ADVERTISEMENT

ನಗರೀಕರಣದ ಕಲ್ಪನೆಗಳು

ಕಲಾಪ

ನವೀನ್‌ ಕುಮಾರ್‌ ಎ.ಎಂ
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ಬದಲಾದ ಜೀವನ ಶೈಲಿ, ನಗರೀಕರಣ ಪ್ರಕೃತಿಯಿಂದ ಮಾನವನನ್ನು ವಿಮುಖರನ್ನಾಗಿ ಮಾಡುತ್ತಿದೆ. ಬಡತನ, ಮಳೆಯ ಅನಿಶ್ಚಿತತೆ ಬರ ಇವುಗಳಿಂದ ಬೇಸತ್ತ ಗ್ರಾಮೀಣರು ಆರ್ಥಿಕ ಸ್ವಾವಲಂಬನೆಗಾಗಿ ಕೆಲಸಗಳನ್ನರಸಿ ನಗರಗಳತ್ತ ಗುಳೆ ಹೊರಟಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಇಂತಹ ಸಂದರ್ಭದಲ್ಲಿ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಗಳಿರುವ ಹಳ್ಳಿಗಳಿಂದ ಬಂದು ನಗರಗಳಲ್ಲಿ ನೆಲೆಸಿರುವ ಕುಟುಂಬಗಳಲ್ಲಿ ಬೆಳೆದ ಮೂವರು ಕಲಾವಿದರಾದ ನಿಂಗರಾಜ್‌ ಪಾಟೀಲ್‌, ಶಾಂತನು ಡೇ ಮತ್ತು ಗೋವಿಂದ ಬಿಸ್ವಾಸ್‌ ನಗರಗಳ ಸಾಮಾಜಿಕ, ಭೌಗೋಳಿಕ ಬೆಳವಣಿಗೆಗಳನ್ನು ಕುರಿತಂತೆ ಬದಲಾದ ಜೀವನ ಶೈಲಿಯ ಪರಿಣಾಮಗಳನ್ನು ಕುಂಚದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ.

ತೂಗುಯ್ಯಾಲೆಯನ್ನು ಹಿಂಬದಿಯಲ್ಲಿ ಹೊತ್ತೊಯ್ಯುತ್ತಿರುವ ರಿಕ್ಷಾ, ಪಂಜರದ ಮೇಲೆ ಕೂತು ಚಿಂತಿಸುತ್ತಿರುವಂತೆ ಭಾಸವಾಗುವ ಗಿಳಿಯ ಜಲವರ್ಣ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಪೈಪಿನಾಕಾರದ ಕೊಳವೆಯ ಮೈಕ್‌ ಮೂಲಕ ಕಿವಿ ಮುಚ್ಚಿ ಕೂಗುತ್ತಿರುವ ವ್ಯಕ್ತಿಗೆ ಕೊಳವೆಯ ಮತ್ತೊಂದು ಮಹಾದ್ವಾರದ ಮೂಲಕ ಆತನ ಅರಚುವಿಕೆಯ ಶಬ್ದ ತಲುಪುತ್ತಿರುವಂತೆ ಸೂಚಿಸಿರುವ ‘ಪೈಪ್‌ ಸೀರೀಸ್‌’ ಚಿತ್ರ ನಗರೀಕರಣದ ಶಬ್ದ ಮಾಲಿನ್ಯದ ದ್ಯೋತಕದಂತೆ ಕಾಣುತ್ತದೆ.

ಇನ್ನು ನಗರೀಕರಣದಲ್ಲಿ ಜನರ ಸ್ಥಿತಿಗತಿಗಳನ್ನು ಗುಬುಟು ಇಲ್ಲದ ಚಪ್ಪಲಿ, ಕನ್ನಡಿ ಒಡೆದ ಖಾಲಿ ಚೌಕಟ್ಟುಗಳ ಮೂಲಕ ನಿಂಗರಾಜ್‌ ಪಾಟೀಲ್‌ ಜಲವರ್ಣ ಹಾಗೂ ಪೆನ್ಸಿಲ್‍ ಸ್ಕೆಚ್‌ ಬಳಸಿ ಚಿತ್ರಿಸಿರುವುದು ವಿಶೇಷ. ಮೂಲತಃ ಕರ್ನಾಟಕದ ವಿಜಯಪುರದವರಾದ ಅವರು ಹೈದರಾಬಾದ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ.

ನಗರಗಳ ಬೆಳವಣಿಗೆಯಲ್ಲಿ ಅಗ್ರ ಪಂಥೀಯವಾಗಿ ಕಾಣುವ ಇಟ್ಟಿಗೆ, ಜಲ್ಲಿ ಕಲ್ಲು, ಕಬ್ಬಿಣದ ತಂತಿಗಳು ಹಾಗೂ ರೇಖೆಗಳನ್ನೇ ಬಳಸಿ ತೀರಾ ಸಾಮಾನ್ಯ ಕುಶಲಿಯಂತೆ ಚಿತ್ರ ರಚಿಸಿದ್ದಾರೆ ಕೋಲ್ಕತ್ತದ ಶಾಂತನು ಡೇ.

ಮೇಲಿನಿಂದ ಕಾಣುವ ಭೂ ಭಾಗಗಳು, ಕರಗುತ್ತಿರುವ ಹಿಮ ಪರ್ವತಗಳು ಹಾಗೂ ರೇಖೆಗಳ ಮೂಲಕ ಬದಲಾದ ವಿಶ್ವದ ಸ್ವರೂಪವನ್ನು ‘ಸ್ಪೇಸ್‍-2’, ‘ಬಿಟ್ವೀನ್‍ ದ ಲೈನ್ಸ್‍’ ಮತ್ತು ‘ವಿತೌಟ್ ಮಿ’ ಎಂಬ ಆಕ್ರಿಲಿಕ್‍ ಮತ್ತು ಕ್ಯಾನ್ವಾಸ್‍ ಚಿತ್ರಗಳಲ್ಲಿ ಸೂಕ್ಷ್ಮವಾಗಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದಾರೆ ಗೋವಿಂದ ಬಿಸ್ವಾಸ್‍.

ಒಟ್ಟಾರೆಯಾಗಿ ಗ್ರಾಮಗಳಿಂದ ವಲಸೆ ಹೋಗುವ ಅನಿವಾರ್ಯದ ಕುರಿತು ವಿಭಿನ್ನ ಭೂ ಪ್ರದೇಶ, ಸಾಂಸ್ಕೃತಿಕ ಹಿನ್ನೆಲೆಗಳಿಂದ ಬಂದ ಕಲಾವಿದರು ಒಂದೇ ವೇದಿಕೆಯಲ್ಲಿ ನಗರೀಕರಣ ಮತ್ತು ವಲಸೆ ಕುರಿತು ತಾವು ಕಂಡ ಅನುಭವಿಸುತ್ತಿರುವ ತುಮುಲಗಳನ್ನು  ಅಭಿವ್ಯಕ್ತಿಸಿದ್ದಾರೆ.

ಪ್ರದರ್ಶನದಲ್ಲಿ ಕನಿಷ್ಠ 15 ಸಾವಿರದಿಂದ ಗರಿಷ್ಠ 90 ಸಾವಿರದವರೆಗೆ ಚಿತ್ರಗಳು ಬಿಕರಿಯಾಗುತ್ತಿವೆ. ಕ್ಯಾನ್ವಾಸ್‍, ಆಕ್ರಿಲಿಕ್‍, ಜಲವರ್ಣ ಹಾಗೂ ಬಹು ಮಾಧ್ಯಮಗಳಲ್ಲಿ ಅರಳಿರುವ ಇವರ ಚಿತ್ರಗಳನ್ನು   ಪ್ರದರ್ಶನಕ್ಕಿಟ್ಟಿರುವುದು ಬೆಂಗಳೂರಿನ ವಸಂತ ನಗರದ ಅರಮನೆ ರಸ್ತೆಯಲ್ಲಿರುವ ‘ಆರ್ಟ್ ಹೌಝ್’ ಗ್ಯಾಲರಿಯಲ್ಲಿ. ‘ರೀ ವಿಸಿಟಿಂಗ್‌ ದ ಸಿಟಿ’ ಎನ್ನುವ ಹೆಸರಿನಲ್ಲಿ ನ.21ರಿಂದ ಡಿ.12ರವರೆಗೆ ಪ್ರದರ್ಶನ ನಡೆಯುತ್ತಿದೆ.

ಪ್ರದರ್ಶನದ ಸಮಯ: ಬೆಳಗ್ಗೆ10:30ರಿಂದ ಸಂಜೆ 6:30ರವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.