ADVERTISEMENT

ಗಮನ ಸೆಳೆದ ಗಾಯನ ಕಛೇರಿ

ಎಂ.ಸೂರ್ಯ ಪ್ರಸಾದ್
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST
ಗಮನ ಸೆಳೆದ ಗಾಯನ ಕಛೇರಿ
ಗಮನ ಸೆಳೆದ ಗಾಯನ ಕಛೇರಿ   

ಶೇಷಾದ್ರಿಪುರಂ ರಾಮಸೇವಾಸಮಿತಿಯ 64ನೆ ರಾಮನವಮಿ ಸಂಗೀತೋತ್ಸವದಲ್ಲಿ ನಡೆದ ಪ್ರಸಿದ್ಧ ಗಾಯಕ ನೈವೇಲಿ ಸಂತಾನಗೋಪಾಲನ್‌ಅವರ ಮಗಳು ಶ್ರಿರಂಜಿನಿ ಸಂತಾನಗೋಪಾಲನ್ ಅವರ ಗಾಯನ ಕಛೇರಿಯಲ್ಲಿ ಶಾಸ್ತ್ರ, ಪ್ರಯೋಗ ಮತ್ತು ಕಲೆಗಳ ಗಟ್ಟಿತನದಿಂದ ಹಲವಾರು ಕಾಲ ಕೇಳುಗರನ್ನು ಹಿಡಿದಿಟ್ಟಿತು.

ಸುಗಮ ಸಂಚಾರದ ಕಂಠ, ಸ್ಫುಟವಾದ ಪಲುಕುಗಳು, ಮೂರೂವರೆ ಸ್ಥಾಯಿಗಳಲ್ಲಿ ಸರಾಗವಾಗಿ ಹಾಸುಹೊಕ್ಕುವ ಶ್ರಿಮಂತ ಧ್ವನಿ, ಕ್ಲಿಷ್ಟ ಲಯದ ಸರಳ ಅಭಿವ್ಯಕ್ತಿಯನ್ನು ಸಹಜವಾಗಿಯೇ ಪ್ರಕಟಗೊಳಿಸಿದರು.
 
ನಾಟ್ಟಿಕುರಂಜಿ ವರ್ಣದ ಸೊಗಸಾದ ಪೀಠಿಕೆ. ಅಪರೂಪಕ್ಕೆ ಕೇಳಿ ಬರುವ ಗೌರಿಮನೋಹರಿ ರಾಗದ ಸ್ಥೂಲವಿವರಣೆ ಸಾರ್ಥಕವಾಗಿತ್ತು. 

ತತ್ವಬೋಧನಜೇಸಿ  ಸಾಲನ್ನು ನೆರೆವಲ್ ರೂಪದಲ್ಲಿ ಸಾಹಿತ್ಯವನ್ನು ಅರ್ಥವತ್ತಾಗಿ ಬಿಡಿಸಿ ಬಿಡಿಸಿ ಹಾಡಿ ದ್ವಿಕಾಲಗಳಲ್ಲಿ ಅದನ್ನು ಅಲಂಕರಿಸಿದರು. ಅಪರೂಪದ ರಾಗ ಕನ್ನಡ ಮತ್ತು ಅಪರೂಪದ  ಮರಿಯಲೇನಿ ಕಾವಲೇನು  ಕೃತಿ ಚಿಟ್ಟಿಸ್ವರಗಳೊಂದಿಗೆ ಸುಖಾನುಭವವನ್ನೀಡಿತು.
 
ಕಾಮವರ್ಧಿನಿರಾಗದ ಪರಿಪೂರ್ಣ ಆಕೃತಿಯನ್ನು ಆಕರ್ಷಕ ಸಂಗತಿಗಳು, ಪಲುಕುಗಳು ಮತ್ತು ಮಾದರಿಗಳ ಮೂಲಕ ಗಾಯಕಿಯು ಕಾಣಿಸಿದರು. ಸುಪರಿಚಿತ ಕನ್ನಡ ಪದ  `ಸದಾ ಎನ್ನ ಹೃದಯದಲ್ಲಿ~ ಭಾವಪೂರ್ಣವಾಗಿ ಹಾಡಿದರು. ಆದರೆ ಅದನ್ನು ಮುಂದುವರಿಸದೆ ನೆರೆವಲ್ ಮತ್ತು ಸ್ವರವಿನ್ಯಾಸವಿಲ್ಲದೆ ಮುಗಿಸಿದುದು ಒಂದು ಬಗೆಯ ನಿರಾಸೆಗೆ ಎಡಮಾಡಿತು.

 ಕ್ಷಿಪ್ರವಾಗಿ ಹಾಡಿದ ಮನವ್ಯಾಲಗಿಂಚರ (ನಳಿನಕಾಂತಿ) ರಂಜಿಸಿತು. ಖರಹರಪ್ರಿಯರಾಗವೇನೋ ಪರಿಚಿತ ರಾಗ. ಅದರ ಆಲಾಪನೆಯನ್ನು ಸಮಗ್ರವಾಗಿ ಮಾಡಿ ಕಛೇರಿಗಳಲ್ಲಿ `ತ್ಯಾಗರಾಜರ  ನಡಚಿ ನಡಚಿ ಚೂಚೆ ` ಕೀರ್ತನೆಯನ್ನು ಆಹ್ಲಾದಕರ ವೇಗದಲ್ಲಿ ಹಾಡಿದರು. ನಳಿನಾ ಮೋಹನ್(ಪಿಟೀಲು), ಆನೂರು ಅನಂತಕೃಷ್ಣಶರ್ಮ(ಮೃದಂಗ) ಮತ್ತು ಬಿ.ಎಸ್.ಪುರುಷೋತ್ತಮ್(ಖಂಜರಿ) ಉತ್ಕೃಷ್ಟವಾದ ಸಹಕಾರವನ್ನು ನೀಡಿದರು.

ನಾದಮಯ ಸರೋದ್ ವಾದನ
ಡಾ.ರಾಜೀವ್ ತಾರಾನಾಥ್ ತಮ್ಮ ಭಾವ ತನ್ಮಯತೆ ಮತ್ತು ನಾದಮಯ ಸರೋದ್ ವಾದನದಿಂದ ಗಮನ ಸೆಳೆದರು. ಸುಗಮ ಹಾಗೂ ಪ್ರಭಾವಕಾರಿ ಲಯದ ಆವರಣದಲ್ಲೇ ರೂಪುಗೊಳ್ಳುವ ಅವರ ಸಂಗತಿಗಳು, ಚೇತನಾಪೂರ್ಣ ಮಂಡನೆಗಳು ಅವರ ವಾದನಕ್ಕೆ ಅಪೂರ್ವತೆಯನ್ನು ನೀಡಿವೆ.

ತಮ್ಮ ಘರಾಣೆಯ ಗಾಂಭೀರ್ಯ ಮತ್ತು ಪ್ರೌಢಿಮೆಗಳಿಂದ ಸಮೃದ್ಧಗೊಂಡ ಅವರ ರಾಗ ವಿನ್ಯಾಸ ವಿಶೇಷವೆನಿಸಿತು. ಯುವ ತಬಲಾ ಪಟು ಉದಯರಾಜ್ ಕರ್ಪೂರ್ ಅವರ ಸಶಕ್ತ ತಬಲಾ ಸಾಥ್‌ನೊಂದಿಗೆ ಸ್ಪಂದಿಸಿದ ಡಾ.ರಾಜೀವ್ ತಾರಾನಾಥ್ ಅವರು ಪೂರಿಯ ಕಲ್ಯಾಣ್(ವಿಳಂಬಿತ್ ಮತ್ತು ದ್ರುತ್ ತೀನ್‌ತಾಳ್) ಮತ್ತು ರಾಗಮಾಲಾ(ಝಪ್‌ತಾಳ್) ಚಿತ್ರಣದಲ್ಲಿ ಸುನಾದಮಯ ಲೋಕವನ್ನು ದರ್ಶಿಸಿದರು. ಅರಣ್ಯಕುಮಾರ್ ಅವರು ಸಿತಾರ್‌ನಲ್ಲಿ ಸಹಕರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.