ADVERTISEMENT

ಪುಸ್ತಕಗಳ ಸಾಲಿನಲ್ಲೊಂದು ಸುತ್ತು

ದಯಾನಂದ ಎಚ್‌.ಎಚ್‌.
Published 5 ಸೆಪ್ಟೆಂಬರ್ 2014, 19:30 IST
Last Updated 5 ಸೆಪ್ಟೆಂಬರ್ 2014, 19:30 IST

ಅಲ್ಲಿ ಒಂದೆಡೆಗೆ ವಿಸ್ಮಯ ಜಗತ್ತಿನ ಪೂರ್ಣಚಂದ್ರ ತೇಜಸ್ವಿ ಇದ್ದರು. ಅವರ ಪಕ್ಕದಲ್ಲೇ ಕುವೆಂಪು, ಅನಂತಮೂರ್ತಿ, ಅಲ್ಲಿಂದೊಂದಷ್ಟು ದೂರದಲ್ಲಿ ಹ್ಯಾರಿಪಾಟರ್‌, ಶೇಕ್ಸ್‌ಪಿಯರ್‌, ಚೇತನ್‌ ಭಗತ್‌, ಷೆಲ್ಲಿ. ಮುಂದೆ ತತ್ವಪದಕಾರರು, ಅವರ ಮಗ್ಗುಲಲ್ಲೇ ಮಹಾತ್ಮ ಗಾಂಧಿ. ಇವರೆಲ್ಲ ಏಕಕಾಲಕ್ಕೆ ಸಿಕ್ಕಿದ್ದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ!

ಅಚ್ಚರಿ ಎನಿಸಿದರೂ ಇದು ಸತ್ಯ. ಇವರೆಲ್ಲ ಒಂದಾಗಿರುವುದು ಪುಸ್ತಕೋತ್ಸವಕ್ಕಾಗಿ, ಪುಸ್ತಕಗಳ ಮೂಲಕ. ಹ್ಯಾಪಿ ಕ್ಲಬ್‌ ಸಂಸ್ಥೆಯು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿರುವ ಹತ್ತು ದಿನಗಳ ಪುಸ್ತಕೋತ್ಸವದಲ್ಲಿ ಲಕ್ಷಾಂತರ ಪುಸ್ತಕಗಳು ಪುಸ್ತಕಪ್ರಿಯರ ಬರುವಿಕೆಗೆ ಹಾಗೂ ಸ್ಪರ್ಶಕ್ಕಾಗಿ ಕಾಯುತ್ತಿವೆ.

ಸುಮಾರು 130 ಮಳಿಗೆಗಳಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ ಪುಸ್ತಕಗಳ ಜತೆಗೆ ತಮಿಳು, ಮಲಯಾಳ, ಮರಾಠಿಯ ಪುಸ್ತಕಗಳೂ

ಮಾರಾಟಕ್ಕೆ ಲಭ್ಯವಿವೆ. ಕಥೆ, ಕಾದಂಬರಿ, ಕವಿತೆ, ನಾಟಕ, ಸಾಮಾನ್ಯ ಜ್ಞಾನ, ಕ್ವಿಜ್‌, ಕಾಮಿಕ್ಸ್‌, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳಿಂದ ಹಿಡಿದು ಹೊಸ ರುಚಿ, ಮೆಹಂದಿ, ಮನೆ ಮದ್ದಿನ ಪುಸ್ತಕಗಳೂ ಉತ್ಸವದಲ್ಲಿವೆ.

‘ಮಳಿಗೆಗೆ ಬಂದವರು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಹೆಚ್ಚಾಗಿ ಕೇಳುತ್ತಾರೆ. ತೇಜಸ್ವಿ ಕನ್ನಡ ಓದುಗರ ಹೀರೊ. ಅದೇ ರೀತಿ ಇಂಗ್ಲಿಷ್‌ನಲ್ಲಿ ಚೇತನ್‌ ಭಗತ್‌. ಉತ್ಸವದಲ್ಲಿ ಈವರೆಗೆ ಹೆಚ್ಚು ಬೇಡಿಕೆ ಇರುವುದು ಈ ಇಬ್ಬರಿಗೆ ಮಾತ್ರ’ ಎಂದವರು ಮೈಸೂರಿನ ಧಾತ್ರಿ ಪ್ರಕಾಶನ ಮಳಿಗೆಯ ಮಾರಾಟಗಾರ ರವಿಶಂಕರ್‌.

ಪುಸ್ತಕ ಸಾಲಿನ ಸುತ್ತಾಟದಲ್ಲಿ ಬೀಚಿ ಪುಸ್ತಕಗಳಲ್ಲಿ ಮುಳುಗಿದ್ದ ಪ್ರಭು ಮಾತಿಗೆ ಸಿಕ್ಕರು. ಎಂಬಿಎ ಓದಿರುವ ಅವರಿಗೆ ಬೀಚಿ ಅಚ್ಚುಮೆಚ್ಚಿನ ಲೇಖಕ. ‘ಬೀಚಿ ಅವರ ಪುಸ್ತಕಗಳನ್ನು ಕೊಂಡು ಅವನ್ನು ಆತ್ಮೀಯರಿಗೆ ಉಡುಗೊರೆಯಾಗಿ ಕೊಡುವುದು ನನ್ನ ಅಭ್ಯಾಸ’ ಎಂದ ಅವರು ಬೀಚಿ ಸಿಗಾರ್‌ ಪೈಪ್‌ ಹಿಡಿದ ಮುಖಪುಟ ಚಿತ್ರವಿರುವ ಪುಸ್ತಕವೊಂದನ್ನು ಕೈಗೆತ್ತಿಕೊಂಡರು.

ಹಳೆಯ ಪುಸ್ತಕಗಳ ರಾಶಿ
ಪುಸ್ತಕೋತ್ಸವದಲ್ಲಿ ಹೊಸ ಪುಸ್ತಕಗಳ ಜತೆಗೆ ಹಳೆಯ ಪುಸ್ತಕಗಳ ರಾಶಿಯೇ ಇದೆ. ಮಿಲ್ಟನ್‌ ಕವನಗಳು, ಶೇಕ್ಸ್‌ಪಿಯರ್‌ ನಾಟಕಗಳಿಂದ ಹಿಡಿದು ಮಹಾತ್ಮ ಗಾಂಧೀಜಿಯ ಆತ್ಮಕಥೆಯವರೆಗೆ ಹಳೆಯ ಪುಸ್ತಕಗಳು ಉತ್ಸವದಲ್ಲಿವೆ.

ಉತ್ತಮ ಸ್ಥಿತಿಯಲ್ಲಿರುವ ಹಳೆಯ ಪುಸ್ತಕಗಳಿಗೆ ಮುಖಬೆಲೆಯ ಶೇ 20ರಿಂದ 40ರವರೆಗೆ ರಿಯಾಯಿತಿಯೂ ಇದೆ. ಮರು ಮುದ್ರಣ ಕಾಣದಂಥ ಪುಸ್ತಕಗಳನ್ನು ಕೊಳ್ಳಬೇಕೆಂಬ ಇಚ್ಛೆ ಇದ್ದವರು ಪುಸ್ತಕೋತ್ಸವಕ್ಕೆ ಒಮ್ಮೆ ಭೇಟಿ ನೀಡಲೇಬೇಕು.

ಹ್ಯಾಪಿ ಕ್ಲಬ್‌ ಸಂಸ್ಥೆಯು ತಾನು ಇದೇ ಮೊದಲ ಬಾರಿಗೆ ಪುಸ್ತಕೋತ್ಸವದ ಆಯೋಜನೆಗೆ ಮುಂದಾಗಿದ್ದು, ಉದ್ಘಾಟನೆಯ ದಿನ ಕಡಿಮೆ ಜನರಿದ್ದರೂ ಮುಂದಿನ ದಿನಗಳಲ್ಲಿ ಪುಸ್ತಕ ಪ್ರೇಮಿಗಳಿಂದ ಉತ್ತಮ ಸ್ಪಂದನ ಸಿಗುವ ನಿರೀಕ್ಷೆಯಲ್ಲಿದೆ. ಸೆಪ್ಟೆಂಬರ್‌ 14ರವರೆಗೆ ನಡೆಯುವ ಪುಸ್ತಕೋತ್ಸವದ ವೇದಿಕೆಯಲ್ಲಿ ಪ್ರತಿದಿನ ಸುಗಮ ಸಂಗೀತ, ಡೊಳ್ಳು ಕುಣಿತ, ಕೋಲಾಟದ ಸೊಬಗೂ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT