ADVERTISEMENT

ಚೆಸ್ ರಾಜನ ಚಾಕಚಕ್ಯತೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST

ಚಿನ್ನಸ್ವಾಮಿ ಕ್ರೀಡಾಂಗಣ ಎಂದಾಕ್ಷಣ ಕ್ರಿಕೆಟ್ ನೆನಪಾಗುತ್ತದೆ. ಆದರೆ ಮೊನ್ನೆ ಅಲ್ಲಿ ಯಾವ ಕ್ರಿಕೆಟ್ ಆಟವೂ ಇರಲಿಲ್ಲ. ಬದಲಿಗೆ ವಿಶ್ವನಾಥನ್ ಆನಂದ್ ಅವರ ಚೆಸ್ ಚಾತುರ್ಯದ ಪ್ರದರ್ಶನ ನಡೆದಿತ್ತು. ಅದೂ ಏಕಕಾಲಕ್ಕೆ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 27 ಮಂದಿ ಆಟಗಾರರ ವಿರುದ್ಧ.

ಹೌದು ಕ್ರೀಡಾಂಗಣದ ‘ಪಿ’ ಸಭಾಂಗಣದಲ್ಲಿ ಎನ್‌ಐಐಟಿ ಪ್ರಾಯೋಜಕತ್ವದಲ್ಲಿ ‘ಮ್ಯಾಮ್ ಎಂಟರ್‌ಟೇನ್‌ಮೆಂಟ್’ ಆಯೋಜಿಸಿದ್ದ  ಕಾರ್ಪೊರೇಟ್ ಚೆಸ್ ಚಾಂಪಿಯನ್‌ಷಿಪ್‌ನ ಕೊನೆಗೆ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಏಕ ಕಾಲದಲ್ಲಿ 27 ಆಟಗಾರರೊಂದಿಗೆ ಚೆಸ್ ಆಡುವ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿದರು.

ಏಕಾಗ್ರತೆ, ಮೆದುಳಿಗೆ ಕೆಲಸ ಹಚ್ಚಿ ಸಮಚಿತ್ತದಿಂದ ಆಡುವ ಚೆಸ್‌ನಲ್ಲಿ ಒಬ್ಬರಿಗೆ ಎದುರಾಳಿಯಾಗಿ ಆಡುವುದೇ ಕಷ್ಟ. ಅಂಥದ್ದರಲ್ಲಿ 20 ವಿಜೇತ ಆಟಗಾರರು ಹಾಗೂ ಬೇರೆ ಬೇರೆ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ 27 ಮಂದಿ ಎದುರು ಕಾಯಿಗಳನ್ನು ನಡೆಸಿ ಸೇರಿದ್ದವರನ್ನು ಮೂಕವಿಸ್ಮಿತರಾಗಿಸಿದರು.ಆಟ (ಚೆಸ್) ಆರಂಭಿಸುವ ರೀತಿ, ಎದುರಾಳಿಯ ಮುಂದಿನ ನಡೆಗಳನ್ನು ಮೊದಲೇ ಊಹಿಸಿ ಛಕ್ಕನೆ ಕಾಯಿ ನಡೆಸುವ ಚಾಕಚಕ್ಯತೆ ಎಂಥವರನ್ನೂ ದಂಗು ಬಡಿಸುವಂತಿತ್ತು. ಚಾಂಪಿಯನ್‌ಷಿಪ್‌ನಲ್ಲಿ ಗೆದ್ದವರು ಆನಂದ್ ಆಟದ ಕೌಶಲ್ಯ ಕಂಡು ತಬ್ಬಿಬ್ಬಾಗಿದ್ದರು.

ಸಮಯದ ಅಭಾವದಿಂದ ಅರ್ಧದಲ್ಲೇ ಆಟ ನಿಲ್ಲಿಸಲಾಯಿತು. ಆದರೆ ಆಟಗಾರರಿಗೆ ಆಟದ ಮುಂದಿನ ನಡೆಗಳನ್ನು ಆನಂದ್ ತಿಳಿಸಿಕೊಟ್ಟರು.ಒಂದಿಬ್ಬರು ಹಿಂಜರಿಕೆಯಿಲ್ಲದೆ ಸೋಲೊಪ್ಪಿಕೊಂಡರು. ಅವರ ಆರಂಭದ ಶೈಲಿ ವಿಭಿನ್ನವಾಗಿತ್ತು. ಅವರೊಂದಿಗೆ ಆಡುವ ಅವಕಾಶ ಸಿಕ್ಕಿದ್ದೇ ಅವಿಸ್ಮರಣೀಯ ಎಂದವರು ಐಬಿಎಂ ಉದ್ಯೋಗಿ ಇಂಚರ ಶಿವಲಿಂಗಯ್ಯ.ವಿಪ್ರೋ, ಇಂಟೆಲ್, ಟಿಸಿಎಸ್, ಸೊನಾಟಾ, ಮಣಿಪಾಲ್ ಹಾಸ್ಪಿಟಲ್, ಇನ್ಫೋಸಿಸ್ ಸೇರಿದಂತೆ ವಿವಿಧ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು ಪಂದ್ಯಾವಳಿಯಲ್ಲಿದ್ದರು.                                                  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.