ADVERTISEMENT

ನವ ಜಾನಪದದ ಗುಂಗು...

ವಿದ್ಯಾ ಶಿಮ್ಲಡ್ಕ
Published 1 ಜೂನ್ 2012, 19:30 IST
Last Updated 1 ಜೂನ್ 2012, 19:30 IST

ಜಾಗತೀಕರಣದ ಪ್ರವಾಹದಲ್ಲಿ ಸಿಲುಕಿರುವ ಕಲಾವಿದರನ್ನು ಕಾಡುವ ಕೆಲವು ಪ್ರಶ್ನೆಗಳಿವು. ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.

ಜಾಗತೀಕರಣದ ಸಂದರ್ಭದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಆಗುಹೋಗುಗಳ ಬಗ್ಗೆ ಮಾತನಾಡುವಾಗ ~ಗ್ಲೋಕಲೈಸೇಷನ್~ ಪದದ ಬಳಕೆ ಕಳೆದ ಎರಡು ದಶಕಗಳಿಂದ ಕೇಳಿ ಬರುತ್ತಿದೆ. ಒಂದು ಗ್ಲೋಬಲ್(ಜಾಗತಿಕ) ವಸ್ತು ಅಥವಾ ಸಂಸ್ಕೃತಿಯನ್ನು ಲೋಕಲ್ (ಸ್ಥಳೀಯ) ಜನರ ಅಭಿರುಚಿಗೆ ಮಾರ್ಪಡಿಸುವುದು. ಅಥವಾ ಲೋಕಲ್ ವಸ್ತು/ಸಂಸ್ಕೃತಿ ಒಂದನ್ನು ವಿವಿಧ ದೇಶಗಳ ಜನರ ರುಚಿ, ಅಭಿರುಚಿಗೆ ಹೊಂದಿಕೆ ಆಗುವಂತೆ, ಅಂದರೆ ಗ್ಲೋಬಲ್ ಅಪೀಲ್ ಇರುವಂತೆ ಮಾರ್ಪಡಿಸುವುದು. ಇದರ ಉದ್ದೇಶ ಹಲವು ಇರಬಹುದು- ಅಸ್ತಿತ್ವ, ಉಳಿವಿನ ಪ್ರಶ್ನೆ, ವ್ಯಾಪಾರ, ಮಾರುಕಟ್ಟೆ ವಿಸ್ತರಣೆ ಇತ್ಯಾದಿ. ಸಾಂಸ್ಕೃತಿಕ ಅಧ್ಯಯನ (ಕಲ್ಚರಲ್ ಸ್ಟಡೀಸ್) ಕ್ಷೇತ್ರದಲ್ಲಿ ಈ ಕುರಿತು ಸಾಕಷ್ಟು ವಿಚಾರ ಸಂಕಿರಣ, ವಾದ-ಪ್ರತಿವಾದ, ಚರ್ಚೆಗಳು ನಡೆದೇ ಇವೆ.

ಇತ್ತೀಚೆಗೆ ಬೆಂಗಳೂರಿನಲ್ಲಿರುವ ಫ್ರಾನ್ಸ್ ದೇಶದ ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆ `ಅಲೈನ್ಸ್ ಡಿ ಫ್ರಾನ್ಸೈ~ನಲ್ಲಿ ನಡೆದ `ಫೋಕ್ ಇಟ್ ಇಂಡಿಯಾ~ ಎಂಬ ನವ-ಜಾನಪದ ಸಂಗೀತ ಕಾರ್ಯಕ್ರಮ ಸಾಂಸ್ಕೃತಿಕ ಕ್ಷೇತ್ರದಲ್ಲಿ `ಗ್ಲೋಕಲೈಸೇಷನ್~ ಪ್ರಕ್ರಿಯೆಗೆ ಒಂದು ಉದಾಹರಣೆ ಎನ್ನಬಹುದು.

ADVERTISEMENT

ಗ್ಲೋಕಲೈಸೇಷನ್ ಸಿದ್ಧಾಂತಿ ಎಂದೇ ಖ್ಯಾತರಾದ ಸಮಾಜಶಾಸ್ತ್ರಜ್ಞ, ಸೈಪ್ರಸ್ ವಿಶ್ವವಿದ್ಯಾನಿಲಯದ ಪ್ರೊ.ವಿಕ್ಟರ್ ರುದೊಮೆಟಾಫ್ ಸಾಮಾಜಿಕ-ಸಾಂಸ್ಕೃತಿಕ ಜಾಗತೀಕರಣ ಕಾಸ್ಮೊಪಾಲಿಟನಿಸಂಗೆ ಹಾದಿ ಮಾಡುತ್ತದೆ ಎಂಬ ವಾದ ಮಂಡಿಸುತ್ತಾರೆ. ಕಳೆದ ಒಂದೂವರೆ ದಶಕಗಳಲ್ಲಿ ನಮ್ಮೂರಿನ ಆಗುಹೋಗುಗಳನ್ನು ಗಮನಿಸುತ್ತಾ ಬಂದಿರುವವರಿಗೆ ಈ ವಾದ ಬಹಳ ಬೇಗ ಅರ್ಥವಾಗುತ್ತದೆ. 

ಬೆಂಗಳೂರಿನ ಕಾಸ್ಮೊಪಾಲಿಟನ್ ಕೇಳುಗರನ್ನು ಸೆರೆಹಿಡಿದ, ಕುಳಿತಲ್ಲೇ ಕುಣಿಯುವಂತೆ ಮಾಡಿದ ನವ-ಜಾನಪದ ಸಂಗೀತವನ್ನು `ರಿದಂ ಮತ್ತು ರಾಗಾಸ್~ ಸಂಸ್ಥೆ ಏರ್ಪಡಿಸಿತ್ತು. `ಈ ಲೋಕಲ್, ಗ್ಲೋಬಲ್, ಗ್ಲೋಕಲ್ ಚಿಂತೆ ನಮಗ್ಯಾಕೆ?~ ಎಂದು ಜನ ಗಾನ ಕೇಳಿ ಖುಷಿ ಪಟ್ಟರು. ಅಂದು ಹಾಡಿದವರು, ವಾದ್ಯ ನುಡಿಸಿದವರೆಲ್ಲರೂ ಸಂಗೀತದ ಭದ್ರ ಬುನಾದಿ ಹೊಂದಿದವರೇ.

ಕಾರ್ಯಕ್ರಮದ ಆರಂಭದಲ್ಲಿ ನಮ್ಮ ಕನ್ನಡದ `ಕುಂಬಾರಣ್ಣ ಮುಂಜಾನೆದ್ದು ಬಂದು~ ನಾಂದಿ ಹಾಡಿದರೆ, ಮರಾಠಿ ಮಾಯಗಾತಿಯ ಲಾವಣಿಗೆ ಜನರೆಲ್ಲ ಲಯಬದ್ಧವಾಗಿ ತಲೆದೂಗಿ, ಕೈ ಚಿಟಿಕೆ ಹಾಕುತ್ತ, ಕಾಲು ಕುಟ್ಟಿ ತಲ್ಲೆನರಾದರು.

ಭಾರತದ ವಿವಿಧ ಪ್ರಾಂತ್ಯಗಳ ಜಾನಪದ ಹಾಡುಗಳನ್ನು ಆಯ್ಕೆ ಮಾಡಲಾಗಿತ್ತು. ಬಂಗಾಳಿ, ಗುಜರಾತಿ, ಅಸ್ಸಾಮಿ, ತೆಲುಗು, ಸಿಂಧಿ, ರಾಜಸ್ತಾನಿ, ಕೊಂಕಣಿ ಗೀತೆಗಳನ್ನು ಸಂಗೀತಾ ಕಿಶನ್, ಸೀಮಾ ರಾಯ್ಕರ್ ಮತ್ತು ಸುಪ್ರತೀಕ್ ಘೋಷ್ ಹಾಡಿದರು.

ಭೂಪೇನ್ ಹಜಾರಿಕಾ ಅವರಿಂದ ಅಮರವಾದ `ಗಂಗಾ ಬೆಹತೀ ಹೊ ಕ್ಯುಂ~ ಗೀತೆಯನ್ನು ಹಾಡಿದ ಸುಪ್ರತೀಕ್ ಘೋಷ್ ಅದರ ಹಿಂದಿನ ನೋವನ್ನು ಸಮರ್ಥವಾಗಿ ಬಿಂಬಿಸಿ ಕ್ಷಣಕಾಲ ಹದಯ ಕಲಕಿದರು.

`ಇಲ್ಲಿ ಇಷ್ಟು ಹಿಂಸೆ, ವ್ಯಗ್ರತೆ ಇರುವಾಗ ನೀನು ಹೇಗೆ ಮೌನವಾಗಿ ಹರಿಯುತ್ತಿದ್ದೀ? ಈ ಕೊಳೆ ತೊಳೆಯಬಾರದೇ? ಓ ಗಂಗಾ ನೀನೇಕೆ ಏನೂ ಆಗದವಳಂತೆ, ಏನೂ ಕಾಣದವಳಂತೆ ಹರಿಯುತ್ತಿದ್ದೀ?~ ಎಂದು ನೋವು, ಹತಾಶೆ ವ್ಯಕ್ತಪಡಿಸುವ ಗೀತೆ ಇದು. `ಗಂಗಾಜಲ್~ ಸಿನಿಮಾದಲ್ಲಿ ನೀವಿದನ್ನು ಕೇಳಿರುತ್ತೀರಿ.

ಹಿಂದೊಮ್ಮೆ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು ಹಾಡುತ್ತಿದ್ದ, ಸೂಫಿ ಸಂಗೀತದ ಛಾಯೆಯುಳ್ಳ ಸಿಂಧಿ ಗೀತೆ ಚೊಕ್ಕವಾಗಿ ಮೂಡಿಬಂತು. ಹೀಗೆ ಕೆಲವು ಹಾಡುಗಳು ಭಾವ ತೀವ್ರತೆಯೊಂದಿಗೆ ಒಳ್ಳೆಯ ಸಂದೇಶ ನೀಡಿದವು, ಮನರಂಜನೆ ಮಾತ್ರವಲ್ಲದೆ ಚಿಂತನೆಗೂ ಒರೆಹಚ್ಚಿದವು. ಅಂತ್ಯದಲ್ಲಿ ಗಾಯಕಿ ಸಂಗೀತಾ `ಮಾಯದಂತ ಮಳೆ~ ಬರಿಸಿ ಮದಗದ ಕೆರೆ ತುಂಬಿಸಿದರು.

ಕಾರ್ಯಕ್ರಮ ಮುಗಿಸಿ ಮನೆ ಸೇರಿದಾಗ ಗ್ಲೋಬಲ್-ಲೋಕಲ್- ಗ್ಲೋಕಲ್ ಥಾಟ್‌ಗಳು ಮತ್ತು ಫೋಕ್ ಬೀಟ್‌ಗಳು ಮುತ್ತಿಕೊಂಡು ಕಾಡಿದವು.

ಕೇಂದ್ರಬಿಂದು ಗೋಪಿ

ಡ್ರಮ್ಸ ಜೊತೆಗೆ ಚಿತ್ರ-ವಿಚಿತ್ರ ವಾದ್ಯಗಳು, ಸಂಗೀತ ಪರಿಕರಗಳನ್ನು ಸಂದರ್ಭಕ್ಕೆ ತಕ್ಕಂತೆ ನುಡಿಸಿ ಗೋಷ್ಠಿಯಲ್ಲಿ ಕೇಂದ್ರಬಿಂದುವಾದವರು ಗೋಪಿ. ಅಂದು ಮೃದಂಗ ವಾದಕ ಅಪ್ಪನ ಜೊತೆ ದೇವಾಲಯಗಳಿಗೆ ಹೋಗಿ ತಾಳ ನುಡಿಸುತ್ತಿದ್ದ ಪುಟ್ಟ ಪೋರ ಗೋಪಿ ಇಂದು ಖ್ಯಾತ ಪರ್ಕಷನಿಸ್ಟ್ (ಲಯವಾದ್ಯಗಾರ). ಅವರ ಪೂರ್ಣ ಹೆಸರು ಕೆ.ಎಂ ಗೋಪಿನಾಥ್.

~ಮುಂದೆ ಡ್ರಮ್ಸ ನುಡಿಸುವ ಖಯಾಲಿ ಆರಂಭವಾಯಿತು. ಕೇವಲ ಖುಷಿಗೋಸ್ಕರ ನೈಟ್‌ಕ್ಲಬ್‌ಗಳಲ್ಲಿ ಡ್ರಮ್ಸ  ನುಡಿಸಿದ್ದೂ ಇದೆ. ಪ್ರತಿಭೆ ಮುಂಬೈಗೆ ಕರೆದೊಯ್ಯಿತು. ಪಂಡಿತ್ ಸುರೇಶ್ ತಲ್ವಾರ್ಕರ್ ಅವರ ಬಳಿ ತಬಲಾ ವಾದನದ ಕಲೆ ಕಲಿತೆ~ ಎನ್ನುತ್ತಾರೆ ಗೋಪಿ.
ಅದ್ನಾನ್ ಸಾಮಿ, ದಿವಂಗತ ಮನೋರಿ ಸಿಂಗ್, ನದೀಂ ಶ್ರವಣ್, ಸಾಜಿದ್-ವಾಜಿದ್, ಅನ್ನು ಮಲಿಕ್ ಮುಂತಾದ ಸಂಗೀತಗಾರರೊಂದಿಗೆ ಸೇರಿ ರಾಗ-ತಾಳಗಳ ಮ್ಯೋಜಿಕ್ ಸಷ್ಟಿಸಿದ್ದಾರೆ ಅವರು. ಪ್ರಸ್ತುತ ಬೆಂಗಳೂರಿನಲ್ಲಿ ವರ್ಲ್ಡ್ ಮ್ಯೂಸಿಕ್ ಸೆಂಟರ್ ಅಕಾಡೆಮಿ ನಡೆಸುತ್ತಿದ್ದು, ರಿದಂ ಕನ್ಸಲ್ಟೆಂಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗೋಪಿಗೆ ಅಂತರರಾಷ್ಟ್ರೀಯ ಖ್ಯಾತಿಯ ಪ್ರಚಂಡ ಲಯವಾದ್ಯಗಾರ ತ್ರಿಲೋಕ್ ಗುರ್ತು ಅವರೇ ಸ್ಫೂರ್ತಿಯಂತೆ.

ಹೆಜ್ಜೆಗುರುತುಗಳು...

`ರಿದಂ ಮತ್ತು ರಾಗ~ ತಂಡದಲ್ಲಿನ ಸಂಗೀತಗಾರರೆಲ್ಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೇ. ಬ್ಯಾಂಡ್‌ನಲ್ಲಿ ಪರಸ್ಪರ ಪೂರಕವಾಗಿ ವಿಶಿಷ್ಟ ಸಂಗೀತ ಸೃಷ್ಟಿಸುತ್ತಾರೆ. `ರಿದಂ ಮತ್ತು ರಾಗ~ ಪ್ರತಿ ಬಾರಿ ಕೇಳುಗರಿಗೆ ನೂತನವಾದದ್ದನ್ನು ನೀಡುತ್ತಾ ಬಂದಿದೆ. ಕೆಲವು ಉದಾಹರಣೆಗಳು ಇಲ್ಲಿವೆ:

ಸುರ್ ತಾಲ್- ಗ್ರಾಮ್ಮಿ ಪ್ರಶಸ್ತಿ ಪುರಸ್ಕೃತ ಲಯವಾದ್ಯಗಾರ ತ್ರಿಲೋಕ್ ಗುರ್ತು ಜೊತೆ ಬೆಂಗಳೂರಿನ ಯು.ಬಿ ಸಿಟಿಯಲ್ಲಿ ಆಯೋಜಿಸಿದ ರಾಗ-ತಾಳಗಳ ವಿಶಿಷ್ಟ ಸಂಗೀತ ಮೇಳ. 

ಕೃಷ್ಣ ಇನ್ ಬೀಟ್ಸ್ - ಕಷ್ಣನ ವಿವಿಧ ಅವತಾರಗಳ ಕುರಿತು ಭಕ್ತಿ ಸಂಗೀತ (ಫ್ಯೂಷನ್)

ಇಂಡೊ ಫ್ರೆಂಚ್ ಫ್ಯೂಷನ್ - ಫ್ರೆಂಚ್ ಸಂಗೀತಗಾರ ಗೈ ಮುಫೆಟ್ ಜೊತೆ ನಡೆಸಿದ ಸಂಗೀತ ಗೋಷ್ಠಿ.

ಮ್ಯೋಸಿಕಲ್ ಷೋ - ಶಾಸ್ತ್ರೀಯ, ಸಮಕಾಲೀನ, ಸೂಫಿ, ಜಾನಪದ ಸಂಗೀತಗಳ ಸಮ್ಮಿಲನ.

ಸಂಗೀತಾ ಶ್ರೀಕಿಷನ್(ಗಾಯನ), ಗೋಪಿ (ಲಯ ವಾದ್ಯ), ಗೋವಿಂದ್ (ಕೀಬೋರ್ಡ್), ಡೇವಿಡ್ ಮೊಜ್ಕೊ (ಸ್ಯಾಕ್ಯೊಫೋನ್), ಶಕ್ತಿಧರ್ (ಕೊಳಲು) ಮತ್ತು ಕುಮಾರ್ (ರಿದಂ ಪ್ಯಾಡ್) ಅವರು ಈ ಬ್ಯಾಂಡಿನ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.