ADVERTISEMENT

ಕೈಬೀಸಿ ಕರೆಯುತ್ತಿದೆ ಕೈವಾರ ಕ್ಷೇತ್ರ....

ಸುತ್ತಾಣ

ಸುನಿಲ್‌ ಕುಮಾರ್‌
Published 13 ಮಾರ್ಚ್ 2015, 19:30 IST
Last Updated 13 ಮಾರ್ಚ್ 2015, 19:30 IST

ವಿಶ್ವವಿಖ್ಯಾತ ಎಂಜಿನಿಯರ್‌ ಸರ್‌. ಎಂ. ವಿಶ್ವೇಶ್ವರಯ್ಯ ಅವರು ಜನಿಸಿದ  ಜಿಲ್ಲೆ ಚಿಕ್ಕಬಳ್ಳಾಪುರ. ಸರ್‌. ಎಂ.ವಿ. ಅವರಿಂದಾಗಿ ಜಿಲ್ಲೆಯ ಕೀರ್ತಿ ದೇಶದ ಉದ್ದಗಲಕ್ಕೂ ಹರಡಿದೆ. ಅದೇರೀತಿ, ಇದೇ ಜಿಲ್ಲೆಯಲ್ಲಿರುವ ಕೈವಾರ ಮತ್ತು ಕೈಲಾಸ ಗಿರಿ ಕ್ಷೇತ್ರಗಳು ಸಹ ರಾಜ್ಯದ ವಿವಿಧ ಭಾಗದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 

ಒಟ್ಟಾರೆಯಾಗಿ, ಭಕ್ತಿ ಪ್ರವಾಸ ಹಾಗೂ ಸಾಹಸ ಪ್ರಿಯ ಚಾರಣಿಗರಿಬ್ಬರಿಗೂ ಈ ಎರಡು ತಾಣಗಳು ಹೇಳಿ ಮಾಡಿಸಿದಂತಿವೆ. ಕೈವಾರ ಚಿಕ್ಕಬಳ್ಳಾಪುರ ಜಿಲ್ಲೆಯ  ಆಕರ್ಷಣೀಯ ಕೇಂದ್ರ. ಮಹಾಭಾರತ ನಡೆದ ಸಮಯದಲ್ಲಿ ಈ ಪ್ರದೇಶವನ್ನು ‘ಏಕಚಕ್ರಪುರ’ ಎಂದು ಕರೆಯುತ್ತಿದ್ದರು ಎಂಬ ಉಲ್ಲೇಖವಿದೆ. ಪಾಂಡವರು ಇಲ್ಲಿ ತಂಗಿದ್ದರಿಂದ ಪವಿತ್ರ ಕ್ಷೇತ್ರವೆಂದು ಜನರು ನಂಬಿದ್ದಾರೆ.

ಅಮರ ನಾರಾಯಣ, ಭೀಮಲಿಂಗೇಶ್ವರ, ಲಕ್ಷ್ಮಣ ತೀರ್ಥ, ಯೋಗಿ ನಾರಾಯಣ ಮಠ, ವೈಕುಂಠ ದೇವಾಲಯ, ಭೀಮನ ಹೆಜ್ಜೆ ಗುರುತುಗಳು, ಯೋಗಿ ತಾತಯ್ಯನವರ ಜೀವ ಸಮಾಧಿ, ಕನ್ಯಕಾ ಪರಮೇಶ್ವರಿ ದೇವಾಲಯಗಳು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಇಲ್ಲಿರುವ ರಾಷ್ಟ್ರೀಯ ಉದ್ಯಾನವು ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯದಿಂದ ಸೌಂದರ್ಯ ಕಳೆದುಕೊಂಡಿದೆ. ಕೈವಾರವು ಸಾಹಸ ಪ್ರಿಯರಿಗೂ ಇಷ್ಟವಾಗುವ ತಾಣವಾಗಿದೆ. ಕೈವಾರದಿಂದ ಸುಮಾರು ಮುಕ್ಕಾಲು ತಾಸು ಬೆಟ್ಟವನ್ನೇರಿದರೆ, ಲಕ್ಷ್ಮಣ ತೀರ್ಥ ಹಾಗೂ ಬಕನ ಬಂಡೆಯ ದರ್ಶನವಾಗುತ್ತದೆ. ಲಕ್ಷ್ಮಣ ತೀರ್ಥದಲ್ಲಿ ಸದಾಕಾಲ ಒಂದೇ ರೀತಿಯ ನೀರಿನ ಒರೆತೆ ಇರುತ್ತದೆ.

ಲಕ್ಷ್ಮಣ ತೀರ್ಥ
ತ್ರೇತಾಯುಗದಲ್ಲಿ ಶ್ರೀರಾಮಚಂದ್ರ–ಸೀತಾ, ಲಕ್ಷ್ಮಣ ಕೈವಾರಕ್ಕೆ ಭೇಟಿ ನೀಡಿದ್ದರೆಂದು, ಬೆಟ್ಟದ ಮೇಲೆ ಸೀತೆಗೆ ಬಾಯಾರಿಕೆಯಾದಾಗ ಲಕ್ಷ್ಮಣ ಬಾಣ ಹೊಡೆದು ನೀರು ತೆಗೆದ ಎಂಬ ಪ್ರತೀತಿ ಇದೆ. ಇಲ್ಲಿ ದೊರೆಯುವ ನೀರು ಔಷಧಿಯ ಗುಣಗಳನ್ನು ಹೊಂದಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಈ ನೀರನ್ನು ಕುಡಿದರೆ ರೋಗರುಜಿನಗಳು ಮಾಯವಾಗುತ್ತವೆ ಎಂಬ ನಂಬಿಕೆಯೂ ಇದೆ.

ಬಕಾಸುರ ಬಂಡೆ
ಕೈವಾರ ಬೆಟ್ಟದ ಮೇಲೆ ವಾಸವಿದ್ದ ಬಕಾಸುರ ರಾಕ್ಷಸನನ್ನು ಭೀಮ ಕೊಂದು, ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿದ್ದ. ಹೀಗಾಗಿ ಭೀಮನ ಅಮಾವಾಸ್ಯೆ ದಿನದಂದು ಈ ಬಂಡೆಯಿಂದ ಕೀವು ಮತ್ತು ರಕ್ತ ಸೋರುತ್ತದೆ ಎಂದು ಸ್ಥಳಿಯರು ಹೇಳುತ್ತಾರೆ. ಕೈವಾರ ಸುತ್ತಿದ ನಂತರ ಅಲ್ಲಿಂದ 10ಕಿ.ಮೀ ಅಂತರದಲ್ಲಿರುವ ಕೈಲಾಸಗಿರಿಯನ್ನು ನೋಡದೆ ಹಿಂತಿರುಗಿದರೆ ನೀವು ಕೈಗೊಂಡ ಪ್ರವಾಸಕ್ಕೆ ಅರ್ಥವೇ ಇರುವುದಿಲ್ಲ.

ಕೈಲಾಸಗಿರಿಯನ್ನು ಕರ್ನಾಟಕದ ಅಜಂತಾ–ಎಲ್ಲೋರಾಕ್ಕೆ ಹೋಲಿಸಲಾಗುತ್ತದೆ. ಇಲ್ಲಿ ಗುಹಾಂತರ ದೇವಾಲಯಗಳಿವೆ. ಇದನ್ನು ಅಂಬಾಜಿದುರ್ಗದ ಪರ್ವತ ಶ್ರೇಣಿಯ ಒಂದು ಬೆಟ್ಟವನ್ನು ಕೊರೆದು ಒಂದು ಇಟ್ಟಿಗೆಯನ್ನು  ಬಳಸದೆ ಗುಹಾಂತರ ದೇವಾಲಯಗಳನ್ನು ನಿರ್ಮಾಣ ಮಾಡಿರುವುದು ವಿಶೇಷ.

ಇಲ್ಲಿ ಚತುರ್ಮುಖ ಶಿವ, ಪಾರ್ವತಿ ಹಾಗೂ ಗಣೇಶನ ವಿಗ್ರಹಗಳಿವೆ. ಅಲ್ಲದೇ ಒಂದು ಪ್ರಾಂಗಣ ಹಾಗೂ ಬೃಹತ್‌ ಗಾತ್ರದ ಜಟಾಧಾರಿ ಶಿವನ ವಿಗ್ರಹವಿದೆ. ಕೈಲಾಸಗಿರಿಗೆ ಹೋಗುವ ಮಾರ್ಗದ ಎರಡೂ ಬದಿಯೂ ಹಚ್ಚ–ಹಸಿರಿನಿಂದ ಕಂಗೊಳಿಸುತ್ತದೆ.

ಹೀಗಾಗಿ ಸೈಕಲ್‌ ಹಾಗೂ ಬೈಕ್‌ಗಳಲ್ಲಿ ಪ್ರವಾಸ ಹೊರಡುವವರಿಗೆ ಸೂಕ್ತ ವಾತವಾರಣವಿದೆ. ಈ ಎರಡು ಸ್ಥಳಗಳನ್ನು ನೋಡಿದ ನಂತರ ನಿಮ್ಮ ಬಳಿ ಸಮಯ ಉಳಿದಿದ್ದರೆ. ಚಿಂತಾಮಣಿಯಲ್ಲಿರುವ ಶಿವನ ದೇವಾಲಯ ಹಾಗೂ ವರಾದ್ರಿ ಬೆಟ್ಟವನ್ನು  ಒಮ್ಮೆ ನೋಡಿಕೊಂಡು ಬರಬಹುದು. ಬರುವಾಗ ಚಿಂತಾಮಣಿ ಕಡಲೆಬೀಜ ಮರೆಯದೆ ತನ್ನಿ.

ಹೀಗೆ ಬನ್ನಿ...
ಬೆಂಗಳೂರಿನಿಂದ ಚಿಂತಾಮಣಿ   75ಕಿ.ಮೀ ಇದೆ. ಬೆಂಗಳೂರಿನಿಂದ ಹೊಸಕೋಟೆ ಮಾರ್ಗವಾಗಿ 65 ಕಿ.ಮೀ ಸಾಗಿದರೆ ಕೈವಾರ ಕ್ರಾಸ್‌ ಸಿಗುತ್ತದೆ. ಕೈವಾರ ಕ್ರಾಸ್‌ನಿಂದ 2 ಕಿ.ಮೀ ಒಳಕ್ಕೆ ಸಾಗಿದರೆ ಕೈವಾರ ತಲುಪಬಹುದಾಗಿದೆ. ಕೈವಾರದಿಂದ 7 ಕಿ.ಮೀ ಕ್ರಮಿಸಿ ಎಡಕ್ಕೆ ತಿರುಗಬೇಕು. ಅಲ್ಲಿಂದ 3 ಕಿ.ಮೀ ಕ್ರಮಿಸಿದರೆ ಕೈಲಾಸಗಿರಿ ಸಿಗುತ್ತದೆ. ಕೈಲಾಸಗಿರಿ ಕ್ರಾಸ್‌ ನಿಂದ ಚಿಂತಾಮಣಿ 3 ಕಿ.ಮೀ ದೂರವಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.