ADVERTISEMENT

ತಂಪು ತಂಪು ದಿರಿಸು

ಬಿ.ಆರ್.ಸವಿತಾ
Published 17 ಮೇ 2017, 19:30 IST
Last Updated 17 ಮೇ 2017, 19:30 IST
ತಂಪು ತಂಪು ದಿರಿಸು
ತಂಪು ತಂಪು ದಿರಿಸು   
ಬೇಸಿಗೆಯಂತಹ ಸಂದರ್ಭದಲ್ಲಿ ಬಿಸಿಲಿನ ತಾಪವನ್ನು ತಡೆಯುವಂತಹ ಬಟ್ಟೆಯನ್ನು ಧರಿಸುವುದಕ್ಕೆ ಮಹಿಳೆಯರು ಮೊದಲ ಆದ್ಯತೆ ನೀಡಬೇಕು. ತಾಪ ಚರ್ಮಕ್ಕೆ ಹೆಚ್ಚು ತಾಗದಂತೆ ಹಾಗೂ ಬಿಸಿಲಿನ ಬೇಗೆಯನ್ನು ತಡೆಯುವ ಬಟ್ಟೆಯನ್ನು ಧರಿಸಬೇಕು. ಇದರಲ್ಲಿ ನಾನಾ ರೀತಿಯ ಉಡುಪುಗಳು ಸಿಗುತ್ತವೆ. ಬೇಸಿಗೆ ಉಡುಪುಗಳೆಂದೇ ಮಹಿಳೆಯರಿಗೆ ಲಭ್ಯವಾಗುತ್ತವೆ. 
 
ಮಾರುಕಟ್ಟೆಯಲ್ಲಿ ಟೆರ್ರಿಕಾಟ್ ಸೇರಿದಂತೆ ನಾನಾ ಪ್ರಕಾರದ ಬಟ್ಟೆಗಳ ಸಾಮ್ರಾಜ್ಯವೇ ಇದೆ. ಆದರೆ, ಬೇಸಿಗೆಯ ಸಂದರ್ಭದಲ್ಲಿ ಇವುಗಳಿಂದ ದೂರವಿದ್ದರೆ ಒಳಿತು. ಹೆಚ್ಚಾಗಿ ಹತ್ತಿ ಬಟ್ಟೆಗಳನ್ನೇ ಧರಿಸಿ. ಇವುಗಳು ಸೂರ್ಯನ ಪ್ರಖರತೆಯನ್ನು ತಡೆಯುವ ಶಕ್ತಿ ಹೊಂದಿರುತ್ತವೆ. ಹೊರಗಿನ ಶಾಖ ಹೀರಿಕೊಂಡು ದೇಹ ತಂಪಾಗಿಡುತ್ತದೆ. ಇಂತಹ ಬಟ್ಟೆಗಳಿಂದ ದೇಹದ ಚರ್ಮ ಕಳೆಗುಂದುವುದನ್ನು ತಪ್ಪಿಸಬಹುದು.
 
ಬೇಸಿಗೆಯಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನೇ ಧರಿಸಿದರೆ, ಇವು ದೇಹದ ತಾಪ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಇವು ಸೂರ್ಯನ ಕಿರಣಗಳನ್ನು ಅಥವಾ ಶಾಖವನ್ನು ತಡೆಯುತ್ತವೆ. ಇದರಿಂದ ಹೆಚ್ಚು ಸೆಖೆಯಾಗುವುದು ತಪ್ಪುತ್ತದೆ. ಆದರೆ, ಕಪ್ಪು ಬಣ್ಣದ ಬಟ್ಟೆಗಳು ಹೆಚ್ಚು ಶಾಖ ಚರ್ಮಕ್ಕೆ ತಗಲುವಂತೆ ಮಾಡುತ್ತದೆ. ಇದರಿಂದ ಸಹಜವಾಗಿಯೇ ಬೆವರುವುದು ಹೆಚ್ಚಾಗುತ್ತದೆ. 
 
ಸಾಮಾನ್ಯವಾಗಿ ಯುವತಿಯರು ಟೈಟ್ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಅನ್ನೇ ಬಳಸುತ್ತಾರೆ. ಆದರೆ, ಈ ರೀತಿಯ ಉಡುಪು ಬೇಸಿಗೆ ವೇಳೆ ಧರಿಸಿದರೆ ದೇಹದಿಂದ ದುರ್ಗಂಧ ಬೀರುವ ಸಾಧ್ಯತೆ ಹೆಚ್ಚು. 
 
ಬಿಗಿ ಉಡುಪುಗಳನ್ನು ಧರಿಸುವುದರಿಂದ ಗಾಳಿಯಾಡದೆ ಬೆವರು ಹೆಚ್ಚಾಗುತ್ತದೆ. ಶಾಖ ಕಡಿಮೆ ಮಾಡುವ  ಕಾಟನ್ ಶೈಲಿಯ ಸಡಿಲವಾದ ಬಟ್ಟೆಗಳನ್ನು  ಧರಿಸುವುದು ಒಳಿತು. 
 
 
ಟ್ರೆಂಡಿ ಡ್ರೆಸ್‌ಗಳು: ಇದು ಫ್ಯಾಷನ್ ಕಾಲ. ಎಲ್ಲರೂ ಫ್ಯಾಷನ್‌ಗೆ ಹೆಚ್ಚು ಮಹತ್ವ ನೀಡುತ್ತಾರೆ. ಬೇಸಿಗೆ ಕಾಲದಲ್ಲಿಯೂ ಸಮ್ಮರ್ ಫ್ಯಾಷನ್ ಡ್ರೆಸ್‌ಗಳು ಸಿಗುತ್ತವೆ. ಇದರಲ್ಲಿ ಇಂದು ಇರುವ ಟ್ರೆಂಡಿ ಡ್ರೆಸ್‌ಗಳು ನಾಳೆ ಸಿಗುವುದಿಲ್ಲ. ಸಾಕಷ್ಟು ವಿಧದ ಡ್ರೆಸ್‌ಗಳು ಲಭ್ಯವಾಗುತ್ತವೆ. ಲಾಂಗ್ ಮ್ಯಾಕ್ಸಿ ಸಮ್ಮರ್ ಡ್ರೆಸ್ ಕೂಡ ಒಂದು. ಇದರಲ್ಲಿ ಬಟ್ಟೆ ಸ್ವಲ್ಪ ತೆಳುವಾಗಿ, ಲೂಸ್ ಆಗಿ ಇರುತ್ತವೆ. ಇದರಿಂದ ದೇಹಕ್ಕೆ ಗಾಳಿ ತಾಗುವುದರಿಂದ ಬಿಸಿಲಿನ ತಾಪ ಕಡಿಮೆಯಾಗುತ್ತದೆ. ಇಂತಹ ಬಟ್ಟೆಗಳು ದೇಹವನ್ನು ತಂಪಾಗಿಡುತ್ತವೆ.
 
ಮೊಣಕಾಲು ಕೆಳಗಿನವರೆಗೆ ಜೋತು ಬೀಳುವ ಕಾಟನ್ ಡ್ರೆಸ್‌ಗಳೂ ಇವೆ. ಇವುಗಳಿಂದ ದೇಹವನ್ನು ಹೆಚ್ಚು ತಂಪಾಗಿಟ್ಟುಕೊಳ್ಳಬಹುದು. ಅದರಂತೆಯೇ ಕಾಕ್ ಟೈಲ್ ಎಂಬ ವೈವಿಧ್ಯಮಯ ಡ್ರೆಸ್ ಕೂಡ ಹಾಕಬಹುದು. ಅಂದರೆ, ಮೊಣಕಾಲುಗಳಿಂತ ಕೆಳಗಿನವರೆಗೆ ಇರುವ ಡ್ರೆಸ್‌ಗಳನ್ನೂ ಹಾಕಿಕೊಳ್ಳಬಹುದು. ಆದರೆ, ಇವೆಲ್ಲ ಕಾಟನ್ ಆಗಿದ್ದರೆ ಉತ್ತಮ.
 
ತೋಳು ಸಂಪೂರ್ಣ ಮುಚ್ಚುವಂತೆ ಡ್ರೆಸ್ ಹಾಕಿಕೊಳ್ಳುವುದಕ್ಕಿಂತ ಸ್ಲೀವ್ ಲೆಸ್ ಡ್ರೆಸ್‌ಗಳಿಗೆ ಇಂತಹ ಸಂದರ್ಭದಲ್ಲಿ ಆದ್ಯತೆ ನೀಡುವುದರಿಂದ ಸೆಖೆಯನ್ನು ಕಡಿಮೆ ಮಾಡಬಹುದು. ಜೊತೆಗೆ, ಈ ರೀತಿಯ ಡ್ರೆಸ್‌ಗೆ ಆದ್ಯತೆ ನೀಡಿದಾಗ ಶಾಲು ಕೂಡ ಜತೆಗಿರಲಿ. ಆದರೆ, ಲೆಗ್ಗಿನ್ಸ್  ಇಂತಹ ಸಂದರ್ಭದಲ್ಲಿ ಸೂಕ್ತವಲ್ಲ.  
 
ಸಭೆ ಸಮಾರಂಭದಂತಹ ಸಂದರ್ಭದಲ್ಲಿ ಸೀರೆಗೆ ಆದ್ಯತೆ ನೀಡುವುದು ಒಳ್ಳೆಯದು. ಜೊತೆಗೆ ತೆಳುವಾದ ರೇಷ್ಮೆ ಸೀರೆಯಾಗಿದ್ದರೆ, ಚರ್ಮದಿಂದ ಬೆವರು ಬರುವುದನ್ನು ತಡೆಯುತ್ತದೆ. ಇದರಿಂದ ದೇಹದಿಂದ ದುರ್ಗಂಧ ಬರುವುದು ನಿಲ್ಲುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.