ADVERTISEMENT

ನಡೆದದ್ದೇ ಬೇರೆ

ಪ್ರತಿಕ್ರಿಯೆ

ಎಚ್.ಡಿ.ಕುಮಾರಸ್ವಾಮಿ
Published 5 ನವೆಂಬರ್ 2014, 19:30 IST
Last Updated 5 ನವೆಂಬರ್ 2014, 19:30 IST

ನವೆಂಬರ್ 05, 2014ರಂದು ಪ್ರಜಾವಾಣಿ ಮೆಟ್ರೊ ಬೆಂಗಳೂರು ಸಂಚಿಕೆಯಲ್ಲಿ ಶಿಷ್ಯರ ನೆನೆದ ಗುರುಗಳು ಎಂಬ ನೆನಪಿನ ಬುತ್ತಿಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಕೆ.ರಾಜಗೋಪಾಲಾಚಾರ್ಯ ಅವರು ‘ಕೈ ಕಚ್ಚಿ ಓಡಿದ್ದ ಕುಮಾರಸ್ವಾಮಿ’ ಶೀರ್ಷಿಕೆಯಡಿಯಲ್ಲಿ ಪ್ರಸ್ತಾಪಿಸಿರುವ ವಿಷಯ ಸತ್ಯಕ್ಕೆ ದೂರವಾಗಿದೆ.

ಮಾಸಿದ ನೆನಪಿನಲ್ಲಿ ಗುರುಪರಂಪರೆಗೆ ಧಕ್ಕೆ ತರುವ ರೀತಿ ವಿಷಯ ಪ್ರಸ್ತಾಪಿಸಿರುವುದು ಸಮಂಜಸವಲ್ಲ. ವಿಜಯ ಕಾಲೇಜಿನಲ್ಲಿ ನಡೆದ ಘಟನೆಯ ವಾಸ್ತವ ಚಿತ್ರಣವನ್ನು ನೀಡುವ ಮೂಲಕ ಗುರುಗಳಿಗೆ ಹಳೆಯ ನೆನಪನ್ನು ಸ್ಮೃತಿಪಟಲದಲ್ಲಿ ಸರಿಪಡಿಸಿಕೊಳ್ಳುವಂತೆ ವಿನಮ್ರವಾಗಿ ಕೋರುತ್ತೇನೆ.

ನಾನು ಯಾವತ್ತೂ ಕೊನೆಯ ಬೆಂಚಿನ ವಿದ್ಯಾರ್ಥಿ. ಶಾಲಾ ಕಾಲೇಜು ದಿನಗಳಿಂದಲೂ ನನಗೆ ಕ್ರಿಕೆಟ್‌ ಹುಚ್ಚು. ಜಯನಗರದ ವಿಜಯ ಕಾಲೇಜಿನಲ್ಲಿ ಪಿಯುಸಿಯಲ್ಲಿ ಪಿ.ಸಿ.ಎಂ.ಬಿ ಕೋರ್ಸ್‌ ಓದುತ್ತಿದ್ದೆ. ಬಹುಶಃ ಇಂಗ್ಲಿಷ್‌ ಅಥವಾ ರಸಾಯನಶಾಸ್ತ್ರ ತರಗತಿ ನಡೆಯುತ್ತಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್‌ ಮ್ಯಾಚ್‌ ನಡೆಯುತ್ತಿದ್ದ ಕಾಮೆಂಟರಿಯನ್ನು ಪುಟ್ಟ ರೇಡಿಯೊದಲ್ಲಿ ತರಗತಿಯಲ್ಲೇ ಕೇಳುತ್ತಿದ್ದೆ.

ಇದನ್ನು ಗಮನಿಸಿದ ಉಪನ್ಯಾಸಕಿಯೊಬ್ಬರು ಹತ್ತಿರ ಬಂದು ರೇಡಿಯೊ ಕಿತ್ತುಕೊಳ್ಳಲು ಮುಂದಾದರು. ಆಗ ತಕ್ಷಣವೇ ರೇಡಿಯೊವನ್ನು ನನ್ನತ್ತ ಎಳೆದುಕೊಂಡೆ. ಆಗ ನನ್ನ ಉಗುರು ಅವರ ಕೈಗೆ ತಾಗಿ ಅಲ್ಪ ರಕ್ತಸ್ರಾವವಾಯಿತು. ನನ್ನನ್ನು ಪ್ರಾಂಶುಪಾಲರ ಬಳಿ ಕರೆದೊಯ್ಯಲಾಯಿತು. ಕಾಲೇಜಿನಿಂದ ಪ್ರಾಂಶುಪಾಲರು ನನ್ನನ್ನು ಅಮಾನತು ಮಾಡಿದರು.

ಮರುದಿನವೇ ಎರಡು ದಿನಗಳ ಕಾಲ ಇಡೀ ವಿಜಯ ಕಾಲೇಜಿನ ಸಹಪಾಠಿಗಳು ‘ನೋ ಕುಮಾರಸ್ವಾಮಿ, ನೋ ಕಾಲೇಜ್‌’ ಎಂದು ತರಗತಿಗಳನ್ನು ಬಹಿಷ್ಕರಿಸಿದರು. ನನ್ನನ್ನು ಕರೆಸಿಕೊಂಡ ಪ್ರಾಂಶುಪಾಲರು ‘ಈಗ ತುರ್ತು ಪರಿಸ್ಥಿತಿಯಿದೆ. ಪ್ರತಿಭಟನೆ ಹೀಗೇ ಮುಂದುವರಿದರೆ ಎಮರ್ಜೆನ್ಸಿ ವಿರುದ್ಧ ಕುಮಾರಸ್ವಾಮಿ ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾನೆ ಎಂದು ದೂರು ನೀಡಿ ಒಳಗೆ ಹಾಕಿಸುತ್ತೇನೆ’ ಎಂದು ಬೆದರಿಸಿದರು. ನಂತರ ನನ್ನ ಅಮಾನತ್ತು ಆದೇಶವನ್ನು ವಾಪಸ್ಸು ಪಡೆದರು. ಎಂದಿನಂತೆ ತರಗತಿಗಳು ನಡೆದವು. ಇದು ನಾನು ವಿಜಯ ಕಾಲೇಜಿನಲ್ಲಿ ಪಿಯು ಓದುತ್ತಿದ್ದಾಗ ನಡೆದ ಘಟನೆಯ ವಾಸ್ತವಾಂಶ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.