ಆ ರಾತ್ರಿ ನಿದ್ದೆಯ ವಶರಾದ ಕೈಲಾಸಂ ಏಳಲೇ ಇಲ್ಲ. ಬೆಳಿಗ್ಗೆ ಅವರನ್ನು ಎಬ್ಬಿಸಲು ಬಂದಾಗ ಅವರು ಚಿರನಿದ್ರೆಗೆ ಶರಣಾಗಿಬಿಟ್ಟಿದ್ದರು.
ಕೈಲಾಸಂ ನಮ್ಮನ್ನಗಲಿ ಎಪ್ಪತ್ತು ವರ್ಷಗಳಾಗುತ್ತ ಬಂತು. ಅವರು ಗತಿಸಿ ಏಳು ದಶಕಗಳೇ ಉರುಳಿದ್ದರೂ ಅವರ ‘ಟೊಳ್ಳು–ಗಟ್ಟಿ’, ‘ಪೋಲಿ ಕಿಟ್ಟಿ’, ‘ಬಂಡ್ವಾಳವಿಲ್ಲದ ಬಡಾಯಿ’, ‘ಹುತ್ತದಲ್ಲಿ–ಹುತ್ತ’... ಒಂದೆ, ಎರಡೆ? ಹದಿನೇಳು ಕನ್ನಡ ನಾಟಕಗಳು! ಆರು ಇಂಗ್ಲಿಷ್ ನಾಟಕಗಳು, ಅವರ ಸಾಹಿತ್ಯ ಫಸಲು ಅಂತಃಸತ್ವದಿಂದ ತುಂಬಿರುವಂಥದು.
ವರದಕ್ಷಿಣೆಯ ಪಿಡುಗನ್ನು ಎತ್ತಿ ಹೇಳುವ ‘ತಾಳೀ ಕಟ್ಟೋಕೆ ಕೂಲೀನೆ?’; ಅಂಕ, ರ‍್ಯಾಂಕ್‌ಗಳ ಹಿಂದೆ ಓಡುತ್ತ ಮಾನವೀಯತೆಯ ಪಾಠವನ್ನೇ ಮರೆಯುತ್ತಿರುವವರನ್ನು ಎಚ್ಚರಿಸುವ ‘ಟೊಳ್ಳು–ಗಟ್ಟಿ’; ವೈದ್ಯನ ವೃತ್ತಿಗೆ ಅಂಟಿರುವ ಜಾಡ್ಯವನ್ನು ಜಾಲಾಡುವ ‘ವೈದ್ಯನ ವ್ಯಾಧಿ’; ಮಾತಿಗೂ–ಕೃತಿಗೂ ಸಂಬಂಧವಿಲ್ಲದೇ ಬಾಯಿ ಬಡಾಯಿ ಕೊಚ್ಚಿಕೊಳ್ಳುವ ಎಡಬಿಡಂಗಿಗಳ ‘ಬಂಡವಾಳವಿಲ್ಲದ–ಬಡಾಯಿ’ ಹೀಗೆ ಬೆಳೆಯುತ್ತ ಸಾಗುತ್ತದೆ ಅವರ ಗಟ್ಟಿ ನಾಟಕಗಳ ಪಟ್ಟಿ!
ಅವರ ಬದುಕು–ಬರಹ ಕುರಿತು ನಾಟಕಗಳು, ಏಕವ್ಯಕ್ತಿ ಪ್ರದರ್ಶನಗಳು, ಕಿರುತೆರೆ ಧಾರಾವಾಹಿಗಳು, ಅವರ ಸಾಂಗ್ಸು/ ಜೋಕ್ಸುಗಳ ಪುಸ್ತಕ, ಸಿಡಿ/ಡಿವಿಡಿಗಳು ದಿವಿನಾಗಿ ಬಂದಿವೆ. ಜನಗಳನ್ನು ತಲುಪುತ್ತಿವೆ– ಮನಗಳನ್ನು ಕಲಕುತ್ತಿವೆ. ಈ ಸಂದರ್ಭದಲ್ಲಿ ಈ ಮಹಾನ್ ಚೇತನದೊಂದಿಗೆ ಒಂದು ಕಾಲ್ಪನಿಕ ನೇರ–ಫೋನ್–ಇನ್ ಕಾರ್ಯಕ್ರಮದ ಯಥಾವತ್ ವರದಿ ‘ಮೆಟ್ರೊ’ ಓದುಗರಿಗಾಗಿ ಇಲ್ಲಿದೆ.
***
ಮೆಟ್ರೊ ನಮಸ್ಕಾರಾ..., ಸರ್... ನಾನು ಪ್ರಜಾವಾಣಿ ಮೆಟ್ರೊದಿಂದ... ನಿಮ್ಮ ಎಪ್ಪತ್ತನೆ ಪುಣ್ಯ ತಿಥಿಯ ಸಂದರ್ಭದಲ್ಲಿ, ನಿಮ್ಮನ್ನು ಸ್ಮರಿಸಿಕೊಳ್ತಾ... ನಿಮ್ಮೊಂದಿಗೆ ಒಂದಷ್ಟು ಮಾತು–ಕತೆ ಮಾಡೋಣಾ... ಅಂತ...
ಕೈಲಾಸಂ ಧ್ವನಿ: ಓಹ್ ನಮ್ ಟಿ.ಎಸ್.ಆರ್., ವೈ.ಎನ್.ಕೆ., ಸೇತೂರಾಮ್, ರಾಮರಾವ್ ಅವರನೆಲ್ಲಾ ಬೆಳ್ಸಿದ ಪ್ರಜಾವಾಣಿ! ಅಷ್ಟೇ ಏಕೆ ನನ್ನ ಎಷ್ಟೋ ಕೃತಿಗಳನ್ನು ಓದುಗರಿಗೆ/ ಪ್ರೇಕ್ಷಕರಿಗೆ ತಲುಪಿಸಿದ ಪತ್ರಿಕೆ ಪ್ರಜಾವಾಣಿ!... ನನ್ನ ಎಪ್ಪತ್ತನೆ ಪುಣ್ಯ ತಿಥೀನಾ ಜ್ಞಾಪಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್.
ಮೆಟ್ರೊ: ನಿಮ್ಮ ಆಂಗ್ಲ ಭಾಷೆಯ ಸಂಭಾಷಣೆಗಳ ಬಗ್ಗೆ ಆಗ ಹುಬ್ಬೇರಿಸುತ್ತಿದ್ದ ಜನ ಈಗ ‘ಕನ್ನಡಾಂಗ್ಲೊ–ಕಂಗ್ಲಿಷ್’ ಬಳಕೆಯನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಮೊದಲ್ನೇ ಕ್ಲಾಸಿಂದ್ಲೇ ಇಂಗ್ಲಿಷ್ ಕಲಿಸ್ಬೇಕೂಂತ ಪಣ ತೊಟ್ಬಿಟ್ಟಿದ್ದಾರೆ.
ಕೈ–ಧ್ವನಿ: ನನಗಿನ್ನೂ ನೆನಪಿದೆ. 1930–40 ರಲ್ಲಿ ನನ್ನ ನಾಟಕಗಳ ಬಗ್ಗೆ ಚರ್ಚೆಯಾದಾಗ ಒಬ್ಬರು ಕೇಳಿದ್ರು – ‘ಅಲ್ಲಾ, ಮಿಸ್ಟರ್ ಕೈಲಾಸಂ, ನಿಮ್ಮ ಡ್ರಾಮಾಗಳಲ್ಲಿ ಏಯ್ಟಿ ಪರ್ಸೆಂಟ್ ಇಂಗ್ಲಿಷ್ ಇದೆ. ಆಡಿಯನ್ಸ್ ಹ್ಯಾಗೆ ಅಂಡರ್‌ಸ್ಟಾಂಡ್ ಮಾಡ್ಕೋತಾರೆ ಅಂತಾ?!... ಉತ್ತರ ಈ ಪ್ರಶ್ನೇಲೇ ಇದೆ ಅಲ್ವೇ?! ... ಆದ್ರೆ ಈಗ ನೀವು ಹೇಳೋದು ಕೇಳಿದ್ರೆ, ನಾನು ಆಗ ಬರೆದ ಕನ್ನಡಾಂಗ್ಲೋ ಈಗ ಕಂಗ್ಲಿಷ್ ಆಗಿ ಇನ್ನಷ್ಟು, ಮತ್ತಷ್ಟು ಬಳಕೆಯಾಗ್ತಾಯಿದೆ ಅಂತಾಯ್ತು. ನನ್ನ ಬೆನ್ನನ್ನು ನಾನೇ ತಟ್ಕೋತೀನಿ ಇಲ್ಲಿ ನನ್ಜೊತೆ ನಂ ಪಟಾಲಂ... ಅದೇ ನಾಣಿ, ಪದ್ದಣ್ಣ, ವೈ.ಎನ್.ಕೆ, ಕೆ. ವಿ. ಅಯ್ಯರ್, ಸಿ. ಆರ್. ಸಿಂಹ, ಟಿ. ಎನ್. ನರಸಿಂಹನ್ ಎಲ್ಲಾ ಸೇರ್‍್ತೀವಿ. ಹಾಂ... ನನಗಿಂತ ಕೊಂಚ ಲೇಟಾಗಿ, ಲೇಟೆಸ್ಟಾಗಿ ಬಂದ ಅವರೂ ಈ ವಿಷಯ ತಿಳಿಸಿದ್ರು ಅನ್ನಿ...
ಮೆಟ್ರೊ: ನೀವಿರೊ ಲೋಕದ್ಹೆಸ್ರು ನನಗೆ ತಿಳೀದು. ಹುಂ ‘ಕೈಲಾಸಂ’ ಅಂತೇ ಇಟ್ಕೋಳ್ಳೋಣ. ಅಲ್ಲಿ ಹೊಸದಾಗಿ ಯಾವುದಾದ್ರೂ ನಾಟಕ, ಪ್ರಹಸನ ಬರದ್ರಾ?
ಕೈ–ಧ್ವನಿ: ಭೂ– ಲೋಕದಲ್ಲಿ ನಾಟಕ ಬರೆಯೋಕೆ ಸಿಗೋ ಅಷ್ಟು ವಸ್ತು – ವಿಷ್ಯಾ ಇಲ್ಲಿ ಸಿಗೊಲ್ಲಾ. ಇಲ್ಲೆಲ್ಲ ಬಲೇ ಅಚ್ಚ–ಕಟ್ಟು. ಕಟ್ಟು–ನಿಟ್ಟು, ನನ್ನ ಏಕಲವ್ಯ, ಕರ್ಣರಂತಹ ಪುರಾಣ– ಪುರುಷರ ನಾಟಕಗಳು ಆಗಾಗ ಆಗ್ತಾ ಇರ್‍ತಾದೆ. ಆದ್ರೂ ಭೂ ಲೋಕದ ಮಜಾನೇ ಮಜಾ. ನಾನೀಗ ಕೈಲಾಸವಾಸಿ; ನನಗೇನೋ ಭೂ–ಲೋಕಾನೇ ವಾಸಿ! ಮತ್ತಲ್ಲಿಗೆ ಬರಬೇಕೂಂತ ಮನಸು ಭಾಳ ತುಡಿಯುತ್ತೆ. ಪಾನಗೋಷ್ಠಿ, ಧೂಮಲೀಲೆ ಎಲ್ಲಾ ನೆನಪಾಗ್ತದೆ– ಇದೊಂದು ಥರಾ– ಸತ್ತವನ ಸಂತಾಪ!
ಮೆಟ್ರೊ: ಮತ್ತೀಗ ನೀವಿಲ್ಲಿಗೆ ಬಂದ್ರೆ, ಬೆಂಗಳೂರು ಮೊದಲಿನ ಬೆಂಗಳೂರಾಗಿ ಉಳಿದಿಲ್ಲ. ತುಂಬಾ ಚೇಂಜ್ ಆಗಿದೆ– ಜನಾನೂ ಚೆಂಜಾಗಿದಾರೆ. ಚಾಮರಾಜಪೇಟೆಯ ನಿಮ್ಮ ಮನೆ ‘ವೈಟ್ ಹೌಸ್’ ಆಗಲಿ, ನೀವು ಕೊನೆಯುಸಿರೆಳೆದ ಬಸವನಗುಡಿಯ ವಿ. ಟಿ. ಶ್ರೀನಿವಾಸನ್ ಅವರ ‘ಅವಂತಿ’ ಮನೆ, ಮನುಷ್ಯರು ಎಲ್ಲಾ ಚೆಂಜಾಗಿದೆ. ಎಲ್ಲಾ ಕಡೆ ಗಿಜಿಗಿಜಿ ಜನ, ದಂಡಿಯಾಗಿ ವಾಹನ, ಟೆರಿಫಿಕ್ ಟ್ರಾಫಿಕ್ಕು – ಟ್ರಾಫಿಕ್ ಜಾಮು.
ಕೈ–ಧ್ವನಿ: ಕೈಲಾಸದಿಂದ ಭೂಲೋಕಕ್ಕೆ ಬರುವ ದಾರೀಲೂ ಸಾಕಷ್ಟು ಟ್ರಾಫಿಕ್ ಜಾಮ್ ಇದೆ ಮಗೂ! ಅದಕ್ಕೇ ನನಗಿನ್ನೂ ಅಲ್ಲೀಗೆ ಬರೋಕಾಗಿಲ್ಲ. ನೀನು ಹೇಳೋದು ಕೇಳಿದ್ರೆ ಈಗ ನನ್ನ ಅಗತ್ಯ ಅಲ್ಲಿ ಹೆಚ್ಚಿದೆ ಅಂತ ಅನಸ್ತಾಯಿದೆ. ಐ.ಟಿ. – ಬಿ.ಟಿ. ಅಂತ ಐಡೆಂಟಿಟೀನೇ ಕಳ್ಕೊಂಡು, ಸ್ಟ್ರೆಸ್ಸು–ಸ್ಪೇನು ಅಂತ ಬ್ರೇನ್ ಭಾರಾ ಮಾಡಿಕೊಂಡು ನಗೋದನ್ನೇ ಮರೆತ ನಾಗರಿಕರನ್ನು ಕಂಡು ನಗೆಯು ಬರುತಿದೆ. ಎನಗೆ ನಗೆಯು ಬರುತಿದೆ. ನಕ್ಕರೋ ಅದಕ್ಕಿಂತ ಜಾಸ್ತಿ ನಗು ನನಗೆ ಬರ್‍ತಾಯಿದೆ ಈಗ! ಗಣಕ, ಗಣಕ ಅಂತ ಕ್ಷಣ–ಕ್ಷಣಕೆ ಕಂಪ್ಯೂಟರ್ ಹಿಂದೆ ಬಿದ್ದು ಝಣ–ಝಣ ಹಣಗಳಿಕೆಯ ದಾಸರಾಗಿರೋರ ಬಗ್ಗೆ ನಾಟಕ ಬರೀಬೇಕು ಅನ್ಸತ್ತೆ, ‘ಬೇಟಾ, ಬೇಟಿ, ಐ.ಟಿ.–ಬಿಟಿ’; ‘ಅಪ್ಪ–ಅಮ್ಮ–ವೃದ್ಧಾಶ್ರಮ’; ‘ನಗೋದನ್ನರಿತಾತಾ ನಗರಕ್ಕೇ ತಾತಾ’; ‘ಹಣ ನಚ್ಚಿ– ಗುಣಾ ಮರೆತು’; ‘ಡಾಲರ್‌ಗೋಸ್ಕರ ಕಾಲರ್ ಬಗ್ಗಸ್ಬೇಡಾ’; ಹೀಗೆ ನಾಟಕಗಳನ್ನು ರೆಡಿ ಮಾಡ್ಬೇಕು ಅನ್ನೊಂಡಿದ್ದೆ.
ಮೆಟ್ರೊ: ನಿಮ್ಮ ‘ಸತ್ತವನ ಸಂತಾಪ’ ನಾಟಕದ ಈ ಸಾಲುಗಳಂತೆ ‘Suffering ಅಂಬೋದು ಸರ್ವತ್ರ. ಸತ್ಮೇಲೇನೆ ಅವುಗಳಿಂದ ವಿಮೋಚ್ನೆ... ಹಾಗೇನೆ ‘ಸತ್ಮೇಲೆ ನಗ್ತಿರ್‍ಬೇಕು ನನ್ಹೆಣ’ ಎಂದ ನೀವು ನಗ್ತಾ ನಗ್ತಾ ನಿರ್ಗಮಿಸಿದಿರಿ. ‘ಕೈಲಾಸಂ ಶವ ನಗುತ್ತಲೇ ಇತ್ತು. ಶಾಂತಿಯಿಂದಲೊ, ತೃಪ್ತಿಯಿಂದ್ಲೊ ಅಥ್ವಾ ನಮ್ಮನ್ನ ನೋಡಿಯೋ?!’ ಅಂತಾ ಅ.ನ.ಕೃ. ನಿಮ್ ಸಾವಿನ ಬಗ್ಗೆ ಬರೆದದ್ದು ಮತ್ತೆ ಮತ್ತೆ ನೆನಪಾಗ್ತಾ ಇದೆ. ನಮ್ಮ ಜಡ್ಡುಗಟ್ಟಿದ ಸಮಾಜಕ್ಕೆ ನಿಮ್ಮಂಥವರ ಪೊರಕೆ ಸೇವೆ ಸದಾ ನಡೀತಾನೇ ಇರ್‍ಬೇಕೇನೋ ಅನ್ಸತ್ತೆ... ಆದ್ರೂ ನೀವು ಬದುಕಿದ್ದಾಗ ಸಲ್ಲಬೇಕಾಗಿದ್ದ ಗೌರವ, ನಿಮಗೆ ಸಲ್ಲಲಿಲ್ಲವೇನೋ ಅನ್ನೋ ವ್ಯಥೆ.
ಕೈ–ಧ್ವನಿ: ಛೇ ಹಾಗೆಲ್ಲ ಕೊರಗಕೂಡ್ಡು, ಚಿಯರ್ ಅಪ್!
ಹೊನ್ನೆ? ಬಲ್ ಬಿರುದುಗಳೆ? ಹಾಲುಗಲ್ ವಿಗ್ರಹವೆ?
ಕವಿ ಬಯಸನಿಂಥದೇ ಪ್ರತಿಫಲವೇ ಬೇಕು;
ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರಡು
ಕಣ್ಣ ಹನಿಯಿತ್ತರೆ ನಗದು ಅನಿತೆ ಸಾಕು.
someವೇ, some ಮೂಮೆಂಟ್, some ವ್ಹೇರ್, some ಬಡಿ ಕೈಲಾsome – ಸ್ಮರಣೆ ನಡೀತಿದೆಯಲ್ಲ! fine!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.