ಮಕ್ಕಳಿಗೆ ರಜೆಯೆಂದರೆ ಮಜಾ. ಮನೆ ಸುತ್ತಿನ ಬಯಲು, ಹಾದಿ ಬೀದಿಯ ಗಿಡ, ಮರಗಳ ಜೊತೆ ರಕೆ ಕಳೆಯುವ ಮಕ್ಕಳೂ ನಮ್ಮ ನಡುವೆ ಇದ್ದಾರೆ.
ಮಕ್ಕಳ ಪರೀಕ್ಷೆ ಮುಗಿದು, ಬೇಸಿಗೆ ರಜೆಯೂ ಕಳೆದು ಈಗ ಮತ್ತೆ ಶಾಲೆಗಳು ಪ್ರಾರಂಭವಾಗಿವೆ. ಆಟ, ಪಾಠ.. (ಬಿಸಿಯೂಟ ಬಂದ ಮೇಲೆ ‘ಆಟ, ಊಟ..’) ಮನೆ ಕಡೆ ಓಟ..’ ಅನ್ನೋದು ಮಕ್ಕಳು ಖುಷಿಯಾಗಿ ಹಾಡಿಕೊಳ್ಳುವ ನುಡಿ. ಮಕ್ಕಳಿಗೆ ಶಾಲೆ ಅಥವಾ ಮನೆಯಲ್ಲೂ ಸಿಗದಂತಹ ಸ್ವಾತಂತ್ರ್ಯ ಬಯಲಲ್ಲಿ ಸಿಗುತ್ತದೆ. ಬೇರೆಲ್ಲೂ ಕಲಿಯದ್ದನ್ನು ಬಯಲಲ್ಲಿ ಕಲಿಯುವ ಉತ್ಸಾಹ ಅವರದು.
ಶಾಲೆಯಲ್ಲಿ ಕಲಿತು ಉಸ್ಸಪ್ಪಾ ಅಂತ ಮನೆಗೆ ನಡೆಯುತ್ತಿದ್ದ ಈ ಮಕ್ಕಳಿಗೆ ಕಿರ್ಲೋಸ್ಕರ್ ಬಡಾವಣೆಯ ರಸ್ತೆ ಬದಿಯಲ್ಲಿ ಇನ್ನೂ ಉಳಿದಿರುವ ಗಸಗಸೆ ಮರದ ಘಮ ಬಾಯಲ್ಲಿ ನೀರು ತರಿಸಿವೆ. ಆಯಾಸ ಮರೆತು, ಮರದ ಅಡಿ ನುಗ್ಗಿದ್ದಾರೆ. ಆದರೆ, ಹಣ್ಣುಗಳು ನೇತಾಡುತ್ತಿರುವುದು ನೆತ್ತಿಯ ಕೊಂಬೆ ತುದಿಯಲ್ಲಿ! ಸರಿ, ನೋಡೇ ಬಿಡೋಣಾ ಎಂದು ನಿಗರಿ, ಎಗರಿದರೂ ಕೈಗೆಟುಕದ ಹಣ್ಣು. ಎಟುಕದ ಹಣ್ಣು ಹುಳೀ ಅಂತ ಓಡಿ ಹೋಗೋ ಕಾಡಿನ ನರಿಯಂತೆ ಅಲ್ಲ, ಈ ಮಕ್ಕಳು.
ಇಬ್ಬರು ಸೇರಿ, ಅನಾಮತ್ತಾಗಿ ಒಬ್ಬನನ್ನು ಮೇಲೆತ್ತಿದರು. ಮುಕ್ಕಿರಿದು, ತಿಣುಕಿದರೂ ಎಟುಕಲಿಲ್ಲ.
ಇನ್ನೊಂದು ಉಪಾಯ ಮಾಡಿದರು. ಇಬ್ಬರು ಸೇರಿ, ಸೈಕಲ್ ಹಿಡಿದು, ಇನ್ನೊಬ್ಬನನ್ನು ಮೇಲೇರಿಸಿದರು. ಅಕಸ್ಮಾತ್ ಅಜ್ಜೀ ಜತೆ ಅಲ್ಲಿಗೆ ಬಂದ ಒಬ್ಬ ಬಾಲೆ ‘ಹೀಗೂ ಉಂಟೇ..!’ ಎಂಬಂತೆ ನೋಡಿದಳು. ಅಣ್ಣಂದಿರಿಗೆ ಹಣ್ಣು ಸಿಕ್ಕಿತೇ..? ಅಂತೂ ಅವ ಸೈಕಲ್ ಏರಿ ಹೊರಟ. ನಾನೂ ಇಂಥಾ ಸಾಹಸ ಮಾಡಬಹುದಲ್ಲವೇ ಎಂದು ಮನದಲ್ಲೇ ಯೋಚಿಸುತ್ತಾ ಬಾಲೆ ನಡೆದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.