ADVERTISEMENT

ಪೌರಾತ್ಯ ವಾದ್ಯಗಳ ಸವ್ಯಸಾಚಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಪೌರಾತ್ಯ  ವಾದ್ಯಗಳ  ಸವ್ಯಸಾಚಿ
ಪೌರಾತ್ಯ ವಾದ್ಯಗಳ ಸವ್ಯಸಾಚಿ   
ನಮ್ಮಲ್ಲಿ ಬಳಕೆಯಲ್ಲಿರುವ ಬಹುತೇಕ ಸಂಗೀತ ವಾದ್ಯಗಳು ಪಾಶ್ಚಿಮಾತ್ಯ ದೇಶಗಳವು. ಪೌರಾತ್ಯ ದೇಶಗಳ ವಾದ್ಯಗಳ ಪರಿಚಯ ನಮಗೆ ಅಷ್ಟಾಗಿ ಇಲ್ಲ. ಇಂಥ ಸಂಗೀತ ವಾದ್ಯಗಳಲ್ಲಿ ಪರಿಣತಿ ಪಡೆದಿರುವ ಅಪರೂಪ ಕಲಾವಿದೆ ಡಾ.ಎಚ್.ಎಸ್.ಅನಸೂಯಾ ಕುಲಕರ್ಣಿ.
 
ಅನಸೂಯ ಬಾಲ್ಯದಿಂದಲೂ ಉತ್ತಮ ಸಾಧಕಿ. ಚಿಕ್ಕವರಿದ್ದಾಗಲೇ ಸಂಗೀತ ಕಛೇರಿಗಳನ್ನು ಮಾಡತೊಡಗಿದರು. 1952ರಿಂದ ಆಕಾಶವಾಣಿಯಲ್ಲೂ ಕಾರ್ಯಕ್ರಮ ನೀಡತೊಡಗಿದರು. ಮುಂದೆ ರಾಜ್ಯ-ರಾಷ್ಟ್ರದ ಪ್ರಮುಖ ಸಭೆ-ಸಮ್ಮೇಳನಗಳಲ್ಲಿ ಹಾಡಿ ಅನುಭವ ಗಳಿಸಿದರು.
 
ಮದುವೆಯಾದ (1964) ನಂತರ ಅವರ ನಾದಪಥವೇ ಬದಲಾಯಿತು. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ಕಚೇರಿಯ ಹಿರಿಯ ಅಧಿಕಾರಿಯಾಗಿದ್ದ ಪತಿ ಕುಲಕರ್ಣಿ ಅವರೊಂದಿಗೆ ಹಲವು ರಾಷ್ಟ್ರಗಳನ್ನು ಸುತ್ತುವ ಅವಕಾಶ ಸಿಕ್ಕಿತು. ಹಲವು ದೇಶಗಳ ಸಂಗೀತವನ್ನು ಅಧ್ಯಯನ ಮಾಡಿದರು. ಜೊತೆಗೆ ಸ್ಥಳೀಯ ಸಂಗೀತ ವಾದ್ಯಗಳನ್ನು ಅಭ್ಯಸಿಸತೊಡಗಿದರು.
 
ಪಪುವಾ ನ್ಯೂಗಿನಿಯಾ, ಉಗಾಂಡ, ಇಥಿಯೋಪಿಯಾ, ಭೂತಾನ್, ಅಫ್‍ಘಾನಿಸ್ತಾನಗಳ ತಂತಿ ವಾದ್ಯ, ಚರ್ಮ ವಾದ್ಯ, ಸುಷಿರ ವಾದ್ಯಗಳನ್ನು ಅನಸೂಯ ಕಲಿತರು. 
ತಮ್ಮ ತೀಕ್ಷ್ಣ ಗ್ರಹಣ ಶಕ್ತಿ, ಶ್ರದ್ಧೆಯ ಸಾಧನೆಗಳಿಂದ ಏಷ್ಯಾ, ಪೆಸಿಫಿಕ್, ಆಫ್ರಿಕನ್ ದೇಶಗಳ ವಾದ್ಯಗಳ ಸೂಕ್ಷ್ಮತೆಗಳನ್ನು ಅರಿತು ನುಡಿಸಲು ಆರಂಭಿಸಿದರು. ಈ ದೇಶಗಳ ಜನರಿಗೆ ಭಾರತೀಯ ಸಂಗೀತವನ್ನು ಉಪನ್ಯಾಸ, ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯಿಸುತ್ತಾ, ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.
 
ಇಂಡೊನೇಷ್ಯಾದಲ್ಲಿದ್ದಾಗ ಆಂಕ್‍ಲಂಗ್ ವಾದ್ಯದ ನಾದಕ್ಕೆ ಮನಸೋತ ಅನಸೂಯ ಅದರ ನುಡಿಸಾಣಿಕೆ ಅಭ್ಯಾಸ ಮಾಡಿದರು. ಬೊಂಬಿನ ವಾದ್ಯದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು, ಭಾರತೀಯ ಸಂಗೀತಕ್ಕೆ ಅಳವಡಿಸಿದರು.
 
ಆಂಕ್‍ಲಂಗ್‌ನಲ್ಲಿ ಕರ್ನಾಟಕ ಸಂಗೀತ ನುಡಿಸಿದ ಮೊದಲ ಕಲಾವಿದೆ ಎನಿಸಿದರು. ಇದು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್‌’ನಲ್ಲಿ ಸಹ ಉಲ್ಲೇಖಗೊಂಡಿದೆ. ಅಮೆರಿಕ, ಚೀನಾ, ಆಸ್ಟ್ರೇಲಿಯ, ಕೆನಡ, ಫಿಜಿ, ಮಂಗೋಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಅಂಕ್ಲಂಗ್‌ ಕಛೇರಿ ನೀಡಿದ್ದಾರೆ.
 
ವೀಣೆ, ಸಿತಾರ್, ಪಿಯಾನೊಗಳ ಜೊತೆ ಜುಗಲ್‌ಬಂದಿಗಳನ್ನೂ ನೀಡಿದ್ದಾರೆ. ಇಂಡೋನೇಷ್ಯಾ, ಇಥಿಯೋಪಿಯಾ ಹಾಗೂ ಪಾಶ್ಚಿಮಾತ್ಯ ವಾದ್ಯಗಳೊಂದಿಗೆ ಫ್ಯೂಷನ್ ಸಂಗೀತದ ಪ್ರಯೋಗಗಳನ್ನು ಮಾಡಿದ್ದಾರೆ. 
 
‘ಇನ್‌ಸ್ಟಿಟ್ಯೂಟ್‌ ಆಫ್ ಎಥ್ನೋ ಮ್ಯೂಸಿಕ್’ ಸ್ಥಾಪಿಸಿ ಅಧ್ಯಯನ ಪಟುಗಳಿಗೆ ಮಾರ್ಗದರ್ಶಕರಾಗಿದ್ದಾರೆ. ತಾವು ಸಂಗ್ರಹಿಸಿರುವ ನಾನಾ ದೇಶಗಳ ವಾದ್ಯಗಳನ್ನು ತಮ್ಮ ಸ್ವಗೃಹದಲ್ಲಿ ಆಕರ್ಷಕವಾಗಿ ಪ್ರದರ್ಶಿಸಿದ್ದಾರೆ.
 
ಅಪರೂಪದ ಕಲಾವಿದೆ ಡಾ.ಅನಸೂಯ ಕುಲಕರ್ಣಿ ಅವರಿಗೆ ಸಹಜವಾಗಿ ಅನೇಕ ಬಿರುದು-ಗೌರವಗಳು ಸಂದಾಯವಾಗಿವೆ. ಕರ್ನಾಟಕ ಗಾನಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ‘ಗಾನಕಲಾಭೂಷಣ’ ಬಿರುದು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯೊಂದಿಗೆ ‘ಕರ್ನಾಟಕ ಕಲಾಶ್ರೀ’ ಬಿರುದುಗಳಲ್ಲದೆ ಚೆನ್ನೈನ ಮ್ಯೂಸಿಕ್ ಅಕಾಡೆಮಿ, ಮಲೇಷ್ಯಾದ ಸೆರಂಬನ್, ಇಂಡಿಯನ್ ಫೈನ್ ಆರ್ಟ್ಸ್ ಕೆಂಪೇಗೌಡ ಪ್ರಶಸ್ತಿ ಗಳಿಸಿದ್ದಾರೆ.
 
ಚಲನಚಿತ್ರ ಹಿನ್ನೆಲೆ ಗಾಯನದಲ್ಲೂ ಸೈ ಎನಿಸಿಕೊಂಡಿರುವ ಅನಸೂಯ, ಉತ್ತಮ ಕ್ರೀಡಾಪಟುವೂ ಹೌದು. ಬ್ಯಾಸ್ಕೆಟ್‌ಬಾಲ್‌ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು. ಇಬ್ಬರು ಗಂಡು ಮಕ್ಕಳ ತಾಯಿ ಹಾಗೂ ಮೂರು ಮೊಮ್ಮಕ್ಕಳ ಅಜ್ಜಿ. 80 ದಾಟಿದ್ದರೂ ಅವರದು ಬತ್ತದ ಉತ್ಸಾಹ.
 
ಇದೀಗ ತ್ಯಾಗರಾಜ ಗಾನಸಭೆಯವರು ಶಂಕರ ಭಗವತ್ಪಾದರ ಜಯಂತಿ ಸಂದರ್ಭದಲ್ಲಿ ಏರ್ಪಡಿಸಿರುವ 46ನೇ ವರ್ಷದ ಸಂಗೀತೋತ್ಸವಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ವಿದ್ವತ್ ಸದಸ್ಸಿನಲ್ಲಿ (ಏ.30) ‘ಕಲಾಭೂಷಣ’ ಬಿರುದು ನೀಡಿ ಗೌರವಿಸಲಾಗುವುದು.
ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ
*****
ಶ್ರೀ ಶಂಕರ ಭಗವತ್ಪಾದರ ಜಯಂತಿ ಮತ್ತು 46ನೇ ವರ್ಷದ ಸಂಗೀತೋತ್ಸವ ಸಮಾರಂಭ: ಆಂಕ್ಲಂಗ್‌ ವಾದನ– ಅನಸೂಯ ಕುಲಕರ್ಣಿ. ಸಹ ಆಂಕ್ಲಂಗ್‌ ವಾದನ– ತಪಸ್ಯಾ ಬಿ.ಸಿಂಗ್‌. ಜಾಹ್ನವಿ ಬಿ.ಸಿಂಗ್‌.  ಪಿಟೀಲು– ಜ್ಯೋತ್ಸ್ನಾ ಮಂಜುನಾಥ್‌. ಮೃದಂಗ– ರಮೇಶ್‌ ಬಿ.ಎನ್‌., ಕೃಷ್ಣಮೂರ್ತಿ ಎಚ್‌.ಎಸ್‌್ . ಮೋರ್ಚಿಂಗ್‌ – ರಾಜಶೇಖರ್‌ ಬಿ. ಉದ್ಘಾಟನೆ– ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್‌. ಅಧ್ಯಕ್ಷತೆ– ಎಂ.ಅನಂತ್‌. ಅತಿಥಿ– ಕೆ.ಎ.ದಯಾನಂದ, ಟಿ.ಎಸ್‌.ಸತ್ಯವತಿ. ಆಯೋಜನೆ– ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್‌. ಸ್ಥಳ– ಬಾಲಮೋಹನ ವಿದ್ಯಾಮಂದಿರ, 19ನೇ ಬಿ ಮುಖ್ಯರಸ್ತೆ, 1ನೇ ಕೆ ಬ್ಲಾಕ್‌, ರಾಜಾಜಿನಗರ. ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.