* ಗಮಕ ಕಲೆಯತ್ತ ಆಕರ್ಷಿತರಾಗಿದ್ದು ಹೇಗೆ?
ಗಮಕ ಗ್ರಾಮ ಎಂದೇ ಪ್ರಸಿದ್ಧವಾಗಿರುವ ಮತ್ತೂರು ನನ್ನ ಊರು. ಶಾಲಾದಿನಗಳಿಂದ ಪಕ್ಕದ ಹೊಸಹಳ್ಳಿಯಲ್ಲಿ ಸೋದರಮಾವ ಎಚ್.ಆರ್. ನಾರಾಯಣರಾವ್ ಬಳಿ ಕರ್ನಾಟಕ ಸಂಗೀತ ಅಭ್ಯಾಸ ಮಾಡುತ್ತಿದ್ದೆ. ಅದೇ ವೇಳೆಯಲ್ಲಿ ಅಲ್ಲಿನ ಸೂರ್ಯನಾರಾಯಣ ಅವಧಾನಿ ಅವರ ಬಳಿ ಗಮಕ ಅಭ್ಯಾಸ ಆರಂಭಿಸಿದೆ. ಹಾಗೆಯೇ ಆಸಕ್ತಿ ಬೆಳೆಯಿತು. ಕಲಾ ವಿಭಾಗದಲ್ಲಿ ಕನ್ನಡ ಮೇಜರ್ ಓದಿದ್ದು ಗಮಕ ಅಭ್ಯಾಸಕ್ಕೆ ಸಹಾಯವಾಯಿತು. ಹಳಗನ್ನಡದ ಅಭ್ಯಾಸ, ಸಂಗೀತ ಕಲಿಕೆ ಎಲ್ಲವೂ ಮೇಳೈಸಿ ಗಮಕದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. 55 ವರ್ಷಗಳ ಹಿಂದೆ ಆರಂಭವಾದ ಗಮಕದ ಜತೆಗಿನ ಪಯಣ ನಿರಂತರವಾಗಿ ಸಾಗುತ್ತಲೇ ಇದೆ.
* ಈ ಕಲೆ ಮತ್ತಷ್ಟು ಅಭಿವೃದ್ಧಿ ಹೊಂದಲು ಏನು ಮಾಡಬೇಕು?
ಪ್ರಾಚೀನವಾಗಿರುವ ಗಮಕ ಕಲೆಗೆ ಅಳಿವಿಲ್ಲ. ಆದರೆ ಈಚೆಗೆ ಜನರಲ್ಲಿ ಈ ಕುರಿತು ಅರಿವಿನ ಕೊರತೆ ಇದೆ. ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಗಮಕದ ಪ್ರಸಿದ್ಧಿ ಸ್ವಲ್ಪ ಮಬ್ಬಾಗಿದೆ ಎಂದರೆ ತಪ್ಪಿಲ್ಲ. ಯುವ ಪೀಳಿಗೆಯವರಲ್ಲಿ ಗಮಕದ ಬಗ್ಗೆ ತಿಳಿವು ಮೂಡಿಸಲು ಕಲೆಯ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಿದೆ. ಹಾಗಾದಾಗ ಮತ್ತೆ ಕಲಾಲೋಕದಲ್ಲಿ ಗಮಕ ಹೊಳೆಯುವ ತಾರೆಯಾಗುತ್ತದೆ. ಯುವಜನರಿಗೆ ಬೇರೆ ಮಾಧ್ಯಮಗಳ ಆಕರ್ಷಣೆ ಇದೆ. ಶಿಕ್ಷಣ ವ್ಯವಸ್ಥೆ ಬದಲಾಗಿರುವುದರಿಂದ ಈಗಿನ ದಿನಗಳಲ್ಲಿ ಬಹುತೇಕರಿಗೆ ಕನ್ನಡದ ಪರಿಚಯವೇ ಇಲ್ಲ. ಕನ್ನಡ ಎಂದರೆ ಮಾತಾಡುವುದಷ್ಟೆ ಅಲ್ಲ. ಕಾವ್ಯಗಳನ್ನು ಓದಲು ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಸಬೇಕು. ಹಳೆಯ ಕಾವ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು.
ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ಏರ್ಪಾಟು ಮಾಡಿದರಷ್ಟೆ ಸಾಲದು. ಹೆಚ್ಚಿನ ಪ್ರಚಾರ ಮಾಡುವುದು ಸಹ ಮುಖ್ಯ. ಗಮಕ ಕಾರ್ಯಕ್ರಮಗಳನ್ನು ಒಮ್ಮೆ ಗಮನಿಸಿ ಎಂದು ಕಾಲೇಜು ಮಕ್ಕಳನ್ನು ಕರೆತರಬೇಕು. ಶಾಲೆ ಕಾಲೇಜುಗಳಲ್ಲಿ ಗಮಕ ವಾಚನ–ವ್ಯಾಖ್ಯಾನಕ್ಕೆ ಸಮಯ ಮೀಸಲಿರಿಸಬೇಕು. ಆರಂಭದಲ್ಲಿ ಒಂದಿಷ್ಟು ಪುಸಲಾಯಿಸಿಯಾದರೂ ಗಮಕ ಕಿವಿಗೆ ಬೀಳುವಂತೆ ಮಾಡಿದರೆ ನಂತರ ಅವರಾಗಿಯೇ ತೊಡಗಿಸಿಕೊಳ್ಳುತ್ತಾರೆ.
ಮಾಧ್ಯಮಗಳಲ್ಲೂ ಈ ಕುರಿತು ಪ್ರಸಾರ, ಪ್ರಚಾರ ಅವಶ್ಯ. ಏನನ್ನಾದರೂ ಬಿತ್ತಿದರಷ್ಟೆ ಬೆಳೆಯಲು ಸಾಧ್ಯ. ಜನರನ್ನು ಆಕರ್ಷಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು.
* ಈ ಕಲೆಯ ವಿಶೇಷವೇನು?
64 ವಿದ್ಯೆಗಳಲ್ಲಿ ಗಮಕವೂ ಒಂದು. ನಮ್ಮ ಪ್ರತಿ ಮಾತಿನಲ್ಲಿಯೂ ಗಮಕ ಇದೆ. ನಿತ್ಯ ಜೀವನದಲ್ಲಿ ಇದನ್ನು ಅಷ್ಟಾಗಿ ಗಮನಿಸುವುದಿಲ್ಲ. ಹಳಗನ್ನಡ ಪದ್ಯಗಳನ್ನು ರಾಗಸಹಿತ ಪ್ರಸ್ತುತಪಡಿಸಿದಾಗ ಅದು ವಿಶೇಷವಾಗಿ ಕೇಳುವುದರಿಂದ ಗಮಕದ ಅಂಶ ಗುರುತಿಸಲಾಗುತ್ತದೆ. ಧ್ವನಿಯ ಏರಿಳಿತದಿಂದ ಪದ್ಯಗಳಲ್ಲಿನ ರಸ- ಭಾವಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು, ಈ ಮೂಲಕ ಶ್ರೋತೃಗಳು ಪದ್ಯದ ಪ್ರಸಂಗಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡುವುದು ಗಮಕದ ವಿಶೇಷತೆ.
* ಸವಾಲುಗಳೇನು?
ಹಳಗನ್ನಡದ ಬಗ್ಗೆ ಇರಲಿ ಕನ್ನಡದ ಕುರಿತೇ ತಿಳಿದಿಲ್ಲ ಈಗಿನ ಬಹುತೇಕರಿಗೆ. ಇಂತಹ ಸಂದರ್ಭದಲ್ಲಿ ಜನರು ಗಮಕ ಕಾರ್ಯಕ್ರಮಗಳಿಗೆ ಬರುವಂತೆ ಮಾಡುವುದೇ ದೊಡ್ಡ ಸವಾಲು. ವಾಚನ ಅರ್ಥ ಮಾಡಿಕೊಳ್ಳುವ ಅಭಿರುಚಿ, ಆಸಕ್ತಿ ಇರುವ ಶ್ರೋತೃ ವೃಂದ ಇದ್ದರೆ ಗಮಕಿಗಳಿಗೆ ಸರಾಗವಾಗುತ್ತದೆ. ಇಲ್ಲವಾದರೆ ಶ್ರೋತೃಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದೇ ಕಷ್ಟ. ವಾಚನಕಾರರ ಹಾವಭಾವ, ಪದಗಳನ್ನು ಬಿಡಿಸಿ ಹೇಳುವ ಕ್ರಮದಿಂದ ಜನರಿಗೆ ಪ್ರಸಂಗ ಅರ್ಥವಾಗುತ್ತಿತ್ತು. ಇಷ್ಟವಾದ ಪದ್ಯವನ್ನು ಮತ್ತೊಮ್ಮೆ ವಾಚಿಸಿ ಎಂದು ಹೇಳುವಂತಹ ಪ್ರಸಂಗಗಳೂ ಇದ್ದವು. ಈಗ ವಾಚನ ವ್ಯಾಖ್ಯಾನ ಇದ್ದರೂ ಜನರಿಗೆ ಅರ್ಥವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗಮಕ ಕಾರ್ಯಕ್ರಮಗಳ ಆಯೋಜನೆಯ ಪ್ರಮಾಣ ತಕ್ಕಮಟ್ಟಿಗೆ ಇದೆ. ಆದರೆ ಕೆಲವೊಮ್ಮೆ ನೀಡುವ ಗೌರವಧನ ಗಮಕಿಗಳಿಗೇ ಸಾಲದಷ್ಟು ಕಡಿಮೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಒಳ್ಳೆಯ ವ್ಯಾಖ್ಯಾನಕಾರರನ್ನು ಜತೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ದೂರದ ಊರುಗಳಿಂದ ಬರುವ ವ್ಯಾಖ್ಯಾನಕಾರರಾಗಿದ್ದರೆ, ಅವರಿಗೆ ಪ್ರಯಾಣದ ಖರ್ಚು ಸರಿದೂಗಿಸುವಷ್ಟು ಸಹ ಗೌರವಧನ ಸಿಗುವುದಿಲ್ಲ.
ನನಗೆ ಗಮಕದ ಜತೆಗೆ ವ್ಯಾಖ್ಯಾನದಲ್ಲಿಯೂ ಒಲವಿದೆ. ನಾನೊಬ್ಬನೆ ವಾಚನ- ವ್ಯಾಖ್ಯಾನ ಮಾಡಬೇಕು ಎನ್ನುವ ಮನೋಭಾವ ಇಲ್ಲ. ಆದರೆ ಇಂತಹ ಅನಿವಾರ್ಯ ಕಾರಣಗಳಿಂದಾಗಿ, ಗಮಕಿಯಾಗಿ ನನಗೆ ಈ ರೀತಿಯ ಸಂದರ್ಭಗಳು ಎದುರಾದಾಗ ವಾಚನದ ಜತೆಗೆ ನಾನೇ ವ್ಯಾಖ್ಯಾನವನ್ನೂ ಮಾಡಿಕೊಂಡು ಕಾರ್ಯಕ್ರಮ ನಿಭಾಯಿಸಿದ್ದೂ ಇದೆ. ಆದರೆ ವ್ಯಾಖ್ಯಾನಕಾರರು ಇದ್ದಾಗ ವಾಚನಕಾರರಿಗೆ ಸ್ವಲ್ಪ ಬಿಡುವು ದೊರಕುತ್ತದೆ. ಇಲ್ಲದಿದ್ದರೆ ಒಬ್ಬರೆ ವಾಚನ ಮಾಡುವುದರಿಂದ ಉಸಿರು ಬಿಡಲೂ ಬಿಡುವು ದೊರಕುವುದಿಲ್ಲ. ವ್ಯಾಖ್ಯಾನಕಾರರು ಮಾತಿನ ವಾಗ್ಝರಿಯಿಂದ ಜನರನ್ನು ಸಂತೋಷಪಡಿಸುತ್ತಾರೆ. ಆದ್ದರಿಂದ ಗಮಕಿಗಳ ಜತೆಯಲ್ಲಿ ವ್ಯಾಖ್ಯಾನಕಾರರು ಅವಶ್ಯ.
* ನಿಮ್ಮಿಷ್ಟದ ಗಮಕ ಯಾವುದು?
ಜೈಮಿನಿ ಭಾರತದಲ್ಲಿನ ‘ಭಕ್ತಾಗ್ರೇಸರ ಮಯೂರಧ್ವಜ’ ಭಾಗ ನನಗೆ ಇಷ್ಟ. ಮಯೂರಧ್ವಜ ರಾಜ ಅಶ್ವಮೇಧ ಯಾಗ ಮಾಡುವ ಸಂದರ್ಭದಲ್ಲಿ ಅನೇಕ ವಿಘ್ನಗಳು ಬರುತ್ತವೆ. ಕೃಷ್ಣಾರ್ಜುನರಿಗೆ ಹಾಗೂ ಮಯೂರಧ್ವಜನ ಮಗ ತಾಮ್ರಧ್ವಜನಿಗೆ ಭಾರಿ ಯುದ್ಧವಾಗುತ್ತದೆ. ಕೃಷ್ಣಾರ್ಜುನರೇ ತಾಮ್ರಧ್ವಜನ ಬಳಿ ಸೋತುಹೋಗುತ್ತಾರೆ. ಬಳಿಕ ಕೃಷ್ಣ ಬ್ರಾಹ್ಮಣ ವೇಷದಲ್ಲಿ ಮಯೂರಧ್ವಜನ ಬಳಿ ಬರುತ್ತಾನೆ. ಹೀಗೆ ಸಾಗುತ್ತದೆ ಈ ಕಥಾ ಭಾಗ. ಈ ಪ್ರಸಂಗ ಪ್ರಸ್ತುತಪಡಿಸಲು ಕನಿಷ್ಠ ಎರಡೂವರೆ ತಾಸು ಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.