ನಗರದಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್ ಷೋ ಒಂದರಲ್ಲಿ ತಮ್ಮ ನೃತ್ಯದ ಝಲಕ್ ತೋರಿಸಿದ ‘ಔಟ್ ಲಾ’ ತಂಡ ಆ ಸಂಜೆ ಸಾಕಷ್ಟು ಜನರ ಚಪ್ಪಾಳೆ ಗಿಟ್ಟಿಸಿಕೊಂಡಿತು. ಈ ನೃತ್ಯ ತಂಡದ ಹೆಸರು ಕೇಳಲು ಸ್ವಲ್ಪ ವಿಭಿನ್ನ. ‘ಔಟ್ ಲಾ’ ಎಂದರೆ ಬ್ರೇಕ್ ದಿ ರೂಲ್ಸ್ ಎನ್ನುತ್ತಾರೆ ತಂಡದ ರೂವಾರಿ ಸಚಿನ್.
1,500ಕ್ಕೂ ಹೆಚ್ಚು ಷೋ ನೀಡಿರುವ ಸಚಿನ್‌ಗೆ ನೃತ್ಯದ ಹುಚ್ಚು ಬಾಲ್ಯದಿಂದಲೇ ಇತ್ತು. ಸಚಿನ್ ಮಂಗಳೂರು ಮೂಲದವರು. ಅಲ್ಲಿನ ಯಕ್ಷಗಾನ, ಹುಲಿವೇಷದ ಕುಣಿತದಿಂದ ಪ್ರಭಾವಿತಗೊಂಡ ಸಚಿನ್ ನೃತ್ಯಪಟುವಾಗಬೇಕು ಎಂಬ ಹಂಬಲದಿಂದ ಬೆಂಗಳೂರಿಗೆ ಬಂದವರು. ಅವರ ನೃತ್ಯ ಪ್ರೀತಿಯ ಹಿಂದಿನ ಕಥೆಯೂ ಅಷ್ಟೆ ಸ್ವಾರಸ್ಯಕರ.
ಹುಲಿವೇಷದ ಕುಣಿತ ಯಕ್ಷಗಾನದ ಬಣ್ಣ
ಹುಲಿವೇಷ ಹಾಕಿಕೊಂಡು ಬಂದವರ ಹಿಂದೆ ಓಡಿ ಅವರ ಜತೆ ತಾನೂ ಮನದಣಿಯೆ ಕುಣಿದು ಖುಷಿಪಡುತ್ತಿದ್ದ ಸಚಿನ್ ಆಗಾಗ ಯಕ್ಷಗಾನದ ವೇಷ ಹಾಕುತ್ತಿದ್ದದ್ದೂ ಉಂಟು. ಇದಕ್ಕೆ ಕಾರಣ ಇವರ ಸೋದರ ಸಂಬಂಧಿ. ಅಲ್ಲದೇ ಶಾಲೆಯಲ್ಲಿ ಮಾಡುತ್ತಿದ್ದ ಜಾನಪದ ನೃತ್ಯ ಇವರನ್ನು ತುಂಬ ಸೆಳೆದಿತ್ತು. ಇವೆಲ್ಲವೂ ಅವರನ್ನು ನೃತ್ಯದತ್ತ ಸೆಳೆದ ಸಂಗತಿಗಳು. ‘ಬಾಲ್ಯದಿಂದಲೂ ನೃತ್ಯ ನನಗೆ ಇಷ್ಟವಿತ್ತು.
ಆದರೆ ನಮ್ಮ ಮನೆಯಲ್ಲಿ ನಾನು ಡಾನ್ಸರ್ ಆಗುವುದು ಇಷ್ಟವಿರಲಿಲ್ಲ. ಓದಿನ ಜತೆಜತೆಗೆ ನಾನು ನನ್ನಿಷ್ಟದ ನೃತ್ಯದಲ್ಲಿ ತೊಡಗಿದ್ದೆ.
ನನಗೆ ಆಗ ಯೂಟ್ಯೂಬ್‌ಗಳ ಪರಿಚಯವೇನು ಅಷ್ಟಾಗಿ ಇರಲಿಲ್ಲ. ಗೆಳೆಯರ ಬಳಿ ಇದ್ದ ವಿಡಿಯೊ, ಟೀವಿಯಲ್ಲಿ ಬರುತ್ತಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಟ–ನಟಿಯರು ನೃತ್ಯ ಮಾಡುತ್ತಿರುವುದನ್ನು ನೋಡಿ ಮನೆಯಲ್ಲಿ ಡಾನ್ಸ್ ಮಾಡುತ್ತಿದ್ದೆ. ನನ್ನ ಮೊದಲ ನೃತ್ಯ ಗುರು ಸತೀಶ್. ಅವರ ಬೆಂಬಲದಿಂದ ನೃತ್ಯದತ್ತ ಪ್ರೀತಿ ಮತ್ತಷ್ಟು ಹೆಚ್ಚಿತು. ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದೆ. ಎರಡನೇ ವರ್ಷದಲ್ಲಿದ್ದಾಗ ಕಾಲೇಜು ಬಿಟ್ಟು ಬೆಂಗಳೂರಿಗೆ ಬಂದೆ’ ಎಂದು ತನ್ನ ನೃತ್ಯ ಪಯಣದ ಕುರಿತು ಹೇಳುತ್ತಾರೆ ಸಚಿನ್.
ಮನೆಬಿಟ್ಟು ಸಚಿನ್ ಬೆಂಗಳೂರಿಗೆ ಬಂದಾಗ ಅವರ ಬದುಕೇನು ಸರಾಗವಾಗಿರಲಿಲ್ಲ. ಅಪ್ಪನಿಗೆ ಹೇಳದೇ ಅಮ್ಮ ಕೊಟ್ಟ ಸಾವಿರದೈ ನೂರು ರೂಪಾಯಿ ಇಟ್ಟುಕೊಂಡು ಮಹಾನಗರಕ್ಕೆ ಬಂದಿದ್ದರು ಸಚಿನ್. ತನ್ನ ಗೆಳೆಯನೊಬ್ಬನ ರೂಂನಲ್ಲಿ ಒಂದಷ್ಟು ದಿನ ಕಳೆದರು. ನಗರದ ‘ಎಕ್ಸೆಲೆನ್ಸ್’ ಡಾನ್ಸ್ ಕಂಪೆನಿಗೆ ಸೇರಿಕೊಂಡರು. ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಬಂದದ್ದನ್ನೆಲ್ಲಾ ಎದುರಿಸಲು ಗಟ್ಟಿ ಮನಸ್ಸು ಮಾಡಿಕೊಂಡು ಬೆಂಗಳೂರಿನಲ್ಲಿಯೇ ಉಳಿದುಕೊಂಡರು. ಉದ್ಯಾನ ನಗರಿಯಲ್ಲಿ ನೆಲೆ ನಿಲ್ಲುವುದಕ್ಕೆ ಸರಿಯಾದ ವ್ಯವಸ್ಥೆ ಇರದೇ, ಕೈಯಲ್ಲಿ ಕಾಸಿಲ್ಲದೇ ಒಂದಷ್ಟು ದಿನ ಒದ್ದಾಡಿದ ಸಚಿನ್ ತಮ್ಮ ಬಾಳಿನಲ್ಲೂ ಬೆಳಕು ಹರಿಯುವುದು ಎಂಬ ಭರವಸೆ ಇಟ್ಟುಕೊಂಡವರು. ಎಕ್ಸೆಲೆನ್ಸ್ ನೃತ್ಯ ತಂಡ ಇವರ ಬದುಕಿಗೆ ಒಂದು ದಾರಿ ತೋರಿಸಿಕೊಟ್ಟಿತು. ಮೂರು ವರ್ಷ ಈ ಡಾನ್ಸ್ ಕಂಪೆನಿಯಲ್ಲಿ ದುಡಿದ ಇವರು ದೇಶ ವಿದೇಶದಲ್ಲೂ ತಮ್ಮ ನೃತ್ಯದ ಕಂಪನ್ನು ಹಂಚಿದರು.
ತಿರುವು ಪಡೆದ ಬದುಕು
ಮುಂಬೈನಿಂದ ಬೆಂಗಳೂರಿಗೆ ಬಂದ ಸಚಿನ್ ಕನಸಿಗೆ ತಣ್ಣೀರೆರಚಿದ್ದು ಬೈಕ್ ಅಪಘಾತ. ಈ ಅಪಘಾತದಿಂದ ಸಚಿನ್ ಕಾಲಿಗೆ ತುಂಬ ಪೆಟ್ಟಾಗಿತ್ತು. ನೃತ್ಯದಲ್ಲಿಯೇ ಜೀವ ಇಟ್ಟುಕೊಂಡಿದ್ದ ಸಚಿನ್ ಈ ಅಪಘಾತದಿಂದ ಕುಗ್ಗಿಹೋದರು. ಆದರೆ ಸುಮ್ಮನೇ ಕುಳಿತುಕೊಳ್ಳುವ ಜಾಯಮಾನದವರು ಇವರಾಗಿರಲಿಲ್ಲ. ಕೋರಮಂಗಲದಲ್ಲಿ ತಾವೇ ಒಂದು ಡಾನ್ಸ್ ಸ್ಟುಡಿಯೊ ಶುರುಮಾಡಿದರು. 8 ಜನರ ಒಂದು ತಂಡ ಕಟ್ಟಿದರು. ಇವರು ತಂಡ ಕಟ್ಟಿ ನಾಲ್ಕೂವರೆ ವರ್ಷವಾಯಿತು. ಸಾಕಷ್ಟು ಕಾರ್ಯಕ್ರಮ ನೀಡಿರುವ ಇವರ ತಂಡ ದಾಂಡಿಯಾ, ಜಾನಪದ, ಲ್ಯಾಟಿನ್, ಸಾಲ್ಸಾ, ಹಿಪ್–ಹಾಪ್, ಬಿ–ಬಾಯಿಂಗ್ ನೃತ್ಯಪ್ರಕಾರಗಳನ್ನು ಪ್ರದರ್ಶಿಸುತ್ತಿದೆ.
‘ನನಗೆ ಈಗ ಮೊದಲಿನಂತೆ ನೃತ್ಯ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಕ್ಲಾಸ್‌ನಲ್ಲಿ ಹೇಳಿಕೊಡುತ್ತೇನೆ. ಹೊಸ ಹೊಸ ನೃತ್ಯ ಪ್ರಕಾರಗಳನ್ನು ಕಲಿಯುತ್ತಿದ್ದೇನೆ. ಎಂಟು ತಿಂಗಳು ವಿಶ್ರಾಂತಿ ಪಡೆದು ನಾನು ಮತ್ತೆ ನೃತ್ಯಾಭ್ಯಾಸ ಮಾಡುತ್ತಿದ್ದೇನೆ. ನೃತ್ಯವಿಲ್ಲದ ಬದುಕನ್ನು ಊಹಿಸಿಕೊಳ್ಳಲೂ ಕಷ್ಟ. ಕೋರಮಂಗಲದಲ್ಲಿ ಔಟ್ ಲಾ ಡಾನ್ಸ್ ಸ್ಟುಡಿಯೊ ಶುರುಮಾಡಿದೆ’ ಎನ್ನುತ್ತಾರೆ ಸಚಿನ್. ಇವರ ಈ ಕೆಲಸಕ್ಕೆ ಈಗ ಮನೆಯವರ ಬೆಂಬಲವೂ ಇದೆ ಎಂಬುದೇ ಇವರಿಗೆ ಖುಷಿಯ ಸಂಗತಿ.
‘ಬಾಲಿಹಾಪ್’ ಎನ್ನುವ ಹೊಸ ಬಗೆಯ ನೃತ್ಯ ಪ್ರಕಾರವನ್ನು ಸಚಿನ್ ಈಗ ಮಾಡುತ್ತಿದ್ದಾರೆ. ಬಾಲಿವುಡ್ ಮತ್ತು ಹಿಪ್–ಹಾಪ್ ನೃತ್ಯದ ಮಿಶ್ರಣವೇ ಈ ‘ಬಾಲಿಹಾಪ್’ ನೃತ್ಯ. ಸ್ಪರ್ಧೆ ಇರಬೇಕು ಅದು ಆರೋಗ್ಯಯುತವಾಗಿರಬೇಕು ಆಗ ಸಾಧನೆ ಮಾಡುವುದಕ್ಕೆ ಛಲ ಹುಟ್ಟಿಕೊಳ್ಳುತ್ತದೆ ಎನ್ನುವುದು ಸಚಿನ್ ಅಭಿಪ್ರಾಯ.
ಕಲಿಯುವ ಮಹದಾಸೆ
ಕಲಿಯುವ ಹುಮ್ಮಸ್ಸಿದ್ದವರಿಗೆ ಇನ್ನಷ್ಟು ಕಲಿಯಬೇಕು ಎಂಬ ಮಹದಾಸೆ ಇರುತ್ತದೆ. ಸಚಿನ್ ಕೂಡ ಇದೇ ರೀತಿ ಬದುಕು ಕಟ್ಟಿಕೊಂಡವರು. ಇನ್ನೂ ಹೆಚ್ಚು ಕಲಿಯಬೇಕು ಎಂಬ ಆಸೆಯಿಂದ ಮುಂಬೈನತ್ತ ಪಯಣ ಬೆಳೆಸಿದರು. ಅಲ್ಲಿ ಒಂದು ವರ್ಷ ನೃತ್ಯಾಭ್ಯಾಸ ಮಾಡಿ ಮತ್ತೆ ಬೆಂಗಳೂರಿಗೆ ಬಂದರು. ‘ಕಲಿಯಬೇಕು ಎಂಬ ಹಂಬಲ ನನ್ನನ್ನು ಕುಳಿತುಕೊಳ್ಳುವುದಕ್ಕೂ ಬಿಡುತ್ತಿರಲಿಲ್ಲ. ಹಾಗಾಗಿ ನಾನು ಹೊಸತನಕ್ಕಾಗಿ ತುಡಿಯುತ್ತಿದ್ದೆ’ ಎಂದು ತಮ್ಮ ನೃತ್ಯ ಪ್ರೀತಿಯ ಬಗ್ಗೆ ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.