ADVERTISEMENT

ಚಿತ್ರ–ವಿಚಿತ್ರ ಫಲಕೋತ್ಸವ

ಬ್ಲಾಗಿಲನು ತೆರೆದು...

ಸಾಕ್ಷಿ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ನಡೆಯುವಾಗಲೋ, ಬಸ್ಸಿನಲ್ಲಿ ಹೋಗುವಾಗಲೋ ಹಾದಿಬದಿಯ ಫಲಕವೊಂದು ಥಟ್ಟನೆ ಗಮನಸೆಳೆಯಬಹುದು. ಆ ಫಲಕದಲ್ಲಿನ ಬರಹದಲ್ಲಿ ಕೊಂಚ ಏರುಪೇರಾಗಿದ್ದರೆ, ತುಟಿಯಲ್ಲಿ ನಗೆಯೂ ಮಿನುಗುತ್ತದೆ. ಇಂಥ ಸ್ವಾರಸ್ಯಕರ ಫಲಕಗಳ ಸಂಕಲನವೇ ‘ಚಿತ್ರ-ವಿಚಿತ್ರ’ (chitra-vichitra.blogspot.in). ‘ವಿಚಿತ್ರ ಚಿತ್ರಗಳಿಗಾಗಿ!’ ಎನ್ನುವುದು ಬ್ಲಾಗಿನ ಅಡಿ ಟಿಪ್ಪಣಿ.

ಪರಿಸರಪ್ರೇಮಿ ಮತ್ತು ಎಸ್‌. ಲಕ್ಷ್ಮಿ ‘ಚಿತ್ರ ವಿಚಿತ್ರ’ದ ಜಂಟಿ ಬ್ಲಾಗಿಗರು. ಇಬ್ಬರಲ್ಲಿ ಲಕ್ಷ್ಮಿ ಅವರ ಪೋಸ್ಟ್‌ಗಳೇ ಹೆಚ್ಚು ಇರುವಂತಿವೆ. ವೃತ್ತಿಯಿಂದ ಶಿಕ್ಷಕಿಯಾದ ಲಕ್ಷ್ಮಿ ಅವರ ಬಹು ಆಸಕ್ತಿಗಳು ಹಾಗೂ ಲೋಕದ ಬಗೆಗಿನ ಬಿಡುಗಣ್ಣು ಈ ಬ್ಲಾಗಿನಲ್ಲಿ ಕಾಣಿಸುತ್ತದೆ. ಬ್ಲಾಗಿಗರು ತಮ್ಮ ಓದುಗರಿಂದಲೂ ಚಿತ್ರ–ವಿಚಿತ್ರ ಫಲಕಗಳನ್ನು ಆಹ್ವಾನಿಸಿ ಪ್ರಕಟಿಸಿದ್ದಾರೆ. ‘ನೀವು ನಿಮ್ಮ ಕ್ಯಾಮೆರಾದಲ್ಲಿ ವಿಚಿತ್ರ, ವಿಶೇಷ ಚಿತ್ರಗಳನ್ನು ಸೆರೆಹಿಡಿದಿದ್ದೀರಾ? ಆ ಚಿತ್ರಗಳಿಗೆ ಸ್ವಾಗತ. ಚಿತ್ರ ಮತ್ತು ವಿವರಣೆಯನ್ನು ನಮಗೆ ಕಳಿಸಿಕೊಡಿ’ ಎಂದು ಕೋರಿಕೊಂಡಿದ್ದಾರೆ. ಒಟ್ಟಾರೆ ‘ಫಲಕೋತ್ಸವ’ದ ಭರ್ಜರಿ ಸೀಸನ್‌ಗಳು ಬ್ಲಾಗ್‌ನಲ್ಲಿವೆ.

ಫಲಕದ ಜೊತೆಗೆ ಅದಕ್ಕೊಂದು ಪುಟ್ಟ ಅಡಿ ಟಿಪ್‍ಪಣಿಯೂ ಪೋಸ್ಟ್‌ಗಳಲ್ಲಿದೆ. ಕೆಲವು ಉದಾಹರಣೆಗಳನ್ನು ನೋಡಿ:
ಫಲಕ 1: ಛಾಯ ಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ. ಟಿಪ್ಪಣಿ: ಛಾಯಾ ಪಾಪ ಯಾಕೆ ಫೋಟೋ ತೆಗೆಯಬಾರದು? (ಪದದ ಮಧ್ಯದಲ್ಲಿ ಒಂದು ಸ್ಪೇಸ್ ಏನೆಲ್ಲಾ ಅರ್ಥಗಳನ್ನು ಕೊಡಬಹುದು ಅಲ್ವ?)

ಫಲಕ 2: ಡೆಲ್ಲಿ ಮೆಟ್ರೋ. ಟಿಪ್ಪಣಿ: ಬೆಂಗಳೂರಿನಲ್ಲಿ ಡೆಲ್ಲಿ ಮೆಟ್ರೋ ಬೋರ್ಡು! ಅದೂ ಕನ್ನಡದಲ್ಲಿ! ಜೈ ಮೆಟ್ರೋ! ಜೈ ಕರ್ನಾಟಕ ಮಾತೆ!

ಫಲಕ 3: ಗುರುಗಳನ್ನು ಆಗಿಂದಾಗ್ಗೆ ಕತ್ತರಿಸಿ (ಈ ಫಲಕದಲ್ಲಿ ಗುರುಗಳನ್ನು ಪಕ್ಕದಲ್ಲಿನ ‘ಉ’ ಅನ್ನು ಯಾರೋ ಉಗುರಿನಿಂದ ಕೆರೆದಂತಿದೆ.

ಫಲಕ 4: ಸುಸರ್ಜಿತ ಸ್ನಾನದ ಗೃಹಗಳು. ಟಿಪ್ಪಣಿ : ಈ ಫಲಕ ದಾರಿ ತೋರಿಸುತ್ತಿರುವುದು ಸ್ನಾನದ ಗೃಹಕ್ಕೋ ಅಥವಾ ಆಪರೇಷನ್ ಥಿಯೇಟರ್ ಗೋ ಅಂತ ಸ್ವಲ್ಪ ಡೌಟಿದೆ ನನಗೆ. ಯಾರಿಗಾದರೂ ಉತ್ತರ ಗೊತ್ತಾ ?

ಫಲಕ 5: ಹೆಂಗಸರು ಮತ್ತು ಹೆಂಗಸರ ಜೊತೆಯಲ್ಲಿ ಬಂದಿರುವವರಿಗೆ ಮಾತ್ರ ಪ್ರವೇಶ. ಟಿಪ್ಪಣಿ: ನಮ್ಮ ಮೈಸೂರಿನ ಜಿ.ಟಿ.ಆರ್. ಹೋಟೇಲಿನಲ್ಲಿ ಕಂಡ ಫಲಕ.

ಫಲಕ 6: No Drings. ಟಿಪ್ಪಣಿ: ಶಿವಪ್ರಕಾಶ್ ಎಚ್.ಎಮ್ ಅವರು ಹೊಗೆನಕಲ್‌ನಲ್ಲಿ ಕಂಡ ಈ ಅತ್ಯದ್ಭುತ ವಿಚಿತ್ರವನ್ನು ನಮಗೆ ಕಳುಹಿಸಿಕೊಟ್ಟಿದ್ದಾರೆ.

ಇಂಥ ಫಲಕಗಳು ಚಿತ್ರ–ವಿಚಿತ್ರ ಬ್ಲಾಗಿನ ಉದ್ದಕ್ಕೂ ಇವೆ. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್–ತಮಿಳು ಸೇರಿದಂತೆ ಬೇರೆ ಭಾಷೆಗಳ ಫಲಕಗಳೂ ಇಲ್ಲಿವೆ. ಅಲ್ಲಲ್ಲಿ ಕೆಲವು ಫೋಟೊಗಳನ್ನು ಪ್ರಕಟಿಸಿ, ಅವುಗಳಿಗೆ ಅಡಿ ಟಿಪ್ಪಣಿ ಬರೆದಿರುವುದೂ ಇದೆ. ಉದಾ: ಚಿತ್ರವೊಂದರಲ್ಲಿ ಎರಡು ಮೇಕೆಗಳು ಏನನ್ನೋ ತಿನ್ನುತ್ತಿವೆ. ಅದನ್ನು ಕೋತಿಯೊಂದು ನೋಡುತ್ತಿದೆ. ಇದಕ್ಕೆ ಅಡಿ ಟಿಪ್ಪಣಿ– ‘ಕೋತಿ ಮೊಸರನ್ನ ತಿಂದು ಮೇಕೆಯ ಮೂತಿಗೆ ಮೆತ್ತಿದ ಕಥೆ ಗೊತ್ತಲ್ಲಾ? ಇಲ್ಲೂ ಅದೇ ನಡೆಯುತ್ತಿರುವ ಹಾಗಿದೆ!’.

‘ರಾಜ ಫಾರ್ಮಸ್ಯ ಮತ್ತು ಸ್ಟೋರ್ಸ್‌’ ಎನ್ನುವುದು ಒಂದು ಕುತೂಹಲಕರ ಫಲಕ. ರಾಜ ಫಾರ್ಮಸಿ ಮತ್ತು ಸ್ಟೋರ್ಸ್‌ ಎನ್ನುವುದು ಇಂಗ್ಲಿಷ್‌ನಲ್ಲಿನ ಬರಹ. ಇದಕ್ಕೆ ಅಡಿಟಿಪ್ಪಣಿ– ‘ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತವನ್ನು ೧:೧:೧ ಅನುಪಾತದಲ್ಲಿ ಮಿಶ್ರಣ ಮಾಡಿ, ಈ ಬೋರ್ಡನ್ನು ಬರೆಯಲಾಗಿದೆ.

ಆಂಗ್ಲ ಪದಕ್ಕೆ ಸಂಸ್ಕೃತದ ವಿಭಕ್ತಿ ಸೇರಿಸಿ ಆ ಹೊಸ ಪದವನ್ನು ಕನ್ನಡದಲ್ಲಿ ಬರೆದಿರುವ ಈ ಪುಣ್ಯಾತ್ಮನಿಗೇ ಔಷಧಿಯ ಅವಶ್ಯಕತೆ ಇದೆ ಅಂತ ನನಗೆ ಅನ್ನಿಸಿತು. ಸಾಲದಕ್ಕೆ, ಆಂಗ್ಲವನ್ನು ಸಾರಾಸಗಟಾಗಿ ಕೊಲೆಗೈದಿದ್ದಾನೆ’. ಟಿಪ್ಪಣಿ ಸೊಗಸಾಗಿದೆಯಲ್ಲವೇ? ಅಂದಹಾಗೆ, ಈ ಫೋಟೊವನ್ನು ಲಕ್ಷ್ಮಿ ಅವರು ಕ್ಲಿಕ್ಕಿಸಿದ ಸಂದರ್ಭಕ್ಕೂ ಒಂದು ಕಥೆಯಿದೆ.

ಅದನ್ನು ಅವರ ಮಾತಲ್ಲೇ ಕೇಳಿ: ‘‘ಈ ಫೋಟೋ ನಾನೇ ತೆಗೆದಿದ್ದಾದರೂ ಇದರ ಹಿಂದೆ ಒಂದು ಸ್ವಾರಸ್ಯಕರ ಕತೆ ಇದೆ. ಒಂದು ಮಧ್ಯಾಹ್ನ ನಮ್ಮ ತಂದೆ ಫೋನ್ ಮಾಡಿ, ‘ಲಕ್ಷ್ಮೀ, ನಾನು ಮತ್ತು ನಿಮ್ಮಮ್ಮ ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂತಿದೀವಿ, ನೀನು ಫ್ರೀ ಇದ್ರೆ ಬಾ’ ಅಂತ ಅಂದ್ರು.

ಆಟೋದಲ್ಲಿ ಗಾಂಧಿ ಬಜಾರಿಗೆ ಬಂದೆ. ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದ ನಂತರ, ಅಣ್ಣ, ‘ನೀನೊಂದು ಫೋಟೋ ತೆಗಿಬೇಕು’ ಅಂದ್ರು. ‘ದೋಸೇದಾ?’ ಅಂದೆ. ‘ಇಲ್ಲ, ಒಂದು ಬೋರ್ಡ್‌ದು. ನಿನ್ನ ಬ್ಲಾಗಿಗೆ ಸರೀಗಿರತ್ತೆ’ ಅಂದ್ರು. ನನಗೆ ಆಗ್ಲೇ ಗೊತ್ತಾಗಿದ್ದು, ಸ್ವತಃ ಸ್ವಯಂ ಸಾಕ್ಷಾತ್ ನಮ್ಮಪ್ಪ ಈ ಬ್ಲಾಗ್‌ನ ಫಾಲೋ ಮಾಡ್ತಾರೆ ಅಂತ. ವಿದ್ಯಾರ್ಥಿ ಭವನದ ಪಕ್ಕದಲ್ಲಿರೋ ಈ ಮೆಡಿಕಲ್ ಶಾಪಿನ ಬೋರ್ಡನ್ನು ತೋರಿಸಿ, ‘ನೋಡು, ಹೇಗಿದೆ ಹೊಸ ಪದದ ಆವಿಷ್ಕಾರ!’ ಅಂದ್ರು’’.

’ಚಿತ್ರ–ವಿಚಿತ್ರ’ ಬ್ಲಾಗ್‌ನ ಫಲಕಗಳು, ನಗಿಸುವ ಜೊತೆಗೆ ಭಾಷೆಯ ಸಾಧ್ಯತೆಗಳ ಬಗ್ಗೆಯೂ ಯೋಚಿಸುವಂತೆ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.