ಕ್ರಿಸ್‌ಮಸ್ ಜಗತ್ತಿನ ಅತಿದೊಡ್ಡ ಹಬ್ಬಗಳಲ್ಲಿ ಒಂದು. ಧರ್ಮದ ಚೌಕಟ್ಟನ್ನು ಮೀರಿ ಸಂಭ್ರಮದ ಜಾತ್ರೆಯಾಗುವ ಈ ಹಬ್ಬಕ್ಕೆ ಸಾಂಪ್ರದಾಯಿಕ ಆಚರಣೆಯನ್ನು ಮೀರಿದ ಹಲವು ಮುಖಗಳಿವೆ. ಹಬ್ಬದೊಟ್ಟಿಗೆ ಸಿಗುವ ದೀರ್ಘ ರಜೆಯೂ ಸೇರಿಕೊಂಡು ಅದಕ್ಕೊಂದು ವಿರಾಮದ ಆಯಾಮವೂ ಇದೆ.
ಜಗತ್ತಿನ ದೊಡ್ಡ ಹಬ್ಬಗಳಲ್ಲೊಂದಾದ ಕ್ರಿಸ್‌ಮಸ್ ಸಂಭ್ರಮಕ್ಕೆ ನಗರವೂ ಸಜ್ಜುಗೊಳ್ಳುತ್ತಿದೆ. ಕ್ರಿಸ್‌ಮಸ್ ಎಂದರೆ ಶಾಲಾ ಕಾಲೇಜು ಮಕ್ಕಳಿಗೆ ರಜೆಯ ಮಜ ಸವಿಯುವ ಕಾಲವಾದರೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಮನೆಗೆ ಮರಳುವ ಉಮೇದಿನ ಕಾಲ.
ವರ್ಷಾಂತ್ಯದ ಹಬ್ಬವಿದು. ಇದು ಮುಗಿದ ಮೇಲೆ ಹೊಸ ವರುಷಕೆ ಕಾಲಿಡುವ ಸಂಭ್ರಮ. ಇನ್ನು ಇಲ್ಲಿನ ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಎರಡು ಮೂರು ವಾರದ ಕಾಲ ರಜೆ ಇರುತ್ತದೆ. ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವ ದೇಶಗಳಲ್ಲಿ ಈ ಸಂಭ್ರಮ ಇನ್ನೂ ಹೆಚ್ಚಾಗಿರುತ್ತದೆ.
ನಮ್ಮಲ್ಲಿ ಮೇ ತಿಂಗಳಲ್ಲಿ ಶಾಲೆಗಳಿಗೆ ರಜೆ ಸಿಕ್ಕರೆ ಅನೇಕ ದೇಶಗಳಲ್ಲಿ ಕ್ರಿಸ್‌ಮಸ್ ಕಾಲದಲ್ಲಿ ಶಾಲೆ– ಕಂಪೆನಿಗಳಿಗೆ ಒಂದಷ್ಟು ವಾರ ರಜೆ ಇರುತ್ತದೆ. ಇಲ್ಲಿನ ಕೆಲವು ಕಾರ್ಪೊರೇಟ್ ಕಂಪೆನಿಗಳಿಗೂ ರಜೆ ಇರುತ್ತದೆ. ಅಂತಹ ಕಂಪೆನಿಯ ಉದ್ಯೋಗಿಗಳಿಗೆ ಕ್ರಿಸ್‌ಮಸ್ ಎಂಬುದು ಚಾರಣ, ಪ್ರವಾಸ ಎಂದೆಲ್ಲ ಬ್ಯಾಗ್ ಹೆಗಲಿಗೇರಿಸಿಕೊಂಡು ಸುತ್ತಾಣಕ್ಕೆ ಹೊರಡುವ ಸಮಯ.
ಭಾರತೀಯ ಜೀವನಕ್ರಮಕ್ಕೂ ವಿದೇಶಿ ಜೀವನಕ್ರಮಕ್ಕೂ ಕೆಲವು ಮೂಲಭೂತ ವ್ಯತ್ಯಾಸಗಳಿವೆ. ಆದ್ದರಿಂದಲೇ ಕ್ರಿಸ್‌ಮಸ್ ಆಚರಣೆ ಮತ್ತು ಆ ಹಬ್ಬದ ರಜೆಯನ್ನು ಪರಿಭಾವಿಸುವ ರೀತಿಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳಿವೆ. ಈ ಎರಡು ಅನುಭವಗಳನ್ನು ಹೊಂದಿರುವ ಕೆಲವರನ್ನು ಮಾತನಾಡಿಸಿದಾಗ ಹಬ್ಬದ ಹಲವು ಮುಖಗಳು ದರ್ಶಿತವಾದವು.
ಒರ್‍ಯಾಕಲ್ ಕಂಪೆನಿಯ ಉದ್ಯೋಗಿಯಾಗಿ 14 ವರ್ಷ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕೆಲಸ ಮಾಡಿದ್ದ ಎಂ.ಆರ್. ದತ್ತಾತ್ರಿ ಕನ್ನಡದ ಪ್ರಮುಖ ಲೇಖಕರೂ ಹೌದು. ಸದ್ಯಕ್ಕೆ ಬೆಂಗಳೂರಿನಲ್ಲಿಯೇ ವಾಸವಾಗಿರುವ ದತ್ತಾತ್ರಿ ಅವರಿಗೆ ಅಮೆರಿಕಾದಲ್ಲಿದ್ದ ಸಮಯದಲ್ಲಿ ಕ್ರಿಸ್‌ಮಸ್ ರಜೆಯೆಂದರೆ ತಾಯ್ನಾಡಿಗೆ ಮರಳುವ ಸಂಭ್ರಮವಾಗಿತ್ತು. ‘ಅಲ್ಲಿ ಡಿಸೆಂಬರ್ ಸಮಯ ಶಾಲೆ, ಕಂಪೆನಿಗಳಿಗೆ ಹೆಚ್ಚು ರಜಾ ಸಿಗುತ್ತದೆ. ಮಕ್ಕಳಿಗೆ ಜೂನ್‌ನಲ್ಲಿ ಒಂದು ಸಲ ರಜೆ ಸಿಕ್ಕರೆ, ಮತ್ತೆ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಆಚರಣೆಗಾಗಿ ರಜೆ ನೀಡುತ್ತಾರೆ. ಡಿಸೆಂಬರ್‌ನಲ್ಲಿ ಕೆಲವು ಕಂಪೆನಿಗಳು ಉತ್ಪಾದನೆ ನಿಲ್ಲಿಸುತ್ತವೆ. ಹಾಗಾಗಿ ಎರಡು, ಮೂರು ವಾರ ರಜೆ ಇರುತ್ತದೆ. ತಮ್ಮ ಊರಿಗೆ ಬರುವವರು ಇನ್ನೂ ಒಂದೆರೆಡು ವಾರ ರಜಾ ಹಾಕಿ ಬರುತ್ತಾರೆ. ಜನವರಿ ಒಂದರವರೆಗೂ ಅಲ್ಲಿ ರಜೆಯ ದಿನಗಳು’ ಎನ್ನುತ್ತಾರೆ ದತ್ತಾತ್ರಿ.
ಇನ್ನು ನ್ಯೂಜೆರ್ಸಿಯಲ್ಲಿದ್ದ ವಿಕ್ರಮ್ ಹತ್ವಾರ್ ಕ್ರಿಸ್‌ಮಸ್‌ಗೆ ಸಿಗುವ ರಜೆಯಲ್ಲಿ ಊರಿಗೆ ಬರುತ್ತಿದ್ದುದು ಕಡಿಮೆ. ಬದಲಿಗೆ ಅಲ್ಲಿಯೇ ಇದ್ದು ಕ್ರಿಸ್‌ಮಸ್ ಆಚರಿಸುತ್ತಿದ್ದರು.
‘ಡಿಸೆಂಬರ್ ಒಂದು ತಿಂಗಳು ಕಂಪೆನಿಗೆ ರಜೆ ಇರುತ್ತದೆ. ಜನವರಿ ಮೊದಲನೇ ವಾರದವರೆಗೆ ಯಾರೂ ಕೆಲಸ ಮಾಡುವುದಿಲ್ಲ. ನವೆಂಬರ್‌ನ ಕೊನೆಯಲ್ಲಿ ‘ಥ್ಯಾಂಕ್ಸ್ ಗಿವಿಂಗ್’ ಕಾರ್ಯಕ್ರಮವಿರುತ್ತದೆ. ಆವಾಗಿನಿಂದ ನಮಗೆಲ್ಲ ರಜಾ ಸಿಗುತ್ತದೆ. ಆ ಕಾಲದಲ್ಲಿ ಸುರಿಯುವ ಮಂಜನ್ನು ನೋಡುವುದೇ ಅದ್ಭುತ ಅನುಭವ. ಈ ಸಮಯದಲ್ಲಿ ವಿಮಾನದ ಟಿಕೆಟ್ ಬೆಲೆ ಜಾಸ್ತಿ ಇರುತ್ತದೆ. ಹಾಗಾಗಿ ನಾನು ಕ್ರಿಸ್‌ಮಸ್ ರಜೆಯಲ್ಲಿ ಊರಿಗೆ ಬರುತ್ತಿರಲಿಲ್ಲ. ಅಲ್ಲಿಯೇ ಕಳೆಯುತ್ತಿದ್ದೆ’ ಎನ್ನುತ್ತಾರೆ ವಿಕ್ರಮ್.
ಆಫ್ರಿಕಾದ ತಾಂಜಾನಿಯಾದಲ್ಲಿನ ಮೆಡಿಕಲ್ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಅವರೂ ಡಿಸೆಂಬರ್ ರಜೆಯಲ್ಲಿ ತವರಿಗೆ ಮರಳುತ್ತಿರಲಿಲ್ಲ. ಅವರು ವಿದೇಶದಲ್ಲಿನ ಕ್ರಿಸ್‌ಮಸ್ ಅನುಭವವನ್ನು ವರ್ಣಿಸುವುದು ಹೀಗೆ: ‘ಅಲ್ಲಿ ಡಿಸೆಂಬರ್ ಒಂದು ತಿಂಗಳು ಮಕ್ಕಳಿಗೆ ರಜೆ ಇರುತ್ತದೆ. ಆದರೆ ಕಂಪೆನಿಗಳಿಗೆ ಎರಡು ದಿನ ಮಾತ್ರ ರಜೆ. ಕ್ರಿಸ್‌ಮಸ್ ಮತ್ತು ನಂತರದ ಒಂದು ದಿನ ರಜೆ ಸಿಗುತ್ತದೆ. 26ರಂದು ಬಾಕ್ಸಿಂಗ್ ಡೇ. ಅಂದರೆ ಕ್ರಿಸ್‌ಮಸ್ ದಿನದಂದು ನೀಡಿರುವ ಉಡುಗೊರೆಗಳ ಬಾಕ್ಸ್‌ಗಳನ್ನು ತೆರೆಯುವ ದಿನ’.
ಅಮೆರಿಕದಲ್ಲಿ ವೈದ್ಯರಾಗಿ ವೃತ್ತಿ ನಿರ್ವಹಿಸುತ್ತಿರುವ ಅಶ್ವಿನಿ ಅವರಿಗೆ ಡಿಸೆಂಬರ್ ತಿಂಗಳಿಡೀ ಹಬ್ಬದ ಸಂಭ್ರಮ. ಈ ವರ್ಷ ಊರಿಗೆ ಬರದಿರಲು ಅವರಿಗೆ ಹಲವಾರು ಕಾರಣಗಳಿದ್ದರೂ ಅಲ್ಲಿನ ಕ್ರಿಸ್‌ಮಸ್ ಖುಷಿ ಅವರ ಬೇಸರವನ್ನು ಮರೆಸಿಬಿಡುತ್ತದೆ.
‘ಇಲ್ಲಿ ಡಿಸೆಂಬರ್ ಪೂರ್ತಿ ಕ್ರಿಸ್‌ಮಸ್ ಸಂಭ್ರಮ ಇರುತ್ತದೆ. ಹಿಂದೂಗಳು ಕೂಡ ಮಕ್ಕಳಿಗಾಗಿ ಮನೆಯಲ್ಲಿ ಕ್ರಿಸ್‌ಮಸ್ ಟ್ರೀಯನ್ನು ಇಡುತ್ತಾರೆ. ಪಾರ್ಕ್‌ಗಳನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡಿರುತ್ತಾರೆ. ಕೆಲವೊಮ್ಮೆ ಹಬ್ಬದ ಸಂದರ್ಭದಲ್ಲಿ ಊರಿಗೆ ಬರುತ್ತೇವೆ. ಈ ಬಾರಿ ಇಲ್ಲಿಯೇ ಇರುತ್ತೇವೆ’ ಎನ್ನುವ ಅವರು, ‘ಈ ಸಮಯದಲ್ಲಿ ವಿಮಾನದ ಟಿಕೆಟ್ ದರ ಜಾಸ್ತಿ. ನ್ಯೂಯಾರ್ಕ್‌ನ ವಿಮಾನ ನಿಲ್ದಾಣದಲ್ಲಿ ಹಿಮ ಜಾಸ್ತಿ ಬೀಳುವುದರಿಂದ ವಿಮಾನ ಹಾರಾಟ ಸ್ಥಗಿತಗೊಳ್ಳುವ ಸಾಧ್ಯತೆ ಜಾಸ್ತಿ’ ಎಂದು ತಾಯಿನೆಲಕ್ಕೆ ಮರಳಲು ಹಿಂಜರಿಕೆಗೆ ಕಾರಣವಾದ ಸಂಗತಿಗಳನ್ನು ತಿಳಿಸುತ್ತಾರೆ.
ಕನ್ನಡದ ಒಂದಷ್ಟು ಸಿನಿಮಾ ಹಾಡುಗಳಿಗೆ ದನಿಯಾದ ರಾಮಪ್ರಸಾದ್, ಕ್ರಿಸ್‌ಮಸ್ ರಜೆಗೆ ಈ ಬಾರಿ ತಾಯ್ನಾಡಿಗೆ ಬಂದಿದ್ದಾರೆ. ಅಮೆರಿಕದ ಸಿನ್‌ಸಿನಾಟಿಯ ಮ್ಯಾರಥಾನ್ ಪೆಟ್ರೋಲಿಯಂ ಕಂಪೆನಿಯ ಉದ್ಯೋಗಿ ಇವರು. ಕ್ರಿಸ್‌ಮಸ್‌ಗೆಂದು ಅವರಿಗೆ ಎರಡು ದಿನ ರಜೆ ಮಾತ್ರ ಇರುವುದು. ಹೊಸವರ್ಷಕ್ಕೆ ಸಿಗುವ ಎರಡು ದಿನ ರಜೆ ಮತ್ತು ವರ್ಷಕ್ಕೆ ಸಿಗುವ ಮೂರು ವಾರದ ರಜೆಯನ್ನೆಲ್ಲಾ ಸೇರಿಸಿಕೊಂಡು ಊರಿಗೆ ಬಂದ ಖುಷಿ ಅವರಲ್ಲಿದೆ. ವಿಮಾನ ದರ ಎಷ್ಟಿದ್ದರೂ ಊರಿಗೆ ಬರುವಾಗ ಅದೆಲ್ಲಾ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ರಾಮಪ್ರಸಾದ್ ಅವರ ಮಾತು.
ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಂಪೆನಿಯೊಂದರ ಉದ್ಯೋಗಿಯಾಗಿರುವ ಆಕಾಶ್ ಸಾಲಿಯಾನ್‌ಗೆ ಈ ಬಾರಿ ಕ್ರಿಸ್‌ಮಸ್‌ಗೆ ಒಂದು ವಾರ ರಜೆ ಸಿಕ್ಕಿದೆ. ರಜೆ ಕಳೆಯಲು ಸ್ನೇಹಿತರ ಜತೆ ಸೇರಿಕೊಂಡು ಚಾರಣಕ್ಕೆ ಹೋಗುವ ಯೋಜನೆ ಅವರದು. ‘ನಾನು ಇದೇ ವರ್ಷ ಕೆಲಸಕ್ಕೆ ಸೇರಿದ್ದು. ಕಾಲೇಜಿನಲ್ಲಿರುವಾಗ ಒಂದು ದಿನವಷ್ಟೇ ರಜೆ ಸಿಗುತ್ತಿತ್ತು. ದೊಡ್ಡ ಪ್ಲಾನ್ ಏನೂ ಮಾಡಲಾಗುತ್ತಿರಲಿಲ್ಲ. ಆದರೆ ಇಲ್ಲಿ ಒಂದು ವಾರ ರಜೆ ಕೊಟ್ಟಿದ್ದಾರೆ. ಸಖತ್ ಖುಷಿಯಾಗಿದೆ. ಗೆಳೆಯರೆಲ್ಲಾ ಸೇರಿಕೊಂಡು ಚಾರಣಕ್ಕೆ ಹೋಗಲು ಸಿದ್ಧತೆ ನಡೆಸಿದ್ದೇವೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.