ಯಾವ ಗುರಿ–ಉದ್ದೇಶವೂ ಇಲ್ಲದೆ ಗುಡ್ಡದ ಮೇಲೆ ಬರಿದೇ ಬಿದ್ದ ಕಲ್ಲಾಗಲೀ, ಸೊಂಪಾದ ಗಾಳಿಗೆ ತಲೆದೂಗುವ ಮರವಾಗಲಿ, ಕೆರೆಯ ಅಲೆಯಾಗಲಿ, ತೊರೆಯ ಹರಿವಾಗಲಿ, ಆಕಾಶದಲ್ಲಿ ತೇಲಿ ಹೊರಟ ಮೋಡಗಳೇ ಇರಲಿ...
ಕಣ್ಣು ಹಾಯಿಸಿದಲ್ಲೆಲ್ಲ ಮೂರ್ತ ರೂಪವನ್ನು ಕಲ್ಪಿಸಿಕೊಳ್ಳುವ ಹಾಗೂ ಅದನ್ನು ಚಿತ್ರಕಲೆಯಲ್ಲಿ ಹಿಡಿದಿಡುವ ಸೃಜನಶೀಲ ಮನಸ್ಸು ಮಂಗಳೂರು ಮೂಲದ ಓಂಪ್ರಕಾಶ್ ಆಚಾರ್ಯ ಅವರದು.
ಏನು ನೋಡಿದರೂ ಇವರ ಮನದಲ್ಲಿ ಚಿತ್ರ–ವಿಚಿತ್ರ ಆಕಾರಗಳು ಮೂಡುತ್ತವೆ. ಪೆನ್ಸಿಲ್‌ನಿಂದ ಪೇಪರ್ ಮೇಲೆ ಗೀಚುವ ಪ್ರತಿ ಗೆರೆಯೂ ಆಕರ್ಷಕ ಚಿತ್ತಾರ ಆಗುತ್ತದೆ. ನೋಡಿದವರು ಬೆರಗಾಗುವ ಕಲಾಕೃತಿ ಆಗುತ್ತದೆ. ಇದು ಅವರ ಕಲಾ ಶ್ರೀಮಂತ್ರಿಕೆಗೆ ಸಾಕ್ಷಿ.
ಪೆನ್ಸಿಲ್ ಹಿಡಿದೊಡನೆ ಚಿತ್ರಕಲಾವಿದನಾಗುವ, ಮೈಕು ಕಂಡೊಡನೆ ಗಾಯಕನಾಗುವ, ಕಸದ ಬುಟ್ಟಿ ಸೇರಬೇಕಿರುವ ವಸ್ತುಗಳಿಂದ ಹಾವು, ಇಲಿ, ಮುಂಗುಸಿಯನ್ನು ಮಾಡಿ ಬೆರಗು ಹುಟ್ಟಿಸುವ ಓಂಪ್ರಕಾಶ್ ಅವರದು ಬಹುಮುಖ ವ್ಯಕ್ತಿತ್ವ. ಅಷ್ಟೇ ಅಲ್ಲದೇ ಮಾರ್ಬಲ್ ಆರ್ಟ್ಸ್‌ನಲ್ಲಿಯೂ ಅವರು ಸಿದ್ಧಹಸ್ತರು. ಚುಟುಕು, ಕವನ ಬರೆಯುವಲ್ಲಿಯೂ ಎತ್ತಿದ ಕೈ. ಹೀಗೆ ಅನೇಕ ಚಟುವಟಿಕೆಗಳಲ್ಲಿ ಅವರ ಪ್ರತಿಭೆ ಅರಳುವುದಿದೆ.
ಬಂಡೆಗಲ್ಲೊಂದು ನಮಗೆ ಕಲ್ಲಷ್ಟೇ ಆಗಿ ಕಂಡರೆ ಓಂಪ್ರಕಾಶ್ ಅವರಿಗೆ ಅದರಲ್ಲಿ ಗಣಪ, ಆಮೆ,ಬಸವ, ಮೊಸಳೆ... ಏನೆಲ್ಲ ಆಗಿ ಕಾಣುತ್ತವೆ. ಮೋಡದಲ್ಲೂ ಅಷ್ಟೇ. ಆಕಾಶದಲ್ಲಿ ತೇಲಿ ಹೊರಟ ಮೋಡಗಳಲ್ಲಿ ಕಾಣುವ ವೈವಿಧ್ಯಮಯ ಚಿತ್ರಗಳೇ ಅವರ ಅನೇಕ ಕಲಾಕೃತಿಗಳಿಗೆ ಸ್ಫೂರ್ತಿ.
ಜೀವನದಲ್ಲಿ ಕಷ್ಟಗಳನ್ನೇ ಹೆಚ್ಚಾಗಿ ಕಂಡ ಓಂಪ್ರಕಾಶ್ ಅವರಿಗೆ ಕಲೆಯೇ ಜೀವನ ಸಂಗಾತಿ. ‘ಬದುಕಿನ ಕಹಿ ಗಳಿಗೆಯಲ್ಲಿ ಜೊತೆ ನಿಂತವರು ಸೋದರಮಾವ ದಾಮೋದರ ಆಚಾರ್ಯ. ಬದುಕಿನ ಮಧ್ಯಭಾಗದಲ್ಲಿ ಜೊತೆಗೂಡಿದ ಪತ್ನಿ, ಅನಾರೋಗ್ಯದಿಂದಾಗಿ ನಡುವೆಯೇ ಕೈಬಿಟ್ಟು ಹೋದರು. ಆ ದೇವರು ನನ್ನ ಕೈ ಬಿಡುವುದಿಲ್ಲ. ಕಲೆಯ ರೂಪದಲ್ಲಿ ಜೀವ ಇರುವವರೆಗೂ ನನ್ನೊಂದಿಗೆ ಇರುತ್ತಾನೆ ಎನ್ನುವ ಧೈರ್ಯವೇ ನನ್ನ ಬದುಕಿನ ಆಶಯ’ ಎನ್ನುತ್ತ ತಮ್ಮ ಜೀವನಗಾಥೆಯನ್ನು ಅರುಹುತ್ತಾರೆ ಓಂಪ್ರಕಾಶ್.
‘ಬದುಕಿನ ದಾರಿ ಹುಡುಕಿಕೊಂಡು ಬೆಂಗಳೂರು ಸೇರಿದಾಗ ನನ್ನ ಬಳಿ ಕಲೆಯೊಂದನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಅದೊಂದನ್ನೇ ನಂಬಿ ನನ್ನ ಬದುಕನ್ನು ಹಾಗೂ ನನ್ನನ್ನೇ ನಂಬಿ ಬಂದ ನನ್ನ ಕುಟುಂಬವನ್ನು ಸಲುಹಬೇಕಾದ ಹೊಣೆ ನನ್ನ ಮೇಲಿತ್ತು’ ಎಂದು ತಮ್ಮ ಬದುಕಿನ ಸಂಕಷ್ಟದ ದಿನಗಳ ನೆನಪಿಗಿಳಿಯುತ್ತಾರೆ.
‘1974ರ ಸುಮಾರಿಗೆ ಬೆಂಗಳೂರಿಗೆ ಬಂದು ಹಲವಾರು ಕಡೆ ಕೆಲಸ ಮಾಡಿದೆ. 1979ರಲ್ಲಿ ದೇವರನ್ನೇ ನಂಬಿ ನನ್ನದೇ ಆದ ‘ಶಿವ ಶಂಕರಿ ಆರ್ಟ್ಸ್’ ಕಲಾಶಾಲೆಯನ್ನು ಆರಂಭಿಸಿದೆ. ಆದರೆ ಕೆಲವು ವರ್ಷಗಳ ನಂತರ ಕಲಾಪ್ರಕಾರದಲ್ಲಿಯೂ ಸಾಕಷ್ಟು ಬದಲಾವಣೆಯಾಯಿತು. ಅವಕಾಶಗಳ ಕೊರತೆ ಎದುರಾಯಿತು. 2006ರಲ್ಲಿ ಶಕ್ತಿ ರೆಸಾರ್ಟ್‌ನಲ್ಲಿ ಕಲಾವಿದನಾಗಿ ಸೇರಿಕೊಂಡೆ. ಈಗ ಕೆಲವು ಶಾಲಾ–ಕಾಲೇಜುಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಮಕ್ಕಳಿಗೆ ಚಿತ್ರಕಲೆ ಹೇಳಿಕೊಡುತ್ತ ಖುಷಿಯಿಂದ ಕಾಲ ಕಳೆಯುತ್ತಿದ್ದೇನೆ’ ಎನ್ನುವ ಸಂತೃಪ್ತ ಭಾವ ಓಂಪ್ರಕಾಶ್ ಅವರದು.
ಶಕ್ತಿ ಹಿಲ್ ರೆಸಾರ್ಟ್‌ನಲ್ಲಿ ಮೂರು ವರ್ಷ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ ಅವರು, ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಬಂಡೆಗಳನ್ನು ನೋಡುತ್ತ. ಆ ಬಂಡೆಗಳಲ್ಲಿ ಕಾಣುವ ರೂಪಗಳನ್ನೇ ತನ್ನ ಚಿತ್ರಕಲೆಗೆ ಸ್ಫೂರ್ತಿಯಾಗಿ ಮಾಡಿಕೊಂಡು ಚಿತ್ರ ರಚಿಸಿ ಮೆಚ್ಚುಗೆ ಗಳಿಸಿದರು.
ಹಾಡುವುದರಲ್ಲಿಯೂ ಅಷ್ಟೇ. ಡಾ.ರಾಜ್ ಅವರ ಅಷ್ಟೂ ಗೀತೆಗಳಿಗೆ ಇವರು ದನಿ ನೀಡುತ್ತಿದ್ದರೆ ಕಣ್ಣು ಮುಚ್ಚಿ ಕೇಳುವವರು ಕ್ಷಣ ಮೋಸ ಹೋಗಬಹುದು. ‘ಪಿ.ಬಿ. ಶ್ರೀನಿವಾಸ್ ನನ್ನ ಪಾಲಿನ ದೈವ. ನಾನು ಹಾಡಲು ಕಲಿತಿದ್ದು, ಹಾಡುತ್ತ ಹಾಡುತ್ತ ಎಲ್ಲೆಡೆ ಭೇಷ್ ಎನಿಸಿಕೊಂಡಿದ್ದು ಅವರ ದನಿಯನ್ನು ಕೇಳಿಯೇ’ ಎನ್ನುವ ಹೆಮ್ಮೆ ಅವರದು.
‘ಪಿ.ಬಿ. ಸರ್ ಅವರನ್ನು ನೋಡುವ ಮೊದಲೇ ನಾನು ಅವರು ಹಾಡುವುದನ್ನು ಕೇಳುತ್ತ, ಅವರಂತೆಯೇ ಹಾಡುತ್ತ ಸಾರ್ಥಕ್ಯ ಕಂಡುಕೊಂಡಿದ್ದೆ. ಅವರನ್ನು ಭೇಟಿಯಾಗಿ, ಪರಿಚಯ ಆತ್ಮೀಯತೆಗೆ ತಿರುಗಿದ ಮೇಲಂತೂ ಸಂಪೂರ್ಣವಾಗಿ ಅವರ ಪ್ರಭಾವಕ್ಕೆ ಒಳಗಾದೆ’ ಎನ್ನುತ್ತಾರೆ ಓಂಪ್ರಕಾಶ್.
ಕರೆದರೆ ಕಾರ್ಯಕ್ರಮಗಳಿಗೆ ಹೋಗಿ ಹಾಡು ಹೇಳುತ್ತಾರೆ. ಸಮಯ ಸಿಕ್ಕರೆ ಬಾಟಲ್ ಆರ್ಟ್ ಮಾಡುತ್ತ, ಸ್ಟೀಲ್ ಸ್ಪಾಂಜ್‌ಗೆ ಹಾವು, ಮುಂಗುಸಿ, ಇಲಿಯ ರೂಪ ನೀಡುತ್ತ ನೋಡುವವರನ್ನು ಬೆರಗುಗೊಳಿಸುತ್ತಾರೆ. ಪತ್ನಿ ಪ್ರಭಾವತಿ ಅಗಲಿದ ಮೇಲಂತೂ, ಚಿತ್ರಕಲೆ, ಸಂಗೀತ ಹಾಗೂ ಕಲಾಶಾಲೆಗಳೇ ಅವರ ಪ್ರಪಂಚ ತುಂಬಿವೆ.
ಸಂಪರ್ಕಕ್ಕೆ: 74117 58586
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.