ADVERTISEMENT

ಪ್ರದರ್ಶಕರಲ್ಲಿ ಬೆವರು!

ಇ.ಎಸ್.ಸುಧೀಂದ್ರ ಪ್ರಸಾದ್
Published 9 ಜನವರಿ 2013, 19:59 IST
Last Updated 9 ಜನವರಿ 2013, 19:59 IST

ಕಮಲ್ ಹಾಸನ್ ಅವರು ತಮ್ಮ ಬಹುನಿರೀಕ್ಷಿತ ಚಿತ್ರ `ವಿಶ್ವರೂಪಂ' ಸಿನಿಮಾವನ್ನು ಜ.10ರಂದು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡಿ, ಆನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಪ್ರಕಟಿಸಿದ್ದರು. ಕಮಲ್‌ಹಾಸನ್ ಅವರ ಈ ಹೇಳಿಕೆಗೆ ಚಿತ್ರ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರಿಂದ ಈಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡಿನಾದ್ಯಂತ ಹೆಚ್ಚಿದ ಪ್ರತಿರೋಧದ ಹಿನ್ನೆಲೆಯಲ್ಲಿ ಕಮಲ್ ಹಾಸನ್ `ವಿಶ್ವರೂಪಂ' ಚಿತ್ರವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಮುಂದೂಡಿದ್ದಾರೆ.

ಚಿತ್ರಮಂದಿರಗಳಲ್ಲಿ ತೆರೆಕಾಣುವುದಕ್ಕಿಂತ ಮುಂಚೆ ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವ ಸಂಬಂಧ ಎದ್ದಿರುವ ವಿವಾದದ ಅಲೆ ಈಗ ಹೊಸತೊಂದು ಚಿಂತನೆಗೆ ಎಡೆ ಮಾಡಿಕೊಟ್ಟಿದೆ. ಮುಂದೊಂದು ದಿನ ಖ್ಯಾತನಟ, ನಿರ್ದೇಶಕರ ಚಿತ್ರಗಳೆಲ್ಲಾ ಇದೇ ಮಾದರಿಯಲ್ಲಿ ಬಿಡುಗಡೆಗೊಂಡರೆ ಹೇಗೆ ಎಂಬ ಕಳವಳ ಕೆಲವರದ್ದು. ಇಂಥದ್ದೊಂದು ವಿನೂತನ ವ್ಯಾಪಾರ ತಂತ್ರ ಚಿತ್ರ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಬೆವತು ಹೋಗುವಂತೆ ಮಾಡಿರುವುದು ದಿಟ. ಕಾರಣ ಇದರ ನೇರ ಪರಿಣಾಮ ಆಗುವುದು ಚಿತ್ರಮಂದಿಗಳ ಮೇಲೆಯೇ. ಐದುನೂರು, ಸಾವಿರ ರೂಪಾಯಿ ಕೊಟ್ಟು ಮನೆಯಲ್ಲಿಯೇ ಎಲ್ಲರೂ ಆರಾಮವಾಗಿ ಕುಳಿತು ಜತೆಗೆ ಗೆಳೆಯರನ್ನೆಲ್ಲಾ ಸೇರಿಸಿಕೊಂಡು ಹೊಸ ಸಿನಿಮಾಗಳನ್ನು ನೋಡುತ್ತಾ ಹೋದರೆ ಮಲ್ಟಿಪ್ಲೆಕ್ಸ್‌ಗಳ ವ್ಯಾಪಾರ ತಂತ್ರ ಕೈಕೊಡುತ್ತದೆ. ನೀರು, ಕುರುಕಲು ತಿಂಡಿಗೆ ದುಪ್ಪಟ್ಟು ಹಣವನ್ನು ಶಾಪ ಹಾಕುತ್ತಲೇ ತೆತ್ತವರು ಮಲ್ಟಿಪ್ಲೆಕ್ಸ್‌ಗಳಿಂದ ವಿಮುಖರಾಗುವ ಸಾಧ್ಯತೆ ಇದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ದಿನಕ್ಕೊಂದು ರೀತಿಯ ಟಿಕೆಟ್ ದರ ಇಟ್ಟುಕೊಂಡು ಪ್ರೇಕ್ಷಕನ ಜೇಬಿಗೆ ಕತ್ತರಿ ಹಾಕುವ ಅವಕಾಶ ಇನ್ನುಮುಂದೆ ಕಮ್ಮಿಯಾಗುತ್ತದೆ. ಜನಪ್ರಿಯ ನಟರ ಸಿನಿಮಾಗಳು ಬಿಡುಗಡೆಯಾದಾಗ ಚಿತ್ರಮಂದಿರಗಳಲ್ಲಿ ಮೊದಲನೆಯ ದಿನ ಟಿಕೆಟ್ ದರವನ್ನು ಯದ್ವಾತದ್ವಾ ಏರಿಸುವ ಅವಕಾಶಕ್ಕೆಲ್ಲಾ ಕತ್ತರಿ ಬೀಳಲಿದೆ. 

ಡಿಟಿಎಚ್‌ನಲ್ಲಿ ಚಿತ್ರ ಬಿಡುಗಡೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳ ಅರಿವು ಕಮಲ್ ಅವರಿಗೆ ಮೊದಲೇ ಇತ್ತು ಎಂಬುದು ಅವರ ಮಾತುಗಳಿಂದಲೇ ಗೊತ್ತಾಗುತ್ತದೆ. ಆದರೂ `ಪ್ರೇಕ್ಷಕರ ಚಿತ್ರ ವೀಕ್ಷಣೆಯ ಅನುಭವವನ್ನೇ ಬದಲಿಸಬೇಕು' ಎಂಬ ಉದ್ದೇಶದಿಂದ ಇಂಥದ್ದೊಂದು ನಿರ್ಧಾರಕ್ಕೆ ಅವರು ಬಂದಿದ್ದರಂತೆ. ಹಾಗಂತ ಕಮಲ್ ಹೇಳಿಕೊಂಡಿದ್ದಾರೆ. `ಹೊಸಚಿತ್ರವೊಂದು ಡಿಟಿಎಚ್‌ನಲ್ಲಿ ಬಿಡುಗಡೆ ಆದ ಉದಾಹರಣೆ ವಿಶ್ವದೆಲ್ಲೆಲ್ಲೂ ಈ ಹಿಂದೆ ನಡೆದಿಲ್ಲ. ನನ್ನ ಈ ಪ್ರಯತ್ನ ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸುವ ಅನುಭವವನ್ನೇ ಬದಲಾಯಿಸಬೇಕು. ಡಿಟಿಎಚ್‌ನಲ್ಲಿ ಚಿತ್ರ ಬಿಡುಗಡೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳೆಲ್ಲಾ ಎದುರಾಗುತ್ತವೆ ಎಂದು ನನಗೆ ಗೊತ್ತಿದೆ. ಆದರೂ ರಿಸ್ಕ್ ತೆಗೆದುಕೊಳ್ಳಲು ನಾನು ಸಿದ್ದನಿದ್ದೇನೆ' ಎಂದಿದ್ದರು ಅವರು.

ಇದರಿಂದ `ಮೆಟ್ರೊ' ನಗರಗಳಲ್ಲಿರುವ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಿಗೆ ಬಹುದೊಡ್ಡ ಹೊಡೆತ ಬೀಳುವುದು ಗ್ಯಾರಂಟಿ. ಹಾಗಾಗಿ ಥಿಯೇಟರ್ ಮಾಲೀಕರಿಗೆ ಈ ನಿರ್ಣಯ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ವಿಶ್ವರೂಪಂ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿರುವ ತೆಲುಗು ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕ ದಾಸರಿ ನಾರಾಯಣ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದರು. `ವಿಶ್ವರೂಪಂ ಚಿತ್ರವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವುದರಿಂದ ಚಿತ್ರಮಂದಿರಗಳಿಗೇನೂ ತೊಂದರೆ ಆಗುವುದಿಲ್ಲ. ಉತ್ತರ ಭಾರತದಲ್ಲಿ ಚಿತ್ರಮಂದಿರಗಳಿವೆ. ಆದರೆ, ವಿಶ್ವರೂಪಂ ಚಿತ್ರ ಬಿಡುಗಡೆಗೆ ಅಗತ್ಯವಿರುವಷ್ಟು ಚಿತ್ರಮಂದಿರಗಳು ಲಭ್ಯವಿಲ್ಲ. ಆದ್ದರಿಂದ ನಾನು ಉತ್ತರ ಭಾರತದಲ್ಲಿ ವಿಶ್ವರೂಪಂ ಸಿನಿಮಾವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡಲು ಸಿದ್ದನಿದ್ದೇನೆ' ಎಂದಿದ್ದರು.
 

ಜಾಲಹಳ್ಳಿ ಕ್ರಾಸ್‌ನಲ್ಲಿರುವ ರಾಕ್‌ಲೈನ್ ಸಿನಿಮಾಸ್‌ನ ಮಾಲೀಕ, ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಹೇಳುವಂತೆ, `ವಿಶ್ವರೂಪಂನಂಥ ದೊಡ್ಡ ಬಜೆಟ್ ಸಿನಿಮಾ ಚಿತ್ರಮಂದಿರಗಳಿಗಿಂತ ಮುಂಚೆಯೇ ಡಿಟಿಎಚ್‌ನಲ್ಲಿ ಬಿಡುಗಡೆ ಮಾಡಿದರೇ ಅದು ಟ್ರೈಲರ್‌ನಂತೆ ಇರುತ್ತದೆ ಅಷ್ಟೆ. ಅದರಿಂದ ಚಿತ್ರಮಂದಿರಗಳ ಮೇಲೆ ಆಗುವ ಪರಿಣಾಮವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಒಂದು ಸಾರಿ ಸುನಾಮಿ ಬಂದು ಹೋದ ಮೇಲೆಯೇ ಅದರಿಂದಾಗುವ ಹಾನಿ ಗೊತ್ತಾಗುವುದು. ಇಂತಿಷ್ಟು ಅಂತ ಹಣ ಪಾವತಿ ಮಾಡಿ ಮನೆಮಂದಿಯೆಲ್ಲಾ ಕುಳಿತು ಮನೆಯಲ್ಲಿಯೇ ಚಿತ್ರ ವೀಕ್ಷಣೆ ಮಾಡಿದರೆ ಮಲ್ಟಿಪ್ಲೆಕ್ಸ್‌ಗಳಿಗೆ ಖಂಡಿತವಾಗಿಯೂ ನಷ್ಟ ತಪ್ಪಿದ್ದಲ್ಲ. ಆದರೆ, ನಷ್ಟ ಎಷ್ಟು ಎಂಬುದು ನಿಖರವಾಗಿ ತಿಳಿಯಬೇಕೆಂದರೆ ಒಮ್ಮೆ ಸುನಾಮಿ ಆಗಲೇಬೇಕು'. ಇಷ್ಟರ ನಡುವೆಯೂ ರಾಕ್‌ಲೈನ್ ವೆಂಕಟೇಶ್ ತಮ್ಮ ಮಲ್ಟಿಪ್ಲೆಕ್ಸ್‌ನಲ್ಲಿ ವಿಶ್ವರೂಪಂ ಚಿತ್ರವನ್ನು ಬಿಡುಗಡೆ ಮಾಡುವ ಧೈರ್ಯ ಮಾಡುತ್ತಿದ್ದಾರೆ.

ಇನ್ನು ಗರುಡಾ ಐನಾಕ್ಸ್ ವಿಶ್ವರೂಪಂ ಸಿನಿಮಾವನ್ನು ತರುವ ಬಗ್ಗೆ ಚಿಂತನೆ ನಡೆಸುತ್ತಿದೆಯಂತೆ. `ನಮ್ಮಲ್ಲಿಗೆ ಬರುವವರೆಲ್ಲಾ ಮೇಲ್ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು. ಕಮಲ್ ಅವರ ಅಭಿಮಾನಿಗಳಂತೂ ವಿಶ್ವರೂಪಂ ಸಿನಿಮಾವನ್ನು ಬಿಡುಗಡೆಗೆ ಮುನ್ನವೇ ನೋಡುವ ಕಾತರದಲ್ಲಿದ್ದಾರೆ. ಅವರೆಲ್ಲಾ ಖಂಡಿತವಾಗಿಯೂ ಡಿಟಿಎಚ್‌ನಲ್ಲಿ ಸಿನಿಮಾ ವೀಕ್ಷಿಸುತ್ತಾರೆ. ಹಾಗಾಗಿ ನಾವು ಸಿನಿಮಾ ಪ್ರದರ್ಶನ ಮಾಡುವ ಬಗ್ಗೆ ಯೋಚಿಸಬೇಕಿದೆ' ಎನ್ನುತ್ತಾರೆ ಐನಾಕ್ಸ್‌ನ ಮಾರ್ಕೆಟಿಂಗ್ ವ್ಯವಸ್ಥಾಪಕ ಪ್ರಿಯಾಂಕ್. 

`ಡಿಟಿಎಚ್‌ನಲ್ಲಿ ಚಿತ್ರ ಬಿಡುಗಡೆ ಮಾಡುವುದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಒಂದು ವೇಳೆ `ವಿಶ್ವರೂಪಂ' ಚಿತ್ರ ಡಿಟಿಎಚ್‌ನಲ್ಲಿ ಬಿಡುಗಡೆಗೊಂಡರೆ 35 ವರ್ಷದ ಮೇಲಿನ ಪ್ರೇಕ್ಷಕರ‌್ಯಾರೂ ಚಿತ್ರಮಂದಿರಗಳಿಗೆ ಬರುವುದಿಲ್ಲ. ವಯಸ್ಸಿನ ಹುಡುಗರು ಮಾತ್ರ ಥಿಯೇಟರ್‌ಗೆ ಬರಬಹುದು. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುವ 12 ಗಂಟೆಗೂ ಮೊದಲೇ ಡಿಟಿಎಚ್‌ನಲ್ಲಿ ಚಿತ್ರ ಪ್ರಸಾರವಾಗುವುದರಿಂದ ಚಿತ್ರ ಹೇಗಿದೆ ಎಂಬುದು ಗೊತ್ತಾಗಿಬಿಡುತ್ತದೆ. ಸಿನಿಮಾ ಸುಮಾರಾಗಿದೆ ಎಂದಾದರೆ ಪ್ರೇಕ್ಷಕರು ಚಿತ್ರಮಂದಿರದತ್ತ ಸುಳಿಯುವುದಿಲ್ಲ' ಎನ್ನುತ್ತಾರೆ ಪುಷ್ಪಾಂಜಲಿ ಥಿಯೇಟರ್ ಮ್ಯಾನೇಜರ್ ಅಂಥೋಣಿ.

ಚಿತ್ರಮಂದಿರಗಳ ಮೇಲೆ ಪರಿಣಾಮ ಬೀರುವ ಇಂಥ ಹೊಸ ವ್ಯಾಪಾರ ತಂತ್ರದ ಬಗ್ಗೆ ಚಿತ್ರ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈಗ ಎದ್ದಿರುವ ವಿವಾದದ ಕಾವು ತಣ್ಣಗಾಗುವವರೆಗೂ ಚಿತ್ರವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದಿದೆ ರಾಜ್‌ಕಮಲ್ ಫಿಲ್ಮ್ಸ್. ಈ ಹಿನ್ನೆಲೆಯಲ್ಲಿ ಸನ್ ಡಿಟಿಎಚ್ ಕೂಡ ಸದ್ಯಕ್ಕೆ ಮೂವಿ ಬುಕಿಂಗ್ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. `ವಿಶ್ವರೂಪಂ' ಚಿತ್ರವನ್ನು ಡಿಟಿಎಚ್‌ನಲ್ಲಿ ಯಾವತ್ತು ಬಿಡುಗಡೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಚಿತ್ರವನ್ನು ಡಿಟಿಎಚ್‌ನಲ್ಲಿ ಪ್ರಸಾರ ಮಾಡಲು ಸಾಧ್ಯವಾಗದಿದ್ದರೆ ಈಗಾಗಲೇ ಬುಕಿಂಗ್ ಮಾಡಿರುವ ಗ್ರಾಹಕರಿಗೆ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸನ್ ಡಿಟಿಎಚ್ ಹೇಳಿಕೊಂಡಿದೆ.

ವಿಶ್ವರೂಪಂ ಡಿಟಿಎಚ್‌ನಲ್ಲಿ ಬಿಡುಗಡೆಗೆ ವ್ಯಕ್ತವಾದ ತೀವ್ರ ವಿರೋಧದ ನಡುವೆಯೇ ಕಮಲ್ ಹಾಸನ್ ಅವರಿಗೆ ಬೆದರಿಕೆಯ ಕರೆಗಳು ಬಂದಿದ್ದವಂತೆ. ವಿಶ್ವರೂಪಂ ಸಿನಿಮಾವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡಿದರೆ ಚಿತ್ರಪ್ರದರ್ಶನ ಮಾಡುವ ವೇಳೆ ವಿದ್ಯುತ್ ಕಡಿತ  ಮಾಡುತ್ತೇವೆ ಎಂಬಂಥ ಕರೆಗಳೂ ಅವರಿಗೆ ಬಂದಿದ್ದವಂತೆ. ಈ ಸಂಬಂಧ ಅವರು ಚೆನ್ನೈನಲ್ಲಿ ದೂರು ದಾಖಲು ಮಾಡಿದ್ದಾರೆ. ಒಂದು ವೇಳೆ ಚಿತ್ರವನ್ನು ಡಿಟಿಎಚ್‌ನಲ್ಲಿ ಮೊದಲು ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಲ್ಲಿ `ವಿಶ್ವರೂಪಂ' ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಚಿತ್ರವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಕಮಲ್ ಅವರು ಮಾಲೀಕರು ಮತ್ತು ವಿತರಕರ ಜತಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. `ವಿಶ್ವರೂಪಂ' ಸಿನಿಮಾ ಬಿಡುಗಡೆ ಸಂಬಂಧ ಎದ್ದಿರುವ ವಿವಾದಕ್ಕೆ ಯಾವಾಗ ತೆರೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT