ADVERTISEMENT

ಜನಪದ ಸಂಗೀತಕ್ಕೆ ಹೊಸತನದ ಕಸಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2016, 19:30 IST
Last Updated 21 ಜೂನ್ 2016, 19:30 IST
ಜನಪದ ಸಂಗೀತಕ್ಕೆ ಹೊಸತನದ ಕಸಿ
ಜನಪದ ಸಂಗೀತಕ್ಕೆ ಹೊಸತನದ ಕಸಿ   

ಕಾಶ್ಮೀರಿ ಜಾನಪದ ಮತ್ತು ಸೂಫಿ ಸಂಸ್ಕೃತಿಯನ್ನು ಇಷ್ಟಪಡುವ ಆಭಾ ಹಂಜುರ ತಾನು ಅದೇ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದು ಇಪ್ಪತ್ತು ವರ್ಷಗಳ ಹಿಂದೆ. ಈಗ ಅದು ಅವರಿಗೆ ಬರೀ ವೃತ್ತಿಯಲ್ಲ. ಅದೇ ಜೀವ–ಜೀವನ. ಕಾಶ್ಮೀರಿ ಜಾನಪದ ಸಂಸ್ಕೃತಿಯೊಂದಿಗೆ ಅವರಿಗೆ ಪಂಜಾಬಿ ಸಂಗೀತದೆಡೆಗೂ ಒಲವಿದೆ. ಇತ್ತೀಚೆಗೆ ಫಕಿರಿ ಜಾನಪದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರನ್ನು ಗಣೇಶ ವೈದ್ಯ ಮಾತನಾಡಿಸಿದ್ದಾರೆ.

‘ನಮ್ಮಂತಹ ಗಾಯಕರಿಗೆ ನಮ್ಮ ನಿಜವಾದ ಶೈಲಿಯನ್ನು ಕಂಡುಕೊಳ್ಳಲು ಜಾನಪದ ಸಂಗೀತವೇ ಮುಖ್ಯ ದಾರಿಯಾಗುತ್ತದೆ’ ಎಂದು ಖಚಿತವಾಗಿ ನಂಬಿಕೊಂಡಿರುವ ಗಾಯಕಿ ಆಭಾ ಹಂಜುರ. ಅವರು 2005ರಲ್ಲಿ ‘ಇಂಡಿಯನ್ ಐಡಲ್’ನ ಫೈನಲ್ ಸುತ್ತಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅದಾದ ನಂತರ ಸಾರ್ವಜನಿಕವಾಗಿ ಸಾಕಷ್ಟು ಕಛೇರಿಗಳನ್ನೂ ನೀಡಿದ್ದಾರೆ. ತಮ್ಮ ಧ್ವನಿ ಎಲ್ಲರಂತೆ ಇಲ್ಲ ಎಂಬುದೇ ಅವರಿಗೆ ಧೈರ್ಯ ತುಂಬಿದ್ದು. ‘ಸಾಮಾನ್ಯ ಹಾಡುಗಾರರಿಗೆ ಇರಬಹುದಾದ ಕಂಠ ನಿನ್ನದಲ್ಲ. 

ಜಾನಪದ ಸಂಗೀತಕ್ಕೆ ಒಗ್ಗುವಂತಹ ಒರಟು ಧ್ವನಿ ನಿನ್ನದು’ ಎಂದು ಅನೇಕರು ಹೇಳಿದ್ದು ಕೇಳಿ ಆಭಾ ಜಾನಪದ ಸಂಗೀತದತ್ತ ಹೆಚ್ಚು ಒಲವು ಬೆಳೆಸಿಕೊಂಡರು. ಮುಂದೆ ತಮ್ಮ ಈ ಧ್ವನಿಯನ್ನೇ ಮುದ್ದಿಸುತ್ತ ಜಾನಪದಕ್ಕೆ ತಕ್ಕಂತೆ ಶಾರೀರವನ್ನು ಹದಗೊಳಿಸಿದರು. ಕಾಶ್ಮೀರದ ಜಾನಪದ ಸಂಗೀತವು ಹೊರ ಜಗತ್ತಿಗೆ ಹೆಚ್ಚಾಗಿ ಗೊತ್ತಿಲ್ಲ. ಅದೇ ಕಾರಣಕ್ಕೆ ಆಭಾ ಹೆಚ್ಚಾಗಿ ಕಾಶ್ಮೀರಿ ಜಾನಪದದತ್ತಲೇ ಗಮನ ಕೇಂದ್ರೀಕರಿಸಿರುವುದು. ಸೂಫಿ ಮತ್ತು ಗಝಲ್‌ ಸಂಗೀತವನ್ನು ಕೇಳುತ್ತಲೇ ಅವರು ಬೆಳೆದಿದ್ದು. 

ಆ ಪ್ರಕಾರದಲ್ಲಿ ಮಾಧುರ್ಯದ ಜೊತೆಗೆ ಅಧ್ಯಾತ್ಮವನ್ನೂ ಕಂಡುಕೊಂಡ ಆಭಾ, ‘ಸೂಫಿ ಸಂಗೀತವು ಜೀವನದ ದಾರಿಯನ್ನು ಹೇಳುತ್ತದೆ’ ಎನ್ನುತ್ತಾರೆ. ಸೂಫಿ ಸಂಗೀತವನ್ನು ಅಭ್ಯಾಸ ಮಾಡತೊಡಗಿದ ನಂತರ ಅವರು ಸಾಕಷ್ಟು ಕಲಿತಿದ್ದಾರಂತೆ. ‘ಮನಸನ್ನು ಪ್ರಶಾಂತವಾಗಿಟ್ಟು, ನಮ್ಮನ್ನು ನಾವು ಅರಿಯುವ ದಾರಿಯನ್ನು ತೋರಿಸಿ ಹೆಚ್ಚು ಮಾನವೀಯವಾಗಿ ಯೋಚಿಸಲು ಪ್ರೇರೇಪಿಸುತ್ತದೆ’ ಎನ್ನುವ ಅವರು ಇದನ್ನೆಲ್ಲ ತಮ್ಮಲ್ಲಿಯೂ ಅಳವಡಿಸಿಕೊಳ್ಳುವ ಯತ್ನವನ್ನೂ ಮಾಡುತ್ತಿದ್ದಾರೆ.

ಆರಂಭದಲ್ಲಿ ಆಭಾ ಸಂಗೀತವನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದಕ್ಕೆಂದು ಹೆಚ್ಚು ಸಮಯ ಮೀಸಲಿಡುವುದೂ ಅವರಿಗೆ ಒಗ್ಗುತ್ತಿರಲಿಲ್ಲ. ಆದರೆ ಯಾವಾಗ ‘ಇಂಡಿಯನ್ ಐಡಲ್’ಗೆ ಆಯ್ಕೆಯಾದರೋ, ಅಲ್ಲಿಂದ ಸಂಗೀತದ ಬಗ್ಗೆ ಅವರ ಒಲವು ಗಂಭೀರವಾಗತೊಡಗಿತು. ಅದಕ್ಕೂ ಮುನ್ನವೇ ಬೆಂಗಳೂರಲ್ಲಿ ವಾಸ ಮಾಡತೊಡಗಿದ್ದ ಅವರು ಹಿಂದೂಸ್ತಾನಿ ಸಂಗೀತವನ್ನು ಅಧ್ಯಯನ ಮಾಡಿದ್ದರು. ಸದ್ಯ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತವನ್ನೂ ಅಧ್ಯಯನ ಮಾಡುತ್ತಿರುವ ಆಭಾ, ‘ನಾನು ಪಾಶ್ಚಾತ್ಯ ಗಾಯಕಿ ಆಗಲು ಬಯಸುತ್ತಿಲ್ಲ.

ಆದರೆ ಅದು ನನ್ನ ಧ್ವನಿಯನ್ನು ಇನ್ನಷ್ಟು ತಿದ್ದಲು, ಶುದ್ಧಗೊಳಿಸಲು ಸಹಕಾರಿ’ ಎನ್ನುತ್ತಾರೆ. ಸಂಗೀತವೆಂಬುದು ಅವರಿಗೆ ನಿತ್ಯನೂತನವಾದ ಕಾರ್ಯಕ್ಷೇತ್ರ. ಗಾಯಕಿಯಾಗಿ ತನ್ನ ಅಧ್ಯಯನ ಯಾವತ್ತಿಗೂ ಮುಗಿಯಬಾರದು ಎನ್ನುವ ಅವರು ಹೊಸತಕ್ಕೆ ತೆರೆದುಕೊಳ್ಳುತ್ತಲೇ ಇದ್ದಾರೆ. ಕಾಶ್ಮೀರಿ ವಾದ್ಯಗಳಲ್ಲೇ ತನ್ನ ಛಾಪು ಮೂಡಿಸುವ ಮತ್ತು ಅಸ್ತಿತ್ವವನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಆಭಾ, ಅದೇ ತನ್ನ ವೈಶಿಷ್ಟ್ಯ ಎಂದು ನಂಬಿದ್ದಾರೆ. ಅಂತೆಯೇ ಅವರು ಕಾಶ್ಮೀರಿ ವಾದ್ಯಗಳಾದ ರಬಾಬ್, ಸಂತೂರ್, ತುಂಬಕ್ನಾರಿ, ಕಾಶ್ಮೀರಿ ಸಾರಂಗಿಯನ್ನು ತಮ್ಮ ಸಂಗೀತದಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳುತ್ತಾರೆ.

ಇವು ಜಾನಪದ ಮತ್ತು ಸಮಕಾಲೀನ ಸಂಗೀತವನ್ನು ಬೆಸೆಯುವ ವಾದ್ಯಗಳು ಎನ್ನುವ ಅವರು, ‘ಜಾನಪದ ಸಂಗೀತವನ್ನು ಇಂದಿನವರಿಗೆ ಉಣಿಸುವುದಾದರೆ ಅವರೆಡನ್ನೂ ಬೆಸೆಯುವುದು ಮತ್ತು ಅದರಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ’ ಎನ್ನುತ್ತಾರೆ. ಒಂದು ಕಲಾ ಪ್ರಕಾರ ಉಳಿದುಕೊಳ್ಳುವ ಬಗೆಯೂ ಇದೇ ಎನ್ನುವುದು ಅವರ ವಿಚಾರ. ‘ನಾವು ಏನು ಕೊಟ್ಟರೂ ಕೇಳುಗರು ಸ್ವೀಕರಿಸುತ್ತಾರೆ ಎಂಬುದೆಲ್ಲ ಅವರ ಪಾಲಿಗೆ ಹಳೆಯ ತತ್ವ. ಹೊಸತನ್ನು ಹುಟ್ಟುಹಾಕುವ ಮೂಲಕ ನಾವೇ ಇಂದಿನ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು’ ಎಂಬುದು ಅವರ ಗ್ರಹಿಕೆ.

‘ಪ್ರಯೋಗಗಳ ಮೂಲಕ ಪ್ರಾಚೀನ ಸಂಗೀತ ಪ್ರಕಾರಗಳನ್ನು ಉಳಿಸಿಕೊಳ್ಳುವುದಾದರಷ್ಟೇ ಅದಕ್ಕೆ ಕೇಳುಗರೂ ಸಿಗುತ್ತಾರೆ’ ಎಂದು ನಂಬಿರುವ ಅವರಿಗೆ, ಎಲ್ಲವನ್ನೂ ಸಮಕಾಲೀನಕ್ಕೆ ತರುವ ಅವಸರದಲ್ಲಿ ಅದರ ಮೂಲ ಗುಣವನ್ನು ಕೊಲ್ಲಬಾರದು ಎಂಬ ಎಚ್ಚರವೂ ಇದೆ. ಆಭಾ ಈವರೆಗೆ ಸಂಗೀತದಲ್ಲಿ ತಮ್ಮನ್ನು ಕಂಡುಕೊಳ್ಳುವುದರಲ್ಲೇ ತೊಡಗಿದ್ದು ಹೆಚ್ಚು. ಇದುವರೆಗೆ ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿಲ್ಲ. ಆದಾಗ್ಯೂ ದಕ್ಷಿಣದ ಚಿತ್ರರಂಗದಿಂದ ಅಂಥ ಅವಕಾಶಗಳಂತೂ ಬಂದಿವೆ.

ಮುಂದೆ ಚಲನಚಿತ್ರಗಳಿಗೆ ಹಾಡುವ ಯೋಚನೆಯೂ ಅವರಿಗಿದೆ. ಸಾಮಾನ್ಯ ಚಿತ್ರಗೀತೆಗಳು ಅವರ ಭಿನ್ನ ಧ್ವನಿಗೆ ಹೊಂದುವುದಿಲ್ಲ. ಅದೇ ಕಾರಣಕ್ಕೆ ತಮಗೆ ಸರಿ ಎನ್ನಿಸುವ ಹಾಡುಗಳನ್ನು ಅವರು ನಿರೀಕ್ಷಿಸುತ್ತಿದ್ದಾರೆ. ಆಭಾ ಅವರ ಚಿಂತನೆಯ ಹೊಸ ಕೂಸು ಶೀಘ್ರದಲ್ಲಿ ನಿಮ್ಮೆದುರು ಬರಲಿದೆ. ಈ ವರ್ಷ ಒಂದು ಆಲ್ಬಂ ಹೊರತರುವ ಸಿದ್ಧತೆಯಲ್ಲಿರುವ ಅವರು, ‘ಅದು ಸಾಮಾನ್ಯ ಆಲ್ಬಂನಂತಿರುವುದಿಲ್ಲ’ ಎಂದು ಹೇಳುತ್ತಾರೆ. ಈ ವೈಶಿಷ್ಟ್ಯವನ್ನು ಅವರು ‘ಸಂಗೀತಕ್ಕಿಂತಲೂ ಹೆಚ್ಚನದೇನೋ’ ಎಂದು ವ್ಯಾಖ್ಯಾನಿಸುತ್ತಾರೆ.

ಅದಕ್ಕಾಗಿ ಅವರು ಹೆಚ್ಚಾಗಿ ಕಾಶ್ಮೀರಿ ಜಾನಪದ ಸಂಗೀತವನ್ನು ಹಾಡುವ ಜೊತೆಗೆ, ಹೆಚ್ಚು ಜನರಿಗೆ ಗೊತ್ತಿಲ್ಲದ ಕಾಶ್ಮೀರದ ಸೂಫಿ ಕವಿಗಳ ಬಗೆಗಿನ ಸಂಶೋಧನೆಯಲ್ಲೂ ತೊಡಗಿದ್ದಾರೆ. ತಮ್ಮ ಸೂಫಿ ಪ್ರೀತಿಯನ್ನು ಆಭಾ ತಾವು ಕಟ್ಟಿಕೊಂಡ ಬ್ಯಾಂಡ್‌ನಲ್ಲೂ ತೋರಿದ್ದಾರೆ. ಅವರ ಬ್ಯಾಂಡ್ ಹೆಸರು ‘ಸೂಫಿಸ್ಟಿಕೇಶನ್’. ‘ಆಭಾ ಹಂಜುರ ಫೀಚರಿಂಗ್ ದ ಕಾಶ್ಮೀರಿ ಫೋಕ್ ಎನ್ಸೆಂಬಲ್’ ಅವರ ಮತ್ತೊಂದು ಬ್ಯಾಂಡ್‌ನ ತಾತ್ಕಾಲಿಕ ಹೆಸರು.

ಮಿಥುನ್ ಮುಕುಂದನ್, ಸಂಜಯ್ ಚಂದ್ರಕಾಂತ್, ರಶೀದ್ ಶಾ, ಯದುನಂದನ್, ಓಸಿ ಗೊಮಾಂಗೊ, ಗಣೇಶನ್ ಗೋವಿಂದಸ್ವಾಮಿ ಮುಂತಾದವರೊಂದಿಗೆ  ಅವರು ಕೆಲಸ ಮಾಡುತ್ತಿದ್ದಾರೆ. www.aabhahanjura.com ಜಾಲ ಪುಟದಲ್ಲಿ ಆಭಾ ಅವರ ಈವರೆಗಿನ ಹಾಡುಗಳನ್ನು ಕೇಳಬಹುದು, ವಿಡಿಯೊಗಳನ್ನು ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT