80ರ ದಶಕದಲ್ಲಿ ದೂರದರ್ಶನದ ಕಪ್ಪು-ಬಿಳುಪು ಪರದೆಯ ಮೇಲೆ ಸ್ಫುಟವಾಗಿ ಕನ್ನಡ ವಾರ್ತೆಗಳನ್ನು ಓದುತ್ತಿದ್ದ ರೂಪಾ ಉಪೇಂದ್ರರಾವ್ ಎಂಬ ಸುಂದರ ಯುವತಿಯ ನೆನಪಿದೆಯೇ? ಅವರು ಈಗ ರೂಪಾ ಶ್ಯಾಮಸುಂದರ ಎಂಬ ಹೆಸರಿನಲ್ಲಿ ನೃತ್ಯ ಕಲಾವಿದೆಯಾಗಿ ಖ್ಯಾತಿ ಪಡೆದಿದ್ದಾರೆ.
ಅಮೆರಿಕದ ಡೆಟ್ರಾಯ್ಟ್‌ನಲ್ಲಿ ಕಳೆದ 25 ವರ್ಷಗಳಿಂದ ‘ನೃತ್ಯೋಲ್ಲಾಸ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ಎಂಭ ಭರತನಾಟ್ಯ ಶಾಲೆಯನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು, ತಮ್ಮ ಮೊದಲ ನೃತ್ಯಗುರು ರಾಧಾ ಶ್ರೀಧರ್ ಅವರು ನಡೆಸಿದ ‘ರಸಸಂಜೆ’ ಕಾರ್ಯಕ್ರಮದಲ್ಲಿ ಅಭಿನಯ ಪ್ರಧಾನವಾದ ಕೃತಿಗಳನ್ನು ಪ್ರಸ್ತುತಪಡಿಸಿ ಅಭಿನಯ ಪಾಂಡಿತ್ಯವನ್ನು ಸಾಬೀತುಪಡಿಸಿದರು. ಈ ಸಂದರ್ಭ ಅವರೊಂದಿಗೆ ನಡೆಸಿದ ಮಾತುಕತೆಯ ಅಕ್ಷರ ರೂಪ ಇಲ್ಲಿದೆ.
* ನೃತ್ಯದ ನಂಟು ಹೇಗೆ ಬೆಳೆಯಿತು?
ನಾನು ಎಂಟು ವರ್ಷದಿಂದಲೇ ನೃತ್ಯ ಕಲಿಯಲು ಆರಂಭಿಸಿದೆ. ನಾನು ರಾಧಾ ಶ್ರೀಧರ್ ಅವರ ಹಿರಿಯ ಶಿಷ್ಯೆ. ನಂತರ ಧನಂಜಯ್, ಉಷಾ ದಾತಾರ್, ನರ್ಮದಾ, ಮಾಯಾರಾವ್ ಅವರ ಬಳಿ ನೃತ್ಯವನ್ನು ಹಾಗೂ ಅಭಿನಯವನ್ನು ಕಲಾನಿಧಿ ನಾರಾಯಣನ್ ಬಳಿ ಕಲಿತೆ. ವಿದ್ವತ್ ಪಾಸಾಗುವಷ್ಟರಲ್ಲಿ ಅನೇಕ ಪ್ರತಿಷ್ಠಿತ ಸಂಗೀತ-ನೃತ್ಯ ಸಮ್ಮೇಳನಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದೆ. ಭಾರತ ಸರ್ಕಾರದಿಂದ ವಿದ್ಯಾರ್ಥಿವೇತನ ಸಿಕ್ಕಿತ್ತು. ಅನೇಕ ನೃತ್ಯ ನಾಟಕಗಳ ನನ್ನ ಅಭಿನಯವನ್ನು ಕಲಾಪ್ರೇಮಿಗಳು ಗುರುತಿಸಿದ್ದರು.
* ವಿವಾಹದ ನಂತರವೂ ನೃತ್ಯದಲ್ಲಿ ಹೇಗೆ ಮುಂದುವರಿದಿರಿ?
ನೃತ್ಯವೇ ನನ್ನುಸಿರು. ಜೊತೆಗೆ ಕರ್ನಾಟಕ ಸಂಗೀತವನ್ನೂ ಕಲಿತಿದ್ದೆ. ಮದುವೆಯಾಗಿ ಅಮೆರಿಕಾಗೆ ಹೋದಾಗ, ನಮ್ಮ ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಅಭಿಲಾಷೆಯಿಂದ ಅಲ್ಲಿ ನನ್ನದೇ ಅದ ‘ನೃತ್ಯೋಲ್ಲಾಸ’ ಸಂಸ್ಥೆ ಆರಂಭಿಸಿದೆ. ಇದುವರೆಗೂ ಸುಮಾರು 1000 ಮಕ್ಕಳಿಗೆ ನೃತ್ಯ ಕಲಿಸಿದ್ದೇನೆ. 33 ಮಕ್ಕಳು ರಂಗಪ್ರವೇಶ ಮಾಡಿದ್ದಾರೆ.
* ನೃತ್ಯ ಪ್ರದರ್ಶನಗಳ ಬಗ್ಗೆ ಹೇಳಿ.
ಕಳೆದ 30 ವರ್ಷಗಳ ನೃತ್ಯಾನುಭವ ನನಗೆ ಬಹಳಷ್ಟನ್ನು ಕಲಿಸಿದೆ. ಉತ್ತರ ಅಮೆರಿಕಾದ್ಯಂತ ನೃತ್ಯ ಕಾರ್ಯಕ್ರಮ ನೀಡಿದ್ದೇನೆ. ಅನೇಕ ನೃತ್ಯ ರೂಪಕಗಳನ್ನು ಸಂಯೋಜಿಸಿ ಪ್ರದರ್ಶನ ನೀಡಿದ್ದೇನೆ. ಆನ್ ಆರ್ಬರ್, ವೆಸ್ಟ್ ಬ್ಲೂ ಫೀಲ್ಡ್, ನೋವಿ ಮತ್ತು ರೋಚೆಸ್ಟರ್ ಹಿಲ್ಸ್‌ನಲ್ಲಿ ನೃತ್ಯ ಶಾಖೆಗಳನ್ನು ತೆರೆದಿದ್ದೇನೆ.
* ಅಲ್ಲಿನ ನಿಮ್ಮ ವಿದ್ಯಾರ್ಥಿಗಳ ಬಗ್ಗೆ ಹೇಳಿ...
ನನ್ನ ಬಳಿ ನೃತ್ಯ ಕಲಿಯಲು ಬರುತ್ತಿರುವವರಲ್ಲಿ ಭಾರತೀಯರೇ ಹೆಚ್ಚು. ಅಲ್ಲಿಯ ಮಕ್ಕಳು ನೇರ ಸ್ವಭಾವದವರು. ಕಲಿಯಲು ತುಂಬ ಆಸಕ್ತಿ ತೋರುತ್ತಾರೆ. ಇಲ್ಲಿಯ ಹಾಗೆ ಗುರುಗಳು ಎಂದರೆ ಭಯಪಡುವುದಿಲ್ಲ. ಮೃದುವಾಗಿ ಅಷ್ಟೇ ಸೂಕ್ಷ್ಮವಾಗಿ ಅವರನ್ನು ನಾವು ನಿರ್ವಹಿಸಬೇಕು. ಪ್ರತಿವರ್ಷ ಶಾಲೆಯ ವಾರ್ಷಿಕ ನೃತ್ಯೋತ್ಸವ ಇರುತ್ತದೆ. ಹಾಗೆ ಬೇರೆ ನಾಟ್ಯಶಾಲೆಗಳ ಜೊತೆ ಸೇರಿ ಕಾರ್ಯಕ್ರಮಗಳನ್ನೂ ನಡೆಸುತ್ತೇನೆ. ಸೌಹಾರ್ದ ವಾತಾವರಣವಿದೆ.
* ವಿಶೇಷ ಯೋಜನೆಗಳಿವೆಯೇ?
‘ಪುಣ್ಯತೀರ್ಥಂ’ ಎನ್ನುವ ವಿಶೇಷ ನೃತ್ಯರೂಪಕಕ್ಕೆ ತಯಾರಿ ನಡೆಯುತ್ತಿದೆ. ಭಾರತದ ಎಲ್ಲ ಮುಖ್ಯ ನದಿಗಳ ಉಗಮ, ಮಹತ್ವ, ಅದರ ಹಿನ್ನೆಲೆಯ ಕಥೆ, ಆಯಾ ಜಾಗದ ಸ್ಥಳ ಪುರಾಣ, ಅಲ್ಲಿಯ ಜನಪದ ಸಂಸ್ಕೃತಿ ಮುಂತಾದ ಮಾಹಿತಿಗಳನ್ನೊಳಗೊಂಡ ಸುಮಾರು ಎರಡು ಗಂಟೆಯ ನೃತ್ಯ ರೂಪಕದ ರೆಕಾರ್ಡಿಂಗ್ ನಡೆಯುತ್ತಿದೆ. ಇದರ ಪರಿಕಲ್ಪನೆ ಮತ್ತು ಸಂಯೋಜನೆ ನಾನೇ ಮಾಡಿದ್ದೇನೆ. ಪ್ರಮುಖ ಸಂಗೀತಗಾರರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಇದರ ಪ್ರೀಮಿಯರ್ ಶೋ ಡೆಟ್ರಾಯ್ಟ್‌ನಲ್ಲಿ ಆಯೋಜಿಸಲಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.