ನಾಟಕ ಪ್ರದರ್ಶನ ಎಂಬುದು ಹಲವು ಹಂತಗಳ ಪ್ರಕ್ರಿಯೆ. ಒಳ್ಳೆ ನಾಟಕವನ್ನು ಆಯ್ಕೆ ಮಾಡಿಕೊಳ್ಳುವುದು, ತಾಲೀಮಿಗೆ ಕಲಾವಿದರನ್ನು ಒಟ್ಟುಗೂಡಿಸುವುದು, ಮಾಧ್ಯಮಗಳ ಮೂಲಕ, ಸ್ನೇಹಿತರ ಮೂಲಕ ನಾಟಕದ ಪ್ರಚಾರ ಮಾಡುವುದು, ನಿಗದಿಪಡಿಸಿದ ದಿವಸದಂದು ಪ್ರದರ್ಶಿಸುವುದು, ಇವೆಲ್ಲಕ್ಕಿಂತ ಹೆಚ್ಚಿನದು ಪ್ರದರ್ಶಿಸುವ ನಾಟಕಕ್ಕೆ ಪ್ರೇಕ್ಷಕರು ಬರುವುದು. ಇವೆಲ್ಲವೂ ಆದಾಗ ಒಂದು ನಾಟಕದ ಪ್ರದರ್ಶನಕ್ಕೆ ಪರಿಪೂರ್ಣತೆ ಸಿಗುತ್ತದೆ.
ಬಹಳಷ್ಟು ಹಳೆಯ ನಾಟಕಗಳು ಮೇಲಿಂದ ಮೇಲೆ ಪ್ರದರ್ಶನವಾಗುತ್ತಿವೆ. ಹೊಸ ನಾಟಕಗಳು ಇಲ್ಲವಾ? ಅಥವಾ ನಾಟಕಗಳನ್ನು ಬರೆಯುವವರ ಸಂಖ್ಯೆ ಕ್ಷಿಣಿಸುತ್ತಿದೆಯಾ? ಹೊಸ ನಾಟಕಗಳನ್ನು ಪ್ರದರ್ಶಿಸಲು ತಂಡಗಳು ಮುಂದೆ ಬರುತ್ತಿಲ್ಲವಾ? ಇವೆಲ್ಲವೂ ಯಕ್ಷ ಪ್ರಶ್ನೆಗಳಾಗುತ್ತಿವೆ.
ಇಂತಹ ಸಂದರ್ಭದಲ್ಲಿ ಶ್ರೀನಾಥ್ ವಸಿಷ್ಠ ಬದುಕಿಗೆ ಹತ್ತಿರವಾಗಿರುವ ಒಂದು ಸಾಮಾಜಿಕ ವಸ್ತುವನ್ನು ಆರಿಸಿಕೊಂಡು, ಅದಕ್ಕೆ ಪತ್ತೆದಾರಿ ಲೇಪನವನ್ನು ಹಚ್ಚಿ ನಾಟಕವನ್ನು ಬರೆದಿದ್ದಾರೆ. ಶ್ರೀನಾಥ್ ರಚಿಸಿ ನಿರ್ದೇಶಿಸಿರುವ ‘ವ್ಯೂಹ’ ನಾಟಕವನ್ನು ‘ಶಶಿ ಕಲಾವಿದರು’ ರಂಗ ತಂಡ ಪ್ರಸ್ತುತಪಡಿಸಿತು.
ಬಡ ಕುಟುಂಬದವರಿಗೆ ತೀರಾ ಸಾಮಾನ್ಯ ಆಸೆಗಳೂ ದೈತ್ಯಾಕಾರವಾಗಿ ಕಾಣುತ್ತವೆ. ಅವನ್ನು ತಮ್ಮದಾಗಿಸಿಕೊಳ್ಳಲು ಆಗಸಕ್ಕೆ ಏಣಿಹಾಕುವ ಪ್ರಯತ್ನಗಳನ್ನು ಮಾಡುತ್ತಾರೆ. ಅವು ಮರೀಚಿಕೆಯಾದಾಗ, ಅವನ್ನು ಪಡೆಯಲೇಬೇಕು ಎಂದು ಹತಾಶರಾಗಿ ಅನ್ಯಾಯದ ಮಾರ್ಗಕ್ಕೆ ಶರಣಾಗುತ್ತಾರೆ. ವ್ಯೂಹಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ನಮ್ಮ ನಡುವೆ ಇಂತಹ ಕುಟುಂಬಗಳ ಕಥೆಗಳನ್ನು ನಾವು ಪ್ರತಿನಿತ್ಯ ನೋಡುತ್ತೇವೆ.
ಇಂದಿನ ಯುವಜನತೆಯ ದಿಢೀರ್ ಆಗು ಹೋಗುಗಳ ಆಮಿಷ ಎಂತಹ ಅನಾಹುತಗಳನ್ನು ಸೃಷ್ಟಿಸಬಹುದು ಎಂಬ ಪ್ರಸಕ್ತ ವಿಷಯದ ಬಗ್ಗೆ ಬೆಳಕು ಚೆಲ್ಲುವ ವಸ್ತುವನ್ನು ಆರಿಸಿಕೊಂಡು ಅಚ್ಚುಕಟ್ಟಾದ ನಿರೂಪಣೆಯಿಂದ ವೀಕ್ಷಕರನ್ನು ಚಿಂತನೆಗೆ ಹಚ್ಚಿದ್ದಾರೆ. ಮಗನೇ ತಂದೆಯನ್ನು ಆವೇಶದಲ್ಲಿ ಕೊಂದು ಬಿಡುವ, ಅದನ್ನು ಮುಚ್ಚಿಡಲು ಮತ್ತೊಂದು ಕೊಲೆಯನ್ನು ಮಾಡುವ ಅಪಾಯವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ದುರಂತ ಅಂತ್ಯದ ನಾಟಕ ನೋಡುಗರಲ್ಲಿ ಒಂದು ವಿಷಣ್ಣತೆಯನ್ನು ಹುಟ್ಟುಹಾಕುತ್ತದೆ.
ರಾಧಾಕೃಷ್ಣನ ಪಾತ್ರಧಾರಿ ಅನಂತ ಕೃಷ್ಣ ಮತ್ತು ಪಂಕಜ ಪಾತ್ರಧಾರಿ ಪದ್ಮಲತಾ ಅವರ ನೈಜ ಅಭಿನಯ ನಾಟಕಕ್ಕೆ ಪೂರಕವಾಗಿತ್ತು. ಮಗನ ಪಾತ್ರಧಾರಿ ಅಭಯ್ ಹರ್ಷ ಸಮರ್ಪಕವಾಗಿ ಅಭಿನಯಿಸಿದರು. ಕುಡುಕನಾಗಿ ನಾಗರಾಜ್ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು. ಜಾರ್ಜ್ ಪಾತ್ರಧಾರಿ ಸಂಪತ್ ಕುಮಾರ್ ಮತ್ತು ಮಾರುವೇಷದಲ್ಲಿ ಮನೆಗೆ ಬರುವ ಚಂದ್ರು ಅಲಿಯಾಸ್ ವಿಶ್ವನಾಥನ ಪಾತ್ರಧಾರಿ ರಾಮಕೃಷ್ಣಯ್ಯ ನೊಣವಿನಕೆರೆ ಕುತೂಹಲ ಕೆರಳಿಸುತ್ತಾರೆ.
ಇವರಿಬ್ಬರೂ ಯಾಕೆ ಈ ಮನೆಗೆ ಬಂದರು? ಇವರಿಗೂ ಈ ಮನೆಯವರಿಗೂ ಏನು ಸಂಬಂಧ? ಹಣದ ಆಮಿಷಕ್ಕೆ ಮನೆಯವರು ಹೇಗೆ ಬಲಿಯಾದರು? ಇಂತಹ ಅನೇಕ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಗಳು ನಾಟಕದಲ್ಲಿ ಪದರ ಪದರವಾಗಿ ಬಿಡಿಸಿಕೊಳ್ಳುತ್ತಾ ಹೋಗುತ್ತವೆ. ಇನ್‌ಸ್ಪೆಕ್ಟರ್ ಪ್ರವೇಶವಾದ ಮೇಲೆ ನಾಟಕ ಉತ್ತಮ ವೇಗವನ್ನು ಕಾಪಾಡಿಕೊಂಡು ಪ್ರೇಕ್ಷಕನಲ್ಲಿ ನಿರಾಳತೆ ಮೂಡಿಸುತ್ತದೆ. ಸರಳವಾದರೂ ಗಂಭೀರ ಸಂಭಾಷಣೆಯಿಂದ ಕೊಡಿದ ನಾಟಕದಲ್ಲಿ ರಂಗಸಜ್ಜಿಕೆ ಕೂಡ ಉತ್ತಮ ಪರಿಣಾಮವನ್ನು ನೀಡುತ್ತದೆ. ಪ್ರವೀಣ್ ಡಿ.ರಾವ್ ಅವರ ಸಂದರ್ಭೋಚಿತ ಹಿನ್ನೆಲೆ ಸಂಗೀತ ಮತ್ತು ಚಂದ್ರಕುಮಾರ್ ಸಿಂಗ್ ಅವರ ಬೆಳಕು ಸಮರ್ಪಕವಾಗಿದೆ.
ಒಟ್ಟಾರೆ ದಿಢೀರ್ ಶ್ರೀಮಂತಿಕೆಯ ಆಸೆ, ಅದಕ್ಕಾಗಿ ಎಂತಹ ಮಾರ್ಗವನ್ನಾದರೂ ಒಪ್ಪಿ ಬಿಡುವ ಯುವ ಮನಸ್ಸುಗಳು ಆತ್ಮ ವಿಮರ್ಶೆ ಮಾಡಿಕೊಳ್ಳುವಂತೆ ಹೆಣೆದ ಕಥೆ ಸಂಪೂರ್ಣ ದುರಂತ ಅಂತ್ಯ ಹೊಂದಿರುವುದು ಒಂದು ಅನಪೇಕ್ಷಣೀಯ ಅಂಶ ಎನಿಸುತ್ತದೆ.
ಉತ್ತಮ ನಾಟಕಗಳು ಬೇಕು ಎಂದು ಹುಡುಕಾಟದಲ್ಲಿ ಇರುವ ರಂಗ ತಂಡಗಳಿಗೆ ಮತ್ತು ರಂಗಾಸಕ್ತರಿಗೆ ಇಲ್ಲೊಂದು ಹೊಸ ನಾಟಕ ಸಿದ್ದವಾಗಿದೆ ಎಂದು ಸಾರಿ ಹೇಳಬಹುದಾಗಿದೆ. ನಾಟಕಕಾರನಾಗಿ, ನಿರ್ದೇಶಕರಾಗಿ ಶ್ರೀನಾಥ್ ವಸಿಷ್ಠ ಪ್ರಥಮ ಪ್ರಯತ್ನದಲ್ಲಿ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.