ADVERTISEMENT

ಕೃಷ್ಣ ತೃಷ್ಣ- ದೀಪ್ತಿ ಅನುಸಂಧಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2015, 19:30 IST
Last Updated 3 ಡಿಸೆಂಬರ್ 2015, 19:30 IST

ಭಾರತೀಯ ಜನಮಾನಸದಲ್ಲಿ ಕೃಷ್ಣ ಒಂದು ಚಿರಂತನ ಪ್ರಜ್ಞೆ. ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ಕೃಷ್ಣನೇ ಪರಿಪೂರ್ಣ ಅವತಾರವಂತೆ. ಬಾಲ ಕೃಷ್ಣನಿಂದ ಹಿಡಿದು ಪರಮಾತ್ಮ ಕೃಷ್ಣನವರೆಗೆ ಅವನ ಅವತಾರದ ವಿಸ್ತಾರ. ಅವನು ವೇದಾಗಮಗಳಿಗೂ ನಿಲುಕದ ಅಗಣಿತ ಮಹಿಮ ಎಂಬ ವರ್ಣನೆ ಇದ್ದರೂ ಋಷಿಗಳು, ತತ್ವಜ್ಞಾನಿಗಳು, ಚಿಂತಕರು ಅವನನ್ನು ಅರಿಯಲು ಜೀವನ ಅರ್ಪಿಸಿಕೊಂಡಿದ್ದಾರೆ.

ಎಲ್ಲ ಭಾಷೆಗಳಲ್ಲಿ ಮಹಾಕವಿಗಳು ಕೃಷ್ಣನನ್ನು ದಣಿವಿಲ್ಲದೆ ವರ್ಣಿಸಿದ್ದಾರೆ. ಸಂಗೀತಗಾರರಿಗೆ ಮುರಳೀಲೋಲ ಕೃಷ್ಣ ಎಂಬ ಹೆಸರೇ ಮಧುರ ಸ್ವರದಂತೆ ಆಕರ್ಷಣೆ. ನೃತ್ಯ ಕಲಾವಿದರಿಗೆ ಕೃಷ್ಣ ಎಂಬ ಆವಾಹನೆಯೇ ಒಂದು ಸಾಕ್ಷಾತ್ಕಾರ. ಕೃಷ್ಣ ಎಂಬ ಬೆಳಕನ್ನು ಎಲ್ಲರೂ ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಅನುಸಂಧಾನ ಮಾಡುತ್ತಾರೆ. ಕೃಷ್ಣನನ್ನು ಅರಸುವುದು, ಅರಿಯುವುದು ಮನುಕುಲದ ನಿರಂತರ ಬಾಯಾರಿಕೆ- ಅದೇ ಕೃಷ್ಣ ತೃಷ್ಣ.

ಪರಂಪರೆಯಿಂದ ಸಾಗಿಬಂದಿರುವ ಕೃಷ್ಣಾನ್ವೇಷಣೆಯನ್ನು ಮುಂದುವರೆಸಲು ನೃತ್ಯ ಕಲಾವಿದೆ ದೀಪ್ತಿ ಸುಧೀಂದ್ರ ಭರತನಾಟ್ಯದಲ್ಲಿ ನಡೆಸಿರುವ ವಿನೂತನ ಪ್ರಯತ್ನವೇ ‘ಕೃಷ್ಣ ತೃಷ್ಣ’. ಕೃಷ್ಣನೊಂದಿಗೆ ತಾಯಿಯಾಗಿ, ಸೋದರನಾಗಿ, ಭಕ್ತನಾಗಿ, ಮಿತ್ರನಾಗಿ, ಪ್ರಿಯಕರನಾಗಿ ಮತ್ತು ಮೋಕ್ಷಸಾಧಕನಾಗಿ ಭಾವಾನುಸಂಧಾನ ನಡೆಸುವುದು ಈ ನೃತ್ಯ ಕಾರ್ಯಕ್ರಮದ ಉದ್ದೇಶ. ನೃತ್ಯ, ಅಭಿನಯ, ಸಂಗೀತ, ಮಾತುಗಳ ಹದವರಿತ ಮಿಶ್ರಣ ಇದರಲ್ಲಿದ್ದು, ಕೃಷ್ಣನನ್ನು ಕುರಿತ ಅತ್ಯಂತ ಪ್ರಸಿದ್ಧ ಕಾವ್ಯ, ಹಾಡುಗಳು, ಪದಗಳು ಮನಸೂರೆಗೊಳ್ಳುತ್ತವೆ. ದೀಪ್ತಿ ಸುಧೀಂದ್ರ ಪ್ರಸ್ತುತ ಪಡಿಸುವ ಈ ನೃತ್ಯರೂಪಕಕ್ಕೆ ಖ್ಯಾತ ನೃತ್ಯ ಕಲಾವಿದರಾದ ಗುರು ಕಿರಣ್ ಸುಬ್ರಹ್ಮಣ್ಯ ಮತ್ತು ಗುರು ಸಂಧ್ಯಾ ಕಿರಣ್ ನೃತ್ಯ ಸಂಯೋಜನೆಯಿದೆ.

ಐದು ವರ್ಷದ ಬಾಲೆಯಾಗಿದ್ದಾಗಲೇ ಗುರು ಪದ್ಮಿನಿ ರವಿ ಅವರಿಂದ ನೃತ್ಯ ದೀಕ್ಷೆ ಪಡೆದ ದೀಪ್ತಿ ಸುಧೀಂದ್ರ, 1992 ರಲ್ಲಿ ರಂಗಪ್ರವೇಶ ಮಾಡಿ ಹಲವಾರು ನೃತ್ಯ ಪ್ರದರ್ಶನಗಳಲ್ಲಿ ಪಾಲ್ಗೊಂಡಿರುವ ಪ್ರತಿಭಾವಂತ ಕಲಾವಿದೆ. ಇದೀಗ ನೃತ್ಯದಲ್ಲಿ ಹೊಸ ಪ್ರಯೋಗಗಳಿಗೆ ಕಿರಣ್ ದಂಪತಿಯಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ದೀಪ್ತಿ ಅವರ ಕಲಾನ್ವೇಷಣೆ ನೃತ್ಯಕ್ಕೆ ಸೀಮಿತವಲ್ಲ, ಇಂಗ್ಲಿಷ್ ಮತ್ತು ಕನ್ನಡ ರಂಗಭೂಮಿಯ ಅಭಿನೇತ್ರಿಯಾಗಿ ಅವರು ಖ್ಯಾತಿ ಪಡೆದಿದ್ದಾರೆ. ನಾಟಕವಲ್ಲದೆ ಟಿವಿ ಧಾರಾವಾಹಿ, ಸಿನಿಮಾಗಳಲ್ಲೂ ನಟಿಸಿದ್ದಾರೆ.

ನಾಟಕಗಳ ನಿರ್ದೇಶನ, ರಂಗರೂಪಕಗಳ ನಿರ್ಮಾಣ ಮತ್ತು ರಂಗವಿನ್ಯಾಸದಲ್ಲೂ ದೀಪ್ತಿ ಸಿದ್ಧಹಸ್ತರು. ಬಿ. ಜಯಶ್ರೀ ನಿರ್ದೇಶನದ ‘ಅಗ್ನಿಪಥ’ದಲ್ಲಿ ಮತ್ತು ಅವರದೇ ಕಿಮಾಯ ಪ್ರೊಡಕ್ಷನ್ಸ್ ಪ್ರಸ್ತುತಿ ‘ದ ವಜೈನ ಮಾನೊಲಾಗ್ಸ್’ ನಲ್ಲಿ ನಟಿಯಾಗಿ ಅವರ ಅಭಿನಯ ವೀಕ್ಷಕರ ನೆನಪಿನಲ್ಲಿ ಉಳಿದಿದೆ. ಅರ್ಜುನ್ ಸಜನಾನಿ ನಿರ್ದೇಶನದ ಗಿರೀಶ್ ಕಾರ್ನಾಡರ ‘ತುಘಲಕ್’ ಮತ್ತು ಎಆರ್‌ಟಿ ರಂಗಕ್ಕೆ ತಂದ ‘ಟಿಪ್ಪು ಸುಲ್ತಾನನ ಕನಸುಗಳು’ ನಾಟಕಗಳಿಗೆ ರಂಗವಿನ್ಯಾಸ ಸಹಾಯಕರಾಗಿ ಹೆಸರು ಪಡೆದಿದ್ದಾರೆ.

ಡೆಕನ್ ಹೆರಾಲ್ಡ್ ನಾಟಕೋತ್ಸವ, ರಂಗಶಂಕರ ನಾಟಕೋತ್ಸವ, ಬೆಂಗಳೂರು ಹಬ್ಬ ಇವುಗಳಲ್ಲಿ ಪಾಲ್ಗೊಳ್ಳುವ ದೀಪ್ತಿ ರಂಗ ಚಟುವಟಿಕೆಗಳಲ್ಲಿ ತಮ್ಮ ಕ್ರಿಯಾಶೀಲತೆಯನ್ನು ಮೆರೆಯುತ್ತಿದ್ದಾರೆ. ಖ್ಯಾತ ವೀಣಾ ವಿದುಷಿ ಡಾ. ಸುಮಾ ಸುಧೀಂದ್ರ ಅವರ ಮಗಳಾದ ಅವರು ಬೆಂಗಳೂರಿನ ಸಾಂಸ್ಕೃತಿಕ ವಲಯಕ್ಕೆ ಸುಪರಿಚಿತರು. ವೃತ್ತಿಯಲ್ಲಿ ದೀಪ್ತಿ ಆಭರಣ ವಿನ್ಯಾಸಕಿಯಾಗಿ ಯಶಸ್ಸು ಪಡೆದಿದ್ದಾರೆ.

ದೀಪ್ತಿ ಸುಧೀಂದ್ರ ಅವರ ನರ್ತನದ ‘ಕೃಷ್ಣ ತೃಷ್ಣ’ ಭರತನಾಟ್ಯ ಕಾರ್ಯಕ್ರಮ ಇಂದು (ಡಿ.4) ನಗರದ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 6.45 ಕ್ಕೆ ನಡೆಯಲಿದೆ. ದೇಶದ ಹೆಸರಾಂತ ಕಲಾವಿದ ಪಪ್ಪು ವೇಣುಗೋಪಾಲ ರಾವ್ ಮುಖ್ಯ ಅತಿಥಿಗಳಾಗಿರುತ್ತಾರೆ. ‘ರಸಿಕ’ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ತರಂಗಿಣಿ ಆರ್ಟ್ಸ್ ಫೌಂಡೇಷನ್ ಸಹಕಾರವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.