ADVERTISEMENT

‘ದಶಾಂಗುಲಿ ವೈಣಿಕ’ನಿಗೆ ನಾದ ನಮನ

ಪ್ರೊ.ಮೈ.ವಿ.ಸು
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಆರ್.ಕೆ.ಸೂರ್ಯನಾರಾಯಣ
ಆರ್.ಕೆ.ಸೂರ್ಯನಾರಾಯಣ   

ಜನಪ್ರಿಯ ವೈಣಿಕರಲ್ಲಿ ಒಬ್ಬರಾದ ಆರ್.ಕೆ.ಸೂರ್ಯನಾರಾಯಣ (1937-2004) ಅವರ 30ನೇ ಜಯಂತಿಯನ್ನು ಎರಡು ದಿನಗಳ ಸಂಗೀತೋತ್ಸವದ ಮೂಲಕ ಆಚರಿಸಲಾಗುತ್ತಿದೆ. ಗುರು ಕೇಶವ ಸೂರ್ಯ ಮೆಮೋರಿಯಲ್ ಟ್ರಸ್ಟ್‌ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಜುಲೈ 22 ಮತ್ತು 23ರಂದು ಜಯನಗರದಲ್ಲಿ ನಡೆಯಲಿದೆ.

ತಮ್ಮ 16ನೆಯ ವಯಸ್ಸಿನಲ್ಲೇ ವೀಣೆ ಕಛೇರಿ ನೀಡತೊಡಗಿದ ಸೂರ್ಯನಾರಾಯಣ, ನಾಲ್ಕು ದಶಕ ನಿರಂತರ ನಾದಝರಿ ಹರಿಸಿದರು. ವಿವಿಧ ದೇಶಗಳ ಪ್ರಧಾನಿ-ಅಧ್ಯಕ್ಷರವರೆಗೆ ಅವರು ವೀಣೆ ನುಡಿಸದ ಜಾಗವಿಲ್ಲ. 11 ಸಲ ಅವರು ನಡೆಸಿದ ವಿಶ್ವ ಪರ್ಯಟನದಲ್ಲಿ ಅಮೆರಿಕ, ಕೆನಡ, ಜರ್ಮನಿ, ಹಾಲೆಂಡ್, ಸ್ವಿಟ್ಜರ್‌ಲೆಂಡ್, ಸಿಂಗಪುರ, ಮಲೇಷ್ಯಾ, ಇಂಡೋನೇಷ್ಯ, ಶ್ರೀಲಂಕಾ, ಹಾಂಕಾಂಗ್, ಜಪಾನ್, ಯೂರೋಪ್, ಇರಾನ್ ಮುಂತಾದ ದೇಶಗಳಲ್ಲಿ ವಿನಿಕೆ ಮಾಡಿದರು.

ಸಮಕಾಲೀನ ವೈಣಿಕರಲ್ಲಿ ಸೂರ್ಯನಾರಾಯಣ ಭಿನ್ನವಾದವರು. ಎರಡೂ ಕೈಗಳ ಹತ್ತು ಬೆರಳುಗಳನ್ನು ಬಳಸುತ್ತಾ ‘ದಶಾಂಗುಲಿ ವೈಣಿಕ’ರಾಗಿ ಬೆರಗುಗೊಳಿಸುತ್ತಿದ್ದರು. ’ಸಿಂಪತೆಟಿಕ್ ಸ್ಟ್ರಿಂಗ್’ಗಳಿಂದ ನಾದ ಝೇಂಕರಿಸುತ್ತಾ ತಮ್ಮ ಕೈ ಚಳಕ ಮೆರೆಯುತ್ತಿದ್ದರು. ವೀಣೆಯ ಮೆಟ್ಟಿಲುಗಳನ್ನು ದಾಟಿ ‘ಕುದುರೆ’ಯವರೆಗೂ, ಸಿಂಹದ ಮುಖದ ಮೇಲಿನ ವ್ಯಾಳಿಯ ಮೇಲೂ ನಾದ ಹೊಮ್ಮಿಸುತ್ತಾ ’ವೀಣಾ ಮಾಂತ್ರಿಕ’ರಾಗಿ ಆಕರ್ಷಿಸಿದರು.

ವಾಗ್ಗೇಯಕಾರರಾಗಿಯೂ ಸೂರ್ಯನಾರಾಯಣ ಗಮನ ಸೆಳೆಯುತ್ತಾರೆ. ಘನ ರಾಗಗಳಲ್ಲದೆ ಅಪರೂಪದ ರಾಗಗಳಲ್ಲೂ ಅವರು ಸ್ವರಜತಿ, ವರ್ಣ, ಕೃತಿ, ಜಾವಳಿ ಮತ್ತು ತಿಲ್ಲಾನಗಳನ್ನು ’ಹರಪುರೀಶ’ ಅಂಕಿತದಲ್ಲಿ ರಚಿಸಿದ್ದಾರೆ. ಅವುಗಳ ಸಿ.ಡಿ.ಗಳನ್ನೂ ಹೊರತಂದಿದ್ದಾರೆ. ನಟರಾಗಿ ಆರ್.ಕೆ.ಎಸ್. ’ಮಲಯ ಮಾರುತ’ ಚಿತ್ರದಲ್ಲಿ ಮಿಂಚಿರುವುದು ಉಲ್ಲೇಖನೀಯ.
*
‘ಆರ್. ಕೆ. ಸೂರ್ಯನಾರಾಯಣ 80 ಸಂಗೀತೋತ್ಸವ’
ಶನಿವಾರ ಬೆಳಿಗ್ಗೆ 10ಕ್ಕೆ ಗುರುವಂದನೆ, 11.30ಕ್ಕೆ ‘ಸೂರ್ಯ 80’ ಕಾರ್ಯಕ್ರಮ ಉದ್ಘಾಟನೆ.

ಆಯೋಜನೆ: ಗುರು ಕೇಶವ ಸೂರ್ಯ ಮೆಮೋರಿಯಲ್‌ ಟ್ರಸ್ಟ್‌
ಸ್ಥಳ– ಜಯರಾಮಸೇವಾ ಮಂಡಳಿ ಸಭಾಂಗಣ, ಜಯನಗರ 8ನೇ ಹಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT