ನಟಿ ಸಂಯುಕ್ತಾ ಹೊರನಾಡು ಎಲ್ಲ ನಟಿಯಂತರಲ್ಲ. ತಮ್ಮ ಕೆಲಸ ಮತ್ತು ಇಷ್ಟದ ಸಂಗತಿಗಳ ನಡುವೆ ಸಮತೋಲನ ಕಾಪಾಡಿಕೊಳ್ಳುವ ಚತುರೆ. ತಮ್ಮ ಬರವಣಿಗೆ, ಸಿನಿಮಾ, ನೃತ್ಯ, ಪ್ರಾಣಿಪ್ರೀತಿಯ ಜತೆಗೆ ಫೋಟೊ ಶೂಟ್ ಮೂಲಕ ತಮ್ಮ ಅಭಿಮಾನಿಗಳ ಮನ ಸೆಳೆಯುವ ಜಾಣ್ಮೆ ಸಂಯುಕ್ತಾಗೆ ಸಿದ್ಧಿಸಿದೆ.
ಪ್ರತಿ ವರ್ಷವೂ ವಿಭಿನ್ನ ಥೀಮ್ ಇಟ್ಟುಕೊಂಡು ಫೋಟೊಶೂಟ್ ಮಾಡಿಸಿಕೊಳ್ಳುವ ಸಂಯುಕ್ತಾ ಸಿನಿಮಾಪ್ರಿಯರನ್ನು ಮಾತ್ರವಲ್ಲ ಜನಸಾಮಾನ್ಯರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಇತ್ತೀಚಿನ ಫೋಟೊಶೂಟ್ ಅಂತೂ ಪಂಚಭೂತ ತತ್ವಗಳ ಥೀಮ್‌ನಲ್ಲಿ ನಡೆದಿದ್ದು, ವಿಭಿನ್ನ ಮೇಕಪ್, ಹೇರ್ ಸ್ಟೈಲ್ ಮೂಲಕ ಸಂಯುಕ್ತಾ ನೋಡುಗರ ಗಮನ ಸೆಳೆದಿದ್ದಾರೆ.
‘ಪ್ರಕೃತಿಯಲ್ಲಿರುವ ಪಂಚಭೂತಗಳಿಂದಲೇ ಮನುಷ್ಯ ರೂಪುಗೊಂಡ ಎನ್ನಲಾಗುತ್ತದೆ. ಮನುಷ್ಯ ಯಾವುದರಿಂದ ರೂಪುಗೊಳ್ಳುತ್ತಾನೋ ಸತ್ತಮೇಲೆ ಅದೇ ಪಂಚಭೂತಗಳಲ್ಲಿ ಲೀನವಾಗುತ್ತಾನೆ. ಹಾಗಾಗಿ, ಈ ಪಂಚಭೂತಗಳ ಥೀಮ್‌ನಲ್ಲಿ ಫೋಟೊಶೂಟ್ ಮಾಡಿಸಬೇಕೆಂಬ ಆಸೆ ಮೂಡಿತು’ ಎನ್ನುತ್ತಾರೆ ಸಂಯುಕ್ತಾ ಹೊರನಾಡು.
ಈ ಫೋಟೊ ಶೂಟ್‌ನಲ್ಲಿ ಪ್ರತಿ ಫೋಟೊಕ್ಕೂ ತನ್ನದೇ ಆದ ವಿಶಿಷ್ಟ ಗುಣವಿದೆ. ಅಗ್ನಿ ಥೀಮ್‌ನಲ್ಲಿ ತೆಗೆದಿರುವ ಫೋಟೊದಲ್ಲಿ ಆತ್ಮ ತನ್ನೊಳಗೆ ತಾನೇ ಸಬಲವಾಗುವ ಗುಣವನ್ನು ಬಿಂಬಿಸುತ್ತದೆ. ತಾನೇ ಉಜ್ವಲವಾಗಿ ಉರಿಯುವ ಬೆಂಕಿ ತನ್ನೊಳಗೆ ತಾನೇ ಸುಡುತ್ತಲೇ ಬೆಳಗುವ ಬಗೆಯಿದೆ. ನೀವು ಸೂರ್ಯನಂತೆ ಜಗಮಗಿಸಬೇಕಾದರೆ ಅವನೊಳಗಿನ ಸುಡು ಬೆಂಕಿಯನ್ನು ಸಹಿಸಿಕೊಳ್ಳುವ ತಾಕತ್ತನ್ನೂ ಹೊಂದಿರಬೇಕಾಗುತ್ತದೆ’ ಎನ್ನುತ್ತಾರೆ ಅವರು.
ನೀರು ಯಾವುದರಲ್ಲಿ ಹಾಕಿದರೂ ಅದರಲ್ಲಿ ಹೊಂದಿಕೊಳ್ಳುವ ಗುಣವನ್ನು ಹೊಂದಿರುವ ಜೀವದ್ರವ್ಯ. ಅದನ್ನು ಜಲದ ಹಿನ್ನೆಲೆಯಲ್ಲಿ ಫೋಟೊ ಶೂಟ್ ಮಾಡಿಸಲಾಗಿದೆ. ಅದಕ್ಕಾಗಿಯೇ ನೀರಿನ ಬಣ್ಣವನ್ನು ಬಿಂಬಿಸುವ ನೀಲಿ ಬಟ್ಟೆ ತೊಟ್ಟಿದ್ದೇನೆ. ಭೂತಾಯಿಯ ಪ್ರಶ್ನೆ ಬಂದಾಗ ಹೆಣ್ಣನ್ನು ಭೂಮ್ತಾಯಿಗೆ ಹೋಲಿಸಲಾಗುತ್ತದೆ. ಹೆಣ್ಣಿನೊಳಗಿನ ಶಕ್ತಿ, ತಾಳ್ಮೆ, ಸ್ಥಿರತೆಯ ಗುಣವನ್ನು ಭೂಮಿ ಚಿಂತನೆಯುಳ್ಳ ಫೋಟೊ ಪ್ರತಿನಿಧಿಸುತ್ತದೆ. ಶಕ್ತಿಯ ಪ್ರತಿನಿಧಿಯಾಗಿರುವ ಹೆಣ್ಣನ್ನು ಅಬಲೆಯನ್ನಾಗಿ ಬಿಂಬಿಸಲಾಗುತ್ತಿದೆ. ಆದರೆ, ತಾಳ್ಮೆಯೇ ಆಕೆಯ ನಿಜವಾದ ಶಕ್ತಿ. ಹಸಿರಿನ ಹಿನ್ನೆಲೆಯಲ್ಲಿ ಭೂಮ್ತಾಯಿ ಥೀಮ್‌ನ ಫೋಟೊಶೂಟ್ ನನಗಂತೂ ತುಂಬಾ ಇಷ್ಟವಾಯಿತು. ವಾಯು ಥೀಮ್ ಹೆಣ್ಣು ಮತ್ತು ಗಂಡಿನ ನಡುವಿನ ಪ್ರೀತಿಯ ದ್ಯೋತಕವಾಗಿದೆ. ಇಬ್ಬರ ಆತ್ಮಗಳು ಭಾವನಾತ್ಮಕವಾಗಿ ಬೆಸುಗೆಯ ರೂಪಕ್ಕೆ ವಾಯುವೇ ಕಾರಣ ಎನ್ನುವ ವಿವರಣೆ ಸಂಯುಕ್ತಾ ಅವರದ್ದು.
ಸಂಯುಕ್ತಾ ಅವರ ಪಂಚಭೂತ ಫೋಟೊಶೂಟ್ ಅನ್ನು ಬಿಂದ್ಯಾ ಕಾಶ್ಯಪ್ ಮಾಡಿದ್ದಾರೆ. ಆದಿತ್ಯ ಪಾಟೀಲ್ ನಿರ್ಮಾಣದ ಹೊಣೆ ಹೊತ್ತಿದ್ದರೆ, ಸುಚೇತನಾ ಮಿತ್ರಾ, ಮುವಾ ವಸ್ತ್ರವಿನ್ಯಾಸ ಮಾಡಿದ್ದಾರೆ. ಅಮ್ರೀನ್ ವಿಕಾರ್ ಕೇಶವಿನ್ಯಾಸ ಮಾಡಿದ್ದಾರೆ.
*
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.