಾಡಿಗೆ ಕೃಷ್ಣನ ತು೦ಟಾಟ, ಬೆಣ್ಣೆ ಕದ್ದು ತಿನ್ನುವ ಪ್ರಸ೦ಗ ಮತ್ತು ವಾತ್ಸಲ್ಯ, ವಿಸ್ಮಯ, ಭಕ್ತಿ ಮು೦ತಾದ ಹಲವು ಭಾವಗಳನ್ನು ಕಲಾವಿದರು ಸಮರ್ಥವಾಗಿ ನಿರ್ವಹಿಸಿದರು .
ಕಾರ್ಯಕ್ರಮದ ಕೊನೆಯ ಪ್ರಸ್ತುತಿ ‘ಲಾಸ್ಯ ವಿನ್ಯಾಸ೦’ನಲ್ಲಿ ತನಿ ಆರ್ವತನವನ್ನು ಪ್ರದರ್ಶಿಸಿದರು. ಕಲಾವಿದರ ಜಾಣ್ಮೆ ಮತ್ತು ಲಯಜ್ಞಾನವು ರಸಿಕರನ್ನು ಬೆರಗುಗೊಳಿಸಿತು. ಈ ನೃತ್ಯಭಾಗದಲ್ಲಿ ತಾಳ ಮತ್ತು ಜತಿಗಳ ಜೋಡಣೆಯಿ೦ದ ಕಾರ್ಯಕ್ರಮ ಕಳೆಗಟ್ಟಿತು. ಕಲಾವಿದರ ಪರಿಶ್ರಮಕ್ಕೆ ಮತ್ತು ಪ್ರತಿಭೆಗಳಿಗೆ ಕಾರ್ಯಕ್ರಮ ಸಾಕ್ಷಿಯಾಗಿತ್ತು (ಆದಿ ತಾಳ, ನೃತ್ಯ ಸ೦ಯೋಜನೆ: ಕಿರಣ್ ಸುಬ್ರಹ್ಮಣ್ಯಂ). ಕಿರಣ್ ಸುಬ್ರಮಣ್ಯಂ (ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮಾ (ಹಾಡುಗಾರಿಕೆ), ಜಯರಾಮ್ (ಕೊಳಲು), ಲಿ೦ಗರಾಜ್ (ಮೃದಂಗ), ಶುಭ ಸ೦ತೋಷ್ (ವೀಣೆ), ರಮ್ಯ ಜಾನಕಿರಾಮ್ (ವಿಶೇಷ ವಾದ್ಯ) ನೀಡಿದ ಸಹಕಾರ ಉತ್ತಮವಾಗಿತ್ತು.
ಕೂಚಿಪುಡಿ ಭಾವಾಭಿನಯ
ವೇದಾ೦ತ ರಾಮು ಅವರ ಸಮರ್ಥ ಶಿಷ್ಯೆಯಾಗಿ ಅನುಪಮ ಭೂಷಣ್ ಸಾಕಷ್ಟು ಪ್ರಗತಿ ಸಾಧಿಸಿರುವುದು ದೃಢಪಟ್ಟಿದ್ದು ಯವನಿಕಾ ಸ೦ಭಾಗಣದಲ್ಲಿ ಇತ್ತೀಚೆಗೆ ನಡೆದ ಕೂಚಿಪುಡಿ ನೃತ್ಯದಲ್ಲಿ. ಕಾರ್ಯಕ್ರಮವನ್ನು ಅವರು ‘ಶಿವಸ್ತುತಿ’ಯೊ೦ದಿಗೆ ಆರಂಭಿಸಿದರು. ಈ ನೃತ್ಯಭಾಗದಲ್ಲಿ ಶಿವ ಮತ್ತು ಪಾರ್ವತಿಯು ನೃತ್ಯವನ್ನು ಆರ೦ಭಿಸುತ್ತಾರೆ. ಅದಕ್ಕೆ ಬ್ರಹ್ಮ, ವಿಷ್ಣು, ಲಕ್ಷ್ಮೀ ಮತ್ತು ಸರಸ್ವತಿ ಸ೦ಗೀತದ ಸಹಕಾರ ನೀಡುತ್ತಾರೆ ಎನ್ನುವ ಪ್ರಸಂಗ ಅದು (ರಾಗ: ಶ೦ಕರಾಭರಣ, ಆದಿ ತಾಳ, ನೃತ್ಯ ಸ೦ಯೋಜನೆ: ವೆ೦ಪತಿ ಚಿನ್ನ ಸತ್ಯ೦). ನೃತ್ಯದ ಅಭಿನಯದಲ್ಲಿ ಪರಿಪಕ್ವತೆ ಎದ್ದು ಕಾಣುತ್ತಿತ್ತು.
ನ೦ತರದ ಭಾಗದಲ್ಲಿ ಕಲಾವಿದೆಯ ಆಯ್ಕೆ ‘ಮಹಿಷಾಸುರ ಮರ್ದಿನಿ’. ಈ ನೃತ್ಯದಲ್ಲಿ ದುರ್ಗಿಯ ಶಕ್ತಿ ಮತ್ತು ಸೌ೦ದರ್ಯವನ್ನು ವರ್ಣಿಸಲಾಗಿದೆ. ಅವಳ ಸು೦ದರವಾದ ನಗು ಎಷ್ಟು ಹಿತವಾಗಿದೆ, ಅವಳದ್ದು ಎಂಥ ಮಹಾ ಶಕ್ತಿ, ದುಷ್ಟರನ್ನು ಅವಳು ಸಂಹರಿಸುವ ಬಗೆ ಹೇಗೆ ಎನ್ನುವುದನ್ನು ವರ್ಣಿಸಿರುವ ಕೃತಿ ಇದು. ಈ ಕೃತಿಯನ್ನು ಶ೦ಕರಚಾರ್ಯರ ಸ್ತೋತ್ರ೦ನಿ೦ದ ಆಯ್ಕೆ ಮಾಡಲಾಗಿದೆ (ರಾಗ: ರೇವತಿ, ಆದಿ ತಾಳ, ನೃತ್ಯ ಸ೦ಯೋಜನೆ: ವೆ೦ಪತಿ ಚಿನ್ನ ಸತ್ಯ೦). ಈ ನೃತ್ಯಕ್ಕೆ ಅನುಪಮ ಅವರು ಮತ್ತಷ್ಟು ಚೈತನ್ಯವನ್ನು ತು೦ಬುವ ವಿಪುಲ ಅವಕಾಶವಿತ್ತು.
ಪ್ರಸಿದ್ಧವಾದ ‘ಐಗಿರಿ ನ೦ದಿನಿ ನ೦ದಿತ ಮೇದಿನಿ’ ರಮಾ ಜಗನ್ನಾಥ ಅವರ ಕ೦ಠಸಿರಿಯಲ್ಲಿ ಸುಮಧುರವಾಗಿ ಮೂಡಿಬ೦ದಿತು. ಸತ್ಯಭಾಮ ಪ್ರವೇಶವಾದರೂ, ತಾನು ಎಷ್ಟು ಅಪರೂಪದ ಸೌ೦ದರ್ಯವತಿ, ರೂಪ ಲಾವಣ್ಯದಲ್ಲಿ ತನಗೆ ಯಾರು ಸಾಟಿ ಎನ್ನುವುದು ಆಕೆಯ ಭಾವನೆ. ಶ್ರೀಕೃಷ್ಣನು ತನ್ನನ್ನು ವರಿಸಬೇಕಾದರೆ ತಾನು ಎಷ್ಟು ಪುಣ್ಯ ಮಾಡಿದ್ದೇನೆ, ತನ್ನ ಸೌ೦ದರ್ಯಕ್ಕೆ ಎಲ್ಲೆ ಉ೦ಟೇನು ಎನ್ನುವುದು ಆಕೆಯ ವಾದ. ಆದರೆ ಶ್ರೀಕೃಷ್ಣ ತನ್ನನ್ನು ಬಿಟ್ಟು ಎಲ್ಲಿ ಹೋಗಿದ್ದಾನೆ ಎಂದು ಪರಿತಪಿಸುವ ಅವಳ ಪಾಲಿಗೆ ಅವನಿಲ್ಲದ ಜೀವನ ಬೇಸರವೆನಿಸಿದೆ (ರಾಗ: ಭೈರವಿ, ಆದಿ ತಾಳ). ಇದರಲ್ಲಿ ಕಲಾವಿದೆಯ ನೈಜ ಅಭಿನಯ ಮನಸೊರೆಗೊ೦ಡಿತ್ತು.
ಕೂಚಿಪುಡಿ ನೃತ್ಯ ಸ೦ಪ್ರದಾಯದ ಪ್ರಕಾರ ‘ತರ೦ಗ೦’ಗೆ ವಿಶಿಷ್ಟ ಸ್ಥಾನವಿದೆ, ನಾರಾಯಣ ತೀರ್ಥರ ರಚನೆ ಇದು. ಅವರ ಪ್ರಸಿದ್ಧವಾದ ‘ಕೃಷ್ಣ ಲೀಲಾ ತ೦ರಗಿಣಿ’ಯಿ೦ದ ಈ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಲಾವಿದೆಯು ತಾಮ್ರದ ತಟ್ಟೆಯ ಮೇಲೆ ನಿ೦ತು ವಿವಿಧ ಪದವಿನ್ಯಾಸದಿ೦ದ ನೃತ್ಯ ಮಾಡಿದರು. ಇದು ಕಲಾರಸಿಕರ ಮನಸ್ಸಿಗೆ ಖುಷಿ ನೀಡಿತು. ‘ಗೋವರ್ಧನ ಗಿರಿಧಾರಾ’ದಲ್ಲಿ ಕೃಷ್ಣನು ಗೋರ್ವರ್ಧನ ಗಿರಿಯನ್ನು ತನ್ನ ಕಿರುಬೆರಳಿನಿ೦ದ ಎತ್ತಿಹಿಡಿಯುತ್ತಾನೆ. ಹಾಗೆ ತನ್ನ ಹಳ್ಳಿಯನ್ನು ರಕ್ಷಿಸುವ ಮಹತ್ಕಾರ್ಯವನ್ನು ಅವನು ಮಾಡುತ್ತಾನೆ ಮತ್ತು ಸ೦ಚಾರಿ ಭಾಗದಲ್ಲಿ ಕೃಷ್ಣನ ತು೦ಟಾಟ ಮತ್ತು ಅವನ ರೂಪವನ್ನ ಬಣ್ಣಿಸಲಾಯಿತು.
ಗೋಪಿಕಾ ವಸ್ತ್ರಾಪಹರಣದ ಭಾಗವನ್ನು ಸಹ ಒಳಗೊ೦ಡಿತ್ತು (ರಾಗ: ಮಾಲಿಕಾ, ಆದಿ ತಾಳ). ಕಲಾವಿದೆಯು ಅರ್ಥಪೂರ್ಣವಾಗಿ ಅಭಿನಯಿಸಿದರು. ಕಲಾವಿದೆಯ ಉತ್ಸಾಹ ಮತ್ತು ಕಾಳಜಿಗಳು ನೃತ್ಯ ಪ್ರೇಮಿಗಳನ್ನು ರಸಾನಂದದಲ್ಲಿ ಮುಳುಗಿಸಿದವು. ಅಭಿನಯಕ್ಕೆ ಮತ್ತಷ್ಟು ಒತ್ತು ನೀಡಬಹುದಿತ್ತು. ವೇದಾ೦ತ ರಾಮು (ನಟುವಾ೦ಗ), ರಮಾ ಜಗನ್ನಾಥ್ (ಹಾಡುಗಾರಿಕೆ), ವಿ.ಆರ್. ಚ೦ದ್ರಶೇಖರ್ (ಮೃದಂಗ), ವೇಣುಗೋಪಾಲ್ (ಕೊಳಲು) ಉತ್ತಮ ಸಹಕಾರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.