ADVERTISEMENT

ಪತ್ರಿಕೆಗಳು: ಅಂದು, ಇಂದು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:30 IST
Last Updated 22 ಸೆಪ್ಟೆಂಬರ್ 2014, 19:30 IST

ಕನ್ನಡ ಪತ್ರಿಕೋದ್ಯಮದ ಆರಂಭ, ಬೆಳವಣಿಗೆ ಮತ್ತು ಬುನಾದಿಯಲ್ಲಿ ಬೆಂಗಳೂರಿನ ಪತ್ರಿಕೆಗಳ ಪಾತ್ರ ಪ್ರಮುಖವಾದದ್ದು.

ಇದರ ಇತಿಹಾಸ ಕೆದಕುತ್ತಾ ಹೋದರೆ, ನಮ್ಮನ್ನು ೧೮೫೯ನೇ ಇಸ್ವಿಗೆ ಕೊಂಡೊಯ್ಯುತ್ತದೆ. ಈ ವರ್ಷದಲ್ಲಿ ಬೆಂಗಳೂರಿನ ಪ್ರಥಮ ವೃತ್ತಪತ್ರಿಕೆ ‘ಮೈಸೂರು ವೃತ್ತಾಂತ ಬೋಧಿನಿ’ ಕಾರ್ಯಾರಂಭ ಮಾಡಿತ್ತು. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಪೋಷಣೆ­ಯಲ್ಲಿ ಪ್ರಕಟವಾಗುತ್ತಿತ್ತು. ಆದರೆ, ಬಹಳ ಕಡಿಮೆ ಅವಧಿಯಲ್ಲಿ, ಅಂದರೆ ೧೮೬೪ರಲ್ಲಿ ಪತ್ರಿಕೆಯ ಪ್ರಕಟಣೆ ನಿಂತುಹೋಯಿತು. ಭಾಷ್ಯಂ ತಿರುಮಲಾಚಾರ್ಯರು ಆಗ ಅದರ ಸಂಪಾದಕ­ರಾಗಿದ್ದರು.

ಬೆಂಜಮಿನ್‌ ರೈಸ್‌ ಅವರ ಸಂಪಾದಕತ್ವದಲ್ಲಿ ೧೮೬೨ರಲ್ಲಿ ‘ಅರುಣೋದಯ’ ಮಾಸಪತ್ರಿಕೆ ಪ್ರಕಟಣೆ ಆರಂಭಿಸಿತು. ಇದರ ಮುಖ್ಯ ಉದ್ದೇಶ ಕ್ರೈಸ್ತ ಧರ್ಮದ ಪ್ರಚಾರವಾಗಿತ್ತು. ೧೮೬೫ರಲ್ಲಿ ‘ಕರ್ನಾಟಕ ಪ್ರಕಾಶಿಕಾ’ ಪಾಕ್ಷಿಕ ಪ್ರಾರಂಭ­ವಾಯಿತು. ಭಾಷ್ಯಂ ತಿರುಮಲಾಚಾರ್ಯರಿಂದ ಪ್ರಕಟ­ಗೊಳ್ಳುತ್ತಿದ್ದ ಈ ಪತ್ರಿಕೆ ೧೮೭೩ರಲ್ಲಿ ವಾರಪತ್ರಿಕೆಯಾಗಿ ಬದಲಾಯಿತು. ೧೮೯೮ರ ಅಕ್ಟೋಬರ್‌ ೨೪ರಂದು ಈ ಪತ್ರಿಕೆ ಬಾಗಿಲು ಮುಚ್ಚಿತು.

೧೮೬೬ರಲ್ಲಿ ‘ಮೈಸೂರು ಗೆಜೆಟ್‌’ ಪ್ರಾರಂಭವಾಯಿತು. ಎಲ್‌. ರಿಕೆಟ್‌ ಇದರ ಸಂಸ್ಥಾಪಕ ಸಂಪಾದಕರಾಗಿದ್ದರು. ಕನ್ನಡ, ಇಂಗ್ಲಿಷ್‌ ಎರಡು ಭಾಷೆಗಳಲ್ಲೂ ಪ್ರಕಟಗೊಳ್ಳುತ್ತಿದ್ದ ಇದು ದೇಶ ವಿದೇಶಗಳ ಸುದ್ದಿಗಳನ್ನು ಪ್ರಕಟಿಸುತ್ತಿತ್ತು. ೧೯೬೮ರಿಂದ ಕರ್ನಾಟಕ ಸರ್ಕಾರದ ರಾಜ್ಯ ಪತ್ರವಾಗಿ ಪ್ರಕಟಣೆ ಶುರು ಮಾಡಿತ್ತು. ೧೮೮೩ರಲ್ಲಿ ‘ಹಿತಬೋಧಿನಿ’, ೧೮೮೮ರಲ್ಲಿ ‘ಹಿಂದೂ ಮತಾಭಿಮಾನಿ’, ೧೮೯೬ರಲ್ಲಿ ‘ಕನ್ನಡ ನಡೆಗನ್ನಡಿ’ ಶುರು­ವಾದವು. ೧೮೯೨ರಲ್ಲಿ ಡಿ.ವಿ. ಗುಂಡಪ್ಪನವರು ಪತ್ರಿಕಾ ಕ್ಷೇತ್ರಕ್ಕೆ ಕಾಲಿರಿಸಿದರು. ಅವರು ‘ಸೂರ್ಯೋದಯ ಪ್ರಕಾಶಿಕಾ’ದ ಸಂಪಾ­ದ­ಕರಾಗಿದ್ದರು. ಈ ಪತ್ರಿಕೆ ನಿಂತ ನಂತರ ಡಿ.ವಿ.ಜಿ. ಅವರು ೧೯೦೮ರಲ್ಲಿ ‘ಭಾರತಿ’ ದಿನಪತ್ರಿಕೆ ಆರಂಭಿಸಿ­ದರು. ಇದೇ ವರ್ಷ ‘ಲಾ ರಿಪೋರ್ಟು’, ‘ಕರ್ನಾಟಕ ಜನ­ಜೀವನ’, ‘ಸುಮತಿ’, ಮೈಸೂರು ಟೈಮ್ಸ್‌’, ‘ಒಕ್ಕಲಿಗರ ಪತ್ರಿಕೆ’ ಪ್ರಾರಂಭವಾದವು.

ಸ್ವಾತಂತ್ರ್ಯ ಪೂರ್ವದಲ್ಲಿ ಬೆಂಗಳೂರಿನಿಂದ ಪ್ರಕಟಣೆ ಆರಂಭಿಸಿ ಪತ್ರಿಕಾರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಪತ್ರಿಕೆಗಳೆಂದರೆ ‘ಒಕ್ಕಲಿಗರ ಪತ್ರಿಕೆ’, ‘ವಿಶ್ವ ಕರ್ನಾಟಕ’ ಮತ್ತು ‘ಚಿತ್ರಗುಪ್ತ’. ೧೯೨೨ರಲ್ಲಿ ‘ಮೈಸೂರು ಕ್ರಾನಿಕಲ್‌’, ೧೯೨೬ರಲ್ಲಿ ‘ದೇಶ­ಬಂಧು’ ಮತ್ತು ಪತ್ರಿಕೋದ್ಯಮದಲ್ಲಿ ಸಾಹಸಕ್ಕೆ ಹೆಸರಾಗಿದ್ದ ಬಿ.ಎನ್‌. ಗುಪ್ತ ಅವರು ೧೯೩೪ರಲ್ಲಿ ‘ಜನವಾಣಿ’ ಸ್ಥಾಪಿಸಿದರು. ೧೯೩೭ರಲ್ಲಿ ಬೆಂಗಳೂರಿನಿಂದ ಪ್ರಕಟಗೊಳ್ಳಲು ಆರಂಭಿಸಿದ ನಂತರ ನಿಯಮಿತವಾಗಿ ಪ್ರಕಟಣೆ ಆರಂಭಿಸಿತ್ತು. ೧೯೮೭ರಲ್ಲಿ ಪತ್ರಿಕೆ ತನ್ನ ಕೆಲಸ ನಿಲ್ಲಿಸಿತು. ೧೯೪೧ರಲ್ಲಿ ‘ಪೌರವಾಣಿ’ ದಿನ­ಪತ್ರಿಕೆ, ೧೯೪೭ರಲ್ಲಿ ಪಿ. ಶೇಷಪ್ಪ ಅವರಿಂದ ‘ಕಿಡಿ’ ರಾಜಕೀಯ ವಾರ­ಪತ್ರಿಕೆ ಆರಂಭವಾಯಿತು. ಕಾಂಗ್ರೆಸ್‌ ವಿರೋಧಿ ಬರಹ­ಗಳಿಂದಾಗಿ ಹಲವು ಮೊಕದ್ದಮೆಗಳನ್ನು ಇದು ಎದುರಿಸಬೇಕಾಯಿತು.

ಐವತ್ತರ ದಶಕ ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಯಿತು. ಈ ಕ್ಷೇತ್ರ ಉದ್ದಿಮೆಯಾಗಿ ಬೆಳೆದ ದಶಕವೂ ಹೌದು. ಈ ಹೊತ್ತಿನಲ್ಲಿ ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ‘ಡೆಕ್ಕನ್‌ ಹೆರಾಲ್ಡ್‌’ ಆಂಗ್ಲ ದೈನಿಕವನ್ನೂ ಅನಂ­ತರ ‘ಪ್ರಜಾವಾಣಿ ದಿನಪತ್ರಿಕೆ­ಯನ್ನೂ ಪ್ರಾರಂಭಿಸಿತು. ‘ಪ್ರಜಾವಾಣಿ’ ಮೊದಲ ಸಂಚಿಕೆ ಓದುಗರ ಕೈಸೇರಿದ್ದು ೧೯೪೮ರ ಅಕ್ಟೋಬರ್ ೧೫ರಂದು. ಬಿ. ಪುಟ್ಟ­ಸ್ವಾಮಯ್ಯ ಇದರ ಮೊದಲ ಸಂಪಾ­ದಕರಾಗಿದ್ದರು. ಕೆ.ಎನ್‌. ಗುರು­ಸ್ವಾಮಿ ಅವರ ದೂರದರ್ಶಿತ್ವ, ವೃತ್ತಿ­ಪರತೆಯಿಂದ ‘ಪ್ರಜಾವಾಣಿ’ ಬಲು­ಬೇಗ ಕನ್ನಡಿಗರ ಪ್ರೀತಿ, ವಿಶ್ವಾಸ ಗಳಿ­­ಸಿತು. ಹೊಸಪೀಳಿಗೆಯ ಕಲಾವಿ­ದರು, ಬರಹ­ಗಾರರನ್ನು ಪ್ರೋತ್ಸಾ­ಹಿ­ಸಿದ್ದಲ್ಲದೆ, ಪ್ರಗತಿ­ಶೀಲ, ನವ್ಯ, ಬಂಡಾಯ, ದಲಿತ ಚಳಿವಳಿಗಳಿಗೂ ವೇದಿಕೆ­ಯಾಯಿತು.

೧೯೭೩ರಲ್ಲಿ ಒಂದು ಲಕ್ಷ ಪ್ರಸಾರ ಸಂಖ್ಯೆ ದಾಟಿದ್ದ ಕನ್ನಡದ ಮೊದಲ ದಿನಪತ್ರಿಕೆ ಎಂಬ ಕೀರ್ತಿ ‘ಪ್ರಜಾವಾಣಿ’ಯದ್ದು. ಅಚ್ಚುಮೊಳೆಯಿಂದ ಮುದ್ರಣ ಆರಂಭಿಸಿದ್ದ ಈ ಪತ್ರಿಕೆ ಕಾಲಕಾಲಕ್ಕೆ ಆಧುನಿಕತೆಗೆ ತೆರೆದುಕೊಳ್ಳುತ್ತಾ ಹೋಯಿತು. 

‘ಪ್ರಜಾವಾಣಿ’ಗೆ ಸ್ಪರ್ಧಿ ಎಂಬಂತೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಬಳಗದ ‘ಕನ್ನಡಪ್ರಭ’ ೧೯೬೭ರ ನವೆಂಬರ್‌ ೪ರಂದು ಪ್ರಕಟಣೆ ಆರಂಭಿಸಿತು. ದೈನಿಕ ಧಾರಾವಾಹಿ, ಕಾದಂಬರಿಗಳನ್ನು ಪ್ರಕ­ಟಿ­ಸುವ ಮೂಲಕ ಜನರನ್ನು ಆಕರ್ಷಿಸಿತು. ಪ್ರತ್ಯೇಕ ಪುರವಣಿಗಳನ್ನು ಆರಂಭಿಸಿದ ಮೊದಲ ಪತ್ರಿಕೆ ಎಂಬ ಶ್ರೇಯ ಕೂಡ ಇದಕ್ಕೆ ಸಲ್ಲುತ್ತದೆ.

‘ಸಂಯುಕ್ತ ಕರ್ನಾಟಕ’ ೧೯೨೯ರಲ್ಲಿ ಬೆಳಗಾವಿಯಿಂದ ಕಾರ್ಯಾರಂಭ ಮಾಡಿತ್ತು. ಆದರೆ, ಇದರ ಬೆಂಗಳೂರು ಆವೃತ್ತಿ ೧೯೫೯ರಲ್ಲಿ ಪ್ರಾರಂಭವಾಯಿತು. ಬೆಂಗಳೂರಿನಲ್ಲಿ ಇದರ ಓದುವ ವರ್ಗ ಸೀಮಿತವಾಗಿದ್ದರೂ ತನ್ನದೇ ಓದುಗರನ್ನು ಹೊಂದಿದೆ. ೧೯೬೯ರಲ್ಲೇ ಪ್ರಕಟಣೆ ಶುರು ಮಾಡಿದ್ದರೂ ಬೆಂಗಳೂರು ಆವೃತ್ತಿಯನ್ನು ೧೯೯೪ರಲ್ಲಿ ಆರಂಭಿಸಿದ ಪತ್ರಿಕೆ ‘ಉದ­ಯವಾಣಿ’. ಪ್ರಕಟಣೆ ಶುರುವಾದ ನಾಲ್ಕೈದು ವರ್ಷ­ಗಳಲ್ಲೇ ನಾಲ್ಕು ಲಕ್ಷ ಪ್ರಸಾರ ಸಂಖ್ಯೆ ದಾಟಿದ ಪತ್ರಿಕೆ ‘ವಿಜಯ ಕರ್ನಾ­ಟಕ’. ರಾಜ್ಯದ ಹಲವೆಡೆ ಮುದ್ರಣ ಘಟಕ­ಗಳನ್ನು ಆರಂಭಿಸಿ, ಜನರ ಕೈಗೆ ಪತ್ರಿಕೆಯನ್ನು ಬೇಗ ತಲುಪಿಸಲು ಆರಂಭಿ­ಸಿತು. ಅಲ್ಲ­ದೇ ಇದು ಹೊಸ ಓದುಗರನ್ನು ಸೃಷ್ಟಿ ಮಾಡಿತು. ಇದು ಪತ್ರಿಕಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಕಾರಣ­ವಾಗಿ, ಇತರ ಪತ್ರಿಕೆಗಳು ರಾಜ್ಯ­ದ ಬೇರೆ ಕಡೆಗಳಲ್ಲಿ ಮುದ್ರಣ ಘಟಕ­ಗಳ­ನ್ನು ಸ್ಥಾಪಿಸಿ ಜನರಿಗೆ ಬೆಳ್ಳಂ­ಬೆಳಿಗ್ಗೆ ಪತ್ರಿಕೆಗಳನ್ನು ತಲುಪಿಸುವ ಕೆಲಸ ಮಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಪ್ರಕಟಣೆ ಆರಂಭಿ­ಸಿದ ಮತ್ತೊಂದು ಪತ್ರಿಕೆ ‘ವಿಜಯವಾಣಿ’.

ಅಚ್ಚು ಮೊಳೆ ಜೋಡಣೆಯಿಂದ ಮುದ್ರಣ ಕಾಣುತ್ತಿದ್ದ ಪತ್ರಿಕೆಗಳು ಈಗ ಸಂಪೂರ್ಣ ಗಣಕೀಕರಣಗೊಂಡಿವೆ. ಇಂದು ಎಲ್ಲ ಪತ್ರಿಕಾ ಕಚೇರಿಗಳು ಕಂಪ್ಯೂಟರೀಕರಣಗೊಂಡಿವೆ. ಎಲ್ಲ ಪತ್ರಿಕೆಗಳು ನಸುಕಿನ ಜಾವದಲ್ಲೇ ಓದುಗರ ಕೈ ಸೇರುತ್ತಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.