ಕೋಲ್ಕತ್ತಾ, ಗೋವಾ, ಮುಂಬೈ ಮತ್ತು ತಿರುವನಂತಪುರಂನಲ್ಲಿ ನಡೆಯುವ ಸಿನಿಮೋತ್ಸವಗಳಂತೆಯೇ ಬೆಂಗಳೂರು ಸಿನಿಮೋತ್ಸವವೂ ಈಗ ಜನಪ್ರಿಯಗೊಂಡಿದೆ. ಆದರೆ, ಮುಂಬೈ ಮತ್ತು ಬೆಂಗಳೂರು ಹೊರತು ಪಡಿಸಿ ಉಳಿದ ಸಿನಿಮೋತ್ಸವಗಳು ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್‌ನ (ಎಫ್ಐಎಪಿಎಫ್) ಮಾನ್ಯತೆ ಪಡೆದಿವೆ. ಇದರ ಸದಸ್ಯರಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಿನಿಮೋತ್ಸವಕ್ಕೆ ಸಿಗುವ ಮಾನ್ಯತೆ ಬಹಳ ದೊಡ್ಡದು.
ಆದರೆ, ಇದಕ್ಕೆ ಕೆಲ ನಿಯಮಾವಳಿಗಳಿವೆ. ಅದನ್ನು ಅನುಸರಿಬೇಕಷ್ಟೇ. ಅಂದರೆ, ಸಿನಿಮೋತ್ಸವವನ್ನು ಯೋಜನಾಬದ್ಧವಾಗಿ ರೂಪಿಸಬೇಕು. ಉದಾಹರಣೆಗೆ ಕ್ಯಾಲೆಂಡರ್ ಆಫ್ ಇಯರ್ ಮಾಡಬೇಕು. ಪ್ರತಿವರ್ಷವೂ ನಿಗದಿತ ದಿನಾಂಕಗಳಂದೇ ಸಿನಿಮೋತ್ಸವ ನಡೆಯುವಂತಾಗುತ್ತದೆ. ಆದರೆ, ನಮ್ಮಲ್ಲಿ ಸರ್ಕಾರ ಪ್ರತಿವರ್ಷವೂ ಸಿನಿಮಾ ಹಬ್ಬ ಮಾಡಬೇಕೇ? ಬೇಡವೇ ಎಂದು ಕೇಳುತ್ತದೆ. ಈ ಗೊಂದಲ ಉಂಟಾಗಬಾರದು. ಅದಕ್ಕಾಗಿ ಸಿನಿಮೋತ್ಸವ ನಿರ್ದೇಶನಾಲಯ ಮಾಡಿದರೆ, ಆರು ತಿಂಗಳು ಮೊದಲೇ ಕ್ರಮಬದ್ಧವಾಗಿ ಸಿನಿಮೋತ್ಸವದ ಸಿದ್ಧತೆಗಳನ್ನು ಆರಂಭಿಸಬಹುದು. ನಿಗದಿತ ದಿನಾಂಕಗಳಂದೇ ಸಿನಿಮೋತ್ಸವ ನಡೆಸಬಹುದು. ಆಗ ಸಿನಿಮಾದಿಂದ ಬರುವ ಅತಿಥಿಗಳ ತನಕ ಎಲ್ಲವನ್ನೂ ಯೋಜನಾಬದ್ಧವಾಗಿ ರೂಪಿಸಬಹುದು ಎಂಬುದು ನನ್ನ ಅಭಿಪ್ರಾಯ.
ಈ ಬಾರಿ ಸಿನಿಮೋತ್ಸವಕ್ಕೆ ಬಂದಿರುವ ಸಿನಿಮಾಗಳ ಪ್ಯಾಕೇಜ್ ಚೆನ್ನಾಗಿದೆ. ನಾನು ಇಂದು ನಿರ್ದೇಶಕನಾಗಿರುವುದೇ ಚಿತ್ರೋತ್ಸವಗಳಿಂದ. ಇಲ್ಲಿ ನಮಗೆ ಉತ್ತಮ ವೇದಿಕೆ ದೊರೆಯುತ್ತದೆ. ಇಲ್ಲಿ ಸಿನಿಮಾ ನೋಡುವ ಮೂಲಕ ನಿರ್ದೇಶಕನೊಬ್ಬ ಗುಣಮಟ್ಟದ ಸಿನಿಮಾ ಮಾಡಲು ಸಾಧ್ಯ. ಮನೆಯಲ್ಲಿ ಒಬ್ಬರೇ ಕೂತು ಸಿನಿಮಾ ನೋಡುವುದಕ್ಕೂ ನೂರಾರು ಮಂದಿ ನಡುವೆ ಕುಳಿತು ಸಿನಿಮಾ ನೋಡುವುದಕ್ಕೂ ಅಪಾರ ವ್ಯತ್ಯಾಸವಿದೆ. ಅಂತರರಾಷ್ಟ್ರೀಯಮಟ್ಟದ ಸಿನಿಮಾಗಳಲ್ಲಿ ಪ್ರಯೋಗಶೀಲತೆ ಹೆಚ್ಚಿದೆ. ಅಲ್ಲಿನ ಕಥನಕ್ರಮದ ವಿನ್ಯಾಸದಲ್ಲಿ ಬದಲಾವಣೆಯಾಗಿದೆ. ನಾವೂ ಅದನ್ನು ಅಳವಡಿಸಿಕೊಳ್ಳಬೇಕಿದೆ. ‘ನೋಡಿ ಕಲಿ ಮಾಡಿ ನಲಿ’ ಅನ್ನುವ ಮಾತಿನಂತೆ ಸಿನಿಮೋತ್ಸವದಲ್ಲಿ ವಿಭಿನ್ನ ಧಾಟಿಯ ಸಿನಿಮಾಗಳನ್ನು ನೀಡುವ ಮೂಲಕ ಹೊಸತನ್ನು ಕಲಿಯಬಹುದು.
ಈ ಬಾರಿ ಚಿತ್ರಕಥಾ ಕಾರ್ಯಾಗಾರ ಆಯೋಜಿಸಲಾಗಿದೆ. ಉತ್ತಮ ಚಿತ್ರಕಥೆಯೇ ಸಿನಿಮಾದ ಜೀವಾಳ. ನಮ್ಮಲ್ಲಿ ಚಿತ್ರಕಥೆ ಬರೆಯುವವರ ಕೊರತೆ ಇದೆ. ಹಿಂದೆ ಚಿ.ಉದಯಶಂಕರ್ ಅವರಂಥವರು ಇರುತ್ತಿದ್ದರು. ಹಾಲಿವುಡ್–ಬಾಲಿವುಡ್‌ನಲ್ಲಿ ಚಿತ್ರಕಥೆ ಬರಹಗಾರರ ದೊಡ್ಡ ಪರಂಪರೆಯೇ ಇದೆ. ನಮ್ಮಲ್ಲೂ ಅಂಥ ಪರಂಪರೆ ರೂಪುಗೊಳ್ಳಬೇಕಿದೆ. ಕಾರ್ಯಾಗಾರದಲ್ಲಿ ಭಾಗವಹಿಸಿದಾಕ್ಷಣ ಉತ್ತಮ ಚಿತ್ರಕಥೆಗಾರ ಆಗುತ್ತಾನೆ ಎಂದಲ್ಲ. ಆದರೆ, ಕನಿಷ್ಟ ಹೊಸತನವನ್ನು ಅರಿಯುತ್ತಾನೆ. ಕಥೆ ಹೇಳುವ, ಕಟ್ಟುವ ಹೊಸ ಕ್ರಮವನ್ನಾದರೂ ಕಲಿಯುತ್ತಾನೆ ಅನ್ನೋದು ನನ್ನ ನಂಬಿಕೆ.
ಸಿನಿಮೋತ್ಸವದಲ್ಲಿ ಸೌಂಡ್ ಡಿಸೈನ್, ಪ್ರೊಡಕ್ಷನ್ ಡಿಸೈನ್, ಸೆನ್ಸಾರ್ ಹೀಗೆ ಅನೇಕ ವಿಷಯಗಳ ಕುರಿತು ಕಲಿಯಬಹುದು. ಒಂದು ಪುಸ್ತಕ ಓದಬೇಕೆಂದರೆ ಎಷ್ಟೊಂದು ಸಮಯ ಬೇಕು. ಆದರೆ, ಒಂದು ಸಿನಿಮಾದ ಮೂಲಕ ಕೇವಲ ಎರಡೂವರೆ ಗಂಟೆಗಳಲ್ಲಿ ಆ ದೇಶದ ಸಂಸ್ಕೃತಿಯನ್ನು ಸುಲಭವಾಗಿ ತಿಳಿಯಬಹುದು. ಹಾಗಾಗಿ ಸಿನಿಮೋತ್ಸವ ನಮ್ಮನ್ನು ಜಾಗತಿಕವಾಗಿ ತೆರೆದುಕೊಳ್ಳುವಂತೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.